ಸರಬ್‌ಜಿತ್ ಶಿಕ್ಷೆ ಜೀವಾವಧಿಗೆ ಇಳಿಸಿ - ಅನ್ಸರ್ ಬರ್ನಿ

7

ಸರಬ್‌ಜಿತ್ ಶಿಕ್ಷೆ ಜೀವಾವಧಿಗೆ ಇಳಿಸಿ - ಅನ್ಸರ್ ಬರ್ನಿ

Published:
Updated:
ಸರಬ್‌ಜಿತ್ ಶಿಕ್ಷೆ ಜೀವಾವಧಿಗೆ ಇಳಿಸಿ - ಅನ್ಸರ್ ಬರ್ನಿ

ಇಸ್ಲಾಮಾಬಾದ್(ಪಿಟಿಐ): ಪಾಕಿಸ್ತಾನದಲ್ಲಿ ಬಾಂಬ್ ಸ್ಫೋಟ ಸಂಚಿನ ಆರೋಪಕ್ಕೆ ಗುರಿಯಾಗಿರುವ ಭಾರತೀಯ ಪ್ರಜೆ ಸರಬ್‌ಜಿತ್ ಸಿಂಗ್ ಅವರಿಗೆ ವಿಧಿಸಲಾಗಿರುವ ಶಿಕ್ಷೆಯನ್ನು ಮಾನವೀಯ ನೆಲೆಯಲ್ಲಿ ಜೀವಾವಧಿ ಶಿಕ್ಷೆಗೆ ಬದಲಾಯಿಸಬೇಕು ಎಂದು ಖ್ಯಾತ ಮಾನವ ಹಕ್ಕುಗಳ ಕಾರ್ಯಕರ್ತ ಅನ್ಸರ್ ಬರ್ನಿ ಅವರು ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರಿಗೆ ಮನವಿ  ಮಾಡಿದ್ದಾರೆ.ಈ ಸಂಬಂಧ ಜರ್ದಾರಿಗೆ ಪತ್ರ ಬರೆದಿರುವ ಬರ್ನಿ, `21 ವರ್ಷಗಳಿಂದ ಸರಬ್‌ಜಿತ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಮಾನವೀಯತೆ, ಮಾನವ ಘನತೆ, ನ್ಯಾಯ ಮತ್ತು ಮಾನವ ಹಕ್ಕುಗಳ ಹಿತಾಸಕ್ತಿಯಿಂದ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಾಡು ಮಾಡಬೇಕು~ ಎಂದು ಆಗ್ರಹಿಸಿದ್ದಾರೆ.

ಸರಬ್‌ಜಿತ್ ಪರವಾಗಿ ತಾವು ಈಗಾಗಲೇ ಹಲವು ಕ್ಷಮಾದಾನ ಅರ್ಜಿಗಳನ್ನು ಸಲ್ಲಿಸಿರುವುದಾಗಿಯೂ ತಿಳಿಸಿದ್ದಾರೆ.ಈಗಾಗಲೇ ಸುದೀರ್ಘ ಕಾಲ ಜೈಲು ಶಿಕ್ಷೆ ಅನುಭವಿಸಿರುವ ಕೈದಿಯೊಬ್ಬನನ್ನು ಗಲ್ಲಿಗೇರಿಸುವುದು ಎಂದರೆ, ಅದು ನ್ಯಾಯವನ್ನು ಹತ್ಯೆ ಮಾಡಿದಂತೆಯೇ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.82 ವರ್ಷದ ಪಾಕಿಸ್ತಾನದ ಪ್ರಜೆ ಖಲೀಲ್ ಚಿಸ್ತಿಗೆ ಸ್ವದೇಶಕ್ಕೆ ತೆರಳಲು ಭಾರತದ ಸುಪ್ರೀಂಕೋರ್ಟ್ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಜರ್ದಾರಿ ಅವರಿಗೆ ಬರ್ನಿ ಈ ಮನವಿ ಮಾಡಿದ್ದಾರೆ.1992 ಏಪ್ರಿಲ್‌ನಲ್ಲಿ ಅಜ್ಮೇರ್‌ನಲ್ಲಿ ನಡೆದಿದ್ದ  ಕಲಹದಲ್ಲಿ ವ್ಯಕ್ತಿಯೊಬ್ಬನ್ನು ಕೊಲೆ ಮಾಡಿದ ಆರೋಪವನ್ನು ಚಿಸ್ತಿ ಮೇಲೆ ಹೊರಿಸಲಾಗಿತ್ತು. ತಮ್ಮ ಸಂಬಂಧಿಕರನ್ನು ಭೇಟಿ ಮಾಡುವುದಕ್ಕಾಗಿ ಚಿಸ್ತಿ ಆಗಮಿಸಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು. 18 ವರ್ಷಗಳ ಸುದೀರ್ಘ ವಿಚಾರಣೆಯ ನಂತರ ಕಳೆದ ವರ್ಷದ ಜನವರಿ ತಿಂಗಳಿನಲ್ಲಿ ಚಿಸ್ತಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.ಪ್ರಸ್ತುತ ಲಾಹೋರ್‌ನ ಕೋಟ್ ಲಖ್‌ಪತ್ ಜೈಲಿನಲ್ಲಿರುವ  ಸರಬ್‌ಜಿತ್ ಅವರ ವಿಚಾರಣೆಯನ್ನು ನ್ಯಾಯಯುತವಾಗಿ ನಡೆಸಿಲ್ಲ. ಅವರು ತಪ್ಪಾಗಿ ಗುರುತಿಸಲಾದ ಪ್ರಕರಣದ ಸಂತ್ರಸ್ತರಾಗಿದ್ದಾರೆ ಎಂದು ಬರ್ನಿ ಪತ್ರದಲ್ಲಿ ಬರೆದಿದ್ದಾರೆ.`ಮುಗ್ಧರನ್ನು ಅಥವಾ ತಪ್ಪು ಸಾಕ್ಷ್ಯಾಧಾರಗಳಿಂದ ಶಿಕ್ಷೆಗೆ ಗುರಿಯಾದವರನ್ನು,  ಜೀವಾವಧಿ ಶಿಕ್ಷೆಗಿಂತಲೂ ಅಧಿಕ ಸಮಯ ಜೈಲಿನಲ್ಲಿ ಕಳೆದವರನ್ನು ಗಲ್ಲಿಗೇರಿಸಬೇಕು ಎಂದು ಇಸ್ಲಾಂನಲ್ಲಿ ಎಲ್ಲಿ ಹೇಳಿದೆ ಎಂದು ಕೇಳಲು ಬಯಸುತ್ತೇನೆ~ ಎಂದು ಅನ್ಸರ್ ಸವಾಲು ಹಾಕಿದ್ದಾರೆ.`ಈಗಾಗಲೇ ಜೀವಾವಧಿ ಶಿಕ್ಷೆ ಪೂರೈಸಿರುವ ಕೈದಿಯೊಬ್ಬರನ್ನು ಪ್ರಜಾಪ್ರಭುತ್ವದ ಸರ್ಕಾರವೊಂದು ಹೇಗೆ ಗಲ್ಲಿಗೇರಿಸುತ್ತದೆ?~- ಎಂದೂ ಬರ್ನಿ ಕೇಳಿದ್ದಾರೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ. 14 ಜನರ ಸಾವಿಗೆ ಕಾರಣವಾದ ನಾಲ್ಕು ಬಾಂಬ್ ಸ್ಫೋಟ ಸಂಚಿನಲ್ಲಿ ಭಾಗಿಯಾದ ಆರೋಪ ಹೊತ್ತಿರುವ  ಸರಬ್‌ಜಿತ್ ಅವರಿಗೆ ಸೇನಾ ಕಾಯ್ದೆಯ ಅಡಿಯಲ್ಲಿ ಮರಣದಂಡನೆ ವಿಧಿಸಲಾಗಿದೆ. ಸಿಂಗ್ ಅವರು 1990ರಿಂದಲೂ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry