ಸಮ್ಮಾನ ಶಿಖರದ ಮೇಲೆ ಶೀಲಾ

7

ಸಮ್ಮಾನ ಶಿಖರದ ಮೇಲೆ ಶೀಲಾ

Published:
Updated:

ಶೀಲಾ ಗೌಡ ಖ್ಯಾತ ಕಲಾವಿದೆ. ಇವರ ಖ್ಯಾತಿಯ ಹರವು ಸಾಗರದಾಚೆಗೂ ವಿಸ್ತರಿಸಿದೆ. ಯಂತ್ರ ಕಲಾಕೃತಿ ಹಾಗೂ ಶಿಲ್ಪಕಲಾಕೃತಿಗಳ ರಚನೆಯಲ್ಲಿ ಪ್ರಖ್ಯಾತಿಗಳಿಸಿರುವ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. 55ರ ಹೊಸ್ತಿಲಿನಲ್ಲಿರುವ ಅವರ ಕಲಾ ಕೌಶಲ್ಯಕ್ಕೆ ಈಗ ವಿಶ್ವ ಮನ್ನಣೆಯ ರುಜು ಬಿದ್ದಿದೆ.ಶೀಲಾ ಗೌಡ ಅವರು ಈಗ ಯುನೈಟೆಡ್ ಕಿಂಗ್‌ಡಮ್‌ನ ಅತಿದೊಡ್ಡ ಕಲಾ ಪ್ರಶಸ್ತಿ ಎನಿಸಿಕೊಂಡಿರುವ `ಆರ್ಟೆಸ್ ಮುಂಡಿ ಪ್ರಶಸ್ತಿ~ಯ ಹೊಸ್ತಿಲಲ್ಲಿ ನಿಂತಿದ್ದಾರೆ. 90 ದೇಶಗಳಿಂದ 750 ಜನ ಕಲಾವಿದರನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗಿತ್ತು. ಆರ್ಟೆಸ್ ಮುಂಡಿ ಈಚೆಗೆ ಆಯ್ಕೆಯಾದ ಏಳು ಕಲಾವಿದರ ಕೊನೆಯ `ಶಾರ್ಟ್‌ಲಿಸ್ಟ್~ ಪ್ರಕಟಿಸಿದ್ದು, ಅದರಲ್ಲಿ ಶೀಲಾ ಗೌಡ ಹೆಸರೂ ಇದೆ. 40 ಸಾವಿರ ಪೌಂಡ್ ಮೊತ್ತದ ಬಹುಮಾನವಿರುವ ಈ ಪ್ರಶಸ್ತಿಯ ವಿಜೇತರನ್ನು ವರ್ಷಾಂತ್ಯದಲ್ಲಿ ಪ್ರಕಟಿಸಲಾಗುತ್ತದೆ.ಶೀಲಾ ಗೌಡ ಕಲಾಕೃತಿಗಳಲ್ಲಿ ಎದ್ದು ಕಾಣುವುದು ಸಾಮಾಜಿಕ ಕಳಕಳಿ. ಇವರ ಕಲಾಕೃತಿಗಳಲ್ಲಿ ಭಾರತದ ರಾಜಕೀಯ ಹಾಗೂ ಸಾಮಾಜಿಕ ವ್ಯವಸ್ಥೆ, ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯ ಮೊದಲಾದ ವಿಷಯಗಳು ಅದ್ಭುತವಾಗಿ ಬಿಂಬಿತವಾಗಿವೆ. ಕಲಾಕೃತಿಗಳ ರಚನೆಗೆ ಅನುಸರಿಸಿರುವ ಮಾರ್ಗ ಕೂಡ ಬೆರಗು ಹುಟ್ಟಿಸುತ್ತದೆ.ಸಿದ್ಧ ಮಾದರಿಯನ್ನು ಬದಿಗಿಟ್ಟು ಸಾಂಪ್ರದಾಯಿಕವಲ್ಲದ ವಸ್ತುಗಳನ್ನು ಉಪಯೋಗಿಸಿಕೊಂಡು ಕಲಾಕೃತಿಗಳನ್ನು ನಿರ್ಮಿಸುವ ಇವರ ಕೌಶಲ್ಯ ನಿಬ್ಬೆರಗಾಗಿಸುವಂಥದ್ದು. ಬಣ್ಣಗಳ ಬದಲಿಗೆ ಹಸುವಿನ ಸಗಣಿ, ಬೂದಿ, ದಾರ ಹಾಗೂ ಕೂದಲುಗಳನ್ನು ಉಪಯೋಗಿಸಿಕೊಂಡು ಇವರು ಕಲಾಕೃತಿಗಳನ್ನು ರಚಿಸುತ್ತಾರೆ.ಇವರು ರಚಿಸಿದ ಶಿಲ್ಪಕಲಾಕೃತಿಗಳಲ್ಲಿ ಮುಂಬೈ ನಗರವಾಸಿಗಳ ಸ್ವೇಚ್ಛೆ- ಭೋಗದ ಬದುಕು ಅಡಗಿದೆ. ಭಾರತದಲ್ಲಿ ಢಾಳಾಗಿರುವ ಅಸಮಾನತೆಗೂ ಅವು ಕನ್ನಡಿ. ಅವರ ಖ್ಯಾತ ಕಲಾಕೃತಿ `ಕೊಲ್ಯಾಟರಲ್~ ಬೂದಿಯಿಂದ ತಯಾರಿಸಿದ್ದು. ಇದು ಯುದ್ಧಭೂಮಿಯ ಪರಿಕಲ್ಪನೆಯನ್ನು ಕಟ್ಟಿಕೊಡುತ್ತದೆ. ಬೂದಿಯನ್ನು ಜಾಲರಿ ಮೇಲೆ ಲೇಪಿಸಿ ಇವರು ಅದ್ಭುತ ಕಲಾಕೃತಿಯಾಗಿ ಪರಿವರ್ತಿಸಿದ್ದಾರೆ. ಈ ಕಲಾಕೃತಿ ಯುದ್ಧ ಮುಗಿದ ನಂತರ ಅಲ್ಲಿ ಕಾಣುವ ಮನ ಕಲಕುವ ದೃಶ್ಯವನ್ನು ಸಮರ್ಥವಾಗಿ ಕಟ್ಟಿಕೊಡುತ್ತದೆ.ಶೀಲಾ ಗೌಡ ಚಿತ್ರಕಲಾವಿದೆಯಾಗಿ ಮೊದಲು ತಮ್ಮ ವೃತ್ತಿಯನ್ನು ಪ್ರಾರಂಭಿಸಿದವರು. ಅವರ ಈ ಕಲಾ ಪ್ರಯಾಣದಲ್ಲಿ ಯಶಸ್ಸು, ಖ್ಯಾತಿ ಎರಡೂ ಜತೆಗೂಡಿವೆ. ಆರ್ಟೆಸ್ ಮುಂಡಿಯ ಬಹುಮಾನ ಪಡೆಯಬಹುದಾದವರ ಸಾಲಿನಲ್ಲಿ ಇವರ ಜತೆಗೆ ಮಿರಿಯಾಮ್ ಬ್ಯಾಕ್‌ಸ್ಟ್ರೋಮ್ (ಸ್ವೀಡನ್), ತಾನಿಯಾ ಬ್ರುಗೇರಿಯಾ (ಕ್ಯೂಬಾ), ಫಿಲ್ ಕೋಲಿನ್ಸ್ (ಇಂಗ್ಲೆಂಡ್)  ತೆರೆಸಾ ಮಾರ್ಗೊಲೆಸ್ (ಮೆಕ್ಸಿಕೊ), ಡಾರಿಸ್ ಮಿಕ್ಸ್‌ಸೆಸ್ (ಲಿಥುಯೇನಿಯಾ) ಹಾಗೂ ಅಪೋಲೊನಿಜಾ ಸುಸ್ಟ್ರೇಸಿಕ್ (ಸ್ಲೊವೇನಿಯಾ) ಸ್ಪರ್ಧೆಯಲ್ಲಿದ್ದಾರೆ.ಈ ಪ್ರಶಸ್ತಿಯ ಶಾರ್ಟ್‌ಲಿಸ್ಟ್‌ನಲ್ಲಿ ಆಯ್ಕೆಯಾದ ಕಲಾವಿದರ ಕಲಾಕೃತಿಗಳು ವೇಲ್ಸ್‌ನ `ದಿ ನ್ಯಾಷನಲ್ ಮ್ಯೂಸಿಯಂ ಆಫ್ ಆರ್ಟ್ಸ್~ನಲ್ಲಿ ಪ್ರದರ್ಶನಗೊಳ್ಳಲಿವೆ. 14 ವಾರ ನಡೆಯುವ ಈ ಕಾರ್ಯಕ್ರಮ ಅಕ್ಟೋಬರ್ 6ರಿಂದ ಪ್ರಾರಂಭಗೊಳ್ಳಲಿದ್ದು ಇದಕ್ಕೆ ಬ್ಯಾಂಕ್ ಆಫ್ ಅಮೆರಿಕಾ ಸಹಕಾರ ಒದಗಿಸಿದೆ. ಇದರ ಜತೆಗೆ `ಶಾರ್ಟ್‌ಲಿಸ್ಟ್~ನಲ್ಲಿರುವ ಪ್ರತಿ ಕಲಾವಿದರಿಗೂ 4 ಸಾವಿರ ಪೌಂಡ್ ಬಹುಮಾನ ನೀಡಲು ದಿ ಆರ್ಟ್ ಕೌನ್ಸಿಲ್ ಆಫ್ ವೇಲ್ಸ್ ಹಾಗೂ ಕಾರ್ಡಿಫ್ ಕೌನ್ಸಿಲ್ ನಿರ್ಧರಿಸಿವೆ. ಜತೆಗೆ 2013ರಲ್ಲಿ ಈ ಕಲಾವಿದರ ಕಲಾಕೃತಿಗಳ ಏಕವ್ಯಕ್ತಿ ಪ್ರದರ್ಶನ ಏರ್ಪಡಿಸಲು ಕೂಡ ಅವಕಾಶ ಕಲ್ಪಿಸಿ ಕೊಡಲಾಗುತ್ತದೆ. `ವಿಭಿನ್ನ ಯೋಚನೆಯುಳ್ಳ ವಿಶ್ವದ ಅತ್ಯಂತ ಶ್ರೇಷ್ಟ 7 ಸೃಜನಶೀಲ ಕಲಾವಿದರನ್ನು ಆಯ್ಕೆ ಮಾಡುವುದಕ್ಕೆ ನಮಗೆ ಸಂತಸವೆನಿಸಿದೆ. ಈ ಕಲಾವಿದರನ್ನು ವೇಲ್ಸ್‌ನಲ್ಲಿ ನಡೆಯಲಿರುವ ಕಲಾಪ್ರದರ್ಶನದಲ್ಲಿ ಎದುರುಗೊಳ್ಳುವ ಉತ್ಸುಕತೆ ನನ್ನಲ್ಲಿ ಅಧಿಕವಾಗಿದೆ~ ಎಂದು ಹರ್ಷ ವ್ಯಕ್ತಪಡಿಸುವ ಆರ್ಟೆಶ್ ಮುಂಡೀಸ್‌ನ ಮುಖ್ಯಸ್ಥ ಬೆನ್ ಬೋರ್ಥ್‌ವಿಕ್ ಅವರ ಮಾತುಗಳು ಈ ಎಲ್ಲ ಕಲಾವಿದರ ಸೃಜನಶೀಲತೆಯನ್ನು ಬಿಂಬಿಸುತ್ತವೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry