ಸರಳ ನಾಟಿ ಯಂತ್ರ

7

ಸರಳ ನಾಟಿ ಯಂತ್ರ

Published:
Updated:
ಸರಳ ನಾಟಿ ಯಂತ್ರ

ಮಲೆನಾಡಿನಲ್ಲಿ ಬೇಸಾಯದ ಕೆಲಸಗಳಿಗೆ ಕಾರ್ಮಿಕರ ಕೊರತೆ ಹೊಸದಲ್ಲ. ನಾಲ್ಕಾರು ವರ್ಷಗಳಿಂದ ರೈತರು ಪರಸ್ಪರ ಸಹಕಾರದ ಮುರಿಯಾಳು (ಮುಯ್ಯಾಳು) ವ್ಯವಸ್ಥೆ ರೂಢಿಸಿಕೊಂಡಿದ್ದಾರೆ.

 

ಆದರೂ ಗದ್ದೆ ನಾಟಿಯಂತಹ ಕಾರ್ಯ ಸುಲಭವಲ್ಲ. ಕೂಲಿಯಾಳುಗಳನ್ನು ಹುಡುಕುತ್ತ ಊರೂರು ಅಲೆದರೂ ಬೇಕಾಗುವಷ್ಟು ಆಳುಗಳು ಸಿಗುವುದಿಲ್ಲ.  ಭತ್ತ ಬೆಳೆಯಬೇಕೆ ಬೇಡವೇ ಎಂದು ರೈತ ಯೋಚಿಸುವಂತಾಗಿದೆ.ರೈತರೇ ಸ್ವತಃ ನಾಟಿ ಮಾಡಿಕೊಳ್ಳಬಹುದಾದ ಸರಳ ನಾಟಿ ಯಂತ್ರವನ್ನು ಶಿರಸಿ ತಾಲ್ಲೂಕಿನ ಬಾಳೆಗದ್ದೆಯ ರಾಘವೇಂದ್ರ ಹೆಗಡೆ ಅಭಿವೃದ್ಧಿಪಡಿಸಿದ್ದಾರೆ. ರಾಘವೇಂದ್ರ ಹೆಗಡೆ ರೂಪಿಸಿದ ನಾಟಿ ಯಂತ್ರದ ತಂತ್ರಜ್ಞಾನ ಹೊಸತೇನಲ್ಲ.ಆದರೆ ಈ ಯಂತ್ರದ ಮಾದರಿ ಮಲೆನಾಡಿನ ತುಂಡು ಗದ್ದೆಗಳಿಗೆ ಅನುಕೂಲ. 20 ರಿಂದ 28 ಕಿಲೋ ಭಾರದ ಪುಟ್ಟ ಯಂತ್ರವನ್ನು ಬೆಟ್ಟದ ತುದಿ ಮೂಲೆಯ ಗದ್ದೆಗೂ ಒಯ್ದು ನಾಟಿ ಮಾಡಿ ವಾಪಸ್ ಹೊತ್ತು ತರಬಹುದು. ಅದರ ಬೆಲೆಯೂ ಹೆಚ್ಚಲ್ಲ. ನಾಲ್ಕು ಸಾಲು ಮತ್ತು ಆರು ಸಾಲಿನ ಎರಡು ಮಾದರಿಯ ಯಂತ್ರಗಳ ಬೆಲೆ ಅಂದಾಜು 15ಸಾವಿರ ರೂಪಾಯಿ.ಒಂದು ಎಕರೆಯಲ್ಲಿ ನಾಟಿ ಮಾಡಲು ಕನಿಷ್ಠ 15 ಕಾರ್ಮಿಕರು ಬೇಕು. ಆದರೆ ಸೂರ್ಯ ಸರಳ ಯಂತ್ರದಲ್ಲಿ ನಾಟಿಗೆ ಇಬ್ಬರು ಸಾಕು. ಇದು ಮಾನವ ಚಾಲಿತ ಯಂತ್ರ. ಇಂಧನ ಬೇಡ. ಯಂತ್ರದಿಂದ ದಿನಕ್ಕೆ ಒಂದು ಎಕರೆಯಲ್ಲಿ ನಾಟಿ ಮಾಡಬಹುದು.ಹಿಮ್ಮುಖವಾಗಿ ಯಂತ್ರದ ಹಿಡಿಕೆ ಹಿಡಿದು ಒಬ್ಬ ಎಳೆಯುತ್ತ ಸಾಗಿದರೆ ಇನ್ನೊಬ್ಬ ಯಂತ್ರದ ತಟ್ಟೆಯಲ್ಲಿ ಪೇರಿಸಿಟ್ಟ ಸಸಿ ಮುಂದೂಡಬೇಕು. ಯಂತ್ರದಲ್ಲಿರುವ ಪಿನ್ ಸಸಿಯ ಬೇರನ್ನು ನೆಲಕ್ಕೆ ಊರಿ ಮಣ್ಣಿನಲ್ಲಿ ಭದ್ರಗೊಳಿಸುತ್ತದೆ.ಸಾಮಾನ್ಯ ಬಿತ್ತನೆ ಮಾಡಿ ಕಿತ್ತು ತಂದ ಸಸಿಗಳನ್ನು ಸಹ ಯಂತ್ರದಲ್ಲಿ ನಾಟಿ ಮಾಡಲು ಸಾಧ್ಯವಿದೆ. ಆದರೆ ಪ್ಲಾಸ್ಟಿಕ್ ಹಾಳೆ ಮೇಲೆ ಮಣ್ಣು ಗೊಬ್ಬರ ಮಿಶ್ರಣದಲ್ಲಿ ಸಿದ್ಧಪಡಿಸಿಕೊಂಡ ಸಸಿಗಳ ಯಂತ್ರದ ನಾಟಿ ಸುಲಭ.ಬಿತ್ತನೆ ಮಾಡಿದ 8ರಿಂದ 21ನೇ ದಿನಗಳ ನಡುವೆ ನಾಟಿ ಮಾಡಿದರೆ ಸಸಿಗಳ ಬೇರು ಗಂಟು ಕಟ್ಟಿಕೊಳ್ಳುವುದಿಲ್ಲ. ನಾಟಿ ಮಾಡಿದ ಆರು ದಿನಗಳ ನಂತರ ಮಧ್ಯಂತರ ಉಳುಮೆ ಮಾಡಿದರೆ ಕಳೆ ನಿಯಂತ್ರಣಕ್ಕೆ ಬರುತ್ತದೆ.ಕಡಿಮೆ ವೆಚ್ಚದ ಸೂರ್ಯ ಸರಳ ನಾಟಿ ಯಂತ್ರ ಅಭಿವೃದ್ಧಿ ಪಡಿಸಲು ಕಾನಕೊಪ್ಪದ ಸುಭಾಶ್ಚಂದ್ರ ಶಿರಾಲಿ, ಮಣದೂರಿನ ಶ್ರೀಪಾದ ಹೆಗಡೆ ಕೈ ಜೋಡಿಸಿದ್ದಾರೆ. ಈ ವರ್ಷ ಪ್ರಾಯೋಗಿಕವಾಗಿ ಸಿದ್ಧಪಡಿಸಿದ ಯಂತ್ರ ಗದ್ದೆಗಿಳಿದು ರೈತನಲ್ಲಿ ಭರವಸೆ ಮೂಡಿಸಿದೆ. ಸಣ್ಣಪುಟ್ಟ ಲೋಪ ಸರಿಪಡಿಸಿ ಮುಂದಿನ ಮುಂಗಾರು ಹೊತ್ತಿಗೆ ರೈತರಿಗೆ ಖರೀದಿಗೆ ಲಭ್ಯವಾಗುವಂತೆ ಮಾಡುತ್ತೇವೆ~ ಎನ್ನುತ್ತಾರೆ ರಾಘವೇಂದ್ರ ಹೆಗಡೆ.ಕೃಷಿ ಇಲಾಖೆ ಸಹಾಯ ಧನ ಯೋಜನೆಯಲ್ಲಿ ನೀಡುವ ಬೃಹತ್ ನಾಟಿ ಯಂತ್ರವನ್ನು ಮಲೆನಾಡಿನ ಚಿಕ್ಕ ಚಿಕ್ಕ ಗದ್ದೆಗಳಲ್ಲಿ ಇಳಿಸಲು ಕಷ್ಟ. ಅದು ಸಣ್ಣ ರೈತರಿಗೆ ಎಟುಕುವುದಿಲ್ಲ.ಸೂರ್ಯ ಸರಳ ನಾಟಿ ಯಂತ್ರದ ಬಗ್ಗೆ ಹೆಚ್ಚಿನ ಮಾಹಿತಿಗೆ ರಾಘವೇಂದ್ರ ಹೆಗಡೆ ಅವರನ್ನು ಸಂಪರ್ಕಿಬಹುದು. ಅವರ  ಮೊಬೈಲ್ ನಂಬರ್: 9482413585.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry