ಸರಕು ನಿರ್ವಹಣೆಗೆ ಆಧುನಿಕ ಶಿಕ್ಷಣ

7

ಸರಕು ನಿರ್ವಹಣೆಗೆ ಆಧುನಿಕ ಶಿಕ್ಷಣ

Published:
Updated:
ಸರಕು ನಿರ್ವಹಣೆಗೆ ಆಧುನಿಕ ಶಿಕ್ಷಣ

ಅನಾದಿ ಕಾಲದಿಂದಲೂ ಸರಕು ಮತ್ತು ಅವುಗಳನ್ನು ಸಂಗ್ರಹಿಸುವ ಉಗ್ರಾಣಗಳ ನಿರ್ವಹಣೆ ಬಹಳ ದೊಡ್ಡ ಹೊಣೆಗಾರಿಕೆ. ಭಾರತದಲ್ಲಿದ್ದ ನೂರಾರು ರಾಜ ಮನೆತನದ ಉಗ್ರಾಣಗಳಿಗೆ `ಇಲಿ~ಗಳು ಬಿಲ ತೋಡದಂತೆ ತಡೆಯುವ ಸಾಮರ್ಥ್ಯವಿತ್ತು. ಅಷ್ಟು ಮಾತ್ರವಲ್ಲ, ಉಗ್ರಾಣದ ಒಳ ಬರುವ ಹಾಗೂ ಹೊರ ಹೋಗುವ ವಸ್ತುಗಳ ನಿರ್ವಹಣೆಯ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಿದ ಅನುಭವ ಈ ಮಣ್ಣಿನೊಳಗೆ ಹಾಸು ಹೊಕ್ಕಾಗಿದೆ.ಭಾರತದ ನಿರ್ವಹಣಾ ಸಾಮರ್ಥ್ಯವನ್ನು ಅರಿತ ವಿದೇಶಿ ಬಹುರಾಷ್ಟ್ರೀಯ ಕಂಪೆನಿಗಳು ತಮ್ಮ ಸರಕು ಸಂಗ್ರಹಣೆ ನಿರ್ವಹಣೆ ಹೊಣೆಯನ್ನು ಭಾರತಕ್ಕೆ ಹೊರ ಗುತ್ತಿಗೆ ಆಧಾರದ ಮೇಲೆ ನೀಡಲು ಮುಂದಾಗಿವೆ. ಇಷ್ಟೇ ಅಲ್ಲದೆ ವಿದೇಶಿ ನೇರ ಬಂಡವಾಳ ಹೂಡಿಕೆ ಜಾರಿಗೆ ಬಂದ ನಂತರ ಭಾರತದಲ್ಲಿ ಸರಕು ನಿರ್ವಹಣೆ ಹಾಗೂ ಸಾಮಗ್ರಿ ಪೂರೈಕೆ ಜಾಲದ  ಕ್ಷೇತ್ರದಲ್ಲಿ ಒಂದು ಕೋಟಿ ಉದ್ಯೋಗಗಳು ಸೃಷ್ಟಿಯಾಗಬಹುದು ಎನ್ನುವ ಕೇಂದ್ರ ಸಚಿವರ ಮಾತು ಯುವ ಅಭ್ಯರ್ಥಿಗಳು ಆಶಾಗೋಪುರ ಏರುವಂತೆ ಮಾಡಿದೆ.ಹೀಗೆ ಬರುತ್ತಿರುವ ಈ ವಿಪುಲ ಅವಕಾಶಗಳನ್ನು ಸಮರ್ಥವಾಗಿ ನಿಭಾಯಿಸುವ ಹಾಗೂ ಉದ್ಯೋಗ ಅರಸುತ್ತಿರುವ ಯುವಜನತೆಗೆ ಅದರ ಸದುಪಯೋಗ ದೊರಕಿಸುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಲು `ಭಾರತೀಯ ಸರಕು ನಿರ್ವಹಣೆ ಸಂಸ್ಥೆ~ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮೆಟೀರಿಯಲ್  ಮ್ಯಾನೇಜ್‌ಮೆಂಟ್- ಐಐಎಂಎಂ) ಸಜ್ಜಾಗಿದೆ. 1975ರಲ್ಲಿ ಆರಂಭವಾದ ಈ ಸಂಸ್ಥೆಯ ಜವಾಬ್ದಾರಿ ಈಗ ಕನ್ನಡಿಗ ಸಿ.ಸುಬ್ಬುಕೃಷ್ಣ ಅವರದ್ದು.ವಿದೇಶಿ ನೇರ ಬಂಡವಾಳ ಹೂಡಿಕೆಯ ಹಿನ್ನೆಲೆಯಲ್ಲಿ ಸೃಷ್ಟಿಯಾಗಲಿರುವ ಉದ್ಯೋಗವನ್ನು ನಿಭಾಯಿಸುವುದಕ್ಕಾಗಿ ಹೆಚ್ಚು ಹೆಚ್ಚು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಪದಾರ್ಥಗಳ ಖರೀದಿ, ದಾಸ್ತಾನು ತಂತ್ರಜ್ಞಾನ, ಸಾಗಾಟ, ಖರೀದಿದಾರರ ನಿರ್ವಹಣಾ ವ್ಯವಸ್ಥೆ ಇತ್ಯಾದಿ ಕೋರ್ಸ್‌ಗಳನ್ನು ಸಂಸ್ಥೆ ನಡೆಸುತ್ತಿದೆ. ಮಹಾನಗರಗಳು ಮಾತ್ರವಲ್ಲದೆ ಪಟ್ಟಣ ಪ್ರದೇಶಗಳಲ್ಲೂ ರಿಟೇಲ್ ವಹಿವಾಟು ಜನಪ್ರಿಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಅಂಚೆ, ದೂರ ಶಿಕ್ಷಣದ ಮೂಲಕವೂ ಸರಕು ನಿರ್ವಹಣಾ ತರಬೇತಿ ನೀಡಲಿದೆ. ಕುರಿತು ಐಐಎಂಎಂ ನೀಡುತ್ತಿರುವ ಕೋರ್ಸ್‌ಗಳಿಗೆ ಕರ್ನಾಟಕ ರಾಜ್ಯ ಮುಕ್ತ ವಿವಿ, ಪಿಟಿಯು, ಮದ್ರಾಸ್ ವಿವಿ ಹಾಗೂ ಭೋಪಾಲದ ಎಂ.ಪಿ. ಭೋಜ್ ಮುಕ್ತ ವಿವಿ ಮಾನ್ಯತೆ ಲಭಿಸಿದೆ. ಇವುಗಳಲ್ಲಿ ಮುಖ್ಯವಾಗಿ ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್ ಹಾಗೂ ಮೆಟೀರಿಯಲ್ಸ್ ಮ್ಯಾನೇಜ್‌ಮೆಂಟ್‌ನಲ್ಲಿ ಎಂಬಿಎ ಕೋರ್ಸ್‌ಗಳನ್ನು ನಡೆಸಲಾಗುತ್ತಿದೆ. ಇನ್ನು ಇದೇ ಕ್ಷೇತ್ರದಲ್ಲಿ ಸಂಶೋಧನೆ ನಡೆಸಲು ಅಮೆರಿಕದ ವೆಲ್ಟೆಕ್ ವಿಶ್ವವಿದ್ಯಾಲಯ ಪದವಿ ನೀಡಲಿದೆ.ಸರಕು ನಿರ್ವಹಣಾ ಕ್ಷೇತ್ರದಲ್ಲಿ ಐಐಎಂಎಂ ನಡೆಸುತ್ತಿರುವ ಡಿಪ್ಲೊಮಾ ವೃತ್ತಿಪರ ಶಿಕ್ಷಣಕ್ಕೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ, ಭಾರತೀಯ ನೌಕಾಪಡೆಯ ಮಾನ್ಯತೆ ದೊರಕಿದೆ. ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‌ಗೆ ರಕ್ಷಣಾ ಇಲಾಖೆ ಮಾನ್ಯತೆ ಇದೆ.ರಿಟೇಲ್ ಕ್ಷೇತ್ರವನ್ನು ಪ್ರವೇಶಿಸಲು ಇಚ್ಛಿಸುವ ದ್ವಿತೀಯ ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಈ ಕೋರ್ಸ್‌ಗಳು ಅನುಕೂಲಕರ. ಸಾರ್ವಜನಿಕ ಸಂಗ್ರಹಣೆಯಲ್ಲಿ ಡಿಪ್ಲೊಮ ಪದವಿ, ಲಾಜಿಸ್ಟಿಕ್ಸ್ ನಿರ್ವಹಣೆಯಲ್ಲಿ ಸ್ನಾತಕೋತ್ತರ ಡಿಪ್ಲೊಮ ಇತ್ಯಾದಿ        ಕೋರ್ಸ್‌ಗಳನ್ನು ಸಂಸ್ಥೆ ನಡೆಸುತ್ತಿದೆ.ಇವುಗಳೊಂದಿಗೆ ನಿರ್ಮಾಣ, ಔಷಧಿ, ವಸ್ತ್ರ, ವಾಹನ, ಆರೋಗ್ಯ ರಕ್ಷಣೆ, ಆತಿಥ್ಯ ಇತ್ಯಾದಿ ಕ್ಷೇತ್ರಗಳಿಗೆ ಅನುಕೂಲವಾಗುವ ವಿಶೇಷ ಅಲ್ಪಾವಧಿ ಕೋರ್ಸ್ ಆರಂಭಿಸಿದೆ. ಇದೇ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿವಿಧ ಕಂಪೆನಿಗಳಲ್ಲಿ ಉನ್ನತ ಹ್ದ್ದುದೆಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳೇ ಬೋಧಕರಾಗಿರುವುದು ಇಲ್ಲಿನ ವಿಶೇಷ. ಹೀಗಾಗಿ ಆಯಾಯ ಕ್ಷೇತ್ರದಲ್ಲಿನ ಕಾಲ ಕಾಲದ ಬೆಳವಣಿಗೆಗಳು ಹಾಗೂ ನಿರ್ವಹಣೆ ಕುರಿತು ತಜ್ಞರು ತಮ್ಮ ಅನುಭವಗಳನ್ನು ಹಂಚಿಕೊಳ್ಳುವುದರ ಜತೆಗೆ ಪಠ್ಯದ ವಿಷಯಗಳನ್ನೂ ಹೇಳಲಿದ್ದಾರೆ.ಐಐಎಂಎಂನ ಸದಸ್ಯರ ಸಂಖ್ಯೆ 8 ಸಾವಿರ. ಇವರಲ್ಲಿ ಹೆಚ್ಚಿನವರು ದೇಶದ ವಿವಿಧ ಕಂಪೆನಿ ಹಾಗೂ ಸಂಸ್ಥೆಗಳ ಉದ್ಯೋಗಿಗಳು. ಸಂಸ್ಥೆ ದೇಶಾದ್ಯಂತ 19 ವೃತ್ತಗಳಲ್ಲಿ 45 ಶಾಖೆಗಳನ್ನು ಹೊಂದಿದೆ. ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಸ್ವತಃ ಸದಸ್ಯರ ಜ್ಞಾನ ಹೆಚ್ಚಿಸಿಕೊಳ್ಳಲು ಸದಸ್ಯರಿಗಾಗಿಯೇ ಪ್ರತಿ ತಿಂಗಳು ಉಪನ್ಯಾಸ ಹಾಗೂ ಕಾರ್ಯಾಗಾರ ಹಮ್ಮಿಕೊಳ್ಳುತ್ತಿದೆ.ಕೋರ್ಸ್‌ಗಳ ವಿವರ

ಐಐಎಂಎಂ ಕೋರ್ಸ್‌ಗಳಿಗೆ ಪ್ರತಿ ವರ್ಷ ಜನವರಿ ಹಾಗೂ ಜುಲೈ ತಿಂಗಳಲ್ಲಿ ಅರ್ಜಿ ಆಹ್ವಾನಿಸಲಾಗುವುದು. ಸಾಮಗ್ರಿ ನಿರ್ವಹಣೆಯಲ್ಲಿ ಪದವಿ ಪಡೆಯಲು ಮಾನ್ಯತೆ ಪಡೆದ ವಿವಿವಿಯಿಂದ ಯಾವುದೇ ಪದವಿ ಅಥವಾ ಎಂಜಿನಿಯರಿಂಗ್, ತಂತ್ರಜ್ಞಾನ ಅಥವಾ ನಿರ್ವಹಣೆಯಲ್ಲಿ ಡಿಪ್ಲೊಮದೊಂದಿಗೆ ಎರಡು ವರ್ಷಗಳ ಅನುಭವ ಕಡ್ಡಾಯ. ಸಂಜೆ ಕಾಲೇಜಾದರೆ ಎರಡು ವರ್ಷ ಹಾಗೂ ದೂರ ಶಿಕ್ಷಣದ ಮೂಲಕವಾದರೆ ಮೂರು ವರ್ಷಗಳ ಕೋರ್ಸ್ ಇದು. ಇದೇ ವಿಭಾಗದಲ್ಲಿ ಸ್ನಾತಕೋತ್ತರ ಡಿಪ್ಲೊಮಕ್ಕೆ ಪದವಿಯಲ್ಲಿ ಕನಿಷ್ಠ ಶೇ 50ರಷ್ಟು ಅಂಕಗಳು ಹಾಗೂ ಇದೇ ಕ್ಷೇತ್ರದಲ್ಲಿ ಎರಡು ವರ್ಷಗಳ ಅನುಭವ ಕಡ್ಡಾಯ. ಪಿಜಿಡಿಎಲ್‌ಎಂ, ಡಿಆರ್‌ಎಸ್‌ಸಿಎಂ, ಡಿಎಸ್‌ಎಂ, ಡಿಐಟಿ, ಜಿಡಿಪಿಪಿ ಒಂದು ವರ್ಷದ ಕೋರ್ಸ್‌ಗಳಾಗಿವೆ. ಈ ಎಲ್ಲಾ ಕೋರ್ಸ್‌ಗಳಿಗೆ ದಾಖಲಾಗಲು ಪ್ರವೇಶ ಪರೀಕ್ಷೆಯನ್ನು ವಿದ್ಯಾರ್ಥಿಗಳು ಎದುರಿಸಬೇಕು.`ಇತ್ತೀಚೆಗೆ ಐಟಿ-ಬಿಟಿ, ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ರಾಸಾಯನಿಕ, ಪ್ಲಾಸ್ಟಿಕ್ ಇತ್ಯಾದಿ ಕಾರ್ಖಾನೆಗಳು, ಮುದ್ರಣ, ಗೃಹೋಪಯೋಗಿ ವಸ್ತುಗಳ ಮಳಿಗೆಗಳು ಇತ್ಯಾದಿಗಳ ಸರಕು, ದಾಸ್ತಾನು ವ್ಯವಸ್ಥೆ ನಿರ್ವಹಿಸುವುದು ಸುಲಭದ ಮಾತಲ್ಲ. ಹೀಗಾಗಿ ಐಐಎಂಎಂ ಇ-ಕಲಿಕೆ ಮೂಲಕ ಆಧುನಿಕ ಶಿಕ್ಷಣಕ್ಕೆ ಅಡಿ ಇಟ್ಟಿದೆ. ಜತೆಗೆ ಐಐಎಂಎಂನ ಕೋರ್ಸ್‌ಗಳಿಗೆ ಬೆಂಗಳೂರನ್ನೇ ಕೇಂದ್ರ ಸ್ಥಾನವನ್ನಾಗಿ ಮಾಡುವ ಉದ್ದೇಶವೂ ಇದೆ~ ಎಂದು ಸಿ.ಸುಬ್ಬುಕೃಷ್ಣ ಹೇಳುತ್ತಾರೆ.ಸಾಮಗ್ರಿ ನಿರ್ವಹಣೆ ಕ್ಷೇತ್ರ ಪ್ರವೇಶಿಸ ಬಯಸುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಐಐಎಂಎಂ ದೇಶದಲ್ಲಿ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಹಾಗೂ ಕೇಂದ್ರ ಎಂಬ ಐದು ವಿಭಾಗಗಳನ್ನು ಸ್ಥಾಪಿಸಿದೆ. ಕರ್ನಾಟಕದ ಶಾಖೆಗಳು ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆ, ಹುಬ್ಬಳ್ಳಿಯ ಗಣೇಶ್‌ಪೇಟೆಯ ಲಕ್ಷ್ಮೀ ಬಾಲಕೃಷ್ಣ ಚೌಕ, ಮಂಗಳೂರಿನ ಕುತ್ತೆತ್ತೂರ್, ಮೈಸೂರಿನ ಹೂಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿವೆ.ಮಾಹಿತಿಗೆ: ಬೆಂಗಳೂರು (080-25327251), ಹುಬ್ಬಳ್ಳಿ (0836-2264699), ಮಂಗಳೂರು (0824-2270775), ಮೈಸೂರು (0821-4282124), ಜಾಲತಾಣ: www.iimm.org   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry