ಸೋಮವಾರ, ಆಗಸ್ಟ್ 19, 2019
22 °C

ಸರಣಿ ಕಳವು: ಚಿನ್ನ-ಬೆಳ್ಳಿ, ಮೊಬೈಲ್ ದೋಚಿದ ಕಳ್ಳರು

Published:
Updated:
ಸರಣಿ ಕಳವು: ಚಿನ್ನ-ಬೆಳ್ಳಿ, ಮೊಬೈಲ್ ದೋಚಿದ ಕಳ್ಳರು

ಶಿರಾ: ನಗರದ ಹೃದಯ ಭಾಗದ ವಿವಿಧ ಅಂಗಡಿಗಳಲ್ಲಿ ಭಾನುವಾರ ರಾತ್ರಿ ಸರಣಿ ಕಳ್ಳತನ ನಡೆದಿದ್ದು ಅಂಗಡಿ ಮಾಲೀಕರು-ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆ.ಹೊಸ ಬಸ್‌ಸ್ಟಾಂಡ್ ರಸ್ತೆ, ಆರ್.ಟಿ.ರಸ್ತೆಯ ಮೂರು ಅಂಗಡಿಗಳನ್ನು ದೋಚಲಾಗಿದ್ದು, ಮೂರು ಅಂಗಡಿ, ಒಂದು ಮನೆ ಬೀಗ ಮುರಿದು ದೋಚಲು ವಿಫಲ ಯತ್ನ ನಡೆಸಲಾಗಿದೆ. ಆರ್‌ಎಸ್ ಕಮ್ಯೂನಿಕೇಷನ್ ಎಂಬ ಮೊಬೈಲ್ ಅಂಗಡಿ ಬೀಗ ಮುರಿದ ಕಳ್ಳರು ಮೊಬೈಲ್‌ಗಳು, ಮೆಮೊರಿ ಕಾರ್ಡ್, ನಾಲ್ಕು ಸಾವಿರ ರೂಪಾಯಿ ಮೌಲ್ಯದ ರೀಚಾರ್ಚ್ ಕಾರ್ಡ್, ಐದು ಐಪೋಡ್ ಸೇರಿದಂತೆ ರೂ.12,500 ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾರೆ.ಬಾಲಾಜಿ ಟೆಲಿ ಸರ್ವಿಸಸ್ ಮೊಬೈಲ್ ಅಂಗಡಿಯಲ್ಲಿ ಹೆಚ್ಚಿನ ಕಳವು ನಡೆದಿದೆ ಎನ್ನಲಾಗಿದ್ದು, ಒಂದು ಲಕ್ಷ ರೂಪಾಯಿಗಿಂತ ಹೆಚ್ಚಿನ ಮೌಲ್ಯದ ವಸ್ತುಗಳು ಕಳವಾಗಿವೆ ಎಂದು ಅಂಗಡಿ ಮಾಲೀಕ ಹೇಳಿಕೊಂಡಿದ್ದಾರೆ. ಆರ್.ಟಿ.ರಸ್ತೆ ಸಿದ್ದಿವಿನಾಯಕ ಜ್ಯುವೆಲ್ಲರಿ ಶಾಪ್ ಬೀಗ ಮುರಿದು ಒಳನುಗ್ಗಿರುವ ಕಳ್ಳರು 14 ಗ್ರಾಂಗೂ ಹೆಚ್ಚು ಚಿನ್ನ ಬೆಳ್ಳಿ ದೋಚಿದ್ದಾರೆ. ಆಭರಣ ಇಟ್ಟ ಲಾಕರ್ ತೆರೆಯಲು ಆಗದ ಕಾರಣ ಹೆಚ್ಚಿನ ಕಳವು ನಡೆದಿಲ್ಲ. ರಿಪೇರಿ, ಪಾಲಿಷ್ ಮಾಡಲು ನೀಡಿದ್ದ ಕಾಲು ಚೈನ್, ಮೂಗುನತ್ತಿನಂಥ ಚಿಕ್ಕಪುಟ್ಟ ಆಭರಣಗಳು ಮಾತ್ರ ಕಳವಾಗಿದೆ ಎಂದು ತಿಳಿದು ಬಂದಿದೆ.ಬಾಲಾಜಿ ಜ್ಯೂಯಲರ್ಸ್‌, ಲಕ್ಷ್ಮಿ ಎಲೆಕ್ಟ್ರಿಕಲ್, ತಿರುಮಲ ದಿನಸಿ ಅಂಗಡಿ, ಒಂದು ಮನೆಯನ್ನು ದೋಚಲು ಬೀಗ ಮುರಿಯಲಾಗಿದೆ. ಆದರೆ ಸಂಪೂರ್ಣ ಬಾಗಿಲು ತೆರೆದುಕೊಳ್ಳದ ಕಾರಣ ಕಳವು ಮಾಡಲು ಸಾಧ್ಯವಾಗದೆ ಹಿಂದಿರುಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ನಗರ ಪೊಲೀಸ್ ಠಾಣೆಗೆ ಕೂಗಳತೆ ದೂರದಲ್ಲೇ ಕಳ್ಳತನ ನಡೆದಿರುವುದು ಅಂಗಡಿ ಮಾಲೀಕರು, ಸಾರ್ವಜನಿಕರನ್ನು ಆತಂಕಕ್ಕೀಡು ಮಾಡಿದೆ. ಪೊಲೀಸರು ರಾತ್ರಿ ಗಸ್ತು ಕೈ ಬಿಟ್ಟಿರುವುದೆ ಇದಕ್ಕೆ ಕಾರಣ ಎಂದು ಸಾರ್ವಜನಿಕರು ದೂರಿದ್ದಾರೆ. ರಾತ್ರಿ 1.30ರಲ್ಲಿ ಪೊಲೀಸರು ಕೆನರಾ ಬ್ಯಾಂಕ್ ಬಾಗಿಲ ಬೀಟ್ ಪುಸ್ತಕದಲ್ಲಿ ಸಹಿ ಮಾಡಿದ್ದು, ಅವರು ಅತ್ತ ತೆರಳಿದ ನಂತರ ಕಳ್ಳರು ನಿಯೋಜಿತ ರೀತಿಯಲ್ಲಿ ಕಳವು ಮಾಡಿದ್ದಾರೆ. ಆದರೆ ಮೊಬೈಲ್ ಕದ್ದಿರುವ ಕಾರಣ ಕಳ್ಳರ ಪತ್ತೆ ಸುಲಭ ಎಂದು ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಕರೆಸಲಾಗಿತ್ತು. ಶ್ವಾನದಳದಿಂದ ಮಹತ್ವದ ಸುಳಿವು ಲಭ್ಯವಾಗಿಲ್ಲದಿದ್ದರೂ; ಬೆರಳಚ್ಚು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.ಕಳವು: ಆರೋಪಿಗಳ ಬಂಧನ

ಪಾವಗಡ: ರೋಲಿಂಗ್ ಷಟರ್ ಎತ್ತಿ ಕಳವು ಮಾಡುತ್ತಿದ್ದ ಆರೋಪಿಗಳನ್ನು ಭಾನುವಾರ ಬಂಧಿಸಲಾಗಿದೆ.

ಜುಲೈ 17ರಂದು ತಾಲ್ಲೂಕಿನ ಐದು ಅಂಗಡಿಯಲ್ಲಿ ಸರಣಿ ಕಳ್ಳತನ ಮಾಡಿ ನಗದನ್ನು ದೋಚಿದ್ದ ವೆಂಕಟಪತಿ ಅಲಿಯಾಸ್ ಪತಿ, ರವಿ, ನರಸಿಂಹಮೂರ್ತಿ ಎಂಬ ಆರೋಪಿಗಳನ್ನು ಸಿಪಿಐ ಶೇಷಾದ್ರಿ ನೇತೃತ್ವದ ವಿಶೇಷ ತಂಡ ಬಂಧಿಸಿದೆ. ಬಂಧಿತರಿಂದ 1750 ರೂಪಾಯಿ, ಕೃತ್ಯಕ್ಕೆ ಬಳಸುತ್ತಿದ್ದ ಸಲಕರಣೆ ವಶಪಡಿಸಿಕೊಳ್ಳಲಾಗಿದೆ.ಆರೋಪಿ ವೆಂಕಟಪತಿ, ರವಿ ಮೇಲೆ ಬಾಗೇಪಲ್ಲಿ, ಚಿಂತಾಮಣಿ, ಚಿಕ್ಕಬಳ್ಳಾಪುರ, ಬೆಂಗಳೂರು, ಇತರೆಡೆ ಇದೇ ರೀತಿ ಪ್ರಕರಣ ದಾಖಲಾಗಿವೆ. ಆರೋಪಿಗಳು ಸೆಂಟರ್ ಲಾಕ್ ಅಳವಡಿಸಿಲ್ಲದ ರೋಲಿಂಗ್ ಷಟರ್ ಮೀಟಿ ಕಳ್ಳತನ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಕಳ್ಳರ ಬಂಧನ

ತುಮಕೂರು: ನಗರ ಹೊರವಲಯದ ಸತ್ಯಮಂಗಲ ಕೈಗಾರಿಕಾ ಪ್ರದೇಶದಲ್ಲಿರುವ ಸೀತಾ ಗ್ರಾನೈಟ್ಸ್ ಕಾರ್ಖಾನೆಯಲ್ಲಿ ಮೋಟಾರ್, ಕಬ್ಬಿಣದ ರಾಡ್ ಕಳವು ಮಾಡಲು ಯತ್ನಿಸಿದ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ಭಾನುವಾರ ಮಾಲು ಸಮೇತ ಬಂಧಿಸಿದ್ದಾರೆ.

ಬಂಧಿತನನ್ನು ನಾಗ ಎಂದು ಗುರುತಿಸಲಾಗಿದೆ. ಈತ ಕಾರ್ಖಾನೆಯಲ್ಲಿ ಕಳವು ಮಾಡುವ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿ ಬಿದ್ದ. ಭದ್ರತಾ ಸಿಬ್ಬಂದಿ ನರಸಿಂಹಮೂರ್ತಿ ಪೊಲೀಸರಿಗೆ ದೂರು ನೀಡಿದ್ದಾರೆ.

Post Comments (+)