ಸಮ್ಮೇಳನದಲ್ಲಿ ಕೆರೆ ರಕ್ಷಣೆಯ ಕೂಗು

7

ಸಮ್ಮೇಳನದಲ್ಲಿ ಕೆರೆ ರಕ್ಷಣೆಯ ಕೂಗು

Published:
Updated:ಕುವೆಂಪು ಕಲಾಕ್ಷೇತ್ರ (ಬೆಂಗಳೂರು): ‘ಬೆಂಗಳೂರಿನ ಭವಿಷ್ಯದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ನಾಡಪ್ರಭು ಕೆಂಪೇಗೌಡರು ನೂರಾರು ಕೆರೆಗಳನ್ನು ನಿರ್ಮಿಸಿದರು. ಇದರಲ್ಲಿ ಬಹುಪಾಲು ಕೆರೆಗಳು ನಾಶವಾಗಿದ್ದು, ಬಾಕಿ ಉಳಿದಿರುವ ಕೆರೆಗಳನ್ನು ಸಂರಕ್ಷಿಸಲು ತುರ್ತು ಕ್ರಮ ಕೈಗೊಳ್ಳಬೇಕಿದೆ’ ಎಂದು ಕೆ.ಆರ್.ಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಡಾ.ಎನ್.ಆರ್. ಲಲಿತಾಂಬ ಹೇಳಿದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಮಾನಾಂತರ ವೇದಿಕೆ-1ರಲ್ಲಿ ಶನಿವಾರ ನಡೆದ ‘ನಾಡಪ್ರಭು ಕೆಂಪೇಗೌಡ’ ಕುರಿತ ಗೋಷ್ಠಿಯಲ್ಲಿ ‘ಕೆಂಪೇಗೌಡರ ಆಡಳಿತದಲ್ಲಿ ಕೆರೆಗಳ ನಿರ್ಮಾಣ ಮತ್ತು ಕೃಷಿ’ ಕುರಿತು ಅವರು ವಿಷಯ ಮಂಡಿಸಿದರು.‘ಬೆಂಗಳೂರಿನ ಸುತ್ತಮುತ್ತ ಸಾಕಷ್ಟು ನೀರಿನ ಸೆಲೆಯಿತ್ತು. ಈ ಹಿಂದೆ 2,000ಕ್ಕೂ ಹೆಚ್ಚು ಕೆರೆಗಳಿದ್ದವು ಎಂಬ ದಾಖಲೆಯಿದೆ.ಬೆಟ್ಟದಿಂದ ಹರಿದು ಬರುವ ನೀರು ಕೆರೆ- ಕುಂಟೆ ಸೇರುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಆದರೆ ವರ್ಷಗಳು ಉರುಳಿದಂತೆ ಕೆರೆಗಳು ನಾಶವಾದವು’ ಎಂದರು.‘ಮಳೆ ನೀರನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿಡುವ ಉದ್ದೇಶದಿಂದ ನಿರ್ಮಿಸಿದ ಕೆರೆಗಳು ನಾಶವಾಗುವಾಗ ನಿರ್ಲಕ್ಷ್ಯ ತೋರಿದ ಸರ್ಕಾರಗಳು ಇದೀಗ ಮಳೆ ನೀರು ಸಂಗ್ರಹಿಸಲು ಮನೆಗಳಲ್ಲಿ ತೊಟ್ಟಿಗಳನ್ನು ನಿರ್ಮಿಸಿ ಎಂದು ಹೇಳುವುದು ಎಷ್ಟು ಸರಿ. ಸರ್ಕಾರ ಈಗಲಾದರೂ ವಿನಾಶದಂಚಿನಲ್ಲಿರುವ ಕೆರೆಗಳ ಸಂರಕ್ಷಣೆಗೆ ಮುಂದಾಗಬೇಕು’ ಎಂದು ಹೇಳಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಬೆಂಗಳೂರು ವಿ.ವಿ ಇತಿಹಾಸ ವಿಭಾಗದ ಪ್ರಾಧ್ಯಾಪಕಿ ಡಾ.ಎಂ.ವಿ.ವಸು, ‘ಪ್ರತಿ ಸಮುದಾಯವೂ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸಾಂಸ್ಕೃತಿಕ ನಾಯಕರನ್ನು ಹುಟ್ಟು ಹಾಕುವುದು ಸರಿಯಲ್ಲ. ವೀರಶೈವ ಸಮುದಾಯದವರು ಬಸವೇಶ್ವರರನ್ನು ಹಾಗೂ ಒಕ್ಕಲಿಗರು ಕೆಂಪೇಗೌಡರನ್ನು ತಮ್ಮ ಸಾಂಸ್ಕೃತಿಕ ನಾಯಕ ಎಂಬಂತೆ ಬಿಂಬಿಸಿಕೊಳ್ಳುವುದು ಸರಿಯಲ್ಲ. ಯಾವುದೇ ಶ್ರೇಷ್ಠ ವ್ಯಕ್ತಿಯನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು’ ಎಂದು ಪ್ರತಿಪಾದಿಸಿದರು.‘ಕೆಂಪೇಗೌಡರ ದೂರದೃಷ್ಟಿಯ ಬೆಂಗಳೂರು’ ಕುರಿತು ಮಾತನಾಡಿದ ಕನ್ನಡ ಪ್ರಾಧ್ಯಾಪಕ ಪ್ರೊ.ಎಂ.ಜಿ. ಚಂದ್ರಶೇಖರಯ್ಯ, ‘ಬೆಂಗಳೂರು ಒಂದು ಉತ್ಪಾದಕ ಕೇಂದ್ರ. ಇದನ್ನು ಗಮನದಲ್ಲಿಟ್ಟುಕೊಂಡೇ ಕೆಂಪೇಗೌಡರು ನಗರ ನಿರ್ಮಿಸಿದ್ದು.ವಿಜಯನಗರದ ಅರಸರ ಆಡಳಿತಾವಧಿಯಲ್ಲಿ ಮುತ್ತು, ರತ್ನ, ವಜ್ರ, ವೈಢೂರ್ಯಗಳನ್ನು ರಸ್ತೆ ಬದಿ ಮಾರಾಟ ಮಾಡುತ್ತಿದ್ದರು ಎಂಬುದಾಗಿ ಇತಿಹಾಸದಲ್ಲಿದೆ. ಆದರೆ ಇಂದಿನ ಬಳ್ಳಾರಿಯ ಸ್ಥಿತಿಯನ್ನು ಗಮನಿಸಿದರೆ ಅದು ತೀರಾ ಹಿಂದುಳಿದಿದೆ’ ಎಂದು ಹೇಳಿದರು.‘ಕೆಂಪೇಗೌಡರ ಕಾಲದ ರಾಜಕೀಯ ಪರಿಸರ’ ಎಂಬ ವಿಷಯ ಕುರಿತು ಮಾತನಾಡಿದ ಕನಕಪುರ ಗ್ರಾಮಾಂತರ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ.ಮುನಿರಾಜಪ್ಪ, ‘ಕೆಂಪೇಗೌಡರು ಹಾಗೂ ವಂಶಸ್ಥರು ನ್ಯಾಯ, ನೀತಿಯನುಸಾರ ಆಡಳಿತ ನಡೆಸಿದರು. ಅವರು ವಿಧಿಸುತ್ತಿದ್ದ ಕಟ್ಟಳೆಗಳನ್ನು ಜನತೆ ಸಂವಿಧಾನವೆಂಬಂತೆ ಪಾಲಿಸುತ್ತಿದ್ದರು’ ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರೊ.ಹ.ಕ. ರಾಜೇಗೌಡ, ‘ಕೆಂಪೇಗೌಡರನ್ನು ಒಕ್ಕಲಿಗ ಸಮುದಾಯಕ್ಕೆ ಸೀಮಿತಗೊಳಿಸಬಾರದು ಎಂಬ ಮಾತು ಸರಿ. ಆದರೆ ನಗರದ ಸಂಸ್ಥಾಪಕನಿಗೆ ಈವರೆಗೆ ಸೂಕ್ತ ಸ್ಥಾನಮಾನ ನೀಡದಿರುವುದು ಸರಿಯಲ್ಲ. ನಗರವನ್ನು ಬೆಳೆಸಿದವರನ್ನು ಸ್ಮರಿಸಲಾಗುತ್ತಿದೆ. ಆದರೆ ಸಂಸ್ಥಾಪಕರನ್ನು ನಿರ್ಲಕ್ಷಿಸಲಾಗುತ್ತಿದೆ’ ಎಂದರು.‘ದಕ್ಷಿಣ ಭಾರತದಲ್ಲಿ ಮುಸ್ಲಿಂ ಅರಸರ ವಿರುದ್ಧ ಹೋರಾಟ ನಡೆಸದಿದ್ದರೆ ಈ ಭಾಗದಲ್ಲೂ ಒಂದು ಪಾಕಿಸ್ತಾನ ನಿರ್ಮಾಣವಾಗುತ್ತಿತ್ತು ಎಂಬುದನ್ನು ಮರೆಯಬಾರದು. ಮುಸ್ಲಿಂ ಅರಸರ ವಿರುದ್ಧ ಹೋರಾಡಿದ ಕೆಂಪೇಗೌಡರ ಪ್ರತಿಮೆಯನ್ನು ಸ್ಥಾಪಿಸಲು ಸರ್ಕಾರ ಮುಂದಾಗಿಲ್ಲ. ಬೆಂಗಳೂರು ವಿ.ವಿ ಆರಂಭಿಸಿರುವ ಕೆಂಪೇಗೌಡ ಅಧ್ಯಯನ ಪೀಠ ಕೂಡ ಕ್ರಿಯಾಶೀಲವಾಗಿಲ್ಲ. ಇನ್ನಾದರೂ ನಾಡಪ್ರಭುವಿಗೆ ಸೂಕ್ತ ಗೌರವ ಸಲ್ಲಿಸುವ ಕೆಲಸ ಆಗಬೇಕು’ ಎಂದು ಹೇಳಿದರು.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry