ಸೋಮವಾರ, ಜನವರಿ 20, 2020
21 °C

ಸರಣಿ ಕೊಲೆ

ಡಾ.ಕೆ.ಎಸ್. ಪವಿತ್ರ Updated:

ಅಕ್ಷರ ಗಾತ್ರ : | |

ವಿಜಯ್ ಮತ್ತು ಕೀರ್ತಿಶರ್ಮಾ ದಂಪತಿಗಳು ಮುಂಬೈ ಹೈಕೋರ್ಟಿನಲ್ಲಿ ``ನಮಗೆ ಈಗಾಗಲೇ ಎರಡು ಹೆಣ್ಣು ಮಕ್ಕಳಿದ್ದಾರೆ. ಹಾಗಾಗಿ ಸ್ಕ್ಯಾನ್ ಮುಖಾಂತರ ಮಗುವಿನ ಲಿಂಗ ಪತ್ತೆ ಹಚ್ಚಿ ನಿರ್ಧಾರ ಕೈಗೊಳ್ಳುವ ಆಯ್ಕೆ ನಮಗೆ ದೊರೆಯಬೇಕು~~ ಎಂದು ಅರ್ಜಿ ಹಾಕಿದರು.

 

ಭಾರತದಂತಹ ದೇಶದಲ್ಲಿ ಸಾಮಾಜಿಕವಾಗಿಯೇ ಆಗಲಿ, ಆರ್ಥಿಕವಾಗಿಯಾಗಲಿ ಹೆಣ್ಣು  ಮಗುವಿಗಿಂತ ಗಂಡು ಮಗುವನ್ನು ಬೆಳೆಸುವುದು ಸುಲಭ ಸಾಧ್ಯ ಎನ್ನುವುದು ಅವರ ವಾದ. ಮುಂಬಯಿ ಹೈಕೋರ್ಟು ನಿರೀಕ್ಷೆಯಂತೆ ``ಹೆಣ್ಣು ಮಗುವನ್ನು  `ಬೇಡ~ ಎನ್ನುವುದು `ಸ್ತ್ರೀ~ ಕುಲಕ್ಕೇ ಅಪಮಾನ ಮಾಡಿದಂತೆ.

 

ಹೆಣ್ಣು ಭ್ರೂಣ ಹತ್ಯೆಯಿಂದ ಇಡೀ ಸಮಾಜದಲ್ಲಿ ಅಸಮತೋಲನ ಉಂಟಾಗುತ್ತದೆ~~ ಎಂದು ಈ ವಾದವನ್ನು ತಿರಸ್ಕರಿಸಿತು. ಮಗುವಿನ ಲಿಂಗ ಪತ್ತೆ ಹಚ್ಚುವುದು ಹೆಣ್ಣು ಭ್ರೂಣಹತ್ಯೆ ಮಾಡುವ ಇನ್ನೊಂದು ರೀತಿಯೇ ಆಗಿದೆ ಎಂಬುದನ್ನು ನ್ಯಾಯಾಲಯ ಎತ್ತಿ ಹಿಡಿಯಿತು.ವಿಜಯ್-ಕೀರ್ತಿಶರ್ಮಾ ದಂಪತಿಗಳ ವಾದ ಲಕ್ಷಾಂತರ ತಂದೆ-ತಾಯಿಗಳ ವಾದವೂ ಹೌದಷ್ಟೆ. ನ್ಯಾಯಾಲಯದ ಮೆಟ್ಟಿಲು ಹತ್ತದೆಯೂ ತಮಗೆ ಸಾಧ್ಯವಾದ ರೀತಿಗಳಲ್ಲಿ ಭ್ರೂಣದ ಲಿಂಗ ಪತ್ತೆ ಮಾಡುವ, ಹೆಣ್ಣು ಭ್ರೂಣವನ್ನು `ನಿವಾರಿಸಿ~ಕೊಳ್ಳುವ ಪ್ರಕ್ರಿಯೆ ಮುಂದುವರಿದಿದೆ. ಕಾನೂನಿನ ನಿಯಮ ಅಜ್ಞಾನ, `ಗಂಡು ಮಗು~ ಬೇಕೇ ಬೇಕೆನ್ನುವ `ಅಚಲ~ ನಂಬಿಕೆಗಳ ಮುಂದೆ ಸೋತು ನೆಲಕ್ಕೆ ಒರಗಿದೆ.

 

ಮೇ 2006ರ ವರದಿಯಂತೆ ಭಾರತದ 35 ರಾಜ್ಯಗಳಲ್ಲಿ 22 ರಾಜ್ಯಗಳಿಂದ ಈ ಕಾನೂನನ್ನು ಮುರಿದ ಒಂದು ಪ್ರಕರಣವೂ ಪತ್ತೆಯಾಗಿಲ್ಲ!  ದೆಹಲಿಯಲ್ಲಿ 76, ಪಂಜಾಬ್‌ನಲ್ಲಿ 67 ಮತ್ತು ಗುಜರಾತ್‌ನಲ್ಲಿ 57 ಮಾತ್ರ ವರದಿಯಾದ ಪ್ರಕರಣಗಳು! ದೇಶದಾದ್ಯಂತ ಒಟ್ಟು 400 ಪ್ರಕರಣಗಳು ದಾಖಲಾಗಿದ್ದರೆ, ಅವುಗಳಲ್ಲಿ ಇಬ್ಬರಿಗೆ ಮಾತ್ರ ಶಿಕ್ಷೆಯಾಗಿದೆ. ಅದೂ ಒಬ್ಬರಿಗೆ 300 ರೂಪಾಯಿಗಳ ಮತ್ತು  ಇನ್ನೊಬ್ಬರಿಗೆ 4,000 ರೂಪಾಯಿಗಳ ದಂಡ!ಒಂದು ದೇಶದ ಲಿಂಗ ಅನುಪಾತ ದೇಶದ ಸಾಮಾಜಿಕ ಆರೋಗ್ಯದ ಬಗೆಗೆ ಬೆಳಕು ಚೆಲ್ಲುತ್ತದೆ.ಲಿಂಗ ಅನುಪಾತದ ಅಂತರ ಹೆಚ್ಚಾದಷ್ಟೂ ವಿವಿಧ ರೀತಿಯ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಪ್ರಾಕೃತಿಕವಾಗಿ, ಸಹಜವಾಗಿ ವಂಶಾಭಿವೃದ್ಧಿಯ ಪ್ರಕ್ರಿಯೆಯಲ್ಲಿ ಸಮತೋಲನ ತನ್ನಿಂದ ತಾನೇ ಕಾಯ್ದುಕೊಳ್ಳಲ್ಪಡುತ್ತದೆ.

 

ಹೀಗಾಗಿ ಗಂಡು-ಹೆಣ್ಣು ಶಿಶುಗಳ ಆಯ್ಕೆ ಅಸಮತೋಲನಕ್ಕೆ ದಾರಿ ಮಾಡಿಕೊಡುತ್ತದೆ. ಈ ಸತ್ಯವನ್ನು ಮನಗಾಣದೇ ಭಾರತದ ಜನಸಂಖ್ಯೆಯಿಂದ ಕಾಣೆಯಾಗುವಂತೆ ಮಾಡಿದ ಕಂದಮ್ಮಗಳ ಸಂಖ್ಯೆ ಮೂರು ಲಕ್ಷಕ್ಕೂ ಅಧಿಕ! ಅಂದರೆ ಇದೊಂದು ಸರಣಿ ಕೊಲೆ.ಇದು ಹುಟ್ಟದ ಕಂದಮ್ಮಗಳ ಕಥೆಯಾದರೆ, ಹುಟ್ಟಿದ ಮೇಲೆಯೂ ಬದುಕುವ ಭರವಸೆಯೂ ಹೆಣ್ಣುಮಕ್ಕಳಿಗೆ ಕಷ್ಟವೇ. ಮುಂಬೈನ ಸೆಂಟ್ ಸ್ಟೀಫನ್ಸ್ ಆಸ್ಪತ್ರೆಯ ಮಕ್ಕಳ ವಿಭಾಗ ಅಧ್ಯಯನವೊಂದನ್ನು ನಡೆಸಿತು. ಕಳೆದ 110 ವರ್ಷಗಳ ಆಸ್ಪತ್ರೆಯ ಮಕ್ಕಳ ಹುಟ್ಟು-ಬೆಳವಣಿಗೆಯ ಬಗೆಗಿನ ದಾಖಲೆಗಳನ್ನು ಪರಿಶೀಲಿಸಿತು. ಹೆಣ್ಣು ಮಗುವಿಗೆ ಅಣ್ಣನೊಬ್ಬ ಇದ್ದರೆ ಆಕೆ ಐದು ವರ್ಷಗಳಿಗೆ ಮೇಲ್ಪಟ್ಟು ಬದುಕುವ ಸಾಧ್ಯತೆ ಹೆಚ್ಚು ಎಂಬುದು ಕಂಡುಬಂತು.ಸರಣಿ ಕೊಲೆ

 ಮೊದಲ ಮಗು ಹೆಣ್ಣಾದಾಗ ಕೇವಲ 629 ಹೆಣ್ಣು ಮಕ್ಕಳು ಪ್ರತಿ 1000 ಗಂಡು ಮಕ್ಕಳಿಗೆ ಎಂಬ ಅಂಶ ಕಂಡುಬಂದರೆ ಈಗಾಗಲೇ ಒಂದು ಗಂಡು ಮಗುವಿದ್ದರೆ ಪ್ರತಿ 1,000 ಗಂಡು ಮಕ್ಕಳಿಗೆ 1,140 ಹೆಣ್ಣು ಮಕ್ಕಳಿದ್ದುದು ಕಂಡು ಬಂತು. ಅಂದರೆ ಒಂದು ಗಂಡು ಮಗುವೀಗಾಗಲೇ ಇದ್ದರೆ ಮಾತ್ರ ಎರಡನೆಯ ಮಗು ಹೆಣ್ಣಾದರೆ ಹುಟ್ಟುವ, ಬದುಕುವ ಭಾಗ್ಯ. ಅದೇ ಮೊದಲನೆಯ ಮಗು ಹೆಣ್ಣಾಗಿದ್ದರೆ ಎರಡನೆಯ ಮಗು ಗಂಡಾಗದ ಹೊರತು ಹುಟ್ಟುವ ಪ್ರಶ್ನೆಯೇ ಇಲ್ಲ!ಇಂದು ಹರಿಯಾಣಾದ ಜಾಟ್ ಹುಡುಗರು ಮದುವೆಯಾಗಲು ಹುಡುಗಿ ಹುಡುಕಿಕೊಂಡು 3,000 ಮೈಲು ದೂರದ ಕೇರಳಕ್ಕೆ ಬರುತ್ತಿದ್ದಾರೆ. `ಬೇರೆಯದೇ ಸಂಸ್ಕೃತಿಯ, ಭಾಷೆ ಬರದ, ಹಿನ್ನೆಲೆ ಗೊತ್ತಿಲ್ಲದವಳಾದರೂ ಪರವಾಗಿಲ್ಲ, `ನಮಗೊಂದು ಹುಡುಗಿ~ ಬೇಕು.ನಾವೇ ಖರ್ಚು ಹಾಕಿಕೊಂಡು ಕೆಲವೊಮ್ಮೆ ಅವಳ ಅಪ್ಪ -ಅಮ್ಮನನ್ನೂ ಸಾಕಿಕೊಂಡು ಮದುವೆಯಾಗುತ್ತೇವೆ~ ಎನ್ನುತ್ತಿದ್ದಾರೆ. ಹರಿಯಾಣಾದ ಹುಡುಗರು ಕಂಡುಕೊಂಡ ದಾರಿ ತಾತ್ಕಾಲಿಕವಾಗಿ ಮಾತ್ರ ಈ ಸಮಸ್ಯೆಯ ಪರಿಹಾರ.ಇದರ ಮುಂದಿನ ಭವಿಷ್ಯದ ದಾರಿಗಳು ಭೀಕರ. ಮಹಿಳೆ, ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಬಾಲ್ಯವಿವಾಹಗಳು, ಅಸುರಕ್ಷಿತ ಗರ್ಭಪಾತಗಳಿಂದ ಮಾತೃಮರಣ, ಬಹುಪತಿತ್ವದಂತ ಪ್ರಕರಣಗಳು ಎಲ್ಲವೂ ಹತ್ತಿರದ ಭವಿಷ್ಯದಲ್ಲಿ ಹೆಚ್ಚಾಗಲಿವೆ.ರಾಜಸ್ತಾನದ ಅಧ್ಯಯನವೊಂದರಲ್ಲಿ  ಶೇ 82.3ರಷ್ಟು ಮಹಿಳೆಯರು ಅಡುಗೆಗೆ ಏನು ಮಾಡಬೇಕೆಂಬ ನಿರ್ಧಾರ  ತೆಗೆದುಕೊಂಡರೆ ಶೇ 40.5ರಷ್ಟು ಮಹಿಳೆಯರಿಗೆ ಮಾತ್ರ ತಮ್ಮ ಆರೋಗ್ಯದ ಬಗೆಗಿನ ಆಯ್ಕೆ ಮಾಡುವ ಸ್ವಾತಂತ್ರ್ಯ. ಮಹಿಳೆಯ ಕೆಲಸ ಗುರುತಿಸಲ್ಪಡುವುದು ಶೇ 27.4 ರಷ್ಟು ಮಹಿಳೆಯಲ್ಲಿ ಮಾತ್ರ. ಈ ಪರಿಸ್ಥಿತಿ ಬದಲಾಗದೇ ಇದ್ದಾಗ ವಿಜಯ್ ಮತ್ತು ಕೀರ್ತಿ ಶರ್ಮಾರಂತೆ ಯೋಚಿಸುವ ದಂಪತಿಗಳ ಸಂಖ್ಯೆ ಹೆಚ್ಚೇ ಆದೀತು.ಯಶಸ್ವಿ ಕಾನೂನುಕ್ರಮ

ಇನ್ನು ಕಾನೂನಿನ ಸರಿಯಾದ ಕ್ರಮವೂ ಉಪಯುಕ್ತ ಎಂಬುದಕ್ಕೆ ಹಲವು ಉದಾಹರಣೆಗಳು ಇಂದು ನಮ್ಮ ಮುಂದಿವೆ. ಪಂಜಾಬಿನ ಸಣ್ಣ ಹಳ್ಳಿ `ಲಖನ್‌ಪಾಲ್~ನಲ್ಲಿ  ಪ್ರತಿ 1000 ಗಂಡು ಮಕ್ಕಳಿಗೆ 1400 ಹೆಣ್ಣು ಮಕ್ಕಳಿದ್ದಾರೆ!  ಹೈದರಾಬಾದ್‌ನಲ್ಲಿಯೂ ಆಂಧ್ರಪ್ರದೇಶದಲ್ಲಿಯೇ ಅತಿ ಕಡಿಮೆಯಾಗಿದ್ದ ಲಿಂಗ ಅನುಪಾತ ಇಂದು ಕಠಿಣ ಕಾನೂನು ಕ್ರಮದಿಂದ ಗಣನೀಯವಾಗಿ ಸುಧಾರಿಸಿದೆ. ಸ್ಕ್ಯಾನ್ ಕೇಂದ್ರಗಳ ದಾಖಲಾತಿ, ಕಠಿಣ ಕ್ರಮ, ಹೆಚ್ಚು ಮೊತ್ತದ ದಂಡ - ಇವುಗಳನ್ನು ಸಾಧ್ಯ ಮಾಡಿದೆ.

 

ಜಿಲ್ಲಾ ಮ್ಯೋಜಿಸ್ಟ್ರೇಟ್ ಅರವಿಂದ ಕುಮಾರ್ ಮಾತುಗಳಲ್ಲೇ ಹೇಳುವುದಾದರೆ  ``ಇಡೀ ಪಟ್ಟಣದಲ್ಲಿ ಹೆಣ್ಣು ಭ್ರೂಣವನ್ನು ಕೊಲ್ಲುವುದು ಅಸಾಧ್ಯ ಎಂಬಂತಹ ಪರಿಸ್ಥಿತಿಯನ್ನು ನಾವಿಲ್ಲಿ ಹುಟ್ಟು ಹಾಕಿದ್ದೇವೆ. ಹಾಗಾಗಿಯೇ 2005ರಲ್ಲಿ ಇಲ್ಲಿ ಲಿಂಗ ಅನುಪಾತ ಸಮತೋಲನಕ್ಕೆ ಕಾಲಿರಿಸಿದೆ~~.ಹೀಗೆ ಹೆಣ್ಣು ಶಿಶುಗಳ ಈ ಸರಣಿ ಕೊಲೆಯನ್ನು ತಡೆಗಟ್ಟುವಲ್ಲಿ ಕಾನೂನು ಒಂದು ಅಸ್ತ್ರವಾದರೆ, ಹೆಣ್ಣು ಮಕ್ಕಳ ಸ್ಥಾನಮಾನದಲ್ಲಿ ಸುಧಾರಣೆ, ಹೆಣ್ಣು ಮಗುವಿದ್ದಾಗ ತಾಯಿ - ತಂದೆಗಳಿಗೆ ಸಿಗಬಹುದಾದ ಭಾವನಾತ್ಮಕ ಸ್ಪಂದನ-ನೆಮ್ಮದಿಗಳ ಅರಿವು ಉಳಿದ ಅಸ್ತ್ರಗಳು.ಜನವರಿ 24 ಅನ್ನು ``ರಾಷ್ಟ್ರೀಯ ಹೆಣ್ಣು ಮಗುವಿನ~~ ದಿನವಾಗಿ 2009ರಿಂದ ಆಚರಿಸಲಾಗುತ್ತಿದೆ. `ಹೆಣ್ಣು ಮಗು~ವಿನ ರಕ್ಷಣೆ, ಶಿಕ್ಷಣ, ಆರೋಗ್ಯ ಕುರಿತಾದ ಚಿಂತನೆಗೆ ಗಂಭೀರವಾಗಿ ತೊಡಗಿಸಿಕೊಳ್ಳಲು ವರ್ಷವಿಡೀ ಆ ಬಗ್ಗೆ ಶ್ರಮಿಸುವ ದಾರಿಯನ್ನು ತೋರಲು ಈ ದಿನ ಪ್ರೇರಕವಾಗಲಿ.

(ಯೂನಿಸೆಫ್ ಮತ್ತು ಕೆ.ಸಿ.ಆರ್.ಒ. ದ ಮೀಡಿಯಾ ಫೆಲೋಶಿಪ್‌ನಡಿಯಲ್ಲಿ ಬರೆದ ಲೇಖನ)

ಪ್ರತಿಕ್ರಿಯಿಸಿ (+)