ಸಮುದಾಯ ರೇಡಿಯೊದ ಭಿನ್ನ ತರಂಗ

3

ಸಮುದಾಯ ರೇಡಿಯೊದ ಭಿನ್ನ ತರಂಗ

Published:
Updated:
ಸಮುದಾಯ ರೇಡಿಯೊದ ಭಿನ್ನ ತರಂಗ

ಹಿಂದುಳಿದ, ಶೋಷಿತ ಸಮುದಾಯಗಳಿಗೆ ಅವರ ಸಮಸ್ಯೆಗಳನ್ನು ಚರ್ಚಿಸಲು ಹಾಗೂ ಅವರ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸಬೇಕೆಂಬ ಹಂಬಲದಿಂದ ಒಬ್ಬ ಮಹಿಳೆ ಪ್ರಾರಂಭಿಸಿದ ಸಮುದಾಯ ರೇಡಿಯೊ ಈಗ ಅತಿ ಹೆಚ್ಚು ಮಹಿಳೆಯರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ವೇದಿಕೆ ಕಲ್ಪಿಸಿಕೊಟ್ಟಿದೆ. ಜೊತೆಗೆ ನಗರದ ಪ್ರಥಮ ‘ಪ್ರಾಣಿಸ್ನೇಹಿ ಕಚೇರಿ’ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.ನಗರಗಳು ಎಷ್ಟೇ ಮುಂದುವರೆದರೂ ಅಲ್ಲೂ ಮುಖ್ಯವಾಹಿನಿಗೆ ಬಾರದವರ ಸಂಖ್ಯೆ ಇನ್ನೂ ಕಡಿಮೆಯಾಗಿಲ್ಲ. ಜಾತಿ, ಧರ್ಮ, ಆರ್ಥಿಕ ಸ್ವಾವಲಂಬನೆ ಇಲ್ಲದ ಕಾರಣಗಳಿಂದಾಗಿ ಇನ್ನೂ ಹಲವರ ಪ್ರತಿಭೆ ಬೆಳಕಿಗೆ ಬಾರದಂತೆ ಮೂಲೆ ಸೇರುತ್ತಿದೆ. ಉಳಿದಂತೆ ಕೆಲವು ಸಮುದಾಯಗಳಿಗೆ ತಮ್ಮ ಸಮಸ್ಯೆಗಳ ಕುರಿತು ಚರ್ಚಿಸಲು ಅವಕಾಶ ಹಾಗೂ ವೇದಿಕೆ ಸಿಗುತ್ತಲೇ ಇಲ್ಲ. ಇಂತಹವರಿಗೆ ವೇದಿಕೆಯಾಗುವ ಉದ್ದೇಶದಿಂದ ಆರಂಭವಾಗಿದ್ದೇ ‘ರೇಡಿಯೊ ಆಕ್ಟೀವ್‌ ಸಿಆರ್‌ 90.4 ಮೆಗಾಹರ್ಟ್ಸ್‌’ .

ನಗರದಲ್ಲಿ ಜೂನ್‌ 2007ರಿಂದ ಮುಖ್ಯ ವಾಹಿನಿಗೆ ಬಾರದ ಸಮುದಾಯಗಳ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ‘ರೇಡಿಯೊ ಆಕ್ಟೀವ್‌’ನಲ್ಲಿ ಈಗ ಮಹಿಳೆಯರದ್ದೇ ಮೇಲುಗೈ. ಇಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಗೂ ಸ್ವಯಂಸೇವಕರಲ್ಲಿ ಹೆಚ್ಚಿನ ಸ್ಥಾನ ಮಹಿಳೆಯರದ್ದೇ. ಎಚ್‌ಐವಿ ಸೋಂಕಿತರು, ಲೈಂಗಿಕ ಕಾರ್ಯಕರ್ತೆಯರು, ತೃತೀಯ ಲಿಂಗಿಗಳು, ಚಿಂದಿ ಆಯುವವರು, ಮನೆಗಳಲ್ಲಿ ಮುಸುರೆ ತಿಕ್ಕುವವರು, ಆಟೊ ಚಾಲಕರು, ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ, ಪ್ರಾಣಿಗಳಿಗಾಗಿ ಹೋರಾಟ ನಡೆಸುವ ಪ್ರಾಣಿ ಪ್ರಿಯರು ಸೇರಿದಂತೆ ಹಲವಾರು ಸಮುದಾಯದವರು ಇದನ್ನು ವೇದಿಕೆಯಾಗಿ ಬಳಸಿಕೊಳ್ಳುತ್ತಿದ್ದಾರೆ. ಪ್ರಾಣಿ ಪ್ರಿಯರಿಗೂ ಇಲ್ಲಿ ಸ್ಥಾನ ನೀಡಿರುವ ಕಾರಣ ಈ ಕಚೇರಿಯಲ್ಲಿ ಎರಡು ನಾಯಿಗಳಿಗೂ ಅವಕಾಶ ಕಲ್ಪಿಸಲಾಗಿದೆ. ಈ ರೇಡಿಯೊದಲ್ಲಿ ಪ್ರತಿಯೊಂದು ಸಮುದಾಯದವರನ್ನು ಒಂದೊಂದು ಗುಂಪಾಗಿ ಮಾಡಲಾಗಿದೆ. ಪ್ರತಿ ತಿಂಗಳು ಆ ಗುಂಪಿನವರೇ ತಾವು ಮಾಡುವ ಕಾರ್ಯಕ್ರಮದ ಥೀಮ್‌ ಆಯ್ಕೆ ಮಾಡಿಕೊಳ್ಳಲು ಸಭೆ ನಡೆಸುತ್ತಾರೆ. ಸಭೆಯಲ್ಲಿ ಆಯ್ಕೆಯಾದ ವಿಷಯದ ಮೇಲೆ ಯಾವ ರೀತಿ ಕಾರ್ಯಕ್ರಮ ನಿರ್ಮಿಸಬೇಕು, ಅದನ್ನು ಯಾವ ಸಮಯದಲ್ಲಿ ಪ್ರಸಾರ ಮಾಡಬೇಕು ಎಂದೂ ಅವರೇ ನಿರ್ಧರಿಸುತ್ತಾರೆ. ನಂತರ ಅವರಲ್ಲೇ ಒಬ್ಬರು ರೇಡಿಯೊ ಜಾಕಿಯಾದರೆ, ಉಳಿದವರು ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. ಅಂದರೆ ಕಾರ್ಯಕ್ರಮ ನಿರ್ಮಾಣದ ತಂಡದಲ್ಲಿ ಕಾರ್ಯನಿರ್ವಹಿಸುತ್ತಾರೆ.ಉದಾಹರಣೆಗೆ: ತೃತೀಯ ಲಿಂಗಿಗಳ ಸಮುದಾಯಕ್ಕೆ ಸೇರಿದವರು ಅವರು ಎದುರಿಸುವ ಸವಾಲುಗಳು, ಸಮಸ್ಯೆಗಳ ಕುರಿತು ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಾರೆ. ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುವ ಅಭಿಯಾನಗಳನ್ನೂ ನಡೆಸುತ್ತಾರೆ. ಆಗ ಅವರ ಗುಂಪಿನಲ್ಲಿ ತೃತೀಯ ಲಿಂಗಿಗಳೇ ಆರ್‌ಜೆ ಆಗಿ, ಕಾರ್ಯಕ್ರಮ ನಿರ್ಮಾಪಕ ತಂಡದ ಸದಸ್ಯರಾಗಿ ಜವಾಬ್ದಾರಿ ನಿರ್ವಹಿಸುತ್ತಾರೆ. ಸದ್ಯಕ್ಕೆ  ರೇಡಿಯೊ ಆಕ್ಟೀವ್‌ನಲ್ಲಿ ಐದು ಮಂದಿ ತೃತೀಯ ಲಿಂಗಿ ರೇಡಿಯೊ ಜಾಕಿಗಳಿದ್ದಾರೆ. ಉಳಿದಂತೆ ಕೆಲವರು ನಿರ್ಮಾಣ ತಂಡದಲ್ಲಿ ಕಾರ್ಯನಿರ್ವಹಿಸುತ್ತಾರೆ.ರೇಡಿಯೊ ಹುಟ್ಟು 

ಸಮುದಾಯ ರೇಡಿಯೊ ಆರಂಭಿಸಲು ಸ್ವಯಂಸೇವಾ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಕೃಷಿ ವಿಶ್ವವಿದ್ಯಾಲಯಗಳಿಗೆ ಮಾತ್ರ ಪರವಾನಗಿ ದೊರೆಯುತ್ತದೆ. ಈ ಬಗ್ಗೆ ಪ್ರಸ್ತುತ ರೇಡಿಯೊದ ನಿರ್ದೇಶಕಿಯಾಗಿರುವ ಪಿಂಕಿ ಚಂದ್ರನ್‌ ಅವರಿಗೆ ಮಾಹಿತಿ ಇರಲಿಲ್ಲ. ಪಿಂಕಿ 2005ರಲ್ಲಿ ಜೈನ್‌ ವಿಶ್ವವಿದ್ಯಾಲಯದಲ್ಲಿ ಕೆಲಸಕ್ಕೆ ಸೇರಿದ್ದರು. ಶಿಕ್ಷಕರ ತರಬೇತಿ ಹಾಗೂ ಅಭಿವೃದ್ಧಿ ವಿಭಾಗದ ಜವಾಬ್ದಾರಿ ನೋಡುಕೊಳ್ಳುತ್ತಿರುವಾಗಲೇ ವಿಶ್ವವಿದ್ಯಾಲಯದಲ್ಲಿ ಮಾಸ್‌ ಕಮ್ಯುನಿಕೇಷನ್‌ ವಿಭಾಗವನ್ನು ಪ್ರಾರಂಭಿಸಲಾಗಿತ್ತು. ಆಗ ಅವರೊಂದಿಗೆ ಕೆಲಸ ಮಾಡುತ್ತಿದ್ದ ಕಾರ್ತಿಕ್‌ ಎಂಬುವರು ಅವರಿಗೆ ಸಮುದಾಯ ರೇಡಿಯೊ ಪ್ರಾರಂಭಿಸಲು ವಿದ್ಯಾಲಯದ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿದ್ದರು.‘ಸಹೋದ್ಯೋಗಿ ನೀಡಿದ್ದ ಸಲಹೆಯನ್ನು ಗಂಭೀರವಾಗಿ ತೆಗೆದುಕೊಂಡು 2006ರಲ್ಲಿ ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದೆ. ಈ ಮಧ್ಯೆ ವೈಯಕ್ತಿಕ ಕೆಲಸಕ್ಕಾಗಿ ಆಸ್ಟ್ರೇಲಿಯಾಗೆ ಭೇಟಿ ನೀಡಿದ್ದೆ. ಅಲ್ಲಿ ಕನ್ನಡ ಕಾರ್ಯಕ್ರಮ ಬಿತ್ತರಿಸುತ್ತಿದ್ದ ಸಮುದಾಯ ರೇಡಿಯೊ ವಿಷಯ ತಿಳಿದು ಅವರಿಂದಲೂ ಮಾಹಿತಿ ಕಲೆ ಹಾಕಿ, ನಗರಕ್ಕೆ ಹಿಂತಿರುಗಿದ ನಂತರ ರೇಡಿಯೊ ಸ್ಟುಡಿಯೊ ನಿರ್ಮಿಸಲು ಬೇಕಾದ ಸಿದ್ಧತೆ ಮಾಡಿಕೊಳ್ಳಲು ಪ್ರಾರಂಭಿಸಿದ್ದೆ. ಅಷ್ಟರಲ್ಲಿ ಪರವಾನಗಿಯೂ ಸಿಕ್ಕಿತ್ತು.ಆದರೆ ಸಮುದಾಯ ರೇಡಿಯೊವನ್ನು  ಕೇವಲ ಒಂದು ಸಮುದಾಯಕ್ಕೆ ಮೀಸಲಾಗಿಡುವುದು ಸರಿಯಲ್ಲ ಅನ್ನಿಸಿತ್ತು. ಹೀಗಾಗಿ ಏನು, ಹೇಗೆ ಮಾಡಬೇಕು ಎಂಬ ಪರಿಕಲ್ಪನೆಯೇ ಇರಲಿಲ್ಲ. ಅದಕ್ಕಾಗಿ ಸಾಕಷ್ಟು ಸ್ವಯಂ ಸೇವಾ ಸಂಸ್ಥೆಗಳಿಗೆ ಭೇಟಿ ನೀಡಿ, ಅವರಿಂದ ಸಲಹೆಗಳನ್ನು ಸ್ವೀಕರಿಸಿದ್ದೆವು. ನಂತರ ಆಕ್ಟೀವ್‌ ರೇಡಿಯೊವನ್ನು ಮುಖ್ಯವಾಹಿನಿಗೆ ಬಾರದ ಎಲ್ಲ ಸಮುದಾಯಗಳಿಗೆ ವೇದಿಕೆಯಾಗುವಂತೆ ಮಾಡಬೇಕು ಎಂದು ನಿರ್ಧರಿಸಲಾಯಿತು’ ಎಂದು ವಿವರಿಸುತ್ತಾರೆ ಪಿಂಕಿ.

‘ನಗರದ ಕೊಳೆಗೇರಿ, ತೃತೀಯ ಲಿಂಗಿಗಳ ಸಂಸ್ಥೆಗಳು, ಮನೆಯಿಂದ ಹೊರ ಹೆಜ್ಜೆ ಇಡದ ಹೆಣ್ಣು ಮಕ್ಕಳು ಹೀಗೆ ಸಾಕಷ್ಟು ಜನರನ್ನು ಭೇಟಿ ಮಾಡಿ, ಅವರಿಗೆ ರೇಡಿಯೊ ಆಕ್ಟೀವ್‌ ಕುರಿತಂತೆ ಅರಿವು ಮೂಡಿಸಲಾಯಿತು. ತಮ್ಮ ಸಮಸ್ಯೆಗಳು ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳಲು ವೇದಿಕೆಯಾಗಿ ಬಳಸಿಕೊಳ್ಳಬಹುದು ಎಂದು ತಿಳಿ ಹೇಳಿದೆವು. ನಮ್ಮಲ್ಲಿ ಅನಕ್ಷರಸ್ಥರು, ಅರ್ಧಕ್ಕೆ ವಿದ್ಯಾಭ್ಯಾಸ ನಿಲ್ಲಿಸಿದವರು ಹೆಚ್ಚಾಗಿ ಕೆಲಸ ಮಾಡುತ್ತಾರೆ.ನಾವು ಬಳಸುವ ತಂತ್ರಜ್ಞಾನ ಎಲ್ಲರಿಗೂ ಸುಲಭವಾಗಿ ಅರ್ಥವಾಗುತ್ತದೆ. ಹೀಗಾಗಿಯೇ ಅಂತಹವರಿಗೆ ಆದ್ಯತೆ ನೀಡುತ್ತೇವೆ. ಸದ್ಯಕ್ಕೆ ಜಾಹೀರಾತು, ಜೈನ್‌ ವಿಶ್ವವಿದ್ಯಾಲಯ ನೀಡುವ ಸಹಾಯ ಧನದಿಂದ ರೇಡಿಯೊ ಸಂಸ್ಥೆಯ ನಿರ್ವಹಣೆ ನಡೆಯುತ್ತಿದೆ. ಆದರೂ ಹಣದ ಕೊರತೆ ಇರುವ ಕಾರಣ ಕಾರ್ಯಕ್ರಮಗಳ ನಿರ್ಮಾಣಕ್ಕೆ ಪ್ರಾಯೋಜಕರನ್ನು ಹುಡುಕುತ್ತೇವೆ. ಏನೇ ಆದರೂ 2007ರಿಂದ ಇಲ್ಲಿಯವರೆಗೆ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದೇವೆ. ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಇದನ್ನು ನಡೆಸಿಕೊಂಡು ಹೋಗುತ್ತಿರುವ ನನಗೆ ತುಂಬಾ ಖುಷಿ ನೀಡಿದೆ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಅವರು.  ಇಲ್ಲಿ ಕೇವಲ ಸಿಬ್ಬಂದಿ ಅಲ್ಲದೆ ಸ್ವಯಂ ಸೇವಕರಾಗಿ ಸಾಕಷ್ಟು ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ರೇಡಿಯೊ ಆಕ್ಟೀವ್‌’ನಲ್ಲಿ ಬಿತ್ತರಗೊಳ್ಳುವ ಹಲವಾರು ಕಾರ್ಯಕ್ರಮಗಳು ಒಂದಲ್ಲಾ ಒಂದು ಸ್ವಯಂ ಸೇವಕ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ನಿರ್ಮಾಣಗೊಳ್ಳುತ್ತವೆ. ಸದ್ಯಕ್ಕೆ ಈ ರೇಡಿಯೊದಲ್ಲಿ 17 ಮಂದಿ ಸಿಬ್ಬಂದಿ, ಎರಡು ನಾಯಿಗಳು ಹಾಗೂ 150ಕ್ಕೂ ಹೆಚ್ಚು ಸ್ವಯಂಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ.ಪ್ರಾಣಿಸ್ನೇಹಿ ಸಂಸ್ಥೆ

ನಮ್ಮ ಸಂಸ್ಥೆಯಲ್ಲಿ ಪ್ರಾಣಿಪಕ್ಷಿಗಳಿಗಾಗಿ ಹೋರಾಟ ನಡೆಸುವ ಕಾರ್ಯಕರ್ತರೂ ಕೆಲಸ ಮಾಡುತ್ತಿದ್ದಾರೆ. ಕೆಲವರು ಸಂಸ್ಥೆಯ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರೆ, ಮತ್ತೆ ಕೆಲವರು ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಸಂಸ್ಥೆಯಲ್ಲಿ ಎರಡು ನಾಯಿಗಳನ್ನೂ ಸಾಕಿಕೊಂಡಿದ್ದೇವೆ. ಅವುಗಳನ್ನು ನೋಡಿಕೊಳ್ಳುವ ಜವಾಬ್ದಾರಿ ರೇಡಿಯೊದಲ್ಲಿ ಕೆಲಸ ಮಾಡುವ ಎಲ್ಲರ ಮೇಲೂ ಇದೆ. ಕೆಲವು ಕಾರ್ಯಕ್ರಮಗಳು ಅಥವಾ ಚರ್ಚೆಗಳು ನಡೆಯುವಾಗ ಅವುಗಳು ಸಹ ಸ್ಟುಡಿಯೊದಲ್ಲಿ ನಮ್ಮೊಂದಿಗೆ ಇರುತ್ತವೆ.ಸಮುದಾಯ ಎಂದರೆ ಕೇವಲ ಮನುಷ್ಯರಷ್ಟೇ ಅಲ್ಲ. ಪ್ರಾಣಿಪಕ್ಷಿಗಳಿಗೂ ಸಮಾನ ಅವಕಾಶ ಇದೆ. ಅವುಗಳ ಮೇಲೆ ನಡೆಯುವ ಶೋಷಣೆ ಹಾಗೂ ದೌರ್ಜನ್ಯವನ್ನು ತಡೆಯಲು ಪ್ರಾಣಿ ಪ್ರಿಯರಿಗೆ ಸಂಸ್ಥೆ ವೇದಿಕೆಯಾಗಿದೆ. ಇತ್ತೀಚೆಗೆ ನಡೆಸಿದ ಘನ ತ್ಯಾಜ ಹಾಗೂ ಕಾಗದದ ಪುನರ್ಬಳಕೆ ಅಭಿಯಾನದಲ್ಲೂ ಎರಡೂ ನಾಯಿಗಳು ರೂಪದರ್ಶಿಗಳಾಗಿ ಎಲ್ಲರ ಗಮನ ಸೆಳೆದಿದ್ದವು.

– ಪಿಂಕಿ ಚಂದ್ರನ್‌, ರೇಡಿಯೊ ಆಕ್ಟೀವ್‌, ನಿರ್ದೇಶಕಿವಿದ್ಯಾರ್ಥಿಗಳಿಗೂ ಆದ್ಯತೆ

ಪ್ರತಿವರ್ಷ ಜನವರಿ ಹಾಗೂ ಫೆಬ್ರುವರಿಯಲ್ಲಿ ಮಕ್ಕಳಿಗಾಗಿ ಕಥೆ ಹೇಳುವ ಕಾರ್ಯಕ್ರಮ ನಡೆಸಲಾಗುತ್ತದೆ. ಅದರಲ್ಲಿ ನಗರದ ನಾನಾ ಶಾಲೆಗಳಿಂದ 1500ಕ್ಕೂ ಹೆಚ್ಚು ಮಕ್ಕಳು ಭಾಗವಹಿಸುತ್ತಾರೆ. ಇದರಲ್ಲೂ ಮಕ್ಕಳೇ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ನಿರ್ವಹಿಸುತ್ತಾರೆ. ಇದರೊಂದಿಗೆ ಹೆಣ್ಣುಮಕ್ಕಳಿಗಾಗಿ ‘ ಋತುಮತಿ’ ಎಂಬ ಸರಣಿ ಕಾರ್ಯಕ್ರಮ ಬಿತ್ತರಿಸುತ್ತೇವೆ. ಇದರಲ್ಲಿ ನಗರದ ಒಂದೊಂದು ಪ್ರದೇಶಕ್ಕೆ ತೆರಳಿ ಮಕ್ಕಳ ಪೋಷಕರನ್ನು ಭೇಟಿ ಮಾಡಿ ಕಾರ್ಯಾಗಾರ ನಡೆಸುತ್ತೇವೆ.ನಂತರ ಹೆಣ್ಣು ಮಕ್ಕಳು ಮೊದಲು ಋತುಮತಿಯಾದಾಗ ಅವರು ಎದುರಿಸಿದ ಸವಾಲುಗಳು ಹಾಗೂ ಅವರ ಮನೆಗಳಲ್ಲಿ ಆಚರಿಸುವ ಪದ್ಧತಿಗಳ ಕುರಿತು ಮಾಹಿತಿ ಸಂಗ್ರಹಿಸುತ್ತಾರೆ. ನಂತರ ಆಚರಿಸುವ ಆಚರಣೆಗಳನ್ನು ದಾಖಲೆ ಮಾಡಿ ಕಾರ್ಯಕ್ರಮದ ರೂಪದಲ್ಲಿ ಪ್ರಸಾರ ಮಾಡುತ್ತಾರೆ. ಮುಂಬರುವ ಏಪ್ರಿಲ್‌ನಲ್ಲಿ ‘ಋತುಮತಿ’ ಕಾರ್ಯಕ್ರಮದ ಮೂರನೇ ಸರಣಿ ಬಿತ್ತರವಾಗಲಿದೆ.ವಿಳಾಸ: ರೇಡಿಯೊ ಆಕ್ಟೀವ್‌ ಸಿಆರ್‌ 90.4 ಮೆಗಾ ಹರ್ಟ್ಸ್‌, ಜೈನ್‌ ವಿಶ್ವವಿದ್ಯಾಲಯ, 1/1–1, ಏಟ್ರಿಯಾ ಟವರ್ಸ್‌, ಅರಮನೆ ರಸ್ತೆ.

ದೂರವಾಣಿ ಸಂಖ್ಯೆ: 080– 22355490.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry