`ಸರಕು ಪೂರೈಕೆಯಾಗಿಲ್ಲ, ಬಿಲ್ ಮಾತ್ರ ಬಾಕಿ'

7
ಭದ್ರಾವತಿ: ವಿಐಎಸ್‌ಎಲ್ ವಂಚನೆ ಪ್ರಕರಣ

`ಸರಕು ಪೂರೈಕೆಯಾಗಿಲ್ಲ, ಬಿಲ್ ಮಾತ್ರ ಬಾಕಿ'

Published:
Updated:

ಭದ್ರಾವತಿ: `ಪಿಗ್ ಐರನ್ ಸರಬರಾಜು ಆಗಿಲ್ಲ ಆದರೆ ಆ ಕಂಪೆನಿಗೆ  ಬಿಲ್ ಬಾಕಿ ಇದೆ' ಹೌದು! ಇದು ವಿಚಿತ್ರ ಎನಿಸಿದರೂ ಸತ್ಯ. ವಿಐಎಸ್‌ಎಲ್ ಮಾರುಕಟ್ಟೆ ವಿಭಾಗದಲ್ಲಿ ನಡೆದಿರುವ ಅವ್ಯವಹಾರ ಕುರಿತು ತನಿಖೆ ನಡೆಸಿರುವ ಪೊಲೀಸರಿಗೆ ಇಂಥ ಹಲವು ಅಚ್ಚರಿಯ ಸಂಗತಿಗಳು ಸಿಗುತ್ತಿವೆ.ಜನವರಿ 2013 ರಿಂದ ಜೂನ್ 6ರವರೆಗೆ ಮಾರಾಟ ಮಾಡಿದ ಪಿಗ್ ಐರನ್ (ಬೀಡುಕಬ್ಬಿಣ) ವಹಿವಾಟಿನಲ್ಲಿ ಕೋಟ್ಯಂತರ ರೂಪಾಯಿ ಬಾಕಿ ಉಳಿದಿರುವ ಕುರಿತು ಲೆಕ್ಕಪತ್ರ ವಿಭಾಗ ನೀಡಿದ ವರದಿ ಆಧರಿಸಿ ಒಬ್ಬ ಅಧಿಕಾರಿ ಹಾಗೂ ಐದು ಕಂಪೆನಿಗಳ ವಿರುದ್ಧ ನ್ಯೂಟೌನ್ ಠಾಣೆಯಲ್ಲಿ ದೂರು ದಾಖಲಾಗಿತ್ತು.2011ರ ನವೆಂಬರ್‌ನಲ್ಲಿ ವಿಐಎಸ್‌ಎಲ್ ಆಡಳಿತ ವರ್ಗ ಪಿಗ್‌ಐರನ್ ಸ್ಲ್ಯಾಗ್, ಸ್ಕ್ಯಾಪ್ ಹೀಗೆ ಕೆಲವು ವಸ್ತುಗಳನ್ನು ಬಿಟ್ಟು ಉಳಿದೆಲ್ಲವನ್ನು ಉಕ್ಕುಪ್ರಾಧಿಕಾರ ಕೋಲ್ಕತ್ತಾ ಸೆಂಟ್ರಲ್ ಮಾರ್ಕೆಟಿಂಗ್ ಸಂಸ್ಥೆಗೆ ನೀಡಿತ್ತು.871.5 ಟನ್ ಮಾರಾಟ: ಡಿ.2012 ರಿಂದ ಆ. 2013ರವರೆಗೆ ಇಲ್ಲಿನ ಮಾರುಕಟ್ಟೆ ವಿಭಾಗ ಟನ್ನಿಗೆ ರೂ. 31,000 ದರದಂತೆ ಒಟ್ಟು 871.5ಟನ್ ಪಿಗ್‌ಐರನ್ (ಬೀಡು ಕಬ್ಬಿಣ) ಮಾರಾಟ ಮಾಡಿದೆ.ಸಾಲದ ರೂಪದಲ್ಲಿ ನಡೆದಿರುವ ಈ ವಹಿವಾಟಿನಲ್ಲಿ ರೂ. 5,33,34,963 ಮೌಲ್ಯದ ವಸ್ತು ಮಾರಾಟವಾಗಿದ್ದು, ಅದರಲ್ಲಿ ರೂ.  2,62,07,190ರಷ್ಟು ಮೊತ್ತ ಕಂಪೆನಿಗೆ ಸಂದಾಯವಾಗಿದ್ದು, ಬಾಕಿ ರೂ.  2,71,27,773 ಇದೆ.ಬಾಕಿ ಉಳಿಕೆಯ ದೂರಿನಲ್ಲಿ ದಾಖಲಾಗಿರುವ ಪ್ರಕಾರ, ಶಿವಮೊಗ್ಗ ನಾರಾಯಣ ಸ್ಟೀಲ್ಸ್ ರೂ.  78 ಲಕ್ಷ, ಶ್ರೀಯಾ ಮಾರ್ಕೆಟಿಂಗ್ ರೂ. 93 ಲಕ್ಷ, ಭುವನ ಇಂಡಸ್ಟ್ರೀಸ್ ರೂ. 51.5 ಲಕ್ಷ, ಬಳ್ಳಾರಿ ಪಾರ್ಶ್ವನಾಥ ಮೈನ್ಸ್ ಅಂಡ್ ಮಿನರಲ್ಸ್ ರೂ.  7ಲಕ್ಷ ಹಾಗೂ ಬೆಂಗಳೂರು ವಿಸ್ಮಯ ಮೆಟಲ್ಸ್ ರೂ.  40 ಲಕ್ಷ ಬಾಕಿ ಉಳಿಸಿಕೊಂಡಿವೆ.ಸಪ್ಲೈ ಆಗಿಲ್ಲ: ದೂರಿನಲ್ಲಿ ಹೇಳಿರುವ ಎರಡು ಕಂಪೆನಿಗಳಿಗೆ ಯಾವುದೇ ಪಿಗ್‌ಐರನ್ ಮಾರಾಟವಾಗಿಲ್ಲ. ಜತೆಗೆ ಆ ಕಂಪೆನಿಗಳು ಇಂಡೆಂಟ್ ಸಹ ಹಾಕಿಲ್ಲ ಎಂಬ ಅಂಶ ತನಿಖೆಯಿಂದ ಬೆಳಕಿಗೆ ಬಂದಿದೆ ಎನ್ನಲಾಗಿದೆ.ಅದರ ಜತೆಗೆ ಇನ್ನೆರಡು ಕಂಪೆನಿಗಳು ತಾವು ಪಡೆದ ಮಾಲಿಗೆ ಪೂರ್ಣ ಹಣ ಸಂದಾಯ ಮಾಡಿರುವ ಅಂಶ ಬೆಳಕಿಗೆ ಬಂದಿದ್ದು, ಒಂದು ಕಂಪೆನಿ ಮಾತ್ರ ಬಾಕಿ ಉಳಿಸಿಕೊಂಡಿದೆ ಎಂದ ಪ್ರಾಥಮಿಕ ಮಾಹಿತಿ ಮೂಲಕ ತಿಳಿದಿರುವುದಾಗಿ ಮೂಲಗಳು ಹೇಳಿವೆ.

ಕಾರ್ಖಾನೆಯಿಂದ ಕಬ್ಬಿಣ ಹೊರ ಹೋಗಿರುವುದು ಮಾತ್ರ ದಾಖಲೆಯಲ್ಲಿ ಇದೆ. ಆದರೆ, ಅದು ಸಂಬಂಧಿಸಿದ ಕಂಪೆನಿಗೆ ರವಾನೆಯಾಗಿಲ್ಲ ಎನ್ನಲಾಗಿದೆ.ಇದಲ್ಲದೇ ಪೂರೈಕೆ ಪಡೆದ ಕಂಪೆನಿಗಳು ಪೂರ್ಣ ಹಣ ಸಂದಾಯ ಮಾಡಿರುವುದಾಗಿ ಹೇಳಿದ್ದು, ಆ ಹಣ ಕಂಪೆನಿಯ ಹಣಕಾಸು ವಿಭಾಗಕ್ಕೆ ಏಕೆ ಜಮಾ ಆಗಿಲ್ಲ ಎಂಬ ಪ್ರಶ್ನೆ ತನಿಖೆ ಮಾಡುತ್ತಿರುವ ಪೊಲೀಸರಿಗೆ ಎದುರಾಗಿದೆ.ಜತೆಗೆ ಸಾಲರೂಪ ಮಾರಾಟಕ್ಕೆ ಕಾರ್ಯಪಾಲಕ ನಿರ್ದೇಶಕರ ಅನುಮತಿ ಮೇರೆಗೆ 30, 60 ಹಾಗೂ 90 ದಿನಗಳ ಅವಕಾಶವಿದ್ದು, ಇದರ ಕುರಿತಾಗಿ ಸ್ಪಷ್ಟ ಮಾಹಿತಿ ಇಲ್ಲದಿರುವುದು ಪ್ರಕರಣದ ವಂಚನೆಯ ಜಾಲವನ್ನು ವಿಸ್ತರಿಸಿದೆ ಎಂಬುದು ಕಾರ್ಮಿಕರ ಮುಖಂಡರ ಆರೋಪ.ಒಟ್ಟಿನಲ್ಲಿ ವಂಚನೆ ಜಾಲ ಬೆನ್ನು ಹತ್ತಿರುವ ಸಿಪಿಐ ತಿರುಮಲೇಶ್ ನೇತೃತ್ವದ ತಂಡಕ್ಕೆ ಸಾಕಷ್ಟು ಹೊಸ ಸಂಗತಿಗಳು ಪತ್ತೆಯಾಗುತ್ತಿವೆ. ಇತ್ತ ಕಾರ್ಮಿಕ ಸಂಘ ಹಾಗೂ ಇತರ ಸಂಘಟನೆಗಳು ಪ್ರಕರಣವನ್ನು ಸಿಐಡಿ, ಸಿಬಿಐಗೆ ಒಪ್ಪಿಸುವಂತೆ ಒತ್ತಾಯ ಮಾಡುತ್ತಿವೆ.

ಕೆ.ಎನ್.ಶ್ರೀಹರ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry