ಸಮ್ಮೇಳನ ಉಪಯುಕ್ತವಾಗಲಿ

7

ಸಮ್ಮೇಳನ ಉಪಯುಕ್ತವಾಗಲಿ

Published:
Updated:

ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಸಿದ್ಧತೆಯ ಸಭೆಗೆ ‘ಐಟಿ. ಬಿಟಿಯವರನ್ನು ಕರೆಯಲಾಗಿತ್ತು ಆದರೆ ಅವರು ಬರಲಿಲ್ಲ. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಯಾವುದೇ ನೆರವು ನೀಡಲಿಲ್ಲ. ನಮ್ಮ ನೆಲದಲ್ಲಿ ಇದ್ದು, ಕನ್ನಡದ ನೀರು ಕುಡಿಯುತ್ತಾರೆ. ಅವರಿಗೆ ಕೃತಜ್ಞತೆ ಇಲ್ಲ....’ ಎಂಬ ಆಪಾದನೆಯು ವರದಿ ಓದಿ ವಿಚಿತ್ರ ಎನಿಸಿತು. ಸರ್ಕಾರಿ ನೌಕರರಿಂದ, ಸಾರ್ವಜನಿಕರಿಂದ ಹಣ ಬಂದಿದೆ, ಜೊತೆಗೆ ಪರಿಷತ್ತಿಗೆ ಬೇರೆ ಬೇರೆ ಸಂಪನ್ಮೂಲಗಳಿವೆ, ಸರ್ಕಾರ ಕೋಟ್ಯಂತರ ರೂಪಾಯಿ ನೆರವು ನೀಡಿದೆ, ಪ್ರತಿನಿಧಿಗಳು ಶುಲ್ಕ ಕಟ್ಟಿ ಭಾಗವಹಿಸುತ್ತಿದ್ದಾರೆ. ಅಷ್ಟು ದುಡ್ಡು ಸಾಕಲ್ಲವೇ? ಇರುವಷ್ಟನ್ನು ಅಚ್ಚುಕಟ್ಟಾಗಿ ಬಳಸಿ ಸಮ್ಮೇಳನ ನಡೆಸುವುದು ಸೂಕ್ತವಲ್ಲವೇ? ಅದು ಬಿಟ್ಟು ಅವರು ಬರಲಿಲ್ಲ, ಇವರು ದುಡ್ಡು ಕೊಡಲಿಲ್ಲ ಎಂದು ಗೊಣಗುವುದು ಸಾಹಿತಿಗಳ ಸಣ್ಣತನವನ್ನು ತೋರಿಸುತ್ತದೆ.ಯುವಜನರು ಕನ್ನಡದಿಂದ ಏಕೆ ದೂರವಾಗುತ್ತಿದ್ದಾರೆ ಎಂದು ಚಿಂತನೆ ನಡೆಸಬೇಕು. ಅವರನ್ನು ಒಟ್ಟುಗೂಡಿಸುವುದು ಹೇಗೆ ಎಂದು ವಿಚಾರ ಮಾಡಬೇಕು. ಆ ವಿಚಾರಮಂಥನದಲ್ಲಿ ಯುವಜನರನ್ನು ಒಳಗೊಳ್ಳಬೇಕು. ಕನ್ನಡದ ಬಗ್ಗೆ ಎಷ್ಟೇ ಅಭಿಮಾನವಿದ್ದರೂ ಇಂಗ್ಲಿಷ್ ಬಿಟ್ಟು ಬದುಕುವುದು ಕಷ್ಟವಾಗಿರುವ ಈ ಕಾಲದಲ್ಲಿ ಇಂಗ್ಷಿಷನ್ನು ಹೀಗೆಳೆಯುವುದನ್ನು ನಿಲ್ಲಿಸಬೇಕು.ಪ್ರತಿಯೊಂದು ಪದಕ್ಕೂ ಕನ್ನಡದ ಪದವನ್ನು ಟಂಕಾಯಿಸುವುದು ಚೆಂದವಾದರೂ ಅದನ್ನು ಪ್ರಚಲಿತಪಡಿಸುವುದು ಕಷ್ಟ.ಇಂಗ್ಲಿಷಿನ ಆ ಪದಗಳನ್ನು ನಮ್ಮದನ್ನಾಗಿ ಮಾಡಿಕೊಂಡು ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳಬೇಕು. ಕನ್ನಡ ಭಾಷೆ ಕಷ್ಟವಲ್ಲ.ಬಳಕೆಯಲ್ಲಿರುವ ಇಂಗ್ಲಿಷ್ ಪದಗಳನ್ನು ಸೇರಿಸಿಕೊಂಡು ಮಾತನಾಡಿ ಎಂದು ಹುರಿದುಂಬಿಸಬೇಕು.ಸಾಹಿತ್ಯ ಸಮ್ಮೇಳನವೆಂದರೆ ಹಿರಿಯ ಸಾಹಿತಿಗಳ ಕೂಟ, ಸಾಹಿತ್ಯಕ ವಿಚಾರಗಳ ಬಗ್ಗೆ ಗಹನವಾದ ಚರ್ಚೆ, ಕ್ಲಿಷ್ಟ ಕವನಗಳ ವಾಚನ, ಜಾತ್ರೆಯಂಥ ವಾತಾವರಣ, ಮೆರವಣಿಗೆ, ಭಾರಿ ಭೋಜನ, ಊಟದ ಸಮಯದಲ್ಲಿ ಗಲಾಟೆ, ನಂತರ ಕಸದ ತಿಪ್ಪೆ.... ವಾಹನ ಸಂಚಾರಕ್ಕೆ ಕಷ್ಟ.... ಎಂದು ಜನಸಾಮಾನ್ಯರು ಅಂದುಕೊಂಡಿದ್ದಾರೆ. ಆ ಭಾವನೆ ದೂರವಾಗಬೇಕು ಅಲ್ಲವೇ?ಸಮ್ಮೇಳನಕ್ಕೆಂದು ಶಾಲೆಗಳಿಗೆ ರಜೆ ಕೊಟ್ಟ ಮೇಲೆ ಆ ಮಕ್ಕಳನ್ನು ಸಮ್ಮೇಳನಕ್ಕೆ ಕರೆದುಕೊಂಡು ಹೋಗಲಾಗುತ್ತದೆಯೇ? ಅವರಿಗೆ ಇಷ್ಟವಾಗುವಂತಹುದು ಸಮ್ಮೇಳನದಲ್ಲಿ ಏನಿದೆ?ಎಲ್ಲರಿಗೂ ಆಸಕ್ತಿ ಹುಟ್ಟಿಸುವಂತಹುದು ಏನು ಮಾಡಬೇಕು ಎಂದು ಯೋಚಿಸಿ, ಯುವಜನರನ್ನು, ಕೆಲವು ಕನ್ನಡ ಅಧ್ಯಾಪಕರನ್ನು ಸೇರಿಸಿಕೊಂಡು ಚರ್ಚಿಸಿ ಹೊಸ ಹೊಸ ಕಾರ್ಯಕ್ರಮ ನಿರೂಪಿಸಬೇಕು. ಸಮ್ಮೇಳನದಲ್ಲಿ ಯಾವ ಯಾವ ದಿನ ಏನೇನಿದೆ ಎಂದು ಈವರೆಗೂ ಯಾವ ಪತ್ರಿಕೆಯಲ್ಲೂ ಬಂದಿಲ್ಲ.  ತಿಂಡಿ, ಊಟಕ್ಕೆ ಏನೇನಿರುತ್ತದೆ. ಅಡಿಗೆಯ ಕಂಟ್ರ್ಯಾಕ್ಟ್ ವಹಿಸಿಕೊಂಡಿರುವವರು ಯಾರು ಎಂದು ಓದಿದ ನೆನಪು.ಕನ್ನಡ ಸಾಹಿತ್ಯ ಸಮ್ಮೇಳನ ಆಹ್ವಾನಿತರಿಗೆ ಮಾತ್ರ, ಸಾಹಿತಿಗಳಿಗೆ ಮಾತ್ರ ಎನ್ನುವುದಾದರೆ ಆ ವಿಷಯ ಬೇರೆ. ಇದು ಕನ್ನಡದ ಜಾತ್ರೆ, ಕರ್ನಾಟಕದಲ್ಲಿ ಇರುವವರೆಲ್ಲರ ಹಬ್ಬ ಎಂಬುದಾದರೆ ಇದು ಇನ್ನೂ ಹೆಚ್ಚು ಜನರನ್ನು ತಲುಪುವುದು ಹೇಗೆ ಎಂದು ಯೋಚಿಸಬೇಕು. ಕನ್ನಡದ ಪ್ರೀತಿ ಮತ್ತು ಕಾಳಜಿ ಇಟ್ಟುಕೊಂಡು ಬರುವವರಿಗೆ ನಿರಾಶೆ ಮತ್ತು ಅವಮಾನವಾಗಬಾರದು. ಇದು ನನ್ನ ಕಳಕಳಿಯ ಮನವಿ.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry