ಮಂಗಳವಾರ, ಮೇ 11, 2021
27 °C

ಸರಕು ಒಣಗಿಸುವ ಯಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಮ್ಮ ದೈನಂದಿನ ಜೀವನದಲ್ಲಿ ಅನೇಕ ಬಗೆಯ  ವಸ್ತುಗಳನ್ನು ಒಣಗಿಸಿ ಉಪಯೋಗಿಸುವುದು ಸಾಮಾನ್ಯ. ಅನೇಕ ಸಂದರ್ಭಗಳಲ್ಲಿ ಇದು ಅನಿವಾರ್ಯವೂ ಹೌದು. ಮಳೆಗಾಲದಲ್ಲಿ ಇಂತಹ ವಸ್ತುಗಳನ್ನು ಒಣಗಿಸುವುದಕ್ಕೆ ಒಳ್ಳೆಯ ಸೌಲಭ್ಯಗಳು ಇಲ್ಲದಿರುವುದರಿಂದ ಶ್ರಮ, ಖರ್ಚು, ಸಮಯ ಹಾಳಾಗುತ್ತದೆ.ಮೂಡುಬಿದಿರೆ ಬನ್ನಡ್ಕದ ಎಸ್.ಕೆ.ಎಫ್ ಇಂಡಸ್ಟ್ರೀಸ್ ಇಂತಹ ವಸ್ತುಗಳನ್ನು ಒಣಗಿಸುವುದಕ್ಕೆ `ಎಸ್‌ಕೆಎಫ್ ಸನ್‌ರೈಸ್ ಮಲ್ಟಿ ಯುಟಿಲಿಟಿ ಡ್ರೈಯರ್~  ಎಂಬ ವಿನೂತನ ಮಾದರಿಯ ಯಂತ್ರ ಆವಿಷ್ಕರಿಸಿದೆ. ಮಳೆಗಾಲದಲ್ಲಿ ಮುಖ್ಯವಾಗಿ  ಆಸ್ಪತ್ರೆ, ವಸತಿನಿಲಯಗಳಲ್ಲಿ  ಬಟ್ಟೆ ಒಣಗಿಸುವುದು ದೊಡ್ಡ ಸಮಸ್ಯೆ.

 

ಈ ಯಂತ್ರದ ಮೂಲಕ ತೊಳೆದ  ಬಟ್ಟೆಗಳನ್ನು ಕಡಿಮೆ ಅವಧಿಯಲ್ಲಿ ಸುಲಭವಾಗಿ ಒಣಗಿಸಬಹುದು. ಬಟ್ಟೆಗಳನ್ನು ಒಣಗಿಸಿ ಇಸ್ತ್ರಿ ಹಾಕಿ ಕ್ಲುಪ್ತ ಸಮಯದಲ್ಲಿ ಗ್ರಾಹಕರಿಗೆ ಹಿಂತಿರುಗಿಸಲು ಲಾಂಡ್ರಿ ಅಂಗಡಿಯವರಿಗೂ ಈ ಯಂತ್ರ ಹೆಚ್ಚು ಉಪಯುಕ್ತ.ಹಣ್ಣು ಹಂಪಲು, ಕೊಬ್ಬರಿ. ಶುಂಠಿ, ಅರಿಸಿನ, ಕರಿಮೆಣಸು, ರಬ್ಬರ್ ಇವುಗಳನ್ನು ಒಣಗಿಸಿ ಲಾಭ ಪಡೆಯಲು ಕೃಷಿಕರಿಗೆ, ಹಪ್ಪಳ, ಸಂಡಿಗೆ, ಸೇವಿಗೆ ಮತ್ತು ಎಲ್ಲಾ ಬಗೆಯ ಬೀಜಗಳನ್ನು ಒಣಗಿಸುವ ಮೂಲಕ ಗುಡಿಕೈಗಾರಿಕೆಗಳಿಗೂ ಈ ಯಂತ್ರ ಹೆಚ್ಚು ಉಪಯುಕ್ತವಾಗಲಿದೆ.ಆಯುರ್ವೇದ ಔಷಧಿಗಳಿಗೆ ಬೇಕಾದ ಚಕ್ಕೆ, ಎಲೆ, ಮೂಲಿಕೆ, ಗುಳಿಗೆಗಳನ್ನು ಒಣಗಿಸುವುದಕ್ಕೆ ಕಷಾಯ, ಲೇಹ್ಯಗಳ ಬಾಟಲಿಗಳು ಮತ್ತು ಪೊಟ್ಟಣಗಳು ಉಷ್ಣಾಂಶದ ವ್ಯತ್ಯಾಸಕ್ಕೆ ಹಾಳಾಗದೆ ತನ್ನ ಸತ್ವ ಉಳಿಸಿಕೊಳ್ಳಲು ಈ ಯಂತ್ರ  ಉಪಯೋಗಿಸಬಹುದು.ಇನ್ನು ಮಾಂಸಾಹಾರಿಗಳಿಗೆ ಹಾಗೂ ಕುಶಲಕರ್ಮಿಗಳಿಗೂ ಈ ಯಂತ್ರದಿಂದ ಉಪಯೋಗವಿದೆ. ಸಾಮಾನ್ಯವಾಗಿ ಹಸಿ ಮೀನುಗಳನ್ನು ಬಸಿಲಿನಲ್ಲಿ ಒಣಗಿಸಿ ಒಣಮೀನುಗಳನ್ನಾಗಿ ಪರಿವರ್ತಿಸಲಾಗುತ್ತದೆ. ಈ ಯಂತ್ರದ ಮೂಲಕ ಮೀನುಗಳನ್ನು ಕೂಡ ಒಣಗಿಸಬಹುದು.ಮರದ ತುಂಡುಗಳನ್ನು ಕೂಡ ಈ ಯಂತ್ರದಿಂದ ಒಣಗಿಸಲು ಸಾಧ್ಯವಿದೆ. ಹೀಗೆ ಎಲ್ಲಾ ವರ್ಗಗಳ ಜನರಿಗೂ ಅನುಕೂಲವಾಗುವ ರೀತಿಯಲ್ಲಿ ಎಸ್.ಕೆ.ಎಫ್ ಐಟಿಐ ವಿದ್ಯಾರ್ಥಿಗಳು ಈ ಯಂತ್ರವನ್ನು ಆವಿಷ್ಕರಿಸಿದ್ದಾರೆ.ನಾಲ್ಕು ಶ್ರೇಣಿಯಲ್ಲಿ ಸನ್‌ರೈಸ್ ಮಲ್ಟಿ ಯುಟಿಲಿಟಿ ಡ್ರೈಯರ್ ಅನ್ನು ಆವಿಷ್ಕರಿಸಲಾಗಿದೆ. ಇವುಗಳ ಬೆಲೆಯು  ಕ್ರಮವಾಗಿ ರೂ.15 ಸಾವಿರ, ರೂ. 45 ಸಾವಿರ, ರೂ. 1.15ಲಕ್ಷ   ಮತ್ತು ರೂ. 1.35 ಲಕ್ಷ  ಆಗಿರುತ್ತದೆ.ಈ ಯಂತ್ರ ಚಾಲನೆಗೆ ವಿದ್ಯುತ್ ಶಕ್ತಿ ಬೇಕಾಗುವುದಿಲ್ಲ. ಕಟ್ಟಿಗೆ, ಕೃಷಿ ತ್ಯಾಜ್ಯಗಳನ್ನು ಕೂಡ ಬಳಸಿ ಯಂತ್ರ ಚಾಲನೆ ಮಾಡಬಹುದು. ವಿವಿಧ ರೀತಿಯ ತೇವಾಂಶಗಳನ್ನು ಗುರುತಿಸಿ ಅವುಗಳಿಗೆ ಅನುಗುಣವಾದ ಉಷ್ಣತೆ  ಒದಗಿಸಲು ಸ್ವಯಂಚಾಲಿತ ವ್ಯವಸ್ಥೆ  ಮಾಡಲಾಗಿದೆ.ಆಹಾರ ಧಾನ್ಯ ಮತ್ತು ವಾಣಿಜ್ಯೋತ್ಪನ್ನಗಳ ಸಂಸ್ಕರಣಾ ಯಂತ್ರಗಳ ನಿರ್ಮಾಣ, ವಿನ್ಯಾಸ ಮತ್ತು ಮಾರಾಟಗಳಲ್ಲಿ ಒಳ್ಳೆಯ ಹೆಸರು ಪಡೆದಿರುವ ಮೂಡುಬಿದಿರೆಯ ಎಸ್.ಕೆ.ಎಫ್ ಸಂಸ್ಥೆಗಳ ಮಾರ್ಗದರ್ಶನದಲ್ಲಿ ಇಲ್ಲಿನ ಐಟಿಐ ತಾಂತ್ರಿಕ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಈಗಾಗಲೇ ಹಲವಾರು ಆವಿಷ್ಕಾರಗಳನ್ನು ಮಾಡಿ ಪ್ರಶಸ್ತಿಗಳನ್ನು ಪಡೆದಿರುತ್ತಾರೆ.

 

ಎಸ್.ಕೆ.ಎಫ್‌ನಲ್ಲಿ ಆವಿಷ್ಕರಿಸಿದ `ಸನ್‌ರೈಸ್ ಮಲ್ಟಿ ಯುಟಿಲಿಟಿ ಡ್ರೈಯರ್~ ರಾಜ್ಯದಲ್ಲೆ ಪ್ರಥಮ ಎಂದು ಸಂಸ್ಥೆಯ ಅಧ್ಯಕ್ಷ ರಾಮಕೃಷ್ಣ ಆಚಾರ್ ಅಭಿಪ್ರಾಯಪಡುತ್ತಾರೆ.  ಮಾಹಿತಿಗೆ    08258-206095 ಸಂಪರ್ಕಿಸಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.