ಸೋಮವಾರ, ಜನವರಿ 20, 2020
19 °C

ಸರದಿ ಉಪವಾಸ ಸತ್ಯಾಗ್ರಹ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಮಾಡಲು ತಾಲ್ಲೂಕಿನ ಬಿಜನಗೇರಾ ಗ್ರಾಮದ ಹತ್ತಿರ ಸರ್ವೆ ನಂಬರ್ 30ರ ಜಾಗೆ ಗುರುತಿಸಲಾಗಿದೆ. ಕಕ್ಷಿದಾರರು, ನ್ಯಾಯವಾದಿಗಳು ಸೇರಿದಂತೆ ಸಾರ್ವಜನಿಕರಿಗೆ ಅನುಕೂಲಕರವಾಗಿಲ್ಲ. ಇದನ್ನು ವಿರೋಧಿಸಿ ವಕೀಲರ ಸಂಘವು ಮಂಗಳವಾರದಿಂದ ಸರದಿ ಉಪವಾಸ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪಾಂಡುರಂಗ ನಾಯಕ ಹೇಳಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸದಾಗಿ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಮಾಡಲು ಹೈಕೋರ್ಟ್ ರಿಜಸ್ಟ್ರಾರ್ ಅವರಿಂದ ರಚಿಸಲ್ಪಟ್ಟ ಸಮಿತಿಯು ಸರ್ಕಾರಕ್ಕೆ ಜಮೀನು ಕೋರಿದಾಗ ಸರ್ಕಾರವು ರಾಯಚೂರು ತಾಲ್ಲೂಕಿನ ಬಿಜನಗೇರಾ ಗ್ರಾಮದ ಹತ್ತಿರ ಸರ್ವೆ ನಂಬರ್ 30ರ ಜಾಗೆ ಗುರುತಿಸಿದೆ. ಆದರೆ ಈ ಜಾಗೆ ಕಕ್ಷಿದಾರರು, ಸಾರ್ವಜನಿಕರು, ನ್ಯಾಯವಾದಿಗಳ ದೃಷ್ಟಿಯಿಂದ ಸಾಕಷ್ಟು ಅನಾನುಕೂಲಕ್ಕೆ ಕಾರಣವಾಗಲಿದೆ ಎಂದು ಹೇಳಿದರು.ಈ ಪ್ರಸ್ತಾವನೆ ಬಂದಾಗಲೇ ಸಂಘವು ವಿರೋಧ ವ್ಯಕ್ತಪಡಿಸಿತ್ತು. ಅಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಆದರೆ ಆಗುವ ಅನಾನುಕೂಲತೆಗಳ ಬಗ್ಗೆ ವಿವರಣೆ ನೀಡಲಾಗಿತ್ತು. ಜಿಲ್ಲಾ ಕೇಂದ್ರದಲ್ಲಿ ಈಗಿರುವ ನ್ಯಾಯಾಲಯಕ್ಕೆ ಬರಲು ಜಿಲ್ಲೆಯ ವಿವಿಧ ಕಕ್ಷಿದಾರರಿಗೆ ಕಷ್ಟವಾಗುತ್ತಿದೆ. ಬಸ್, ಆಟೋಗೆ ಹಣ ತೆತ್ತು ಸಮಸ್ಯೆ ಎದುರಿಸುತ್ತಾರೆ.ನಗರದಿಂದ 7-8 ಕೀ.ಮಿ ದೂರ ಇರುವ ಪ್ರದೇಶಕ್ಕೆ ನ್ಯಾಯಾಲಯ ಸಂಕೀರ್ಣ ನಿರ್ಮಿಸಿದರೆ ಕಷ್ಟವಾಗಲಿದೆ ಎಂಬುದನ್ನು ಮನವರಿಕೆ ಮಾಡಿಕೊಡುವ ಯತ್ನ ಮಾಡಲಾಗಿದೆ ಎಂದು ತಿಳಿಸಿದರು.ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಆಡಳಿತಾತ್ಮಕ ಪ್ರಕ್ರಿಯೆ ನಡೆದಿದೆ. ಅದೇ ಪ್ರಕಾರ ಈ ಜಿಲ್ಲೆಯಲ್ಲೂ ನಡೆದಿದೆ. ನ್ಯಾಯಾಲಯ ಸಂಕೀರ್ಣ ನಿರ್ಮಾಣ ಎಂಬುದು 50 ವರ್ಷಗಳ ದೂರದೃಷ್ಟಿ ಯೋಜನೆ. ಬೇರೆ ಜಿಲ್ಲೆಯಲ್ಲಿ ವಕೀಲರು, ಕಕ್ಷಿದಾರರು, ಸಾರ್ವಜನಿಕರಿಗೆ ಅನುಕೂಲಕರ ಆಗುವಂಥ ಜಾಗೆ ಗುರುತಿಸಿ ಕೊಡಲಾಗಿದೆ. ಆದರೆ ಇಲ್ಲಿ ಗುರುತಿಸಿದ ಜಾಗೆ ಅನುಕೂಲಕರವಾಗಿಲ್ಲ ಎಂದು ಸಮಸ್ಯೆ ವಿವರಿಸಿದರು.ಸದ್ಯ ಬಿಜನಗೇರಾ ಸಮೀಪ ಗುರುತಿಸಿದ ಜಾಗೆ ಹೊರತುಪಡಿಸಿ ನಗರಕ್ಕೆ ಸಮೀಪ ಇರುವ ಕೃಷಿ ವಿವಿ ಹತ್ತಿರ, ರಿಮಾಂಡ್ ಹೋಮ್ ಹತ್ತಿರ ಅಥವಾ ವಕೀಲರು, ಕಕ್ಷಿದಾರರು, ಸಾರ್ವಜನಿಕರ ಅನುಕೂಲಕರ ರೀತಿಯಲ್ಲಿ ಇರುವ ಜಾಗೆ ಗುರುತಿಸಬೇಕು ಎಂಬುದು ಸಂಘದ ಪ್ರಮುಖ ಬೇಡಿಕೆ ಆಗಿದೆ ಎಂದು ತಿಳಿಸಿದರು.ವಕೀಲರ ಸಂಘದ ಮನವಿಗೆ ಸೂಕ್ತ ಸ್ಪಂದನೆ ದೊರಕಿಲ್ಲ. ಹೀಗಾಗಿ ಈಗಾಗಲೇ ಸಂಘವು ಪ್ರತಿಭಟನೆ ಆರಂಭಿಸಿದೆ. ಪ್ರಥಮ ಹಂತವಾಗಿ ಕೆಂಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಗಿದೆ. ಮಂಗಳವಾರದಿಂದ ನ್ಯಾಯಾಲಯದ ಆವರಣದಲ್ಲಿ ಸರದಿ ಉಪವಾಸ ಸತ್ಯಾಗ್ರಹ ಆರಂಭಿಸಲಾಗುತ್ತಿದೆ ಎಂದು ಹೇಳಿದರು.ಫೆಬ್ರುವರಿ 1ರವರೆಗೆ ಸರದಿ ಉಪವಾಸ ಸತ್ಯಗ್ರಹ ನಡೆಯುವುದು. ಫೆಬ್ರುವರಿ 2ರಿಂದ ವಕೀಲರ ಸಂಘವು ಈಗಾಗಲೇ ಸಭೆಯಲ್ಲಿ ತೀರ್ಮಾನಿಸಿದಂತೆ ಎಲ್ಲ ವಕೀಲರು ಕೋರ್ಟ್ ಕಲಾಪದಿಂದ ದೂರ ಉಳಿಯಲಿದ್ದಾರೆ ಎಂದು ತಿಳಿಸಿದರು.ಸಂಘದ ಹೋರಾಟಕ್ಕೆ ಶಾಸಕರು, ಸಂಘಟನೆಗಳು, ಜನಪ್ರತಿನಿಧಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಬಸನಗೌಡ ಪಾಟೀಲ ಜಂಬಲದಿನ್ನಿ ಪತ್ರಿಕಾಗೋಷ್ಠಿಯಲ್ಲಿದ್ದರು.

 

ಪ್ರತಿಕ್ರಿಯಿಸಿ (+)