ಶುಕ್ರವಾರ, ಮೇ 7, 2021
26 °C

ಸಯೀದ್ ಪ್ರಕರಣ: ಪಾಕ್ ತಿರುಗೇಟು:ಗಟ್ಟಿ ಸಾಕ್ಷ್ಯ ನೀಡಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ): ಮುಂಬೈ ದಾಳಿಯ ಹಿಂದೆ ಹಫೀಜ್ ಸಯೀದ್ ಕೈವಾಡವಿತ್ತು ಎಂಬುದಕ್ಕೆ ಸಾಕಷ್ಟು ಸಾಕ್ಷ್ಯ ಒದಗಿಸಲಾಗಿದೆ ಎಂಬ ಭಾರತದ ಹೇಳಿಕೆಯನ್ನು ಪಾಕಿಸ್ತಾನ ತಿರಸ್ಕರಿಸಿದೆ.ಹಫೀಜ್ ಕುರಿತಂತೆ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ನೀಡಿರುವ ಹೇಳಿಕೆಯನ್ನು ಅಲ್ಲಗಳೆದಿರುವ ಪಾಕಿಸ್ತಾನ ವಿದೇಶಾಂಗ ಸಚಿವಾಲಯ, ಭಾರತ ಯಾವುದೇ ಬಲವಾದ ಅಥವಾ ಮಹತ್ವದ ಸಾಕ್ಷ್ಯ ಒದಗಿಸಿಲ್ಲ ಎಂದು ತಿಳಿಸಿದೆ.`ಗಟ್ಟಿ ಸಾಕ್ಷ್ಯ ಇಲ್ಲದೇ ನಾವು ಕ್ರಮ ಕೈಗೊಳ್ಳುವಂತಿಲ್ಲ. ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿ ನಡೆಸಿದ ವಿಚಾರಣೆಯಿಂದ ಊಹಾಪೋಹಗಳಿಂದ ಏನೂ ಸಾಧ್ಯವಿಲ್ಲ. ಕಾನೂನು ಕ್ರಮ ಜರುಗಿಸಲು ಬಲವಾದ ಪುರಾವೆ ಬೇಕು ಎಂಬುದು ಭಾರತಕ್ಕೂ ಮನದಟ್ಟಾಗಿದೆ~ ಎಂದು ಪಾಕ್ ವಿದೇಶಾಂಗ ಇಲಾಖೆ ವಕ್ತಾರ ಅಬ್ದುಲ್ ಬಾಸಿತ್ ಹೇಳಿದ್ದಾರೆ.ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ವರದಿಗಾರರ ಜತೆ ಮಾತನಾಡಿದ್ದ ವಿದೇಶಾಂಗ ಸಚಿವ ಕೃಷ್ಣ, `ಗೃಹ ಸಚಿವ ಪಿ. ಚಿದಂಬರಂ ಪಾಕಿಸ್ತಾನಕ್ಕೆ ನೀಡಿದ್ದ ಮಾಹಿತಿಯಲ್ಲಿ, ಮುಂಬೈ ಮೇಲೆ ದಾಳಿಯಲ್ಲಿ ಸಯೀದ್ ಯಾವ ಪಾತ್ರ ವಹಿಸಿದ್ದ ಎಂಬ ಸೂಕ್ಷ್ಮ ವಿವರಗಳೆಲ್ಲ ಅಡಕಗೊಂಡಿದ್ದವು~ ಎಂದು ತಿಳಿಸಿದ್ದರು.

`ಇದ್ದ ಸಂಗತಿಯನ್ನು ನಿರಾಕರಿಸುವುದರಿಂದ ಅವರು ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ನ್ಯಾಯಾಂಗ ತನಿಖೆಯಿಂದ ಮಾತ್ರ ಸತ್ಯ ಹೊರಬೀಳಲು ಸಾಧ್ಯ~ ಎಂದೂ ಕೃಷ್ಣ ಹೇಳಿದ್ದರು.ಅಜ್ಮೀರ್‌ನ ಸೂಫಿ ದರ್ಗಾ ಕ್ವಾಜಾ ಮೊಯ್‌ನುದ್ದೀನ್ ಚಿಸ್ತಿಗೆ ಭೇಟಿ ನೀಡಲು ಇನ್ನೆರಡು ದಿನಗಳಲ್ಲಿ ಭಾರತಕ್ಕೆ ಆಗಮಿಸುತ್ತಿರುವ  ಪಾಕ್ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಅವರು ಪ್ರಧಾನಿ ಸಿಂಗ್ ಅವರನ್ನೂ ಭೇಟಿಯಾಗುವ ಕಾರ್ಯಕ್ರಮವಿದೆ. ಈ ಸಂದರ್ಭದಲ್ಲೇ ಹಫೀಜ್ ಕುರಿತಾಗಿ ಭಾರತ-ಪಾಕ್ ನಡುವೆ ಮಾತಿನ ಸಮರ ಆರಂಭವಾಗಿದೆ.ಆಂತರಿಕ ವಿಚಾರ: ಈ ಮಧ್ಯೆ ಪಾಕ್ ಪ್ರಧಾನಿ ಯುಸೂಫ್ ರಜಾ ಗಿಲಾನಿ, ಲಷ್ಕರ್-ಎ-ತೊಯ್ಬಾ ಸಂಸ್ಥಾಪಕ ಹಫೀಜ್ ಸಯೀದ್ ವಿಚಾರ ಪಾಕಿಸ್ತಾನದ ಆಂತರಿಕ ವಿಚಾರವಾಗಿದೆ. ಆತನ ವಿರುದ್ಧ ಬಲವಾದ ಸಾಕ್ಷ್ಯ ಕಂಡುಬಂದಲ್ಲಿ ಅದನ್ನು ಪಾಕ್‌ಗೆ ಒದಗಿಸಬೇಕು. ಇಲ್ಲಿ ಸ್ವತಂತ್ರ ನ್ಯಾಯಾಂಗವಿದೆ ಎಂದು ಹೇಳಿದ್ದಾರೆ.ಅಮೆರಿಕ ಜತೆಗಿನ ಸಂಬಂಧ ನಿರ್ಧರಿಸಲು ಪಾಕ್ ಸಂಸತ್ತು ಹೊಸ ಕಾನೂನು ರಚಿಸುತ್ತಿರುವ ಸಂದರ್ಭದಲ್ಲಿ ಹಫೀಜ್ ತಲೆ ಮೇಲೆ ಬಹುಮಾನ ಘೋಷಿಸಿರುವ ಆ ದೇಶದ ಕ್ರಮ ವಿಶ್ವಾಸಕ್ಕೆ ಭಂಗ ತರುವಂತಿದೆ ಎಂದೂ ಗಿಲಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಹೆಚ್ಚಿದ ಹಫೀಜ್ ವರ್ಚಸ್ಸು

ಇಸ್ಲಾಮಾಬಾದ್ (ಪಿಟಿಐ): ಪಾಕ್ ಮೇಲೆ ಒತ್ತಡ ಹೇರುವ ತಂತ್ರವಾಗಿ ಲಷ್ಕರ್ ಸಂಸ್ಥಾಪಕ ಹಫೀಜ್ ಸಯೀದ್ ತಲೆಗೆ ಅಮೆರಿಕ ಬಹುಮಾನ ಘೋಷಿಸಿದ್ದು, ಈ ಕ್ರಮ ಹಫೀಜ್ ಸಯೀದ್ ವರ್ಚಸ್ಸು ಹೆಚ್ಚಿಸುವಂತಿದೆ ಎಂದು ಪಾಕ್ ಪತ್ರಿಕೆಗಳು ಅಭಿಪ್ರಾಯಪಟ್ಟಿವೆ.ಪಾಕಿಸ್ತಾನ-ಅಮೆರಿಕ ಸಂಬಂಧ ಸಹಜ ಸ್ಥಿತಿಗೆ ಮರಳುವುದನ್ನು ವಿರೋಧಿಸುತ್ತಿರುವ ಕೆಲವರು ಇದನ್ನು ತಮ್ಮ ಅಗತ್ಯಕ್ಕೆ ಬಳಸಿಕೊಳ್ಳುವ ಅಪಾಯವಿದೆ. ಅಮೆರಿಕ ವಿರುದ್ಧದ ಪ್ರತಿಭಟನೆಗೆ ಹಫೀಜ್ ಸಂಕೇತವಾಗುವ ಸಾಧ್ಯತೆಯಿದೆ ಎಂದು `ಡಾನ್~ ಪತ್ರಿಕೆ ಸಂಪಾದಕೀಯದಲ್ಲಿ ಹೇಳಿದೆ.

ಈ ಮಧ್ಯೆ ಶುಕ್ರವಾರ ಪಾಕಿಸ್ತಾನದಲ್ಲಿ ಹಫೀಜ್ ಬೆಂಬಲಿಗರು ಅಮೆರಿಕ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.