ಸರಬ್ಜಿತ್‌ಗೆ ಕ್ಷಮಾದಾನ

7

ಸರಬ್ಜಿತ್‌ಗೆ ಕ್ಷಮಾದಾನ

Published:
Updated:
ಸರಬ್ಜಿತ್‌ಗೆ ಕ್ಷಮಾದಾನ

ಇಸ್ಲಾಮಾಬಾದ್ (ಪಿಟಿಐ): ಅಚ್ಚರಿದಾಯಕ ಬೆಳವಣಿಗೆಯಲ್ಲಿ, ಪಾಕಿಸ್ತಾನ ಸರ್ಕಾರವು  ಸರಬ್ಜಿತ್ ಸಿಂಗ್ ಅವರ ಮೇಲಿನ ಗಲ್ಲು ಶಿಕ್ಷೆ ರದ್ದುಗೊಳಿಸಿದೆ.

ಬಾಂಬ್ ಸ್ಫೋಟಗೊಳಿಸಿದ್ದ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಮರಣದಂಡನೆಗೆ ಒಳಗಾಗಿದ್ದ ಸರಬ್ಜಿತ್ ಸಿಂಗ್‌ನ (49) ಗಲ್ಲು ಶಿಕ್ಷೆಯನ್ನು ಪಾಕಿಸ್ತಾನ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ರದ್ದುಗೊಳಿಸಿದ್ದು, ಅಲ್ಲಿನ ಸರ್ಕಾರ ಅವರನ್ನು ಶೀಘ್ರವೇ ಬಿಡುಗಡೆಗೊಳಿಸುವ ಸಾಧ್ಯತೆ ಇದೆ.

ಸರಬ್ಜಿತ್ ಅವರಿಗೆ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿ ಜರ್ದಾರಿ ಆದೇಶ ಹೊರಡಿಸಿದ್ದಾರೆ.  ಅಲ್ಲದೇ ಸರಬ್ಜಿತ್ ಜೀವಾವಧಿ ಶಿಕ್ಷೆಯ ಅವಧಿ ಪೂರೈಸಿದ್ದಲ್ಲಿ ಅವರನ್ನು ತಕ್ಷಣಕ್ಕೆ ಬಿಡುಗಡೆ ಮಾಡುವಂತೆಯೂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸರಬ್ಜಿತ್, ಸದ್ಯಕ್ಕೆ ಲಾಹೋರ್‌ನ ಕೋಟ್ ಲಖಪತ್ ಜೈಲಿನಲ್ಲಿ ಬಂಧಿಯಾಗಿದ್ದು, 22 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. 1990ರಲ್ಲಿ ಪಂಜಾಬ್ ಪ್ರಾಂತ್ಯದಲ್ಲಿ ಸರಣಿ ಬಾಂಬ್ ಸ್ಫೋಟಿಸಿ 14 ಜನರ ಸಾವಿಗೆ ಕಾರಣರಾದ ಆರೋಪದ ಮೇಲೆ ಪಾಕಿಸ್ತಾನದ ಸೇನಾ ಕಾಯ್ದೆ ಅಡಿಯಲ್ಲಿ ಅವರಿಗೆ ಮರಣದಂಡನೆ ವಿಧಿಸಲಾಗಿತ್ತು.

ಅಧ್ಯಕ್ಷರು ಕಳುಹಿಸಿದ ಈ ಪ್ರಸ್ತಾಪದ ಹಿನ್ನೆಲೆಯಲ್ಲಿ ಪಾಕ್ ಕಾನೂನು ಸಚಿವ ಫಾರೂಕ್ ನಯೇಕ್, ಸರಬ್ಜಿತ್ ಬಿಡುಗಡೆಗೆ ಸೂಚಿಸಿದ್ದು, ಒಳಾಡಳಿತ ಸಚಿವಾಲಯ ಹಾಗೂ ಪಂಜಾಬ್ ಪ್ರಾಂತ್ಯದ ಗೃಹ ಇಲಾಖೆ ಔಪಚಾರಿಕ ವಿಧಿಗಳನ್ನು ಪೂರೈಸಿದ ನಂತರ ಸಿಂಗ್ ಅವರನ್ನು ವಾರದೊಳಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ರಾಜಸ್ತಾನ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಪಾಕ್‌ನ ಸೂಕ್ಷ್ಮಜೀವಿಶಾಸ್ತ್ರಜ್ಞ ಖಲೀಲ್ ಚಿಸ್ತಿ ಅವರನ್ನು ಮಾನವೀಯತೆ ಆಧಾರದಲ್ಲಿ ಭಾರತ ಇತ್ತೀಚೆಗೆ ಬಿಡುಗಡೆ ಮಾಡಿದ್ದು, ಅದಕ್ಕೆ ಪ್ರತಿಯಾಗಿ ಪಾಕ್ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಇದರಿಂದಾಗಿ ಸರಬ್ಜಿತ್ ಬಿಡುಗಡೆಗೆ ದಶಕಗಳಿಂದ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಅವರ ಕುಟುಂಬ ಸದಸ್ಯರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.

ಗುರುತಿಸುವಿಕೆಯಲ್ಲಿ ಲೋಪ : ಬಾಂಬ್ ಸ್ಫೋಟದ ಪ್ರಕರಣದಲ್ಲಿ ತಮ್ಮನ್ನು ಆರೋಪಿಯಾಗಿ ತಪ್ಪಾಗಿ ಗುರುತಿಸಲಾಗಿದೆ ಎಂದು ಸರಬ್ಜಿತ್ ವಾದಿಸುತ್ತ ಬಂದಿದ್ದರು. ತಮ್ಮ ವಿರುದ್ಧ ಎಫ್‌ಐಆರ್ ಸಹ ದಾಖಲಾಗಿಲ್ಲ. ನಾನು ಮಾಡದ ತಪ್ಪಿಗಾಗಿ 22 ವರ್ಷ ಜೈಲಿನಲ್ಲಿ ಕಳೆದಿದ್ದೇನೆ ಎಂದೂ ಅವರು ಹೇಳುತ್ತಿದ್ದರು.

ಮದ್ಯಪಾನ ಮಾಡಿದ್ದ ಸರಬ್ಜಿತ್ ಅಮಲಿನಲ್ಲಿ ಗಡಿ ದಾಟಿ ಹೋಗಿದ್ದರು. ಆಗ ಪಾಕ್ ಅಧಿಕಾರಿಗಳು ಬಂಧಿಸಿದ್ದರು ಎಂದು ಸರಬ್ಜಿತ್ ಕುಟುಂಬ ವಾದಿಸುತ್ತಿತ್ತು.

ಮಾನವ ಹಕ್ಕು ಸಂಘಟನೆಗಳ ಒತ್ತಡ, ಸರಬ್ಜಿತ್ ಕುಟುಂಬ ಸದಸ್ಯರ ಮನವಿಯ ಮೇರೆಗೆ ಪಾಕ್ ಸರ್ಕಾರ ಅವರ ಗಲ್ಲು ಶಿಕ್ಷೆಯನ್ನು ಮುಂದೂಡುತ್ತಾ ಬಂದಿತ್ತು.  2008ರಲ್ಲಿ ಅವರ ಗಲ್ಲು ಶಿಕ್ಷೆಗೆ ದಿನ ನಿಗದಿಯಾಗಿದ್ದರೂ ಆಗ ಪ್ರಧಾನಿಯಾಗಿದ್ದ ಯೂಸುಫ್ ರಜಾ ಗಿಲಾನಿ ಅದನ್ನು ತಡೆದಿದ್ದರು. ಅವರಿಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆ ರದ್ದುಗೊಳಿಸುವಂತೆ ಭಾರತ ಸಹ ಪಾಕ್ ಸರ್ಕಾರಕ್ಕೆ ಮನವಿ ಮಾಡಿಕೊಂಡಿತ್ತು. ಅಜ್ಮೇರ್‌ನ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾಕ್ಕೆ ಕೆಲ ತಿಂಗಳ ಹಿಂದೆ ಪಾಕ್ ಅಧ್ಯಕ್ಷ ಜರ್ದಾರಿ ಭೇಟಿ ನೀಡಿದಾಗಲೂ ಸರಬ್ಜಿತ್ ವಿಚಾರ ಪ್ರಸ್ತಾಪಿಸಲಾಗಿತ್ತು.

ಈ ಹಿಂದೆ 4 ಸಲ ಕ್ಷಮಾದಾನದ ಅರ್ಜಿ ಸಲ್ಲಿಸಿದ್ದ ಸರಬ್ಜಿತ್ ಈ ಬೆಳವಣಿಗೆ ಹಿನ್ನೆಲೆಯಲ್ಲಿ 5ನೇ ಬಾರಿ ಅಧ್ಯಕ್ಷ ಜರ್ದಾರಿ ಅವರಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಜತೆ 1 ಲಕ್ಷ ಭಾರತೀಯರು ಸಹಿ ಹಾಕಿದ ಪತ್ರ ಲಗತ್ತಿಸಲಾಗಿತ್ತು.

ಅವರನ್ನು ಬಿಡುಗಡೆ ಮಾಡುವಂತೆ ದೆಹಲಿ ಜಾಮಾ ಮಸೀದಿಯ ಮುಖ್ಯಸ್ಥ ಸಯೀದ್ ಅಹ್ಮದ್ ಬುಖಾರಿ ಹಾಗೂ ಅಜ್ಮೀರ್ ದರ್ಗಾದ ಉಸ್ತುವಾರಿ ಹೊತ್ತಿರುವ ಸಯ್ಯೀದ್ ಮಹಮ್ಮದ್ ಯಾಮಿನ್ ಹಷ್ಮಿ ಜರ್ದಾರಿ ಅವರಿಗೆ ನೇರವಾಗಿ ಬರೆದಿದ್ದ ಪತ್ರವನ್ನೂ ಕಳುಹಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry