ಸಮ್ಮೇಳನಾಧ್ಯಕ್ಷರು ಕಂಡಂತೆ...

7

ಸಮ್ಮೇಳನಾಧ್ಯಕ್ಷರು ಕಂಡಂತೆ...

Published:
Updated:

ನವೋದಯ ಶತಮಾನದ ಉತ್ಸವ

1911ರಲ್ಲಿ ಬಿ.ಎಂ.ಶ್ರೀಕಂಠಯ್ಯ ಅವರು ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ‘ಕನ್ನಡ ಮಾತು ತಲೆ ಎತ್ತುವ ಬಗೆ’ ಎಂಬ ವಿಷಯ ಕುರಿತು ವಿಚಾರಪೂರ್ಣವಾದ ಉಪನ್ಯಾಸ ಮಂಡಿಸಿದರು. ಈ ಉಪನ್ಯಾಸದ ಪ್ರಭಾವವು ಕನ್ನಡ ಜನರ ಮನಸ್ಸಿನಲ್ಲಿ ಗಾಢವಾದ ಪರಿಣಾಮವನ್ನು ಉಂಟು ಮಾಡಿತು. ಕನ್ನಡದ ಅಭಿವೃದ್ಧಿಗೆ ಒಮ್ಮತದ ಕಾರ್ಯಗಳು ನಡೆಯಬೇಕೆಂಬ ಭಾವನೆ ಬೇರೂರಿಬಿಟ್ಟಿತು. ಇದೇ ಕನ್ನಡದ ನವೋದಯದ ಪ್ರಾರಂಭದ ಕೆಲಸ.ಈ ಉಪನ್ಯಾಸಕ್ಕೆ 100 ವರ್ಷ ತುಂಬಿರುವ ಹೊತ್ತಿನಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಸಮ್ಮೇಳನವನ್ನು ನವೋದಯದ ಶತಮಾನ ಉತ್ಸವ ಸಮಾರಂಭವೆಂದೇ ಭಾವಿಸಿದ್ದೇನೆ.ಶತಮಾನದ ಬೆಳಸು, ಬಲು ಸೊಗಸು

ಈ ನೂರು ವರ್ಷಗಳಲ್ಲಿ ಆದ ಕನ್ನಡದ ಸಾಹಿತ್ಯದ ಕೃಷಿ ಹಿಂದೆ ಯಾವ ಶತಮಾನದಲ್ಲಿಯೂ ಆಗಿರಲಿಲ್ಲ. ಕ್ರಿ.ಶ. ಹತ್ತನೆಯ ಶತಮಾನವು ಹೇಗೆ ಹಳಗನ್ನಡದ ಸುವರ್ಣ ಯುಗವಾಯಿತೋ ಹಾಗೆಯೇ ಈ ಇಪ್ಪತ್ತನೆಯ ಶತಮಾನವೂ ಕೂಡ ಹೊಸಗನ್ನಡದ ಸುವರ್ಣಯುಗವಾಗಿ ಪರಿಣಮಿಸಿದೆ. ಈ ಶತಮಾನದ ಕನ್ನಡದ ಬೆಳಸನ್ನು ಕಂಡು ಇತರ  ಭಾಷಾ ಪ್ರಾಂತದವರು ಕರ್ನಾಟಕವನ್ನು ಕರುಬುವಷ್ಟು ಸಾಹಿತ್ಯ ವರ್ಣರಂಜಿತವಾಗಿದೆ.ಒಂದೇ ಮಾತಿನಲ್ಲಿ ಹೇಳುವುದಾದರೆ ಈ ಶತಮಾನದ ಕೃಷಿಯಿಂದ ಕನ್ನಡದ ನೆಲ ಎಷ್ಟು ಫಲವತ್ತಾಗಿದೆ ಎಂಬುದು ಸ್ಪಷ್ಟವಾಗಿ ತಿಳಿಯಬರುತ್ತಿದೆ. ಮುಂದೆ ಬರುವ ಸಾಹಿತ್ಯಕ್ಕೆ ಬೇಕಾದ ಎಲ್ಲ ಹಿನ್ನೆಲೆಯನ್ನೂ ಈ ಶತಮಾನ ಸೃಷ್ಟಿಸಿದೆ. ನಾವಿನ್ನು ಹೊಸದಕ್ಕೆ ದಾರಿ ಮಾಡೋಣ. ಬರುವುದನ್ನು ಪ್ರೀತಿಯಿಂದ ನಿರೀಕ್ಷಿಸೋಣ.ಹೊಸ ಆಕರ್ಷಕ ಶೈಲಿ

ವಾರ್ತಾ ಪತ್ರಿಕೆಗಳಲ್ಲಿ ಈಗ ಬರುವ ಯುವ ಲೇಖಕರು ಬಳಸುವ ಭಾಷೆಯಲ್ಲಿ ಹತ್ತು ವರ್ಷಗಳ ಹಿಂದಿನ ಭಾಷೆಗಿಂತ ಪೂರ್ಣವಾಗಿ ಬದಲಾದ ರೀತಿ ಎದ್ದು ಕಾಣುತ್ತಿದೆ. ಅದರಲ್ಲಿ ನಿಜವಾಗಿಯೂ ಒಂದು ಹೊಸ ಆಕರ್ಷಕ ಶೈಲಿ ರೂಪುಗೊಳ್ಳುತ್ತಿದೆ.

ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಕಲಿಯದಿದ್ದರೂ ಕನ್ನಡದಲ್ಲಿ ಲೇಖನಗಳನ್ನು ರಚಿಸುವವರನ್ನೂ ನಾನು ಕಂಡಿದ್ದೇನೆ.ಅವರು ವೈದ್ಯರು, ತಂತ್ರಜ್ಞಾನಿಗಳು, ವಿಜ್ಞಾನಿಗಳು... ಹೀಗೆ ಅವರಿಗೆ ಉತ್ಸಾಹವಿದೆ, ದಟ್ಟವಾದ ಅರಿವಿಲ್ಲ. ಅಂಥವರ ಬರಹದಲ್ಲಿ ಸಾಮರ್ಥ್ಯ ಹೆಚ್ಚಬೇಕಾದರೆ ಹಳಗನ್ನಡದ ಹಿನ್ನೆಲೆ ಸ್ವಲ್ಪ ಇರಬೇಕು. ಇಂಥವರು ಸ್ವಲ್ಪ ಶ್ರಮ ಪಟ್ಟರೆ ಅವರೇ ಸ್ವಂತವಾಗಿ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಮಾರ್ಗವಿದೆ.ಬೆಂಗಳೂರಿನಲ್ಲಿ ಕನ್ನಡ

ಬೆಂಗಳೂರು ಮತ್ತು ಇತರ ಬೃಹನ್ನಗರಗಳಲ್ಲಿ ಮಧ್ಯಮವರ್ಗದ ಜನರು ಭಾಷೆಯನ್ನು ಈಗ ಉಪಯೋಗಿಸುತ್ತಿರುವ ರೀತಿಯಲ್ಲಿ ಕನ್ನಡಕ್ಕೆ ಒಂದು ಅಪಾಯ ಕಾದಿದೆ. ನಾಗರಿಕರ ಆಡುಮಾತಿನಲ್ಲಿ ಇಂಗ್ಲಿಷ್ ಶಬ್ದಗಳ ಮಿಶ್ರಣದ ಪ್ರಮಾಣದಲ್ಲಿ ಏರುಪೇರಾಗಿದೆ. ಇದನ್ನು ಲೆಕ್ಕ ಮಾಡಿದರೆ ಶೇಕಡ 60ರಷ್ಟು ಇಂಗ್ಲಿಷ್ ಶಬ್ದಗಳು ಕಾಣಬರುತ್ತಿವೆ. ಅವರು ಒಂದೇ ಒಂದು ವಾಕ್ಯವನ್ನೂ ಸಂಪೂರ್ಣವಾಗಿ ಕನ್ನಡದಲ್ಲಿ ಮಾತನಾಡುವುದಿಲ್ಲ. ಹಾಗೆ ಮಾತನಾಡಲು ಅವರಿಗೆ ಕನ್ನಡದ ಸಾಮರ್ಥ್ಯವಿದ್ದರೂ ಆ ಸಾಮರ್ಥ್ಯವನ್ನು ಉಪಯೋಗಿಸುತ್ತಿಲ್ಲ. ಇದೇ ನಿಜವಾದ ಅಪಾಯ. ಅವರು ತಾವು ಆಡುತ್ತಿರುವ ಮಾತಿನ ರೀತಿಯಲ್ಲಿರುವ ಅಪಾಯವನ್ನೂ ತಿಳಿಯದೆ ಇದ್ದಾರೆ.ಬೆಂಗಳೂರಿನಲ್ಲಿ ಕನ್ನಡವನ್ನು ಉಳಿಸುವುದು ಸಾಧ್ಯವೇ? ಬೆಂಗಳೂರಿನಲ್ಲಿ ಕನ್ನಡಿಗರ ಜನಸಂಖ್ಯೆ ಈಗ ಶೇಕಡ 30ಕ್ಕೆ ಇಳಿದಿದೆ. ಇನ್ನೂ ಕಡಿಮೆಯಾಗುತ್ತಾ ಇದೆ. ತೆಲುಗು, ತಮಿಳು, ಹಿಂದಿ, ಉರ್ದು, ಮರಾಠಿ, ಗುಜರಾತಿ, ಬಂಗಾಳಿ, ಸಿಂಧಿ ಭಾಷೆಗಳು ಸ್ಪರ್ಧೆಯನ್ನು ಹೂಡುತ್ತಿವೆ. ಈ ಎಲ್ಲ ಭಾಷೆಗಳ ನಡುವೆ ಇಂಗ್ಲಿಷಿಗೆ, ಹಿಂದಿಗೆ ಅಧಿಕವಾದ ಸ್ಥಾನ ಸಿಕ್ಕಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry