ಸಮ್ಮೇಳನಕ್ಕೆ ಸಡಗರದ ಸಜ್ಜು

7

ಸಮ್ಮೇಳನಕ್ಕೆ ಸಡಗರದ ಸಜ್ಜು

Published:
Updated:ಬೆಂಗಳೂರು: ನಗರದ ಬಸವನಗುಡಿಯ ನ್ಯಾಷನಲ್ ಹೈಸ್ಕೂಲ್ ಮೈದಾನ ‘ಅಕ್ಷರ ಹಬ್ಬ’ಕ್ಕೆ ಸಜ್ಜಾಗಿದ್ದು, ಇಡೀ ಪ್ರದೇಶದಲ್ಲಿ ಸಂಭ್ರಮ ಮನೆ ಮಾಡಿದೆ. ಸಮ್ಮೇಳನಾಧ್ಯಕ್ಷರ ಮೆರವಣಿಗೆ ಸಾಗುವ ಮುಖ್ಯರಸ್ತೆಗಳನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ಅರಿಶಿನ ಕೆಂಪು ಬಣ್ಣದ ಸಾವಿರಾರು ಪತಾಕೆಗಳು ಕನ್ನಡಮ್ಮನ ಮಕ್ಕಳನ್ನು ಕೈ ಬೀಸಿ ಕರೆಯುತ್ತಿವೆ. ಹಸಿರು ತೋರಣ, ಹೂಮಾಲೆಗಳು ಹಬ್ಬದ ಸಿರಿಯನ್ನು ಇಮ್ಮಡಿಗೊಳಿಸಿವೆ. ಸಮ್ಮೇಳನ ನಡೆಯಲಿರುವ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಧಾನ ವೇದಿಕೆಯತ್ತ ಎಲ್ಲರ ಕಣ್ಣು ನೆಟ್ಟಿದೆ.ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭವಾಗಲಿರುವ ಬಿಬಿಎಂಪಿ ಕೇಂದ್ರ ಕಚೇರಿಯನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದ್ದು ಹಡ್ಸನ್ ವೃತ್ತದ ಸುತ್ತಮುತ್ತ ಕನ್ನಡ ಬಾವುಟಗಳು, ತಳಿರು ತೋರಣಗಳು ನುಡಿಹಬ್ಬವನ್ನು ಸಾರಿ ಹೇಳುತ್ತಿವೆ. ಸಮ್ಮೇಳನ ನಡೆಯಲಿರುವ ನಾಡಪ್ರಭು ಕೆಂಪೇಗೌಡ ಮಹಾಮಂಟಪ, ಕೆ.ಆರ್ ರಸ್ತೆಯ ಕುವೆಂಪು ಕಲಾಕ್ಷೇತ್ರ, ಹಾಗೂ ಮಹಿಳಾ ಸಮಾಜದ ಉನ್ನತಿ ಸಭಾಂಗಣವನ್ನು ವಿಶೇಷವಾಗಿ ಸಿಂಗರಿಸಲಾಗಿದೆ.ಸಮ್ಮೇಳನಕ್ಕೆ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಜನ ಆಗಮಿಸುತ್ತಿದ್ದಾರೆ. ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಕೇರಳದ ಗಡಿನಾಡ ಕನ್ನಡಿಗರು ಪಾಲ್ಗೊಳ್ಳುತ್ತಿದ್ದಾರೆ. ಅತಿಥಿಗಳಿಗೆ ಮಾಹಿತಿ ನೀಡಲು ನಗರದ ವಿವಿಧ ರೈಲ್ವೆ ನಿಲ್ದಾಣ, ಹಾಗೂ ಬಸ್ ನಿಲ್ದಾಣಗಳಲ್ಲಿ ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾ ಗಿದೆ.ಇದೇ ವೇಳೆ ಸಮ್ಮೇಳನಕ್ಕೆ ಬಿಗಿ ಭದ್ರತೆ ಒದಗಿಸಲಾಗಿದ್ದು ನಗರ ಸಶಸ್ತ್ರ ಪೊಲೀಸ್ ಮೀಸಲು ಪಡೆ, ಸಿವಿಲ್ ಪೊಲೀಸ್, ಕೆಎಸ್‌ಆರ್‌ಪಿ ತುಕಡಿಗಳು ಹದ್ದಿನ ಕಣ್ಣಿಟ್ಟಿವೆ. ಮೆರವಣಿಗೆ ಮಾರ್ಗದಲ್ಲಿ ಸಂಚಾರ ಪೊಲೀಸರು ವಾಹನಗಳ ನಿಯಂತ್ರಣದ ಉಸ್ತುವಾರಿ ವಹಿಸಿದ್ದಾರೆ.ನಗರದ ಯಶವಂತಪುರ ರೈಲ್ವೆ ನಿಲ್ದಾಣ, ಸಿಟಿ ರೈಲ್ವೆ ನಿಲ್ದಾಣ, ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಸೆಟಲೈಟ್ ಬಸ್ ನಿಲ್ದಾಣ, ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣ ಹಾಗೂ ಸಮ್ಮೇಳನ ನಡೆಯುವ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಪ್ರತ್ಯೇಕ ಮಾಹಿತಿ ಕೇಂದ್ರಗಳನ್ನು ಗುರುವಾರ ಮಧ್ಯಾಹ್ನದಿಂದ ಆರಂಭಿಸಲಾಗಿದೆ. ಸಮ್ಮೇಳನ ನಡೆಯುವ ಮೂರೂ ದಿನಗಳ ಕಾಲ ಈ ಮಾಹಿತಿ ಕೇಂದ್ರಗಳು ಕನ್ನಡ ಪ್ರೇಮಿಗಳನ್ನು ಬರಮಾಡಿಕೊಳ್ಳಲಿವೆ.ನಿಲ್ದಾಣಗಳಲ್ಲಿ 20/10 ಅಡಿ ಅಳತೆಯ ಮಾಹಿತಿ ಕೇಂದ್ರಗಳಿದ್ದು ಪ್ರತಿ ಕೇಂದ್ರದಲ್ಲಿ 100ಕ್ಕೂ ಹೆಚ್ಚು ಕನ್ನಡ ಧ್ವಜಗಳನ್ನು ಹಾರಿಸಲಾಗಿದೆ. ಎಲ್ಲಾ ಕೇಂದ್ರಗಳಲ್ಲಿ ಸುಮಾರು 300ರಿಂದ 400 ಮಂದಿ ಸ್ವಯಂಸೇವಕರು ಮಾರ್ಗದರ್ಶನ ಮಾಡುತ್ತಿದ್ದಾರೆ.ದೂರ ಪ್ರಯಾಣ ಮಾಡಿ ದಣಿದವರಿಗೆ ನೀರು ಹಾಗೂ ಚಹಾ ನೀಡಿ ಉಪಚರಿಸಲಾಗುತ್ತಿದೆ. ಗುರುವಾರ ರಾತ್ರಿಯ ವೇಳೆಗೆ     2000ಕ್ಕೂ ಹೆಚ್ಚು ಪರಿಷತ್ತಿನ ಪ್ರತಿನಿಧಿಗಳು, ವಿಶೇಷ ಆಹ್ವಾನಿತರು ಹಾಗೂ ಕನ್ನಡಾಭಿಮಾನಿಗಳು ಸಮ್ಮೇಳನಕ್ಕೆ ಆಗಮಿಸಿದ್ದಾರೆ.ವಸತಿ ವ್ಯವಸ್ಥೆ: ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗದ ಪ್ರತಿನಿಧಿಗಳಿಗೆ ನಗರದ ಕೆ.ಆರ್.ರಸ್ತೆಯ ಸಿ.ಬಿ.ಬಂಡಾರಿ ಜೈನ್ ವಿದ್ಯಾಲಯದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ ಪ್ರತಿನಿಧಿಗಳಿಗೆ ಸಜ್ಜನರಾವ್ ವೃತ್ತದಲ್ಲಿರುವ ಸಜನ್‌ರಾವ್ ಶಾಲೆಯಲ್ಲಿ ತಂಗಲು ಅವಕಾಶ ನೀಡಲಾಗಿದೆ. ಎಲ್ಲಾ ಜಿಲ್ಲೆಗಳ ಮಹಿಳಾ ಪ್ರತಿನಿಧಿಗಳು ಕೆ.ಆರ್.ರಸ್ತೆಯ ಮಹಿಳಾ ಸೇವಾ ಸಮಾಜ ಶಾಲೆ ಕಟ್ಟಡದಲ್ಲಿ ಉಳಿದುಕೊಳ್ಳಬಹುದಾಗಿದೆ. ಗುಲ್ಬರ್ಗಾ, ರಾಯಚೂರು, ಬೀದರ್, ಕೊಪ್ಪಳ, ಪ್ರತಿನಿಧಿಗಳಿಗೆ ಶಂಕರ ಮಠ ರಸ್ತೆಯಲ್ಲಿರುವ ವುಮೆನ್ಸ್ ಪೀಸ್ ಲೀಗ್ ಶಾಲೆ ಹಾಗೂ ಬೆಳಗಾವಿ ಬಿಜಾಪುರ ಬಾಗಲಕೋಟೆ, ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡದ ಪ್ರತಿನಿಧಿಗಳಿಗೆ  ಶಂಕರ ಮಠದ ಅಶೋಕ ಶಿಶುವಿಹಾರ ಶಾಲೆಯಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.ಪರಿಷತ್ತಿನ ಜಿಲ್ಲಾ ಪದಾಧಿಕಾರಿಗಳು, ತಾಲೂಕು ಅಧ್ಯಕ್ಷರು, ಹಾಗೂ ವಿಶೇಷ ಆಹ್ವಾನಿತರಿಗೆ ಅರಳೆಪೇಟೆಯ ರೆಡ್‌ಮೌಂಟ್ ಲಾಡ್ಜ್, ಲಕ್ಕಿ ಇನ್, ವಿಜಯರಾಜ್ ಹೋಟೆಲ್, ಮೆಜೆಸ್ಟಿಕ್‌ನ ಮಯೂರ ಲಾಡ್ಜ್, ಹೋಟೆಲ್ ಅಮರ್, ರಾಮಕೃಷ್ಣ ಲಾಡ್ಜ್, ಗಾಂಧಿನಗರದ ಕೆಂಚಾಂಬ ಲಾಡ್ಜ್‌ನಲ್ಲಿ ವಸತಿ ಸೌಲಭ್ಯ ಒದಗಿಸಲಾಗಿದೆ. ಆಂಧ್ರ, ಮಹಾರಾಷ್ಟ್ರ, ಕೇರಳ ಹಾಗೂ ತಮಿಳುನಾಡು ಗಡಿನಾಡ ಘಟಕಗಳ ಪದಾಧಿಕಾರಿಗಳು ರೆಡ್‌ಮೌಂಟ್, ರಾಮಕೃಷ್ಣ, ಕೆಂಚಾಂಬ ವಸತಿಗೃಹಗಳಲ್ಲಿ ತಂಗಬಹುದಾಗಿದೆ.ಪರಿಷತ್ತಿನ ಆಜೀವ ಸದಸ್ಯತ್ವ ಕಾರ್ಡ್, ಸಮ್ಮೇಳನದ ಬ್ಯಾಡ್ಜ್ ಅಥವಾ ಆಹ್ವಾನ ಪತ್ರಿಕೆ ಹೊಂದಿದವರಿಗೆ ನಗರದ ಬಿಎಂಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ನಗರ ವೀಕ್ಷಣೆ ಹಾಗೂ ಪ್ರವಾಸ ಬಯಸುವ ಪ್ರತಿನಿಧಿಗಳಿಗೆ ಮಾಹಿತಿ ಕೇಂದ್ರಗಳಲ್ಲಿರುವ ಖಾಸಗಿ ಸಾರಿಗೆ ಸಂಸ್ಥೆಗಳು ಶೇ 40ರ ರಿಯಾಯ್ತಿ ದರದಲ್ಲಿ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಅವಕಾಶ ಕಲ್ಪಿಸಿವೆ.ಇದೇ ವೇಳೆ ಪರಿಷತ್ತಿನ ಆವರಣದಲ್ಲಿ ಪ್ರತಿನಿಧಿಗಳ ನೋಂದಾವಣಿ ಕಾರ್ಯ ಚುರುಕುಗೊಂಡಿತ್ತು. ಪ್ರತಿನಿಧಿಗಳು ರೂ. 250 ನೀಡಿ ಸಮ್ಮೇಳನ ಸದಸ್ಯತ್ವ ನೋಂದಾಯಿಸಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.‘ಮುಖಂಡ’ರ ಕಾರುಬಾರು: ಸಮ್ಮೇಳನದ ಹಿನ್ನೆಲೆಯಲ್ಲಿ ಮೈದಾನ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾಕಷ್ಟು ಬ್ಯಾನರ್ ಹಾಗೂ ಪ್ರದರ್ಶನ ಫಲಕಗಳನ್ನು ಹಾಕಲಾಗಿದೆ. ಆದರೆ ಈ ಫಲಕಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ನಾಡಿನ ಸಾಹಿತಿಗಳು, ಸಾಧಕರ ಭಾವಚಿತ್ರಗಳಾಲೀ ಇಲ್ಲ. ಬದಲಿಗೆ ಸ್ಥಳೀಯ ಮುಖಂಡರು, ಕಾರ್ಯಕರ್ತರ ಚಿತ್ರಗಳನ್ನೇ ದೊಡ್ಡ ಗಾತ್ರದಲ್ಲಿ ಹಾಕಲಾಗಿದೆ. ಹುಟ್ಟುಹಬ್ಬ, ಸಭೆ- ಸಮಾರಂಭಗಳಿಗೆ ಶುಭ ಕೋರುವ ಫ್ಲೆಕ್ಸ್‌ಗಳ ಮಾದರಿಯಲ್ಲೇ ಸಾಹಿತ್ಯ ಸಮ್ಮೇಳನಕ್ಕೆ ಶುಭ ಕೋರುವ ಫಲಕಗಳನ್ನು ಹಾಕಲಾಗಿದೆ.   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry