ಸಮ್ಮೇಳನ ಮುಗಿದರೂ ಮೇಳ ಮುಗಿದಿಲ್ಲ!

7

ಸಮ್ಮೇಳನ ಮುಗಿದರೂ ಮೇಳ ಮುಗಿದಿಲ್ಲ!

Published:
Updated:

ಬೆಂಗಳೂರು: ಸಾಹಿತ್ಯ ಸಮ್ಮೇಳನದ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಇನ್ನೂ ಎರಡು ದಿನ ವಿಸ್ತರಿಸಲಾಗಿದೆ. ಈ ಮೇಳಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರೂ ಆಗಿರುವ ಸಚಿವಆರ್.ಅಶೋಕ ತಿಳಿಸಿದರು.ಭಾನುವಾರ ಭರ್ಜರಿ ವ್ಯಾಪಾರ: ಸಮ್ಮೇಳನದ ಆರಂಭದ ದಿನದಿಂದಲೂ ಉತ್ತಮ ವ್ಯಾಪಾರ ಕಂಡ ಪುಸ್ತಕ ಮಳಿಗೆಗಳಲ್ಲಿ ಭಾನುವಾರವೂ ಭರ್ಜರಿ ವ್ಯಾಪಾರ. ಹಿಂದಿನ ಹಲವಾರು ಸಾಹಿತ್ಯ ಸಮ್ಮೇಳನಗಳಿಗಿಂತ ಹೆಚ್ಚಿನ ವ್ಯಾಪಾರ ಈ ಸಮ್ಮೇಳನದಲ್ಲಿ ಆಗಿದೆ ಎಂಬುದು ಬಹುತೇಕ ಪುಸ್ತಕ ವ್ಯಾಪಾರಿಗಳ ಅಂಬೋಣ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಸಮಿತಿ ಸದಸ್ಯರಾದ ಪ್ರಕಾಶ್ ಕಂಬತ್ತಳ್ಳಿ , ‘ಮೂರು ದಿನಗಳಿಂದ ಸುಮಾರು ಮೂರು ಕೋಟಿ ರೂಪಾಯಿ ಮೌಲ್ಯದ ಪುಸ್ತಕಗಳು ಮಾರಾಟವಾಗಿವೆ’ ಎಂದರು. ‘ಪುಸ್ತಕ ಮಾರಾಟಗಾರರಿಗೆ ಹಿಂದಿನ ಎಲ್ಲ ಸಮ್ಮೇಳನಗಳಿಗಿಂತ ಹೆಚ್ಚಿನ ಪ್ರತಿಕ್ರಿಯೆ ಇಲ್ಲಿ ದೊರೆತಿದೆ. ಎಲ್ಲ ಪುಸ್ತಕ ಪ್ರಕಾಶಕರೂ ಖುಷಿಯಾಗಿದ್ದಾರೆ’ ಎಂದರು.ನಾಡಿನ ಅತಿ ದೊಡ್ಡ ಪುಸ್ತಕ ವ್ಯಾಪಾರಿಗಳಾದ ‘ಸಪ್ನಾ’ ಮಳಿಗೆಯಲ್ಲಿ ದಿನವೊಂದಕ್ಕೆ ಸರಾಸರಿ 3 ಲಕ್ಷ ರೂಪಾಯಿ ಮೌಲ್ಯದ ವಿವಿಧ ಸಾಹಿತ್ಯ ಕೃತಿಗಳು ಮಾರಾಟವಾಗಿವೆ ಎಂದು ಅಲ್ಲಿ ಮೇಲ್ವಿಚಾರಣೆ ನಡೆಸುತ್ತಿದ್ದ ಶ್ರೀನಿವಾಸ್ ಅವರು ತಿಳಿಸಿದರು.‘ನಮ್ಮಲ್ಲಿ ಶಿವರಾಮ ಕಾರಂತರ ಎಲ್ಲ ಕೃತಿಗಳೂ ಬಹುಬೇಗ ಖರ್ಚಾಗುತ್ತಿವೆ. ಅದರಲ್ಲೂ ಅವರ ಮೂಕಜ್ಜಿಯ ಕನಸುಗಳು ಕೃತಿ ಅತ್ಯಂತ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ’ ಎಂದು ಅವರು ಹೇಳಿದರು.ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಮತ್ತು ಬೆಂಗಳೂರಿನ ಸಾಹಿತ್ಯ ಭಂಡಾರ ಪುಸ್ತಕ ಮಳಿಗೆಗಳ ಮಾಲೀಕರೂ ಜನರ ಪ್ರತಿಕ್ರಿಯೆ ನೋಡಿ ಖುಷಿಪಟ್ಟಿದ್ದಾರೆ. ಸಾಹಿತ್ಯ ಪ್ರಕಾಶನದ ಪುಸ್ತಕ ಮಳಿಗೆಯಲ್ಲಿ ಸುಮಾರು ನಾಲ್ಕು ಲಕ್ಷ ರೂಪಾಯಿ ಮೌಲ್ಯದ ಪುಸ್ತಕಗಳು ಮಾರಾಟವಾಗಿವೆ. ‘ಡಾ.ಕೆ.ಎಸ್. ನಾರಾಯಣಾಚಾರ್ಯ ಅವರು ಬರೆದಿರುವ ಚಾಣಕ್ಯ ಕೃತಿ ನಮ್ಮಲ್ಲಿ ಬಹುಬೇಡಿಕೆ ಪಡೆದುಕೊಂಡಿದೆ’ ಎಂದು ಅಲ್ಲಿನ ಮೇಲ್ವಿಚಾರಕರು ತಿಳಿಸಿದರು.ಹಂಪಿ ಕನ್ನಡ ವಿಶ್ವವಿದ್ಯಾಯಲದ ಪುಸ್ತಕ ಮಳಿಗೆಯಲ್ಲಿ ಭಾನುವಾರವೂ ಭರದ ವ್ಯಾಪಾರ. ಪುಸ್ತಕ ಪ್ರದರ್ಶನ ಮಳಿಗೆಯ ವ್ಯವಸ್ಥೆಗಳು ಚೆನ್ನಾಗಿವೆ. ಆದರೆ ಇಲ್ಲಿ ಕುಡಿಯುವ ನೀರು, ಆಹಾರ ಮತ್ತು ಶೌಚಾಲಯದ ವ್ಯವಸ್ಥೆ ಸರಿಯಾಗಿಲ್ಲ ಎಂದು ಮನೋಹರ ಗ್ರಂಥಮಾಲಾದ ರಮೇಶ್   ಪರ್ವತೀಕರ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry