`ಸಮ್ಮಿಶ್ರ ಸರ್ಕಾರ ಬೇಡ'

7

`ಸಮ್ಮಿಶ್ರ ಸರ್ಕಾರ ಬೇಡ'

Published:
Updated:

ಮಂಡ್ಯ: ಮೈತ್ರಿ ಸರ್ಕಾರಕ್ಕೆ ಅವಕಾಶ ನೀಡಬೇಡಿ. ಹಾಗೆ, ಮಾಡಿದರೆ ರಾಜ್ಯವು ಅಭಿವೃದ್ಧಿಯಲ್ಲಿ ಮತ್ತೆ ಹದಿನೈದು ವರ್ಷಗಳಷ್ಟು ಹಿಂದಕ್ಕೆ ಹೋಗುತ್ತದೆ. ಒಂದೇ ಪಕ್ಷವನ್ನು ಅಧಿಕಾರ ತನ್ನಿರಿ. ಆ ಮೂಲಕ ರಾಜ್ಯಕ್ಕೆ ಉತ್ತಮ ಭವಿಷ್ಯ ಬರೆಯಿರಿ ಎಂದು ಕೆಪಿಸಿಸಿ ಉಪಾಧ್ಯಕ್ಷ ಅಂಬರೀಷ್ ಸಲಹೆ ನೀಡಿದರು.ತಾಲ್ಲೂಕಿನ ಕಾಳೇನಹಳ್ಳಿಯಲ್ಲಿ ಮಂಗಳವಾರ ಶ್ರೀರಂಗಪಟ್ಟಣ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.ಹೆಂಡತಿ ಅಥವಾ ಮಗನನ್ನು ಚುನಾವಣೆಗೆ ಯಾವುದೇ ಕಾರಣಕ್ಕೂ ಇಳಿಸುವುದಿಲ್ಲ. ಕುಟುಂಬ ಸದಸ್ಯರ ಬದಲಾಗಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಅವಕಾಶ ನೀಡಲು ಆದ್ಯತೆ ನೀಡುತ್ತೇನೆ. ಅವರನ್ನೇ ಬೆಳೆಸುತ್ತೇನೆ ಎಂದು ಹೇಳಿದರು.ರಾಜಕೀಯಕ್ಕೆ ಆಕಸ್ಮಿಕವಾಗಿ ಬಂದಿದ್ದೇನೆ. ಜಿಲ್ಲೆಯ ಜನ ಸದಾ ನನ್ನ ಬೆನ್ನೆಲುಬಾಗಿ ನಿಂತ್ದ್ದಿದಾರೆ. ಎಲ್ಲರ ಪ್ರೀತಿ, ವಿಶ್ವಾಸದಿಂದಾಗಿಯೇ ನಾನು ಈ ಮಟ್ಟಕ್ಕೆ ಬೆಳೆದು ನಿಂತಿದ್ದೇನೆ. ಅಂಬರೀಷ್ ಗೆಲ್ಲಿಸುವುದಷ್ಟೇ ಮುಖ್ಯವಲ್ಲ. ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.ಪಕ್ಷದ ಜಿಲ್ಲಾ ವೀಕ್ಷಕ ಆರ್.ವಿ. ದೇವರಾಜ್ ಮಾತನಾಡಿ, ಅಂಬರೀಷ್ ದೊಡ್ಡ ಶಕ್ತಿಯಾಗಿದ್ದಾರೆ. ರಾಜ್ಯದಲ್ಲಿ ಅವರು ಎಲ್ಲೇ ನಿಂತರೂ ಗೆದ್ದು ಬರುತ್ತಾರೆ. ರಾಜ್ಯದ ಜನತೆಯ ಅಷ್ಟೊಂದು ಪ್ರೀತಿ ಗಳಿಸಿದ್ದಾರೆ. ಜಿಲ್ಲೆಯ ಎಲ್ಲ ಅಭ್ಯರ್ಥಿಗಳನ್ನು ಗೆಲ್ಲಿಸುವ ಶಕ್ತಿ ಅವರಲ್ಲಿ ಇದ್ದು, ಇದರ ಉಸ್ತುವಾರಿಯನ್ನು ಅವರೇ ತೆಗೆದುಕೊಳ್ಳಬೇಕು ಎಂದು ಹೇಳಿದರು.ಜಿಲ್ಲೆಯಲ್ಲಿ ಕಾಂಗ್ರೆಸ್ ಗಾಳಿ ಬೀಸಿದೆ. ಕಾರ್ಯಕರ್ತರು, ಆ ಗಾಳಿಯನ್ನು ಮತವಾಗಿ ಪರಿವರ್ತಿಸುವ ಕೆಲಸ ಮಾಡಬೇಕು. ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್. ಆತ್ಮಾನಂದ ಮಾತನಾಡಿ, ಭಿನ್ನ ಎಂದು ಹೇಳಿಕೊಂಡು ಬಂದ ಬಿಜೆಪಿ ಕೆಟ್ಟ ಆಡಳಿತ ನೀಡಿದೆ.

ಬಿಜೆಪಿ ಮುಖಂಡರು ಅಧಿಕಾರಕ್ಕಾಗಿ ಕಚ್ಚಾಡುವುದರಲ್ಲಿಯೇ ಕಾಲ ಕಳೆದರು ಎಂದು ಟೀಕಿಸಿದರು.ಕಾವೇರಿ ನದಿ ಕುರಿತು ನೀಡಿದ ಐ ತೀರ್ಪು ಅಧಿಸೂಚನೆ ಹೊರಡಿಸಿದರೆ, ಜಿಲ್ಲೆಯ ರೈತರ ಮೇಲೆ ದುಷ್ಪರಿಣಾಮ ಉಂಟಾಗಲಿದೆ. ಅಧಿಸೂಚನೆ ಹೊರಡಿಸದಂತೆ ಕೆಪಿಸಿಸಿ ವತಿಯಿಂದ ಒತ್ತಡ ಹಾಕಬೇಕು ಎಂದು ಮನವಿ ಮಾಡಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಯುವ ಮುಖಂಡ ಎಸ್. ಸಚ್ಚಿದಾನಂದ, ಅಂಬರೀಷ್ ನಿಷ್ಕಳಂಕ ವ್ಯಕ್ತಿತ್ವದವರು. ಕಾವೇರಿಗಾಗಿ ಅಧಿಕಾರವನ್ನೇ ತ್ಯಾಗ ಮಾಡಿದ್ದಾರೆ.ಅಂಬರೀಷ್ ಅವರನ್ನು ಸೋಲಿಸಿರುವುದು ಶ್ರೀರಂಗಪಟ್ಟಣಕ್ಕೆ ಅಂಟಿದ ಕಪ್ಪು ಚುಕ್ಕೆ. ಒಮ್ಮೆ ಅವಕಾಶ ನೀಡಿ. ನಿಮ್ಮನ್ನು ಗೆಲ್ಲಿಸುವ ಮೂಲಕ ಕಪ್ಪು ಚುಕ್ಕೆ ಅಳಿಸುತ್ತೇವೆ ಎಂದರು.ಮಾಜಿ ಶಾಸಕಿ ದಮಯಂತಿ ಬೋರೇಗೌಡ ಅಧ್ಯಕ್ಷತೆ ವಹಿಸಿದ್ದರು. ಯೋಗಾನಂದ ಪಟೇಲ್, ಲಿಂಗರಾಜು, ಬೇಲೂರು ಸೋಮಶೇಖರ್, ರೈಸ್‌ಮಿಲ್ ದೇವೇಗೌಡ, ಪುಟ್ಟೇಗೌಡ, ರೇವಣ್ಣಕುಮಾರ್, ನಂಜೇಗೌಡ, ಕೆಬ್ಬಳ್ಳಿ ಆನಂದ್, ಕೆ.ಎಸ್. ರಾಜು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry