ಸಮ್ಮೇಳನಾಧ್ಯಕ್ಷರ ಕಾರ್ಯಸೂಚಿ

7

ಸಮ್ಮೇಳನಾಧ್ಯಕ್ಷರ ಕಾರ್ಯಸೂಚಿ

Published:
Updated:

ಯಾರ್ಯಾರು ಏನೇನು ಮಾಡಬೇಕು?

ಕನ್ನಡಿಗರು

ಪ್ರತಿ ಮನೆಗೆ ಕಡೇ ಪಕ್ಷ ಒಂದು ವಾರ್ತಾ ಪತ್ರಿಕೆ ಮತ್ತು ನಿಯತಕಾಲಿಕೆಯನ್ನು  ತರಿಸಬೇಕು. ಅವನ್ನು  ಮನೆಯವರೆಲ್ಲ ಓದಬೇಕು.ಬ್ಯಾಂಕ್, ವಿಮೆ ಮೊದಲಾದ ಸೇವೆಗಳಿಗೆ ಸಂಬಂಧಿಸಿದಂತೆ ದೂರವಾಣಿ ಅಥವಾ ಮೊಬೈಲ್‌ನಿಂದ ಕರೆ ಮಾಡುವಾಗ ಕನ್ನಡದಲ್ಲೇ ವ್ಯವಹರಿಸಿ. ‘ಇಂಟರ್ಯಾಕ್ಟಿವ್ ವಾಯ್ಸಿ ರೆಸ್ಪಾನ್ಸ್’ನಲ್ಲಿ ಕನ್ನಡವನ್ನೇ ಆಯ್ಕೆ ಮಾಡಿಕೊಳ್ಳಬೇಕು. ಇದರಿಂದ ಆಯಾ ಉದ್ಯಮಗಳು ಯಾವ ಭಾಷೆಗೆ ಒತ್ತು ನೀಡಬೇಕೆಂಬುದನ್ನು ನಿರ್ಧರಿಸುತ್ತವೆ.ವಿಮೆ, ಬ್ಯಾಂಕ್, ಹಣಕಾಸಿನ ವ್ಯವಹಾರ ಮೊದಲಾದ ಉದ್ಯಮಗಳ ಮಾರಾಟ ಪ್ರತಿನಿಧಿಗಳನ್ನು ಕನ್ನಡದಲ್ಲೇ ವ್ಯವಹರಿಸುವಂತೆ ಒತ್ತಾಯಿಸಬೇಕು.ಇಂಟರ್‌ನೆಟ್ ಅಥವಾ ನೇರ ಉದ್ಯಮ ಸಮೀಕ್ಷೆಗಳಲ್ಲಿ ‘ಗೊತ್ತಿರುವ ಭಾಷೆ’ ಎಂಬ ಪ್ರಶ್ನೆಗೆ ಕನ್ನಡ ಎಂದು ಮಾತ್ರ ದಾಖಲಿಸಿ. ಓದುವ ಪತ್ರಿಕೆಗಳ ಬಗ್ಗೆ ಇರುವ ಪ್ರಶ್ನೆಗೆ ಕನ್ನಡ ದಿನಪತ್ರಿಕೆಗಳು, ನಿಯತಕಾಲಿಕೆಗಳ ಹೆಸರನ್ನು  ಮರೆಯದೆ ನಮೂದಿಸಿ.ಎಲ್ಲೇ ಇದ್ದರೂ ಮಕ್ಕಳೊಂದಿಗೆ ಕನ್ನಡದಲ್ಲಿ ಮಾತನಾಡಿ. ಇತರ ಕನ್ನಡಿಗರೊಡನೆ ಕನ್ನಡದಲ್ಲೇ ಮಾತನಾಡಲು ಪ್ರೋತ್ಸಾಹಿಸಿ. ಅವರಲ್ಲಿ ಕನ್ನಡ ಪ್ರೇಮದ ಜೊತೆ ಮುಂದಾಳತ್ವದ ಗುಣಗಳು ಹೆಚ್ಚುವಂತೆ ಮಾಡಿ. ಕನ್ನಡ ತಾಯಿಯರು ಈ ಕೆಲಸವನ್ನು ಪ್ರೀತಿಯಿಂದ ಮಾಡಬೇಕು.ನಿಮ್ಮ ಪ್ರದೇಶದಲ್ಲಿ ನಡೆಯುವ ಕನ್ನಡ ಕಾರ್ಯಕ್ರಮಗಳಲ್ಲಿ ತಪ್ಪದೆ ಭಾಗವಹಿಸಿ.ಕನ್ನಡ- ಕನ್ನಡನಾಡು- ಕನ್ನಡಿಗ ಸಾಧಕರ ಬಗ್ಗೆ ಬೇರೆ ಭಾಷೆಯವರಲ್ಲಿ ಅಭಿಮಾನದಿಂದ ಮಾತನಾಡಿ.ಆದಷ್ಟೂ ಇತರ ಕನ್ನಡಿಗರಿಗೆ ಸಹಾಯ ಮಾಡಿ. ಅವರ ಕಾಲನ್ನು ಎಳೆಯಬೇಡಿ. ಕೆಲಸ ಮಾಡುವ ಸ್ಥಳಗಳಲ್ಲಿ ಒಗ್ಗಟ್ಟನ್ನು ಕಾಪಾಡಿಕೊಳ್ಳಿ.ಬೇರೆ ರಾಜ್ಯಗಳಿಂದ ಬಂದು ನಿಮ್ಮೊಡನೆ ಕೆಲಸ ಮಾಡುವ ಮಂದಿಗೆ  ಕನ್ನಡ ಕಲಿತು ಅದರಲ್ಲೇ ಮಾತನಾಡಲು ಪ್ರೋತ್ಸಾಹಿಸಿ.ಕನ್ನಡವೆಂದರೆ ಬರಿಯ ಸಾಹಿತ್ವಲ್ಲ, ಸುಗಮ ಸಂಗೀತವಲ್ಲ, ಚಲನಚಿತ್ರವಲ್ಲ; ಈ ರೀತಿಯ ಇನ್ನು ಎಷ್ಟೋ ವಿಚಾರಗಳನ್ನು ಒಳಗೊಂಡ ಒಂದು ಸಂಸ್ಕೃತಿ ಎಂಬುದನ್ನು  ಯಾವಾಗಲೂ  ನೆನಪಿಡಿ. ಕನ್ನಡಿಗರಾಗಿರುವುದಕ್ಕೆ ಹೆಮ್ಮೆ ಪಡಿ.

ಪರಿಷತ್ತು

ಪ್ರತಿ ವರ್ಷವೂ ಬೆಂಗಳೂರಿನಲ್ಲಿ ಗಡಿನಾಡ- ಹೊರನಾಡ ಕನ್ನಡಿಗರ ಒಂದು ಸಮಾವೇಶವನ್ನು ನಡೆಸಬೇಕು.ಬೆಂಗಳೂರಿನಲ್ಲಿ ಪ್ರತಿ ವರ್ಷ ಒಬ್ಬ ಪ್ರಾಚೀನ ಕವಿಯ ಬಗ್ಗೆ ಹೊಸ ಆಲೋಚನೆಗಳ ವಿಮರ್ಶೆಯ ಬಗ್ಗೆ ಒಂದು ವಿಚಾರ ಸಂಕಿರಣ ನಡೆಸಿ, ಅಲ್ಲಿ ಮಂಡನೆಯಾಗುವ ವಿಚಾರಗಳನ್ನು ಒಳಗೊಂಡ ಕೃತಿ ಪ್ರಕಟಿಸಬೇಕು.ಸಣ್ಣ ಪ್ರಮಾಣದಲ್ಲಿ 2 ತಿಂಗಳಿಗೊಮ್ಮೆ ಯುವ ಪ್ರತಿಭೆ, ಮಕ್ಕಳ ಸಾಹಿತ್ಯ, ಮಹಿಳೆಯರ ಕೃತಿಗಳು, ಒಂದು ವರ್ಷದ ಎಲ್ಲ ಪ್ರಕಾರದ ಕೃತಿಗಳ ವಿಮರ್ಶೆ ಮೊದಲಾದ ಕಾರ್ಯಕ್ರಮಗಳನ್ನು ನಡೆಸಬೇಕು.ಈ ವರ್ಷ ಕವಿ ನೇಮಿಚಂದ್ರನ ಕುರಿತು ವಿಚಾರ ಸಂಕಿರಣ ಏರ್ಪಡಿಸಬೇಕು.ಜಿಲ್ಲೆ, ತಾಲ್ಲೂಕುಗಳಲ್ಲಿ ನಡೆಯುವ ಪರಿಷತ್ತಿನ ಸಾಹಿತ್ಯ ಕಾರ್ಯಕ್ರಮಗಳಿಗೆ ಧರ್ಮಸ್ಥಳದ ‘ಧರ್ಮ- ಸಾಹಿತ್ಯ ಸಮ್ಮೇಳನ, ಮೂಡಬಿದರೆಯ ‘ನುಡಿಸಿರಿ’ ಮತ್ತು ‘ವಿರಾಸತ್’ಗಳೂ ಮಾದರಿಯಾಗಬೇಕು.ನಿಘಂಟು ಕಚೇರಿಯನ್ನು ಮತ್ತೆ ಪ್ರಾರಂಭಿಸಬೇಕು. ದ್ವಿಭಾಷಾ ಮತ್ತು ತ್ರಿಭಾಷಾ ನಿಘಂಟುಗಳನ್ನು ಸಿದ್ಧಪಡಿಸಬೇಕು.‘ಶಾಸ್ತ್ರೀಯ ಭಾಷೆ’ ಎಂಬ ಶಬ್ಧದ ಬದಲು ಅಭಿಜಾತ ಭಾಷೆ ಅಥವಾ ಸಮೃದ್ಧ ಪ್ರಾಚೀನ ಭಾಷೆ ಎಂಬ ಪದವನ್ನು ಉಪಯೋಗಿಸಬೇಕು. ಈ ಸ್ಥಾನಮಾನದ ಯೋಜನೆ ಅಡಿಯಲ್ಲಿ ಕೇಂದ್ರದ ಅನುದಾನ ಪಡೆಯಲು ಯೋಜನೆ ರೂಪಿಸಬೇಕು.ಅದಕ್ಕಾಗಿ ವಿದ್ವಾಂಸರ ಸಮಿತಿಯನ್ನು ರಚಿಸಬೇಕು. ಈ ಕಾರ್ಯದಲ್ಲಿ ಪರಿಷತ್ತು ಮುಂಚೂಣಿಯ ನಾಯಕನ ಪಾತ್ರ ವಹಿಸಬೇಕು.ಅತ್ಯುತ್ತಮ ವೈಜ್ಞಾನಿಕ ಲೇಖನಗಳನ್ನು ಪ್ರಕಟಿಸುತ್ತಿರುವ ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗ ಶಾಲೆಗಳಂತಹ ಸಂಸ್ಥೆಗಳಿಗೆ ಪರಿಷತ್ತು ಮಾರ್ಗದರ್ಶನ ಮಾಡಬೇಕು. ಅನುವಾದಕರಿಗೆ ಅನ್ಯ ಭಾಷಾ ಪಾಂಡಿತ್ಯ ಹೊಂದಲು ಪ್ರೋತ್ಸಾಹ ನೀಡಬೇಕು.ನಾಡಗೀತೆ ಯಾವಾಗಲೂ ಸಂಗ್ರಹವಾಗಿ 3 ನಿಮಿಷಕ್ಕಿಂತ ಹೆಚ್ಚಿಲ್ಲದೆ ಇರದಂತೆ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಸಲಹೆಯನ್ನು ನೀಡಬೇಕು.ಪರಿಷತ್ತಿನ ಚುನಾವಣೆಯಲ್ಲಿ ಹಣದ ಪ್ರಭಾವ ಕಡಿಮೆ ಮಾಡಲು ಹಾಗೂ ಅರ್ಹರೇ ಅಧ್ಯಕ್ಷರಾಗಿ ಆಯ್ಕೆಯಾಗುವಂತೆ ಮತದಾನದ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು.ಶ್ರೇಷ್ಠ ಸಂತರಾದ ಕನಕ, ಪುರಂದರರ ಕೃತಿಗಳ ಬಗ್ಗೆ ಅನುಚಿತವಾದ ಹೇಳಿಕೆಗಳು ಬಂದಿವೆ. ಅವರ ಕೃತಿಗಳ ಸತ್ಯಾಸತ್ಯತೆಯನ್ನು ವಿದ್ವತ್ತೆಯಿಂದ ಪರಿಶೀಲಿಸಿ, ಸಮರ್ಥ ತೀರ್ಮಾನ ನೀಡಲು ವಿದ್ವಾಂಸರ ಸಮಿತಿ ರಚಿಸಬೇಕು.ಬಿ.ಎಂ.ಶ್ರೀಯವರು ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ನವೋದಯದ ನೆನಪಿಗಾಗಿ ‘ಕನ್ನಡ ಬಾವುಟ’ ಎಂಬ ಗ್ರಂಥವನ್ನು ಪ್ರಕಟಿಸಿದರು. ಅದೇ ಮಾದರಿಯಲ್ಲಿ ಈಗಿನ ಅಧ್ಯಕ್ಷರು ಈ ಶತಮಾನದ ಸಾಹಿತ್ಯ ಕೃಷಿಯಲ್ಲಿ ಅತ್ಯುತ್ತಮವೆಂದು ಕಂಡುಬಂದ ನೂರು ಕವನಗಳನ್ನು ಆಯ್ಕೆ ಮಾಡಿ ‘ಬೆಳ್ಗೊಡೆ’ ಹೆಸರಿನಲ್ಲಿ ಸಂಕಲನ ಪ್ರಕಟಿಸಬೇಕು.

ಆಡಳಿತಗಾರರು

ನಮ್ಮ ಭಾಷೆಯ ಬೆಳವಣಿಗೆ ಕೂಡ ಆಡಳಿತ ನಡೆಸುವವರು ಎಷ್ಟರಮಟ್ಟಿಗೆ ಒತ್ತು ಕೊಡುತ್ತಾರೆ ಎಂಬುದನ್ನು ಅವಲಂಬಿಸಿದೆ. ಕನ್ನಡ ಭಾಷೆಯಲ್ಲಿ ವ್ಯವಹಾರ ಹೆಚ್ಚಿದಷ್ಟೂ ಕನ್ನಡ ಭಾಷೆ ಬೆಳೆಯುತ್ತದೆ ಎಂಬ ಸತ್ಯವನ್ನು ನಾವೆಲ್ಲರೂ ಅರಿತು ಭಾಷೆಯ ಉಪಯೋಗವನ್ನು ಕಡ್ಡಾಯವಾಗಿ ಜಾರಿಗೆ ತರಬೇಕು.ರಾಜಕೀಯ ಮುಂದಾಳುಗಳು ದೆಹಲಿಯಲ್ಲಿ ರಾಜ್ಯದ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡುವಾಗ ಕನ್ನಡದಲ್ಲೇಕೆ ಮಾತನಾಡುವುದಿಲ್ಲ? ಆಂಗ್ಲ ಅಥವಾ ಹಿಂದಿ ವಾಹಿನಿಗಳಿಗೆ ಉತ್ತರಿಸುವಾಗ ಕನ್ನಡವನ್ನೇ ಬಳಸುವ ಧೀಮಂತರೇಕೆ ಆಗುವುದಿಲ್ಲ? ಅವರು ಹೇಳಿದ್ದನ್ನು  ವಾಹಿನಿಗೆ ಬೇಕಾದ ಭಾಷೆಗೆ ತರ್ಜುಮೆ ಮಾಡುವ ಕೆಲಸವನ್ನು ಆಯಾ ವಾಹಿನಿಯವರಿಗೆ ಬಿಟ್ಟುಬಿಡಿ.ವಾಣಿಜ್ಯೋದ್ಯಮಿಗಳು

ಬಹುರಾಷ್ಟ್ರೀಯ ಮತ್ತು ಸ್ವದೇಶಿ ಉದ್ಯಮಗಳು ಅದರಲ್ಲೂ ನಿತ್ಯ ಬಳಕೆಯ ವಸ್ತುಗಳನ್ನು ತಯಾರಿಸುವವರು ತಮ್ಮ ಉತ್ಪನ್ನಗಳ ಮಾರಾಟಕ್ಕೆ ನೀಡುವ ಜಾಹೀರಾತುಗಳಲ್ಲಿ ಸರಿಯಾದ ಕನ್ನಡ ಭಾಷೆ ಉಪಯೋಗವಾಗುತ್ತಿದೆಯೇ ಎಂಬುದನ್ನು ಗಮನಿಸಬೇಕಾಗಿದೆ. ಅಲ್ಲಿನ ತಪ್ಪು ಭಾಷಾ ಪ್ರಯೋಗ ಮತ್ತು ಕಾಗುಣಿತದಿಂದ ಆಗುವ ಕೆಟ್ಟ ಪರಿಣಾಮ ಬಹಳ.ಲಕ್ಷಾಂತರ ಮಂದಿ ಮೇಲಿಂದ ಮೇಲೆ ನೂರಾರು ಬಾರಿ ಸರಿಯಲ್ಲದ್ದನ್ನು ನೋಡುವ- ಕೇಳುವ ಕ್ರಿಯೆಯಿಂದ ಕನ್ನಡ ಪದಗಳ, ಪದಪುಂಜಗಳ ವ್ಯಾಕರಣದ ಕೊಲೆಯಾಗುತ್ತದೆ. ಈ ರೀತಿಯ ‘ತಪ್ಪು ಕನ್ನಡ’ವನ್ನು ನಾವು ಸಹಿಸುವುದಿಲ್ಲ ಎನ್ನುವುದನ್ನು ನಾವು ನಿಸ್ಸಂಕೋಚವಾಗಿ ಜಾಹೀರಾತುದಾರರಿಗೂ ಜಾಹೀರಾತನ್ನು ತಯಾರಿಸುವವರಿಗೂ ಮನದಟ್ಟಾಗುವಂತೆ ತಿಳಿಸಬೇಕಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry