ಸೋಮವಾರ, ಮೇ 23, 2022
24 °C

ಸಮ ಬಲವೇ ಭಾರತದ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರಿಕೆಟ್: ಕಾಡುವ ನಿರಾಸೆಯ ಇತಿಹಾಸ ಮರೆಯಲು ‘ಮಹಿ’ ಬಳಗದ ಸಾಹಸ

ಡರ್ಬನ್:
ಇತಿಹಾಸದ ಕಡೆಗೆ ನೋಡಿ ಆಡುವುದಿಲ್ಲವೆಂದು ಹೇಳುತ್ತಲೇ ಸೆಂಚೂರಿಯನ್‌ನಲ್ಲಿ ಇನಿಂಗ್ಸ್ ಸೋಲಿನ ಆಘಾತಕ್ಕೊಳಗಾದ ಭಾರತವು ಈಗ ಸರಣಿಯಲ್ಲಿ ಸಮಬಲ ತೋರುವತ್ತು ಚಿತ್ತ ಹರಿಸಿದೆ. ಪ್ರಥಮ ಟೆಸ್ಟ್‌ನಲ್ಲಿ ‘ಶಾರ್ಟ್ ಬಾಲ್’ ಎದುರಿಸಲಾಗದೇ ಪರದಾಡಿ, ಇನಿಂಗ್ಸ್ ಹಾಗೂ 25 ರನ್‌ಗಳ ಅಂತರದ ನಿರಾಸೆಯ ಪ್ರಪಾತಕ್ಕೆ ಕುಸಿದ ‘ಮಹಿ’ ಬಳಗದವರ ಮುಖದಲ್ಲಿ ಮಂದಹಾಸದ ಮಿಂಚಿನ ಎಳೆಯೂ ಇಲ್ಲವಾಗಿದೆ. ಇಂಥ ಆತಂಕದ ನಡುವೆಯೇ ಮತ್ತೊಂದು ‘ಬಾಕ್ಸಿಂಗ್ ಡೇ’ ಟೆಸ್ಟ್‌ನಲ್ಲಿ ಹೋರಾಡಲು ಸಜ್ಜಾಗಿದೆ. ಆದರೆ ಕಿಂಗ್ಸ್‌ಮೇಡ್ ಕ್ರೀಡಾಂಗಣದಲ್ಲಿಯೂ ಭಾರತದ ಎದುರು ನಿರಾಸೆಯ ಇತಿಹಾಸವು ಭೂತಾಕಾರವಾಗಿ ಎದ್ದು ನಿಂತಿದೆ.



ಟೆಸ್ಟ್ ಗೆಲುವಿನ ಸಿಹಿಯೇ ಸಿಗದ ಕಿಂಗ್ಸ್‌ಮೇಡ್ ಅಂಗಳದಲ್ಲಿ ಗೆಲುವಿನ ಆಸೆಯ ಬೀಜ ಬಿತ್ತಿ ಬೆಳೆಯಬೇಕು. ಅದು ಸುಲಭ ಸಾಧ್ಯವಂತೂ ಅಲ್ಲ. ಪ್ರವಾಸಿಗಳನ್ನೆಲ್ಲಾ ನಿರ್ದಯವಾಗಿ ಬಗ್ಗುಬಡಿದಿರುವ ಆತಿಥೇಯರ ಎದುರು ಪ್ರಾಬಲ್ಯ ಮೆರೆಯುವುದು ‘ಹಗಲು ಕನಸು’ ಎನಿಸಿದರೂ ಅಚ್ಚರಿಯಿಲ್ಲ. ಆದರೂ ವಿಶ್ವ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ತುತ್ತತುದಿಯಲ್ಲಿ ನಿಂತಿರುವ ಮಹೇಂದ್ರ ಸಿಂಗ್ ದೋನಿ ನಾಯಕತ್ವದ ತಂಡವು ಅಚ್ಚರಿಯೊಂದನ್ನು ಸಾಧಿಸಬಹುದು! ಹೀಗೆ ಹೇಳುವುದು ಕೂಡ ಆಶಯದ ಎದೆಯಾಳದಿಂದ ಹೊರಹೊಮ್ಮಿದ ಧ್ವನಿ ಮಾತ್ರ.



ಇಮ್ಮಡಿ ಉತ್ಸಾಹದೊಂದಿಗೆ ಬೀಗುತ್ತಿರುವ ಗ್ರೇಮ್ ಸ್ಮಿತ್ ಮುಂದಾಳತ್ವದ ದಕ್ಷಿಣ ಆಫ್ರಿಕಾ ಪಡೆಯ ಬ್ಯಾಟ್ಸ್‌ಮನ್‌ಗಳು ನಡುಗುವಂತೆ ಬೌಲಿಂಗ್ ಮಾಡಿದರೆ ಮಾತ್ರ ಜಯವೆನ್ನುವ ಒಲವಿನ ಗೆಳತಿಯ ಕೈಹಿಡಿದು ನಲಿಯಲು ಸಾಧ್ಯ. ಆದ್ದರಿಂದ ಶನಿವಾರ ಆರಂಭವಾಗಲಿರುವ ಎರಡನೇ ಟೆಸ್ಟ್‌ನಲ್ಲಿ ಬೌಲರ್‌ಗಳು ನಿರ್ವಹಿಸಬೇಕಾದ ಪಾತ್ರ ದೊಡ್ಡದು. ಬ್ಯಾಟ್ಸ್‌ಮನ್‌ಗಳು ಕೂಡ ಬೌಲರ್‌ಗಳ ಮೇಲೆ ಒತ್ತಡ ಹೆಚ್ಚದಂತೆ ಎಚ್ಚರ ವಹಿಸಬೇಕು. ಅದರಲ್ಲಿಯೂ ಮೊದಲ ಇನಿಂಗ್ಸ್‌ನಲ್ಲಿ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಲ್ಲುವುದು ಅಗತ್ಯ ಮಾತ್ರವಲ್ಲ ಅನಿವಾರ್ಯವೂ ಆಗಿದೆ. ಪ್ರಥಮ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತ ಪೇರಿಸಿದರೆ, ಆನಂತರ ಸಂಕಷ್ಟದ ಹಾದಿ ಎದುರಾಗದು.



ಡೆಲ್ ಸ್ಟೇನ್ ಹಾಗೂ ಮಾರ್ನ್ ಮಾರ್ಕೆಲ್ ಎಸೆತಗಳನ್ನು ನಿಭಾಯಿಸಲು ತಕ್ಕ ತಂತ್ರ ರೂಪಿಸಿಕೊಂಡು ಆಡಲು ಕೋಚ್ ಗ್ಯಾರಿ ಕರ್ಸ್ಟನ್ ತಂತ್ರದ ಬಲೆಯನ್ನು ಹೆಣೆದಿರಬಹುದು. ಆದರೆ ಅದನ್ನು ಅಂಗಳದಲ್ಲಿ ಕಾರ್ಯರೂಪಕ್ಕೆ ತರುವುದೇ ಸವಾಲು. ಕರ್ಸ್ಟನ್ ಅವರಿಗೆ ದಕ್ಷಿಣ ಆಫ್ರಿಕಾದ ಎಲ್ಲ ಪಿಚ್‌ಗಳ ಗುಣವೇನು ಎನ್ನುವುದು ಗೊತ್ತು. ಆತಿಥೇಯ ತಂಡದ ಸತ್ವ ಹಾಗೂ ಕೊರತೆಯ ಅರಿವೂ ಇದೆ. ಅವರು ತಮ್ಮ ಅನುಭವದ ಬಲದಿಂದ ರೂಪಿಸಿದ ಪಂದ್ಯದ ತಂತ್ರವು ಸಕಾರಾತ್ಮಕ ಫಲ ನೀಡುವಂತೆ ಮಾಡುವ ಜವಾಬ್ದಾರಿ ಹೊತ್ತಿರುವದು ಭಾರತ ತಂಡದ ಆಟಗಾರರು.



ಮೊದಲ ಪಂದ್ಯದಲ್ಲಿನಂತೆ ಆರಂಭದಲ್ಲಿಯೇ ಕುಸಿತದ ಹಾದಿ ಹಿಡಿದು ಚಡಪಡಿಸಿದರೆ ಸರಣಿ ಸೋಲಿನ ಅಪಾಯ ತಪ್ಪಿದ್ದಲ್ಲ. ಈಗಾಗಲೇ ದಕ್ಷಿಣ ಆಫ್ರಿಕಾ 1-0ಯಲ್ಲಿ ಮುನ್ನಡೆ ಸಾಧಿಸಿದೆ. ಅಷ್ಟೇ ಅಲ್ಲ; ಡರ್ಬನ್‌ನಲ್ಲಿಯೇ ಸರಣಿ ವಿಜಯದ ಸಂಭ್ರಮ ಪಡೆಯುವ ಕನಸು ಕಂಡಿದ್ದಾರೆ ಈ ತಂಡದ ನಾಯಕ ಸ್ಮಿತ್. ಅವರ ಆಸೆ ಈಡೇರದಂತೆ ಮಾಡುವ ಸತ್ವವಂತೂ ಪ್ರವಾಸಿ ತಂಡದಲ್ಲಿದೆ. ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ವಿ.ವಿ.ಎಸ್.ಲಕ್ಷ್ಮಣ್ ಹಾಗೂ ದೋನಿ ಅವರಂಥ ಬ್ಯಾಟ್ಸ್‌ಮನ್‌ಗಳು ಇರುವಾಗ ಆತಂಕ ಪಡುವ ಅಗತ್ಯವಂತೂ ಇಲ್ಲ. ಆದರೆ ಈ ಅನುಭವಿಗಳ ಬಲವು ಎದುರಾಳಿ ಪಡೆಯ ಗೆಲುವಿನ ಆಸೆಯ ಅರಮನೆಯು ಕೊಚ್ಚಿಹೋಗುವ ತೆರೆಯಾಗಬೇಕು. ಆಗಲೇ ಇಲ್ಲಿ 1-1ರಲ್ಲಿ ಸರಣಿ ಸಮವಾಗುವ ಕಾಗದದ ಮೇಲಿನ ಲೆಕ್ಕಾಚಾರ ನಿಜವಾಗುತ್ತದೆ.



ಇಲ್ಲದಿದ್ದರೆ ಕಿಂಗ್ಸ್‌ಮೇಡ್‌ನಲ್ಲಿ ಭಾರತದ ಪಾಲಿಗೆ ಬಂದಿದ್ದು ನಿರಾಸೆ ಮಾತ್ರ ಎನ್ನುವ ಇತಿಹಾಸದ ಅಧ್ಯಾಯವು ಇನ್ನಷ್ಟು ಹಿಗ್ಗುತ್ತದೆ. ಭಾರತವು ಇಲ್ಲಿ 1992-93ರಲ್ಲಿ ಮಾತ್ರ ‘ಡ್ರಾ’ಕ್ಕೆ ಸಮಾಧಾನ ಪಟ್ಟಿತ್ತು. 1996-97 ಹಾಗೂ 2006-07ರಲ್ಲಿ ಕ್ರಮವಾಗಿ 328 ಹಾಗೂ 174 ರನ್‌ಗಳ ಅಂತರದಿಂದ ಪರಾಭವಗೊಂಡಿತ್ತು. ಮತ್ತೊಂದು ಅಂಥ ನಿರಾಸೆ ಕಾಡದಿದ್ದರೆ ಒಳಿತು!



ತಂಡಗಳು

ದಕ್ಷಿಣ ಆಫ್ರಿಕಾ: ಗ್ರೇಮ್ ಸ್ಮಿತ್ (ನಾಯಕ), ಅಲ್ವಿರೊ ಪೀಟರ್ಸನ್, ಹಾಶೀಮ್ ಆಮ್ಲಾ, ಜಾಕ್ ಕಾಲಿಸ್, ಅಬ್ರಹಾಮ್ ಡಿ ವೀಲಿಯರ್ಸ್, ಆ್ಯಶ್ವೆಲ್ ಪ್ರಿನ್ಸ್, ಮಾರ್ಕ್ ಬೌಷರ್, ಡೆಲ್ ಸ್ಟೇನ್, ಪಾಲ್ ಹ್ಯಾರಿಸ್, ಮಾರ್ನ್ ಮಾರ್ಕೆಲ್, ಲಾನ್‌ವಾಬೊ ತ್ಸೊತ್ಸೊಬೆ, ರಿಯಾನ್ ಮೆಕ್‌ಲಾರೆನ್, ಜೆನ್ ಪಾಲ್ ಡುಮಿನಿ ಹಾಗೂ ವಯ್ನೆ ಪರ್ನೆಲ್.

ಭಾರತ: ಮಹೇಂದ್ರ ಸಿಂಗ್ ದೋನಿ (ನಾಯಕ), ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿ.ವಿ.ಎಸ್.ಲಕ್ಷ್ಮಣ್, ಸುರೇಶ್ ರೈನಾ, ಹರಭಜನ್ ಸಿಂಗ್, ಜಹೀರ್ ಖಾನ್, ಇಶಾಂತ್ ಶರ್ಮ, ಎಸ್.ಶ್ರೀಶಾಂತ್, ಮುರಳಿ ವಿಜಯ್, ಚೆತೇಶ್ವರ ಪೂಜಾರ, ವೃದ್ಧಿಮಾನ್ ಸಹಾ, ಉಮೇಶ್ ಯಾದವ್, ಜೈದೇವ್ ಉಂದ್ಕಟ್ ಮತ್ತು ಪ್ರಗ್ಯಾನ್ ಓಜಾ.

ಅಂಪೈರ್‌ಗಳು:ಸ್ಟೀವ್ ಡೇವಿಸ್ (ಆಸ್ಟ್ರೇಲಿಯಾ) ಮತ್ತು ಅಸದ್ ರವೂಫ್ (ಪಾಕಿಸ್ತಾನ); ಮೂರನೇ ಅಂಪೈರ್:ಜಾನ್ ಕ್ಲೊಯಟ್ (ದಕ್ಷಿಣ ಆಫ್ರಿಕಾ).

ಮ್ಯಾಚ್ ರೆಫರಿ: ಆ್ಯಂಡಿ ಪೇಕ್ರಾಫ್ಟ್ (ಜಿಂಬಾಬ್ವೆ).

ದಿನದಾಟ ಮಧ್ಯಾಹ್ನ (ಭಾರತೀಯ ಕಾಲಮಾನ) 2.00ಕ್ಕೆ ಆರಂಭ.

ನೇರ ಪ್ರಸಾರ: ಟೆನ್ ಕ್ರಿಕೆಟ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.