ಮಂಗಳವಾರ, ಮೇ 11, 2021
24 °C

ಸಮ್ಮೇಳನಕ್ಕೆ ತೆರೆ: ಸಾಹಿತ್ಯಾಸಕ್ತರ ಸಡಗರ;ಚಿಂತನ-ಮಂಥನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಮ್ಮೇಳನಕ್ಕೆ ತೆರೆ: ಸಾಹಿತ್ಯಾಸಕ್ತರ ಸಡಗರ;ಚಿಂತನ-ಮಂಥನ

ಚನ್ನರಾಯಪಟ್ಟಣ (ಚಾವುಂಡರಾಯ ವೇದಿಕೆ): ಸಮ್ಮೇಳನದ ಎರಡನೇ ದಿನವಾದ ಭಾನುವಾರ ಜನಸಾಗರ ಹರಿದು ಬಂತು. ಬೆಳಿಗ್ಗೆ ಕವಿಗೋಷ್ಟಿ ಆರಂಭವಾಗುತ್ತಿದ್ದಂತೆ ಪೆಂಡಾಲ್‌ನಲ್ಲಿ ಹಾಕಿದ ಕುರ್ಚಿಗಳು ಭರ್ತಿಯಾದವು.ಭಾನುವಾರ ರಜೆ ದಿನವಾದ್ದರಿಂದ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ  ಆಗಮಿಸಿದರು. ಪುಸ್ತಕ ವೀಕ್ಷಣೆ,  ಮಾರಾಟ ಜೋರಾಗಿತ್ತು. ಸಾಹಿತ್ಯಾಸಕ್ತರು, ಕಾಲೇಜುಗಳಲ್ಲಿ  ಐಚ್ಚಿಕ ಕನ್ನಡ ವಿಷಯದ  ವಿದ್ಯಾರ್ಥಿಗಳು, ಶಾಲಾ ಮಕ್ಕಳು ಪುಸಕ್ತ ಖರೀದಿಸಿದರು.ಸಾಮಾನ್ಯವಾಗಿ ತಾಲ್ಲೂಕು ಸಮ್ಮೇಳನದಲ್ಲಿ 3-4 ಸಾವಿರ ರೂ. ವ್ಯಾಪಾರ ಹೆಚ್ಚು. ಆದರೆ ಈಗಾಗಲೇ ಭಾನುವಾರ ಮಧ್ಯಾಹ್ನದವೇಳೆಗೆ 10 ಸಾವಿರ ರೂ. ವ್ಯಾಪಾರವಾಗಿದೆ. ಪುಸ್ತಕ ಖರ್ಚು ಏನೆ ಇರಲಿ ಜನಸಾಮಾನ್ಯರ ಸಮ್ಮೇಳನದಲ್ಲಿ ಭಾಗವಹಿಸುವುದು ಒಳ್ಳೆಯದು. ದೃಷ್ಟಿಯಲ್ಲಿ ನೋಡಿದರೆ  ತಾಲ್ಲೂಕು ಮಟ್ಟದಲ್ಲಿ ನಡೆದ ಸಮ್ಮೇಳನ ಐತಿಹಾಸಿಕವಾಗಿದೆ. ರಾಜ್ಯ ಸಮ್ಮೇಳನದಂತೆ ಜನರ ಪ್ರತಿಕ್ರಿಯೆ ಇತ್ತು. ಇದು ಒಳ್ಳೆಯ ಬೆಳವಣಿಗೆ. ಸಂಜೆಯೊಳಗೆ ಮತ್ತಷ್ಟು ಪುಸ್ತಕ ವ್ಯಾಪಾರವಾಗಬಹುದೆಂಬ ವಿಶ್ವಾಸವನ್ನು ಮಾರಾಟಗಾರರು ವ್ಯಕ್ತಪಡಿಸಿದರು.`ಪ್ರಜಾವಾಣಿ~ ಬಳಗದಿಂದ ಶನಿವಾರ ಒಂದು ಸಾವಿರ ದಿನಪತ್ರಿಕೆಗಳನ್ನು ಬ್ಯಾಗ್ ಸಮೇತ ಉಚಿತವಾಗಿ ಹಂಚಲಾಯಿತು. ಎರಡನೇ ದಿನವಾದ ಭಾನುವಾರ ಎರಡು ಸಾವಿರ ಪ್ರತಿಗಳನ್ನು ವಿತರಿಸಲಾಯಿತು. ಉತ್ತಮ ವರದಿ ಬಗ್ಗೆ ತಹಶೀಲ್ದಾರ್ ಬಿ.ಎನ್. ವರಪ್ರಸಾದರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದರು.ಸಾಹಿತ್ಯ ಪರಿಷತ್ತುಗೆ ನೊಂದಣಿ: ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಸಾಹಿತ್ಯ ಪರಿಷತ್ತುಗೆ ಸದಸ್ಯರನ್ನಾಗಿ ಮಾಡಲು ಶನಿವಾರದಿಂದ ಕೌಂಟರ್ ತೆರೆಯಲಾಗಿದ್ದು. ಆಸಕ್ತರು ಅಗತ್ಯ ಶುಲ್ಕ ನೀಡಿ ಸದಸ್ಯತ್ವ ಪಡೆಯುತ್ತಿದ್ದ ದೃಶ್ಯ ಕಂಡು ಬಂತು.ಗಮನಸೆಳೆದ ಕವಿಗೋಷ್ಠಿ: ಭಾನುವಾರ ಬೆಳಿಗ್ಗೆ ನಡೆದ ಕವಿಗೋಷ್ಟಿಯಲ್ಲಿ  `ಕನ್ನಡದ ಪರಂಪರೆ~, `ಪರಿಸರ ಕಾಳಜಿ~, ಇಂದಿನ  ಭ್ರಷ್ಟಾಚಾರ, `ಅಕ್ರಮ ಗಣಿಗಾರಿಕೆ~ ಬಹುತೇಕ ವಿಚಾರಗಳು ಭ್ರಷ್ಟಾಚಾರದ ಕುರಿತ ಕವನಗಳಾಗಿದ್ದವು.  ಹೀಗೆ ಅನೇಕ  ವಿಚಾರಗಳನ್ನು ಚುಟುಕಾಗಿ ವಾಚಿಸಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದರು. ಸುರೇಶ್, ಸಿ.ಎಸ್. ಜ್ಯೋತಿ ಲಕ್ಷ್ಮೀ, ಡಾ. ಕುಸುಮ, ಕೆ. ಸುಜಾತ, ನೀಲಾಸ್ವಾಮಿ, ನಂಜುಂಡಯ್ಯ, ಮೋಹನಮಟ್ಟನವಿಲೆ, ರವಿಚಂದ್ರನ್, ಭಾಗ್ಯಲಕ್ಷ್ಮೀ, ಭಾಗ್ಯಲಕ್ಷ್ಮೀರಾವುತ್, ಹೊನ್ನಶೆಟ್ಟಿ, ಎನ್. ನಾಗೇಂದ್ರಕುಮಾರ್, ಪಿ.ಎನ್. ಸೌಮ್ಯ, ಸುಜಾತ, ಬೆಳಗುಲಿ ಕೆಂಪಯ್ಯ, ಡಾ.ನೇ. ತಿಸೋಮಶೇಖರ್, ನಾಗಪೂಜಾ, ಮಮತ, ಎನ್. ಪ್ರಸನ್ನ, ವತ್ಸಲಾ. ಟಿ.ಕೆ. ಸ್ವಾಮಿ, ಹೊಯ್ಸಾಳದಿತ್ಯ,ವಿ. ಪಾಂಡುರಂಗ, ಕೆ.ಎಂ. ನೀತಾ, ಎನ್.ಎ. ದಿವ್ಯ, ದೇವರಾಜಕುಮಾರ್, ಡಿ.ಎಸ್. ಮೋಹನಕುಮಾರ್, ಜ್ಯೋತಿ, ವೆಂಕಟೇಶ್‌ಪುಟ್ಟಣ್ಣ, ಮಹೇಶ್, ಸುಮ, ಹೊನ್ನೇಗೌಡ, ನಂಜುಂಡ ಮೈಮ್, ಅಣತಿ ಗುಂಡೂರಾವ್, ಇತರರು ವಾಚಿಸಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಪ್ರಭಾಮಣಿ ಮಾತನಾಡಿ, ಕವನಗಳನ್ನು ಮನಸಿಗೆ ಮುಟ್ಟುವಂತೆ ವಾಚಿಸಬೇಕು ಎಂದರು.  ಸಮ್ಮೇಳನಾಧ್ಯಕ್ಷ ಪ್ರೊ. ಸತ್ಯನಾರಾಯಣ ರಾವ್ ಅಣತಿ, ಕಸಾಪ ಅಧ್ಯಕ್ಷ ಪ್ರೊ. ಎಚ್. ಸಿದ್ದೇಗೌಡ, ಎಂ. ಬ್ರಹ್ಮಪಾಲ್ ಜೈನ್, ಪುಟ್ಟರಾಮು, ಎ.ಜಿ. ರಾಜು, ಲೋಕೇಶ್ ದಾಸ್, ಅಜ್ಜು ಉಪಸ್ಥಿತರಿದ್ದರು.ಸಾಹಿತ್ಯಾಸಕ್ತರ ಸಾಲಿನಲ್ಲಿ ಸಾಹಿತಿಗಳು: ಕವಿಗೋಷ್ಟಿ ನಡೆಯುವ ವೇಳೆ ಸಾಹಿತಿಗಳಾದ ಚಂದ್ರಶೇಕರಪಾಟೀಲ, ಡಾ.ಹಿ.ಶಿ. ರಾಮಚಂದ್ರೇಗೌಡ ಆಸೀನರಾಗಿ ಕಾರ್ಯಕ್ರಮ ವೀಕ್ಷಿಸಿದರು.

ಶನಿವಾರ ನಡೆದ `ಚನ್ನರಾಯಪಟ್ಟಣ ತಾಲ್ಲೂಕಿನ ಇತಿಹಾಸ, ಸಾಹಿತ್ಯ ಮತ್ತು ಪರಂಪರೆ~ ವಿಷಯ ಕುರಿತು ಡಾ. ನಿಂಬೇಹಳ್ಳಿ ಎಸ್. ತಿಮ್ಮೇಗೌಡ, ಹೊನ್ನಶೆಟ್ಟಿ ಗಿರಿರಾಜ್ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಮೇಟಿಕೆರೆ ಹಿರಿಯಣ್ಣ ವಹಿಸಿದ್ದರು.ಸಾಹಿತ್ಯದತ್ತ ಜನಾಕರ್ಷಣೆ: ಹಿಶಿರಾ

 ರಾಜಕೀಯ ಅಸ್ಥಿರತೆಯಿಂದ ಬೇಸತ್ತ ಜನರು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಮೂಲಕ ಹೊಸ ಸಂದೇಶ ಪಡೆಯುತ್ತಿದ್ದಾರೆ ಎಂದು ಜಾನಪದ ತಜ್ಞ ಡಾ.ಹಿ.ಶಿ. ರಾಮಚಮದ್ರೇಗೌಡ ಅಭಿಪ್ರಾಯಪಟ್ಟರು.ಭಾನುವಾರ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದರು. ರಾಜಕೀಯ ಇದೇ ರೀತಿ ಮುಂದುವರೆದರೆ ಅವರ ಸ್ಥಾನಗಳಿಗೆ ಚಿಂತಕರು ಮತ್ತು ಸಾಹಿತಿಗಳು ಬರುತ್ತಾರೆ. ಸಾಹಿತ್ಯ ಸಮ್ಮೇಳನಗಳು ರಾಜಕೀಯ ಸಮಸ್ಯೆ, ಸಾಹಿತ್ಯ ಕ್ಷೇತ್ರ, ಜನರ ನೋವು- ನಲಿವು ತಿಳಿಸುವ ಮೂಲಕ ಪ್ರಜ್ಞೆ ಮೂಡಿಸುತ್ತಿವೆ ಎಂದರು.ಕನ್ನಡ-ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್ ಮಾತನಾಡಿ, ನಾಡಿನಲ್ಲಿ ಕನ್ನಡ ಪ್ರೀತಿಸುವರ ಸಂಖ್ಯೆ ಕಡಿಮೆಯಾಗುತ್ತಿದೆ. ರಾಜ್ಯದ ಪ್ರಮುಖ ನಗರಗಳು, ಗಡಿನಾಡಿನಲ್ಲಿ ಅನ್ಯ ಭಾಷೆಗಳು ಪ್ರಾಬಲ್ಯ ಮೆರೆಯುತ್ತಿವೆ. ಈ ಕಾರಣದಿಂದ ಪ್ರಾದೇಶಿಕ ಭಾಷೆ, ಸಂಸ್ಕೃತಿಗೆ ವಿನಾಶದ ಅಂಚಿಗೆ ಬಂದಿವೆ. ಆಂಗ್ಲ ಭಾಷೆ ಬಾಹ್ಯ ವೈರಿಯಾದರೆ, ಕನ್ನಡಿಗರು ಮಾತೃ ಭಾಷೆಗೆ ಆಂತರಿಕ ವೈರಿಗಳಾಗಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಉದ್ಯೋಗ ಸಿಗ ಬೇಕು. ಈ ನಿಟ್ಟಿನಲ್ಲಿ ಸರ್ಕಾರ, ಬುದ್ದಿಜೀವಿಗಳು, ಪರಿಷತ್ತು ಚರ್ಚಿಸಬೇಕು ಎಂದರು.ಸಾಹಿತಿ ಭೈರಮಂಗಲ ರಾಮೇಗೌಡ ಮಾತನಾಡಿ, ಸಾಮಾಜಿಕ ಸಮಸ್ಯೆಗಳ ಬಗ್ಗೆ ಜನ ರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಸಾಹಿತ್ಯ ಸಮ್ಮೇಳನ ಮಾಡಬೇಕು. ಮಾಜಿ ಸಚಿವ ಎಚ್.ಡಿ.ರೇವಣ್ಣ, ಕಸಾಪ ರಾಜ್ಯಾಧ್ಯಕ್ಷ ಡಾ.ಆರ್.ಕೆ. ನಲ್ಲೂರು ಪ್ರಸಾದ್, ಶಾಸಕ ಸಿ.ಎಸ್. ಪುಟ್ಟೇಗೌಡ, ಸಮ್ಮೇಳನಾಧ್ಯಕ್ಷ ಪ್ರೊ. ಸತ್ಯನಾರಾಯಣ ರಾವ್ ಅಣತಿ, ಜಿಲ್ಲಾ ಕಸಾಪ ಅಧ್ಯಕ್ಷ ಉದಯರವಿ, ತಾಲ್ಲೂಕು ಕಸಾಪ ಅಧ್ಯಕ್ಷ ಪ್ರೊ. ಎಚ್. ಸಿದ್ದೇಗೌಡ, ಮಾಜಿ ಶಾಸಕ ಡಾ.ಎನ್.ಬಿ. ನಂಜಪ್ಪ, ಕಾಂಗ್ರೆಸ್ ಮುಖಂಡ ಎಂ. ಶಂಕರ್, ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಡಾ.ಕೆ. ದೊಡ್ಡೇಗೌಡ, ಎಂಎಸ್‌ಐಎಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಸ್. ಪ್ರಭಾಕರ್, ತಹಶೀಲ್ದಾರ್ ಬಿ.ಎನ್. ವರಪ್ರಸಾದರೆಡ್ಡಿ, ತಾಪಂ. ಅಧ್ಯಕ್ಷೆ ವಿಜಯಶಿವಲಿಂಗಪ್ಪ, ಪುರಸಭಾಧ್ಯಕ್ಷೆ ಅನುಸೂಯ ಪ್ರಕಾಶ್, ಜಿ.ಪಂ. ಸದಸ್ಯರಾದ ದೇವಿಕ, ಅಂವಿಕಾ, ಕುಸುಮ ಬಾಲಕೃಷ್ಣ, ಎಪಿ ಎಂಸಿ ಅಧ್ಯಕ್ಷ ಕೆ.ಬಿ. ಉದಯಕುಮಾರ್ ಇತರರು ಇದ್ದರು.ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ ಸ್ವಾಗತಿಸಿದರು.ಸನ್ಮಾನ ಕಾರ್ಯಕ್ರಮದಲ್ಲಿ ಗೊಂದಲ

ಪಟ್ಟಣದಲ್ಲಿ ಎರಡು ದಿನ  ನಡೆದ ತಾಲ್ಲೂಕು ಸಮ್ಮೇಳನದಲ್ಲಿ ಸಾಹಿತ್ಯಾಸಕ್ತರು ಉತ್ಸಾಹದಿಂದ ಭಾಗವಹಿಸಿದರು. ಆದರೆ ಸಮಾರಂಭ ನಡೆದ ಮಾಧ್ಯಮಿಕ ಶಾಲಾ ಆವರಣದಲ್ಲಿ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಿರಲಿಲ್ಲ. ಭಾನುವಾರ ಬೆಳಿಗ್ಗೆ ಸಂಘಟಕರ ಗಮನಕ್ಕೆ ತಂದಾಗ  ಸ್ವಲ್ಪ ಹೊತ್ತಿನಲ್ಲಿ ನೀರಿನ ಟ್ಯಾಂಕರ್ ಬಂತಾದರೂ ಸ್ವಲ್ಪ ಸಮಯದ ನಂತರ ಅಲ್ಲಿಂದ ಮಾಯವಾಯಿತು. ಇದರಿಂದ ಎರಡು ದಿನ ಕುಡಿಯುವ ನೀರಿಗೆ ತೊಂದರೆಯಾಯಿತು. ಶೌಚಾಲಯ ಸೌಲಭ್ಯ ಇಲ್ಲದೇ ಜನರಿಗೆ ಅನಾನುಕೂಲವಾಯಿತು.ಸಮ್ಮೇಳನಾಧ್ಯಕ್ಷರ ಲಿಖಿತ ಭಾಷಣದ ಪುಸ್ತಕದ ಹಿಂದಿನ ಭಾಗದಲ್ಲಿ ಜ್ಞಾನ ಪೀಠ ಪುರಸ್ಕೃತರ ಭಾವಚಿತ್ರ ಮುದ್ರಿಸಲಾಗಿತ್ತು. ಅದರಲ್ಲಿ ಶಿವರಾಮ ಕಾರಂತರ ಬದಲಿಗೆ ಬಿ.ವಿ. ಕಾರಂತರ ಭಾವಚಿತ್ರ ಮುದ್ರಿಸಿ ಪ್ರಮಾದ ಎಸಗಲಾಯಿತು. 30 ಜಿಲಾಧ್ಯಕ್ಷರಿಗೆ ವೇದಿಕೆಯ ಬಲ ಭಾಗದಲ್ಲಿ  ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ, ಆ ಸ್ಥಳವನ್ನು  ಬೇರೆಯವರು ಆಕ್ರಮಿಸಿಕೊಂಡರು.ಸಮಾರೋಪದಲ್ಲಿ ಗಣ್ಯರ ಸನ್ಮಾನಿಸುವ ವೇಳೆ ಗೊಂದಲ ಉಂಟಾಯಿತು. ವೇದಿಕೆ ಮೇಲೆ ಏನು ನಡೆಯುತ್ತಿದೆ ಎಂದು ಸಭಿಕರಿಗೆ ಅರ್ಥವಾಗಲಿಲ್ಲ. ಅನಗತ್ಯ ವ್ಯಕ್ತಿಗಳು ವೇದಿಕೆ ಏರಿ ಗೊಂದಲ ಸೃಷ್ಟಿಸಿದರು. ಇದರಿಂದ ಬೇಸತ್ತ ಭುವನೇಶ್ವರಿ ತರಕಾರಿ ಯುವಕ ಸಂಘದ ಪದಾಧಿಕಾರಿ ಸಿ.ಕೆ. ಕೃಷ್ಣ ವೇದಿಕೆ ಹತ್ತಿ, ಮೈಕ್  ಹಿಡಿದು, ಅನಗತ್ಯ ವ್ಯಕ್ತಿಗಳನ್ನು ಕೆಳಗಿಳಿಸಿ ಮತ್ತು ಕ್ರಮಬದ್ಧವಾಗಿ ಸನ್ಮಾನ ಮಾಡಬೇಕು ಎಂದು ಆಗ್ರಹಿಸಿದರು.ಸಮಿತಿ ಕೋಶಾಧ್ಯಕ್ಷ ವರಪ್ರಸದರೆಡ್ಡಿ ಪ್ರವೇಶಿಸಿ ಅನಗತ್ಯ ವ್ಯಕ್ತಿಗಳನ್ನು ಕೆಳಗಿಸಿ ಸುಗಮ ಕಾರ್ಯಕ್ರಮಕ್ಕೆ ಅನುವು ಮಾಡಿದರು. ಈ ಎಲ್ಲದರ ನಡುವೆ ವಿವಿಧ ಶಾಲಾ- ಕಾಲೇಜುಗಳ ಎನ್‌ಸಿಸಿ, ಎನ್‌ಎಸ್‌ಎಸ್, ಸ್ಕೌಟ್ ಮತ್ತುಗೈಡ್ಸ್ ವಿದ್ಯಾರ್ಥಿಗಳು, ಪೌರಕಾರ್ಮಿಕರು, ಪೊಲೀಸರು, ಸರ್ಕಾರದ ವಿವಿಧ ಇಲಾಖೆಯ ನೌಕರರ ಸಮ್ಮೇಳನದ ಯಶಸಿಗೆ ಶ್ರಮಿಸಿದರು. ಎರಡು ದಿನಗಳ ಕಾಲ 7 ಪುಸ್ತಕ ಮಳಿಗೆಗಳಿಂದ ಅಂದಾಜು ರೂ. 2 ಲಕ್ಷ ಮೌಲ್ಯದ ಪುಸ್ತಕಗಳು ಮಾರಾಟವಾದವು.ಒಟ್ಟಾರೆ ಎರಡು ದಿನಗಳ ಕಾಲ ನಡೆದ `ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ~ಕ್ಕೆ ಅಧಿಕ ಸಂಖ್ಯೆಯಲ್ಲಿ ಸಾಹಿತ್ಯ ಪ್ರೇಮಿಗಳು ಆಗಮಿಸುವ ಮೂಲಕ ಐತಿಹಾಸಿಕ ಸಮ್ಮೇಳನಕ್ಕೆ ತೆರೆ ಬಿದ್ದಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.