ಸರಣಿ ಗೆಲುವೇ ಇಷ್ಟವಾಗುವ ಫಲಿತಾಂಶ

7

ಸರಣಿ ಗೆಲುವೇ ಇಷ್ಟವಾಗುವ ಫಲಿತಾಂಶ

Published:
Updated:

ನಿರೀಕ್ಷೆ ಹುಸಿಯಾಗಲಿಲ್ಲ. ನಾಲ್ಕನೇ ಪಂದ್ಯ ಗೆಲ್ಲುವುದರೊಂದಿಗೆ ಸರಣಿಯಲ್ಲಿ 2-2ರಲ್ಲಿ ಸಮಬಲ ಸಾಧಿಸಿದ್ದೇವೆ. ಶುಕ್ರವಾರದ ಪಂದ್ಯದಲ್ಲಿ ನಾವು ಚೆನ್ನಾಗಿಯೇ ಆಡಿದೆವು. ಆದರೂ ಅಷ್ಟೊಂದು ವಿಕೆಟ್ ಕಳೆದುಕೊಂಡಿದ್ದು ಬೇಸರಗೊಳ್ಳುವಂತೆ ಮಾಡಿತು. ನಮ್ಮ ತಪ್ಪು ಒಂದು ಹಂತದಲ್ಲಿ ದುಬಾರಿ ಎನಿಸಿತು. ಸಂಕಷ್ಟದ ನಡುವೆಯೂ ನಮ್ಮ ಆಟಗಾರರು ನೀಡಿದ ಪ್ರದರ್ಶನ ಮೆಚ್ಚುವಂಥದು.ಅದರಲ್ಲಿಯೂ ಜೆನ್ ಪಾಲ್ ಡುಮಿನಿ, ರಾಬಿನ್ ಪೀಟರ್ಸನ್ ಹಾಗೂ ಜಾನ್ ಬೊಥಾ ಇನಿಂಗ್ಸ್ ಕಟ್ಟುವಲ್ಲಿ ಮಹತ್ವದ ಕೊಡುಗೆ ನೀಡಿದರು. ಅದಕ್ಕೂ ಮುನ್ನ ಹಾಶೀಮ್ ಆಮ್ಲಾ ತೋರಿದ ಸಹನೆಯೂ ಇಷ್ಟವಾಗುವಂಥದ್ದು. 265 ರನ್‌ಗಳನ್ನು ಗಳಿಸುವಲ್ಲಿ ಯಶಸ್ವಿ ಆದೆವು. ಬೌಲಿಂಗ್ ಹಾಗೂ ಕ್ಷೇತ್ರ ರಕ್ಷಣೆಯಲ್ಲಿಯೂ ಪರಿಣಾಮಕಾರಿ ಆಗಿದ್ದರಿಂದ ಲೆಕ್ಕಾಚಾರ ಮಾಡುವಂಥ ಪರಿಸ್ಥಿತಿ ಬಂದಾಗ ಆತಂಕ ಕಾಡಲಿಲ್ಲ.

ಡಕ್ವರ್ಥ್-ಲೂಯಿಸ್ ನಿಯಮ ಜಾರಿಯು ನಮಗೆ ಆಘಾತಕಾರಿ ಎನಿಸಲಿಲ್ಲ. ಮಳೆ ಬರದೇ ಇದ್ದಿದ್ದರೂ ನಾವೇ ಗೆಲುವು ಸಾಧಿಸುತ್ತಿದ್ದೆವು. ಅಷ್ಟೊಂದು ಉತ್ತಮ ಸ್ಥಿತಿಯಲ್ಲಿ ನಮ್ಮ ತಂಡವಿತ್ತು. ಎದುರಾಳಿ ಭಾರತದ ಯುವ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮಾತ್ರ ನಮಗೆ ಸವಾಲಾಗಿತ್ತು. ಪಂದ್ಯ ಪೂರ್ಣ ನಡೆದು; ಕೊಹ್ಲಿ ಕೊನೆಯವರೆಗೆ ಕ್ರೀಸ್‌ನಲ್ಲಿ ಉಳಿದಿದ್ದರೆ ಸಾಕಷ್ಟು ವ್ಯತ್ಯಾಸವಾಗಬಹುದಿತ್ತು. ಅಂಥದೊಂದು ಸಾಧ್ಯತೆಯ ಅನುಮಾನ ನನಗೂ ಇತ್ತು. ಆದರೂ ಎಲ್ಲವೂ ನಮ್ಮಪರವಾಯಿತು. ಅದಕ್ಕೆ ಸಂತಸ.ಸರಣಿಯಲ್ಲಿ ಪೈಪೋಟಿ ನೀಡುವ ಸ್ಥಿತಿಯನ್ನು ತಲುಪಿದ್ದೇವೆ. ಕೊನೆಯ ಪಂದ್ಯವನ್ನು ಗೆದ್ದು, ಸರಣಿ ವಿಜಯ ಸಾಧಿಸುವುದೇ ಇಷ್ಟವಾಗುವಂಥ ಫಲಿತಾಂಶ. ಭಾನುವಾರ ಸೂಪರ್ ಸ್ಪೋರ್ಟ್ ಪಾರ್ಕ್ ಕ್ರೀಡಾಂಗಣದಲ್ಲಿ ಸರಣಿಯು ನಮ್ಮ ಕೈಯಿಂದ ಜಾರಿ ಹೋಗುವುದಕ್ಕೆ ಬಿಡುವುದಿಲ್ಲ. ಯಾವುದೇ ಪರಿಸ್ಥಿತಿಯಲ್ಲಿ ಪ್ರಬಲ ಹೋರಾಟ ನಡೆಸುವ ಛಲವು ದಕ್ಷಿಣ ಆಫ್ರಿಕಾ ತಂಡದಲ್ಲಿದೆ ಎನ್ನುವುದನ್ನು ಸಾಬೀತುಮಾಡಿ ತೋರಿಸುತ್ತೇವೆ. ಜೋಹಾನ್ಸ್‌ಬರ್ಗ್ ಹಾಗೂ ಡರ್ಬನ್‌ನಲ್ಲಿ ಒಂದರ ಹಿಂದೆ ಒಂದು ಪಂದ್ಯವನ್ನು ಸೋತು 1-2ರಲ್ಲಿ ಹಿನ್ನಡೆ ಅನುಭವಿಸಿದಾಗ ಒತ್ತಡ ಹೆಚ್ಚಿದ್ದು ನಿಜ.ಪೋರ್ಟ್ ಏಲಿಜಬೆತ್‌ನಲ್ಲಿ ಪುಟಿದೆದ್ದು ಈಗ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಕಾದಾಟ ನಡೆಸಲು ಸಜ್ಜಾಗಿದ್ದೇವೆ. ನಮಗೆ ಯಾವುದೇ ಆತಂಕ ಕಾಡುತ್ತಿಲ್ಲ. ಸರಣಿಯಲ್ಲಿ ಚೇತರಿಸಿಕೊಂಡ ರೀತಿಯು ಹಿತಕಾರಿ ಅನುಭವ. ಆದರೆ ಭಾರತವು ಅಷ್ಟೊಂದು ನಿರಾತಂಕವಾಗಿಲ್ಲ. ಏಕೆಂದರೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ನಲ್ಲಿ ಅದು ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. ಪ್ರಭಾವಿ ಆಟವಾಡುವಂಥ ಬ್ಯಾಟ್ಸ್‌ಮನ್‌ಗಳೇ ಎಡವುತ್ತಾ ಸಾಗಿದ್ದಾರೆ. ವಿರಾಟ್ ಕೊಹ್ಲಿ ಹೊರತು ಮೇಲಿನ ಕ್ರಮಾಂಕದಲ್ಲಿ ಹಾಗೂ ಸರದಿಯ ಮಧ್ಯದಲ್ಲಿ ಕೊರತೆ ಎದ್ದು ಕಾಣಿಸಿದೆ. ಈ ಸಮಸ್ಯೆಯನ್ನು ನಿರ್ಣಾಯಕ ಏಕದಿನ ಪಂದ್ಯದಲ್ಲಿ ಮಹೇಂದ್ರ ಸಿಂಗ್ ದೋನಿ ನಾಯಕತ್ವದ ತಂಡವು ಹೇಗೆ ನಿವಾರಿಸಿಕೊಳ್ಳುತ್ತದೆ ಎಂದು ಕಾಯ್ದು ನೋಡಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry