ಶನಿವಾರ, ಮೇ 8, 2021
27 °C

ಸಮ್ಮೇಳನ ಆಯೋಜನೆ: ಆಕ್ಷೇಪಗಳ ಸುರಿಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಸಮ್ಮೇಳನದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿಲ್ಲ, ಗೋಷ್ಠಿಗಳಲ್ಲಿ ಜಾನಪದ, ಗ್ರಾಮೀಣ ಸಂಸ್ಕೃತಿಯ ವಿಚಾರಗಳಿಲ್ಲ, ಸಮ್ಮೇಳನ ಸಮಿತಿಯು ಜಿಲ್ಲೆಯ ಖ್ಯಾತ ನಾಮರನ್ನೇ ಮರೆತಂತಿದೆ..ಇವು 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಸಮ್ಮೇಳನ ಆಯೋಜನೆ ಕುರಿತು ಸುದ್ದಿಗಾರರು ವ್ಯಕ್ತಪಡಿಸಿದ ಅಭಿಪ್ರಾಯಗಳು.ಸಮ್ಮೇಳನ ಸಿದ್ಧತೆ ಕುರಿತು ಸುದ್ದಿಗೋಷ್ಠಿಯಲ್ಲಿ ಸಲಹೆಗಳನ್ನು ಕೇಳಿದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಪತ್ರಕರ್ತರಿಂದ ಪ್ರಶ್ನೆಗಳ ಸರಮಾಲೆ ಎದುರಿಸಬೇಕಾಯಿತು. ಸಮ್ಮೇಳನದ ಕಾರ್ಯಕ್ರಮಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿಲ್ಲ. ಜಿಲ್ಲೆಯಲ್ಲಿ ಸಾಹಿತ್ಯ ಸಾಧಕರಿದ್ದರೂ ಹೊರಗಿನವರನ್ನು ಕರೆಸುವ ಅವಶ್ಯಕತೆ ಏನಿತ್ತು? ಇದನ್ನೆಲ್ಲ ಗಮನಿಸಿದರೆ ಆತುರವಾಗಿ ಸಮ್ಮೇಳನವನ್ನು ಆಯೋಜಿಸಿದಂತಿದೆ' ಎಂಬುದು ಸುದ್ದಿಗಾರೊಬ್ಬರು ಪ್ರಶ್ನಿಸಿದರು.`ಕನ್ನಡದಲ್ಲಿ ಅಧಿಕ ಅಂಕ ಜಿಲ್ಲೆಯ ಮಕ್ಕಳನ್ನು ಈ ವೇದಿಕೆಯಲ್ಲಿ ಸನ್ಮಾನಿಸಬಹುದಿತ್ತಲ್ಲ' ಎಂಬ ಪ್ರಶ್ನೆಗೆ, `ಈಗಾಗಲೇ ಎರಡು ಸಂಘಟನೆಗಳು ವಿದ್ಯಾರ್ಥಿ ಗಳನ್ನು ಸನ್ಮಾನಿಸಿದ್ದಾರೆ' ಎಂದು ಅಧ್ಯಕ್ಷರು ಉತ್ತರಿಸಿದರು. `ಕ್ಲಬ್‌ನವರ ಕಾರ್ಯಕ್ರಮ ಬಿಡಿ, ಕನ್ನಡದ ಹಬ್ಬದಲ್ಲಿ ಈ ಮಕ್ಕಳನ್ನು ಸನ್ಮಾನಿಸಲು ನಿಮಗೆ ಭಾರವಾಗುತ್ತಿತ್ತೇ?' ಎಂದು ಪತ್ರಕರ್ತರು ಮರು ಪ್ರಶ್ನೆ ಹಾಕಿದರು.ಖ್ಯಾತ ನಾಮರನ್ನೇ ಮರೆತರೇ..?

`ಸಾಹಿತ್ಯಕ್ಕೆ, ಸಾಮಾಜಿಕ ಸೇವೆಗೆ ಜೀವನವನ್ನೇ ಮುಡುಪಾಗಿಟ್ಟಿದ್ದ ದಿ.ಬೆಳಗೆರೆ ಕೃಷ್ಣಶಾಸ್ತ್ರಿ ಅವರ ಹೆಸರನ್ನು ಸಮ್ಮೇಳನ ಸಮಿತಿ ಮರೆತಿದೆ. ವೇದಿಕೆಯೊಂದಕ್ಕೆ ಅವರ ಹೆಸರಿಡುವ ಮೂಲಕವಾದರೂ ಅವರನ್ನು ಸಮ್ಮೇಳನದಲ್ಲಿ ಸ್ಮರಿಸಬಹುದಿತ್ತು' ಎಂಬ ಸಲಹೆ ವ್ಯಕ್ತವಾಯಿತು.`ಸಮ್ಮೇಳನದಲ್ಲಿ ಸ್ಥಳೀಯ ಸಮಸ್ಯೆಗಳು, ಸಾಹಿತ್ಯ ಚಟುವಟಿಕೆಗಳು ಚರ್ಚೆಯಾಗಬೇಕು. ಆದರೆ, ಈ ಗೋಷ್ಠಿಗಳಲ್ಲಿ ಸವಕಲು ವಿಚಾರಗಳೇ ಸ್ಥಾನ ಪಡೆದಿವೆ. ಚಿತ್ರದುರ್ಗ ಜನಪದರ ತವರು. ಇಂಥ ಸ್ಥಳದಲ್ಲಿ ಗ್ರಾಮೀಣ ಸಂಸ್ಕೃತಿ ಹಾಗೂ ಜಾನಪದ ವಿಚಾರವನ್ನು ಗೋಷ್ಠಿಯೊಂದಕ್ಕೆ ಮೀಸಲಿಡಬಹುದಿತ್ತು' ಎಂಬ ವಿಚಾರವೂ ಕೇಳಿಬಂತು.`ಸನ್ಮಾನಕ್ಕೆ ಆಯ್ಕೆ ಮಾಡಿರುವವರು ಈಗಾಗಲೇ ಪ್ರಶಸ್ತಿಗಳ ಮೇಲೆ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಂಥವರನ್ನೇ ಮತ್ತೆ ಸನ್ಮಾನಕ್ಕೆ ಆಯ್ಕೆ ಮಾಡುವ ಅಗತ್ಯವಿತ್ತೇ ? ಜಿಲ್ಲೆಯಲ್ಲಿ ಸಾಧಕರ ಕೊರತೆ ಇದೆಯೇ'? ಎಂದು ಅಧ್ಯಕ್ಷರನ್ನು ಪ್ರಶ್ನಿಸಿದರು.`ಇವೆಲ್ಲ ನನ್ನೊಬ್ಬನ ತೀರ್ಮಾನವಲ್ಲ. ಸಮ್ಮೇಳನ ಸಮಿತಿಯ ನಿರ್ಧಾರದಂತೆ ಎಲ್ಲ ಆಯ್ಕೆಗಳು ನಡೆದಿವೆ' ಎಂದು ಸಮರ್ಥಿಸಿಕೊಂಡ ಕಸಾಪ ಅಧ್ಯಕ್ಷ ಆರ್.ಮಲ್ಲಿಕಾರ್ಜುನಯ್ಯ ಅವರು, ಮುಂದಿನ ದಿನಗಳಲ್ಲಿ ಈ ಎಲ್ಲ ಸಲಹೆಗಳನ್ನು ಪರಿಗಣನೆಗೆ ತೆಗೆದುಕೊಂಡು ಮುಂದುವರಿಯುವುದಾಗಿ ಭರವಸೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.