ಸಮ್‌ಜೋತಾ ಎಕ್ಸ್‌ಪ್ರೆಸ್ ಆರೋಪಿ

7
ಹೈದರಾಬಾದ್ ಸ್ಫೋಟದಲ್ಲೂ ಭಾಗಿಯಾಗಿದ್ದ

ಸಮ್‌ಜೋತಾ ಎಕ್ಸ್‌ಪ್ರೆಸ್ ಆರೋಪಿ

Published:
Updated:

ನವದೆಹಲಿ (ಪಿಟಿಐ): 2007ರಲ್ಲಿ ಸಮ್‌ಜೋತಾ ಎಕ್ಸ್‌ಪ್ರೆಸ್‌ನಲ್ಲಿ ಬಾಂಬ್ ಇಟ್ಟಿದ್ದ ಶಂಕಿತ ಆರೋಪಿ ರಾಜೇಂದ್ರ ಚೌಧರಿ, ಅದೇ ವರ್ಷ ಹೈದರಾಬಾದ್‌ನ ಮೆಕ್ಕಾ ಮಸೀದಿಯಲ್ಲಿ ನಡೆದ ಸ್ಫೋಟಕ್ಕೂ ಕಾರಣನಾಗಿರಬಹುದು ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಹೇಳಿದೆ.

ಸುಮಾರು 35 ವರ್ಷದವನಾದ ರಾಜೇಂದ್ರ ಚೌಧರಿಯನ್ನು ಶನಿವಾರ ರಾತ್ರಿ `ಎನ್‌ಐಎ' ತಂಡ ಉಜ್ಜಯಿನಿಯಿಂದ 50 ಕಿ.ಮೀ. ದೂರದಲ್ಲಿರುವ ನಗ್ಡಾದಲ್ಲಿ ಬಂಧಿಸಿದೆ.2007ರ ಮೇ ತಿಂಗಳಿನಲ್ಲಿ ಹೈದರಾಬಾದ್‌ನ ಮೆಕ್ಕಾ ಮಸೀದಿಯಲ್ಲಿ ನಡೆದ ಸ್ಫೋಟದಲ್ಲಿ ಒಂಬತ್ತು ಜನ ಸತ್ತಿದ್ದರು. 2007ರ ಫೆಬ್ರುವರಿಯಲ್ಲಿ ನಡೆದಿದ್ದ ಸಮ್‌ಜೋತಾ ಎಕ್ಸ್‌ಪ್ರೆಸ್ ಸ್ಫೋಟದಲ್ಲಿ 68 ಜನ ಮೃತಪಟ್ಟಿದ್ದರು.ಸಮುಂದರ್ ಸಿಂಗ್ ಎಂಬ ಹೆಸರಿನಿಂದಲೂ ಗುರುತಿಸಿಕೊಳ್ಳುತ್ತಿದ್ದ ಚೌಧರಿ ಬಲಪಂಥೀಯ ಉಗ್ರವಾದಿಗಳ ಗುಂಪಿಗೆ ಸೇರಿದ್ದು, ತನ್ನ ಗುರುತನ್ನು ಸಂಪೂರ್ಣವಾಗಿ ಬದಲಿಸಿಕೊಂಡಿದ್ದ. ಆತನ ತಲೆಗೆ `ಎನ್‌ಐಎ' 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ ಮೇಲೆ ಕಳೆದ ಮೂರು ವರ್ಷಗಳಿಂದ ಆತ ಬೇರೆ ಹೆಸರಿನಲ್ಲಿ ಬದುಕುತ್ತಿದ್ದ.ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದ ತನಿಖೆಯನ್ನು `ಎನ್‌ಐಎ'ಗೆ 2011ರಲ್ಲಿ ವಹಿಸಲಾಗಿತ್ತು. ಅಸೀಮಾನಂದ, ಲೋಕೇಶ್ ಶರ್ಮಾ ಮತ್ತು ದೇವಿಂದರ್ ಗುಪ್ತಾ (ಬಂಧಿತರು) ಮತ್ತು ರಾಮ್ಜಿ ಕಾಲಸಂಗ್ರೆ ಹಾಗೂ ಸಂದೀಪ್ ದಾಂಗೆ (ನಾಪತ್ತೆಯಾದವರು) ಅವರ ವಿರುದ್ಧ ಆರೋಪಪಟ್ಟಿ ಸಿದ್ಧಪಡಿಸಲಾಗಿತ್ತು.

ಸಮ್‌ಜೋತಾ ಎಕ್ಸ್‌ಪ್ರೆಸ್ ಹಾಗೂ ಮೆಕ್ಕಾ ಮಸೀದಿ ಎರಡೂ ಸ್ಫೋಟಗಳಲ್ಲೂ ಒಬ್ಬನೇ ವ್ಯಕ್ತಿ ಬಾಂಬ್ ಇಟ್ಟಿರುವ ಮಾಹಿತಿ ದೊರಕಿರುವುದರಿಂದ ರಾಜೇಂದ್ರ ಚೌಧರಿಯನ್ನು `ಎನ್‌ಐಎ' ತೀವ್ರ ತನಿಖೆಗೆ ಒಳಪಡಿಸಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry