ಶುಕ್ರವಾರ, ಫೆಬ್ರವರಿ 26, 2021
29 °C

ಸರಕು ಸಾಗಣೆಗೆ ಇನ್ನಷ್ಟು ಹೊಸ ಮಾರ್ಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರಕು ಸಾಗಣೆಗೆ ಇನ್ನಷ್ಟು ಹೊಸ ಮಾರ್ಗ

ನವದೆಹಲಿ(ಐಎಎನ್‌ಎಸ್):ಅಟ್ಟಾರಿ ಗಡಿಯಲ್ಲಿ ಸಮಗ್ರ ಸ್ವರೂಪದ ನೂತನ ತಪಾಸಣಾ ಕಚೇರಿಯನ್ನು ಶುಕ್ರವಾರ ಆರಂಭಿಸಿದ ನಂತರ ಬಹಳ ಉತ್ಸಾಹದಲ್ಲಿರುವ ಭಾರತ-ಪಾಕಿಸ್ತಾನ, ಉಭಯ ದೇಶಗಳ ವಾಣಿಜ್ಯ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಅಟ್ಟಾರಿ ರೀತಿಯಲ್ಲಿಯೇ ಹೊಸ ಮಾರ್ಗಗಳನ್ನು ಮುಕ್ತಗೊಳಿಸಲು ಸಾಧ್ಯವಿರುವ ಎಲ್ಲ ಯತ್ನ ನಡೆಸುವುದಾಗಿ ಶನಿವಾರ ಘೋಷಿಸಿವೆ.ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಆನಂದ ಶರ್ಮಾ ಮತ್ತು ಪಾಕಿಸ್ತಾನದ ಸಹವರ್ತಿ ಮಖ್ದೂಮ್ ಅಮಿನ್ ಫಾಹಿಮ್, ಹೊಸ ಮಾರ್ಗಗಳನ್ನು ಮುಕ್ತಗೊಳಿಸುವುದು ಹಾಗೂ ಸಮಗ್ರ ಸುಂಕ ಠಾಣೆಗಳನ್ನು ತೆರೆಯುವ ಸಂಬಂಧ ಚರ್ಚಿಸುವಂತೆ ಎರಡೂ ದೇಶದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಅಟ್ಟಾರಿ ಗಡಿಯಲ್ಲಿ ಕೈಗೊಳ್ಳಲಾಗಿರುವ ಈಗಿನ ಕ್ರಮದಿಂದ ಎರಡೂ ದೇಶಗಳ ನಡುವಿನ ಸರಕು ಸಾಗಣೆ ವಾಹನಗಳ ಸಂಚಾರ ಬಹಳ ಸರಳವಾಗಲಿದೆ. ಆಗ ಸಹಜವಾಗಿಯೇ ವ್ಯಾಪಾರ ವಹಿವಾಟು ಹೆಚ್ಚಲಿದೆ ಎಂಬ ನಿರೀಕ್ಷೆ ಇದೆ. ಜತೆಗೆ ಎರಡೂ ದೇಶಗಳ ವರ್ತಕ ಸಮುದಾಯದ ನಡುವೆ ಅತ್ಯುತ್ತಮ ವಾಣಿಜ್ಯ ನಂಟು ಬೆಸೆಯಲು ನೆರವಾಗಲಿದೆ ಎಂದು ಜಂಟಿ ಪತ್ರಿಕಾ ಪ್ರಕಟಣೆ ತಿಳಿಸಿದೆ.ಎರಡೂ ದೇಶದ ವಾಣಿಜ್ಯ ಸಚಿವರ ನಡುವೆ ಕಳೆದ ಏಳು ತಿಂಗಳಲ್ಲಿ ನಡೆದ ಮೂರನೇ ಭೇಟಿ ಇದಾಗಿದೆ.ಸರಳ ವೀಸಾ: ಜತೆಗೆ ವ್ಯಾಪಾರಕ್ಕೆ ಸಂಬಂಧಿಸಿ ವೀಸಾ ವಿತರಣೆಯನ್ನೂ ಸರಳಗೊಳಿಸುವ ಬಗ್ಗೆ ಮುಂದಿನ ದಿನಗಳಲ್ಲಿ ನಡೆಯಲಿರುವ ಗೃಹ ಕಾರ್ಯದರ್ಶಿ ಮಟ್ಟದ ಮಾತುಕತೆ ವೇಳೆ ಚರ್ಚೆಗೊಳಗಾಗುವ ನಿರೀಕ್ಷೆ ಇದೆ.ವಿದ್ಯುತ್ ಖರೀದಿಗೆ ಒಪ್ಪಿಗೆಇಸ್ಲಾಮಾಬಾದ್(ಪಿಟಿಐ):
ಭಾರತದಿಂದ ವಿದ್ಯುತ್ ಖರೀದಿಗೆ ಕಡೆಗೂ ಪಾಕಿಸ್ತಾನ ತಾತ್ವಿಕ ಒಪ್ಪಿಗೆ ಸೂಚಿಸಿದೆ.

ಡೀಸೆಲ್ ಮತ್ತಿತರ ಸರಕುಗಳನ್ನು ಭಾರತದಿಂದ ಆಮದು ಮಾಡಿಕೊಳ್ಳುತ್ತಿದ್ದ ಪಾಕ್, ಇಂಧನ ಕೊರತೆ ಸಮಸ್ಯೆ ಎದುರಾಗಿದ್ದರೂ ಪೆಟ್ರೋಲ್ ಮತ್ತು ವಿದ್ಯುತ್ ಖರೀದಿಗೆ ಈವರೆಗೂ ಹಿಂದೇಟು ಹಾಕುತ್ತಿತ್ತು.ಉಭಯ ದೇಶಗಳ ನಡುವಿನ ಇಂಧನ ವಹಿವಾಟು ಪ್ರಕ್ರಿಯೆಗೆ ಅಗತ್ಯವಾದ ಮೂಲ ಸೌಕರ್ಯ ವ್ಯವಸ್ಥೆ ಮಾಡಿಕೊಳ್ಳಲು ಆರ್ಥಿಕ ನೆರವು ನೀಡುವುದಾಗಿ ವಿಶ್ವ ಬ್ಯಾಂಕ್ ಘೋಷಿಸಿದ ಪರಿಣಾಮ, ಭಾರತದಿಂದ 500 ಮೆಗಾವಾಟ್‌ವರೆಗೂ ವಿದ್ಯುತ್ ಖರೀದಿಸಲು ಪಾಕಿಸ್ತಾನ ಮನಸ್ಸು ಮಾಡಿದೆ.ತಮ್ಮನ್ನು ಶುಕ್ರವಾರ ಇಸ್ಲಾಮಾಬಾದ್‌ನಲ್ಲಿ ಭೇಟಿ ಮಾಡಿದ `ಗ್ಲೋಬಲ್ ಎನರ್ಜಿ~ ಕಂಪನಿಯ ಹ್ಯಾರಿ ಧೌಲ್ ನೇತೃತ್ವದ ಭಾರತೀಯ ನಿಯೋಗಕ್ಕೆ ಪಾಕ್ ಜಲ ಮತ್ತು ಇಂಧನ ಸಚಿವ ಸಯೀದ್ ನವೀದ್, ವಿದ್ಯುತ್ ಖರೀದಿ ವಿಚಾರ ತಿಳಿಸಿದರು.ಇದಕ್ಕಾಗಿ ಎರಡೂ ದೇಶಗಳ ನಡುವೆ 220 ಕಿಲೊವೋಲ್ಟ್ ಸಾಮರ್ಥ್ಯದ 45 ಕಿ.ಮೀ. ಉದ್ದದ ವಿದ್ಯುತ್ ಸರಬರಾಜು ಮಾರ್ಗ ನಿರ್ಮಿಸಬೇಕಿದ್ದು, ಈ ಸಂಬಂಧ ಒಡಂಬಡಿಕೆಗೆ ಸಹಿ ಬಿದ್ದ ನಂತರ 6 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ನಿರೀಕ್ಷೆ ಇದೆ ಎಂದರು.

ಅತ್ಯುತ್ತಮ ಚಹಾ ಕೊಡಿ: ಪಾಕ್

ಕೊಯಮತ್ತೂರು(ಪಿಟಿಐ): ವಾಣಿಜ್ಯ ಸಂಬಂಧ ಹೆಚ್ಚು ಗಟ್ಟಿಗೊಳಿಸಲು ಪಾಕ್ ವಾಣಿಜ್ಯ ಸಚಿವ ಮೊಹಮ್ಮದ್ ಅಮಿನ್ ಫಾಹಿಮ್ ಮತ್ತು ಭಾರತದ ಆನಂದ್ ಶರ್ಮಾ,  ಅಟ್ಟಾರಿ ಗಡಿ ಮತ್ತು ನವದೆಹಲಿಯಲ್ಲಿ ಮಾತುಕತೆ ನಡೆಸುತ್ತಿದ್ದರೆ, ಇತ್ತ ತಮಿಳುನಾಡಿಗೆ ಚಹಾ ವರ್ತಕರ ತಂಡ ಭೇಟಿ ನೀಡಿ `ನಮಗೆ ಅತ್ಯುತ್ತಮ ಚಹಾ ಕೊಡಿ ಸ್ವಾಮಿ~... ಎಂದಿದೆ!ಪಾಕ್ ಟೀ ಅಸೋಸಿಯೇಷನ್ ಅಧ್ಯಕ್ಷ ಮೊಹಮ್ಮದ್ ಹನೀಫ್ ಜನೂ ಪಾಕ್ ಅವರ ನೇತೃತ್ವದಲ್ಲಿ ಕೊಯಮತ್ತೂರಿಗೆ ಶನಿವಾರ ಭೇಟಿ ನೀಡಿದ ನಿಯೋಗ, `ನಮ್ಮ ಜನರು ಕಡು ಹಾಗೂ ಸ್ವಾಧಅರಿತ ಉತ್ತಮ ಚಹಾ ಬಯಸುತ್ತಾರೆ. ಅತ್ಯುತ್ತಮ ಗುಣಮಟ್ಟ ಚಹಾ ಪುಡಿ ರವಾನಿಸಿ~ ಎಂದು ದಕ್ಷಿಣ ಭಾರತದ ಟೀ ಉತ್ಪಾದಕರು, ಮಾರಾಟಗಾರರನ್ನು ಮನವಿ ಮಾಡಿತು.ವರ್ಷಕ್ಕೆ 23 ಕೋಟಿ ಕೆ.ಜಿ. ಚಹಾ ಪುಡಿ ಬಳಸುವ ಪಾಕಿಸ್ತಾನಕ್ಕೆ ಕೀನ್ಯಾ (13 ಕೋಟಿ ಕೆ.ಜಿ.) ಅತಿದೊಡ್ಡ ರಫ್ತುದಾರನಾಗಿದೆ. ದಕ್ಷಿಣ ಭಾರತದಿಂದ 2.40 ಕೋಟಿ ಕೆ.ಜಿ. ಚಹಾ ರಫ್ತಾಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.