ಸಮುದಾಯ ಭವನಕ್ಕೆ ಪರ, ವಿರೋಧ ಧರಣಿ

7

ಸಮುದಾಯ ಭವನಕ್ಕೆ ಪರ, ವಿರೋಧ ಧರಣಿ

Published:
Updated:

ಚಿಂತಾಮಣಿ: ತಾಲ್ಲೂಕಿನ ಕುರುಬೂರು ಗ್ರಾಮ ಪಂಚಾಯಿತಿ ಎದುರು ಸಮುದಾಯ ಭವನದ ನಿರ್ಮಾಣದ ಬಗ್ಗೆ ಪರ, ವಿರೋಧವಾಗಿ ಎರಡು ಬಣಗಳು ಗುರುವಾರ ಗ್ರಾಮ ಪಂಚಾಯಿತಿ ಎದುರು ಧರಣಿ ನಡೆಸಿದರು.

ಗ್ರಾಮಕ್ಕೆ ಸುವರ್ಣ ಗ್ರಾಮ ಯೋಜನೆಯಡಿ ಸಮುದಾಯ ಭವನದ ನಿರ್ಮಾಣ ಸ್ಥಳದ ಬಗ್ಗೆ ಭಿನ್ನಾಭಿಪ್ರಾಯ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ನಡೆದಿದೆ ಎಂದು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.`ಸಮುದಾಯ ಭವನವನ್ನು ಗ್ರಾಮದ ಮುಖ್ಯ ರಸ್ತೆ ಅಥವಾ ಸುತ್ತಲುತ್ತಲಿನ ಜಾಗದಲ್ಲಿ ನಿರ್ಮಾಣ ಮಾಡಬೇಕು. ಗ್ರಾಮದಿಂದ ಒಂದೂವರೆ ಕಿಮೀ  ದೂರದಲ್ಲಿನ ಅಮಾನಿಕೆರೆ ಸೋಮೇಶ್ವರ ದೇಗುಲದ ಬಳಿ ಸಮುದಾಯ ಭವನ ನಿರ್ಮಾಣ ಮಾಡುತ್ತಿರುವುದು ಸರಿಯಲ್ಲ ಎಂದು~ ಒಂದು ಬಣದ ಮುಖಂಡರು ಹೇಳಿದರು.ಗ್ರಾಮ ಪಂಚಾಯಿತಿ ಅಧಿಕಾರಿಗಳು ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕಾರ್ಡು ಹೊಂದಿರುವ ಕೂಲಿ ಕಾರ್ಮಿಕರಿಗೆ ಕೂಲಿ ನೀಡುತ್ತಿಲ್ಲ,  ತಾಲ್ಲೂಕನ್ನು ಬರಪೀಡಿತ ತಾಲ್ಲೂಕನ್ನಾಗಿ ಘೋಷಿಸಿದ್ದರೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕರಿಗೆ ಕೂಲಿ ನೀಡುತ್ತಿಲ್ಲ ಎಂದು ಆರೋಪಿಸಿದರು.ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ಬಹಳಷ್ಟು ಬೇಡಿಕೆಯಿದ್ದರೂ ಅಧಿಕಾರಿಗಳು ಜನತೆಯಲ್ಲಿ ಜಾಗೃತಿ ಮೂಡಿಸಿ ಶೌಚಾಲಯಗಳನ್ನು ನಿರ್ಮಿಸಿ ಕೊಡುವಲ್ಲಿ ವಿಫಲರಾಗಿದ್ದಾರೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೆರೆದ ಬಾವಿಗಳನ್ನು ತೋಡಿ ಅಂತರ್ಜಲ ವೃದ್ಧಿಗೆ ರೂಪಿಸಿರುವ ಯೋಜನೆಯಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಅರ್ಹ ಪಲಾನುಭವಿಗಳಿಗೆ ಪಂಗನಾಮ ಹಾಕಿ ಪಕ್ಷಪಾತ ಧೋರಣೆಯೊಂದಿಗೆ ಪಟ್ಟಭದ್ರ ಹಿತಾಸಕ್ತಿಗಳಿಗೆ ಅನುಗುಣವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.ಇದಕ್ಕೆ ಪ್ರತಿಯಾಗಿ ಮತ್ತೊಂದು ಗುಂಪು ಗ್ರಾಮ ಪಂಚಾಯಿತಿ ಪರವಾಗಿ ಪ್ರತಿಭಟನೆ ನಡೆಸಿ ಗ್ರಾಮದಲ್ಲಿ ಸಮುದಾಯ ಭವನಕ್ಕೆ ಸೂಕ್ತವಾದ ಸ್ಥಳವಿರಲಿಲ್ಲ. ಗ್ರಾಮ ಪಂಚಾಯಿತಿಯಲ್ಲಿ ತೀರ್ಮಾನ ಕೈಗೊಂಡು ಸೋಮೇಶ್ವರ ದೇವಾಲಯದ ಬಳಿ ಸಮುದಾಯ ಭವನ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಜನತೆ ಅನುಕೂಲವಾಗುತ್ತದೆ ಎಂದು ವಾದಿಸಿತು.ಗ್ರಾಮ ಪಂಚಾಯಿತಿಯಲ್ಲಿ ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳಲಾಗಿದೆ. ಗ್ರಾಮದ ಬಹುತೇಕ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿ ಸಮುದಾಯ ಭವನದಿಂದ ಎಲ್ಲರಿಗೂ ಅನುಕೂಲವಾಗುವಂತೆ ಸ್ಥಳ ಆರಿಸಲಾಗಿದೆ. ಅಭಿವೃದ್ಧಿ ಕಾಮಗಾರಿಗಳು ಸಹ ಭರದಿಂದ ನಡೆಯುತ್ತಿವೆ.ಅದೇ ಜಾಗದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಬಸವರಾಜ್ ಅವರಿಗೆ ಮನವಿ ಸಲ್ಲಿಸಿದರು. ನಂತರ ಸ್ಥಳಕ್ಕೆ ಭೇಟಿ ನೀಡಿದ ಬಸವರಾಜ್ ಎರಡು ಗುಂಪುಗಳ ನಾಯಕರೊಂದಿಗೆ ಮಾತುಕತೆ ನಡೆಸಿದರು.

ಈ ಬಗ್ಗೆ ಎಲ್ಲ ವಿವರಗಳನ್ನು ಪಡೆದುಕೊಂಡು ಹಿರಿಯ ಅಧಿಕಾರಿಗಳಿಗೆ ವರದಿ ನೀಡುವುದಾಗಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry