ಭಾನುವಾರ, ಮಾರ್ಚ್ 7, 2021
27 °C

ಸರಣಿ ಜಯದ ಮೇಲೆ ವಿರಾಟ್ ಪಡೆಯ ಕಣ್ಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರಣಿ ಜಯದ ಮೇಲೆ ವಿರಾಟ್ ಪಡೆಯ ಕಣ್ಣು

ಸೇಂಟ್‌ ಲೂಸಿಯಾ (ಪಿಟಿಐ): ಮೊದಲ ಪಂದ್ಯದಲ್ಲಿ ಐತಿಹಾಸಿಕ ಗೆಲುವು ಗಳಿಸಿದ್ದಲ್ಲದೆ, ಎರಡನೇ ಪಂದ್ಯದಲ್ಲಿ ಡ್ರಾ ಮಾಡಿಕೊಂಡಿರುವ ಭಾರತ ತಂಡ ಈಗ ಸರಣಿ ಗೆಲುವಿನ ಮೇಲೆ ಕಣ್ಣು ನೆಟ್ಟಿದೆ.ವಿರಾಟ್‌ ಕೊಹ್ಲಿ ಪಡೆ ಮಂಗಳವಾರದಿಂದ ಆರಂಭವಾಗುವ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೂರನೇ ಪಂದ್ಯದಲ್ಲಿ ಆತಿಥೇಯ ವೆಸ್ಟ್‌ ಇಂಡೀಸ್‌ ತಂಡವನ್ನು ಮಣಿಸುವ ಹುಮ್ಮಸ್ಸಿನಲ್ಲಿದೆ.ಉಭಯ ತಂಡಗಳ ನಡುವಣ ಹೋರಾಟಕ್ಕೆ ಗ್ರಾಸ್‌ ಇಸ್ಲೆಟ್‌ನ ಡರೆನ್‌ ಸಮಿ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ವೇದಿಕೆ ಸಿದ್ದವಾಗಿದೆ.

ಎರಡನೇ ಪಂದ್ಯದಲ್ಲಿ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವಿಭಾಗಗಳಲ್ಲಿ ದಿಟ್ಟ ಆಟ ಆಡಿದ್ದ ಕೊಹ್ಲಿ ಬಳಗಕ್ಕೆ ವರುಣನ ‘ಕಾಟ ’ ಎದುರಾಗಿತ್ತು. ಹೀಗಾಗಿ ಪ್ರವಾಸಿ ಬಳಗದ  ಗೆಲುವಿನ ಆಸೆ ಕಮರಿತ್ತು. ಪಂದ್ಯದ ಅಂತಿಮ ದಿನ ಛಲದ ಆಟ ಆಡಿದ್ದ ಕೆರಿಬಿಯನ್‌ ನಾಡಿನ ತಂಡ ಡ್ರಾ ಮಾಡಿಕೊಂಡಿತ್ತು.

2006ರಲ್ಲಿ ವಿಂಡೀಸ್‌ ಪ್ರವಾಸ ಕೈಗೊಂಡಿದ್ದ ಭಾರತ ತಂಡ ಗ್ರಾಸ್‌ ಇಸ್ಲೆಟ್‌ನಲ್ಲಿ ಟೆಸ್ಟ್‌ ಆಡಿತ್ತು. ಆ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿತ್ತು. ಈ ಅಂಗಳದಲ್ಲಿ 2014ರ ಬಳಿಕ ನಡೆದ ನಾಲ್ಕು ಟೆಸ್ಟ್‌ ಪಂದ್ಯಗಳು ಡ್ರಾ ಆಗಿವೆ. ಬ್ಯಾಟಿಂಗ್‌ನಲ್ಲಿ ಭಾರತ ಬಲಿಷ್ಠವಾಗಿದೆ. ಹಿಂದಿನ ಎರಡೂ ಪಂದ್ಯಗಳಲ್ಲೂ 500ಕ್ಕೂ ಹೆಚ್ಚು ರನ್‌ ಗಳಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಕರ್ನಾಟಕದ ಕೆ.ಎಲ್‌. ರಾಹುಲ್‌ ಮತ್ತು ದೆಹಲಿಯ ಎಡಗೈ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ತಂಡಕ್ಕೆ ಉತ್ತಮ ಆರಂಭ ನೀಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಸಬೀನಾ ಪಾರ್ಕ್‌ ಮೈದಾನದಲ್ಲಿ ನಡೆದಿದ್ದ ಎರಡನೇ ಪಂದ್ಯದಲ್ಲಿ ಈ ಜೋಡಿ ಮೊದಲ ವಿಕೆಟ್‌ಗೆ 87ರನ್‌ ಗಳಿಸಿ ತಂಡಕ್ಕೆ ಭದ್ರ ಅಡಿಪಾಯ ಹಾಕಿ ಕೊಟ್ಟಿತ್ತು.ತಮಿಳುನಾಡಿನ ಮುರಳಿ ವಿಜಯ್‌ ಬದಲು ಆಡುವ ಬಳಗದಲ್ಲಿ ಸ್ಥಾನ ಗಳಿಸಿದ್ದ ರಾಹುಲ್‌ 158ರನ್‌ ಗಳಿಸಿ ಮಿಂಚಿದ್ದರು. ಉತ್ತಮ ಲಯದಲ್ಲಿರುವ ರಾಹುಲ್‌, ಗ್ರಾಸ್‌ ಇಸ್ಲೆಟ್‌ನಲ್ಲೂ ರನ್‌ ಶಿಖರ ನಿರ್ಮಿಸಲು ಕಾದಿದ್ದಾರೆ.  ಎರಡನೇ ಪಂದ್ಯದಲ್ಲಿ ಧವನ್‌ ಕೂಡ 27ರನ್‌ ಕಲೆಹಾಕಿ ಗಮನಸೆಳೆದಿದ್ದರು, ಹೀಗಾಗಿ ಅವರ ಮೇಲೂ ಅಪಾರ ನಿರೀಕ್ಷೆ ಇದೆ.  ಹಿಂದಿನ ಕೆಲ ದಿನಗಳಿಂದ ನೆಟ್ಸ್‌ನಲ್ಲಿ ಕಠಿಣ ಅಭ್ಯಾಸ ನಡೆಸಿರುವ ಇವರಿಬ್ಬರೂ ಮೂರನೇ ಪಂದ್ಯದಲ್ಲೂ  ವಿಂಡೀಸ್‌ ಬೌಲರ್‌ಗಳ ತಾಳ್ಮೆಗೆ ಸವಾಲಾಗುವ ವಿಶ್ವಾಸ ಹೊಂದಿದ್ದಾರೆ.ಟೆಸ್ಟ್‌ ಪರಿಣತ ಬ್ಯಾಟ್ಸ್‌ಮನ್‌ ಚೇತೇಶ್ವರ ಪೂಜಾರ ಹಿಂದಿನ ಪಂದ್ಯದಲ್ಲಿ 46ರನ್‌ ಗಳಿಸಿ ಲಯಕ್ಕೆ ಮರಳಿರುವ ಸೂಚನೆ ನೀಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ನಾಯಕ ವಿರಾಟ್‌, ಮುಂಬೈನ ಅಜಿಂಕ್ಯ ರಹಾನೆ, ಆರ್‌. ಅಶ್ವಿನ್‌ ಮತ್ತು ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ವೃದ್ಧಿಮಾನ್‌ ಸಹಾ ತಂಡದ ಆಧಾರ ಸ್ತಂಭಗಳೆನಿಸಿದ್ದಾರೆ.ಮೊದಲ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಮಿಂಚಿದ್ದ ಕೊಹ್ಲಿ ಹಿಂದಿನ ಪಂದ್ಯದಲ್ಲಿ 44ರನ್‌ ಗಳಿಸಿ ಕೆರಿಬಿಯನ್‌ ನಾಡಿನ ಬೌಲರ್‌ಗಳನ್ನು ಕಾಡಿದ್ದರು. ರಹಾನೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಏಳನೇ ಶತಕ ದಾಖಲಿಸಿ ಸಂಭ್ರಮಿಸಿದ್ದರು.

ವೃದ್ಧಿಮಾನ್‌ ಕೂಡ ದೊಡ್ಡ ಮೊತ್ತ ಪೇರಿಸುವ ಭರವಸೆ ಮೂಡಿಸಿದ್ದು, ಅಶ್ವಿನ್‌ ಮತ್ತು ಅನುಭವಿ ಅಮಿತ್‌ ಮಿಶ್ರಾ ಕೂಡ  ಬ್ಯಾಟಿಂಗ್‌ನಲ್ಲಿ ಮಿಂಚುತ್ತಿರುವುದು ನಾಯಕ ಕೊಹ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.ಇವರೆಲ್ಲರೂ ಮೂರನೇ ಪಂದ್ಯದಲ್ಲೂ ಅಬ್ಬರಿಸಿದ್ದೇ ಆದರೆ ಡರೆನ್‌ ಸಮಿ ಕ್ರೀಡಾಂಗಣದಲ್ಲಿ ರನ್‌ ಮಳೆ ಸುರಿಯುವುದರಲ್ಲಿ ಅನುಮಾನವೇ ಇಲ್ಲ.

ಬೌಲಿಂಗ್‌ ಶಕ್ತಿ: ಭಾರತ ತಂಡ ಬೌಲಿಂಗ್‌ನಲ್ಲೂ ಶಕ್ತಿಯುತವಾಗಿದೆ. ಹಿಂದಿನ ಪಂದ್ಯಗಳಲ್ಲಿ ಹೊಸ ಚೆಂಡಿನೊಂದಿಗೆ ಕಣಕ್ಕಿಳಿದಿದ್ದ ಇಶಾಂತ್‌ ಶರ್ಮಾ ಮತ್ತು ಮಹಮ್ಮದ್‌ ಶಮಿ ಆರಂಭದಲ್ಲೇ ಎದುರಾಳಿ ಬ್ಯಾಟಿಂಗ್‌ ಶಕ್ತಿಗೆ ಪೆಟ್ಟು ನೀಡಿ ಪ್ರವಾಸಿ ಬಳಗಕ್ಕೆ ಮೇಲುಗೈ ತಂದುಕೊಟ್ಟಿದ್ದರು.  ಉಮೇಶ್‌ ಯಾದವ್‌ ಹಿಂದಿನ ಪಂದ್ಯದಲ್ಲಿ ವಿಕೆಟ್‌ ಕಬಳಿಸಿಲ್ಲವಾದರೂ ಹೆಚ್ಚು ರನ್‌ ಬಿಟ್ಟುಕೊಟ್ಟಿರಲಿಲ್ಲ. ಸ್ಪಿನ್‌ ವಿಭಾಗದಲ್ಲಿ ಅಶ್ವಿನ್‌ ಮತ್ತು ಮಿಶ್ರಾ ಅವರ ಬಲ ಕೂಡ ಇದೆ. ಮೊದಲ ಪಂದ್ಯದಲ್ಲಿ ಮಿಂಚಿದ್ದ ಅಶ್ವಿನ್‌ ಎರಡನೇ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಐದು ಮತ್ತು ಎರಡನೇ ಇನಿಂಗ್ಸ್‌ನಲ್ಲಿ ಒಂದು ವಿಕೆಟ್‌ ಉರುಳಿಸಿದ್ದರು. ಮಿಶ್ರಾ ಕೂಡ ಮೂರು ವಿಕೆಟ್‌ ಪಡೆದು ವಿಂಡೀಸ್‌ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ್ದರು. ಸ್ಪಿನ್‌ ದಿಗ್ಗಜ ಅನಿಲ್‌ ಕುಂಬ್ಳೆ ಅವರ ಮಾರ್ಗದರ್ಶನದಲ್ಲಿ ತರಬೇತು ಗೊಂಡಿ ರುವ ಇವರಿಬ್ಬರೂ ಮೂರನೇ ಪಂದ್ಯ ದಲ್ಲೂ ಆತಿಥೇಯ ಬ್ಯಾಟ್ಸ್‌ಮನ್‌ಗಳನ್ನು ಸ್ಪಿನ್‌ ಬಲೆಯಲ್ಲಿ ಸಿಲುಕಿಸಲು ಉತ್ಸುಕರಾಗಿದ್ದಾರೆ.

ವಿಶ್ವಾಸದಲ್ಲಿ ವಿಂಡೀಸ್‌:  ಎರಡನೇ ಪಂದ್ಯದಲ್ಲಿ ಸೋಲಿನ ಸುಳಿಯಲ್ಲಿ ಸಿಲುಕಿ ಬಳಿಕ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ವಿಂಡೀಸ್‌ ತಂಡ ಕಳೆದುಕೊಂಡಿದ್ದ ವಿಶ್ವಾಸವನ್ನು ಮರಳಿ ಪಡೆದಿದೆ. ಆ್ಯಂಟಿಗುವಾದಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿ ಸೋಲು ಕಂಡಿದ್ದ ಜಾಸನ್‌ ಹೋಲ್ಡರ್‌ ಬಳಗ ಎರಡನೇ ಪಂದ್ಯದ ಮೊದಲ ಇನಿಂಗ್ಸ್‌ನಲ್ಲೂ 196ರನ್‌ಗಳಿಗೆ ಆಲೌಟ್‌ ಆಗಿತ್ತು.ಆದರೆ ಎರಡನೇ ಇನಿಂಗ್ಸ್‌ನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಜರ್ಮೈನ್‌ ಬ್ಲಾಕ್‌ವುಡ್‌, ರಾಸ್ಟನ್‌ ಚೇಸ್‌, ನಾಯಕ ಹೋಲ್ಡರ್‌ ಮತ್ತು ಶೇನ್‌ ಡೌರಿಚ್‌ ಅವರು ಅಮೋಘ ಆಟ ಆಡಿ ತಂಡ ಡ್ರಾ ಮಾಡಿಕೊಳ್ಳಲು ನೆರವಾಗಿದ್ದರು.ಆದರೆ ಆರಂಭಿಕರಾದ ಕ್ರೆಗ್‌ ಬ್ರಾಥ್‌ವೈಟ್‌, ರಾಜೇಂದ್ರ ಚಂದ್ರಿಕ, ಡರೆನ್‌ ಬ್ರಾವೊ ಮತ್ತು ಅನುಭವಿ ಮರ್ಲಾನ್‌ ಸ್ಯಾಮುಯೆಲ್ಸ್‌ ಅವರು ವೈಫಲ್ಯದಿಂದ ಹೊರಬಾರದಿರುವುದು ಹೋಲ್ಡರ್‌ ಅವರ ಚಿಂತೆಗೆ ಕಾರಣವಾಗಿದೆ. ಇವರು ಲಯಕಂಡುಕೊಂಡು ಆಡಿದರೆ ಭಾರತದ ಬೌಲರ್‌ಗಳು ವಿಕೆಟ್‌ ಉರುಳಿಸಲು ಸಾಕಷ್ಟು ಬೆವರು ಹರಿಸಬೇಕಾಗುತ್ತದೆ. ಆದರೆ ಶಾನನ್‌ ಗ್ಯಾಬ್ರಿಯಲ್‌, ಹೋಲ್ಡರ್‌ ಮತ್ತು ದೇವೇಂದ್ರ ಬಿಷೂ ಪರಿಣಾಮಕಾರಿ ದಾಳಿ ನಡೆಸಲು ವಿಫಲರಾಗಿದ್ದರು. ಭಾರತದ ಬ್ಯಾಟಿಂಗ್‌ ಶಕ್ತಿಗೆ ಪೆಟ್ಟು ನೀಡಿದರೆ ಮಾತ್ರ ಆತಿಥೇಯರು ಗೆಲುವಿನ ಕನಸು ಕಾಣಲು ಸಾಧ್ಯ. ಹೀಗಾಗಿ  ವಿಂಡೀಸ್‌ ತಂಡ ಬೌಲಿಂಗ್‌ ವಿಭಾಗಕ್ಕೆ ಹೆಚ್ಚು ಒತ್ತು ನೀಡುವ ಜೊತೆಗೆ ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು ಆಡುವುದು ಅಗತ್ಯ.

ತಂಡಗಳು ಇಂತಿವೆ

ಭಾರತ: ವಿರಾಟ್‌ ಕೊಹ್ಲಿ (ನಾಯಕ), ಮುರಳಿ ವಿಜಯ್‌, ಶಿಖರ್‌ ಧವನ್‌, ಕೆ.ಎಲ್‌. ರಾಹುಲ್‌, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರೋಹಿತ್‌ ಶರ್ಮ, ವೃದ್ಧಿಮಾನ್‌ ಸಹಾ (ವಿಕೆಟ್‌ ಕೀಪರ್‌), ಆರ್‌. ಅಶ್ವಿನ್‌, ಅಮಿತ್‌ ಮಿಶ್ರಾ, ರವೀಂದ್ರ ಜಡೇಜ, ಸ್ಟುವರ್ಟ್‌ ಬಿನ್ನಿ, ಭುವನೇಶ್ವರ ಕುಮಾರ್‌, ಮಹಮ್ಮದ್‌ ಶಮಿ, ಶಾರ್ದೂಲ್‌ ಠಾಕೂರ್‌, ಉಮೇಶ್‌ ಯಾದವ್‌ ಮತ್ತು ಇಶಾಂತ್‌ ಶರ್ಮ.

ವೆಸ್ಟ್‌ ಇಂಡೀಸ್‌:  ಜಾಸನ್‌ ಹೋಲ್ಡರ್‌ (ನಾಯಕ), ಕ್ರೆಗ್‌ ಬ್ರಾಥ್‌ವೈಟ್‌, ಶಾಯ್‌ ಹೋಪ್‌, ಡರೆನ್‌ ಬ್ರಾವೊ, ಮರ್ಲಾನ್‌ ಸ್ಯಾಮುಯೆಲ್ಸ್‌, ಜರ್ಮೈನ್‌ ಬ್ಲಾಕ್‌ವುಡ್‌, ರಾಸ್ಟನ್‌ ಚೇಸ್‌, ಲಿಯೊನ್‌ ಜಾನ್ಸನ್‌, ಶೇನ್‌ ಡೌರಿಚ್‌ (ವಿಕೆಟ್‌ ಕೀಪರ್‌), ದೇವೇಂದ್ರ ಬಿಷೂ, ಕಾರ್ಲೊಸ್‌ ಬ್ರಾಥ್‌ವೈಟ್‌, ಶಾನನ್‌ ಗ್ಯಾಬ್ರಿಯಲ್‌, ಮಿಗುಯೆಲ್‌ ಕಮಿನ್ಸ್‌ ಮತ್ತು ಅಲ್‌ಜಾರಿ ಜೋಸೆಫ್‌.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.