ಸರಳ, ಸಜ್ಜನಿಕೆಯ ನೇರ ರಾಜಕಾರಣಿ ಆಚಾರ್ಯ

7

ಸರಳ, ಸಜ್ಜನಿಕೆಯ ನೇರ ರಾಜಕಾರಣಿ ಆಚಾರ್ಯ

Published:
Updated:

ಶಿವಮೊಗ್ಗ: ಯಾವುದೇ ಅಪವಾದಗಳಿಗೆ ಒಳಗಾಗದೇ, ಸರಳ ಸಜ್ಜನಿಕೆಯ ನೇರ, ಸ್ಪಷ್ಟ ರಾಜಕಾರಣಕ್ಕೆ ಹೆಸರಾದ ವ್ಯಕ್ತಿ ವಿ.ಎಸ್. ಆಚಾರ್ಯ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಹೇಳಿದರು.

ನಗರದ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಉನ್ನತ ಶಿಕ್ಷಣ ಸಚಿವ ವಿ.ಎಸ್. ಆಚಾರ್ಯ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಅವರು ಮಾತನಾಡಿದರು.ಅಪಾರ ತಾಳ್ಮೆ ಹೊಂದಿದ್ದ  ಸೌಮ್ಯ ಸ್ವಭಾವದ ವಿ.ಎಸ್.ಆಚಾರ್ಯ, ರಾಜಕೀಯದಲ್ಲಿ ಹೊಂದಿದ್ದಂತಹ ಸ್ಪಷ್ಟ ನಿಲುವುಗಳು ಪ್ರಸ್ತುತ ರಾಜಕಾರಣಕ್ಕೆ ಮಾದರಿಯಾಗಿವೆ. ಪ್ರಸ್ತುತ ವ್ಯವಸ್ಥೆಯಲ್ಲಿ ದೇಶದ ಮುನ್ನಡೆಗೆ ಯುವಶಕ್ತಿ ಬೇಕು ಎಂದು ನಂಬಿದ್ದ ಆಚಾರ್ಯರು ಕೊನೆಯವರೆಗೂ ಯುವಶಕ್ತಿಯನ್ನು ಬೆಂಬಲಿಸುತ್ತಾ ಬಂದವರು ಎಂದರು.ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ. ಭಾನುಪ್ರಕಾಶ್ ಮಾತನಾಡಿ, 1968ರಲ್ಲಿಯೇ ಉಡುಪಿ ಪುರಸಭೆ ಅಧ್ಯಕ್ಷರಾಗಿ ಸತತ ಹೋರಾಟದ ಮೂಲಕ ಉಡುಪಿಗೆ ಶಾಶ್ವತ ನೀರಿನ ಸೌಕರ್ಯ ಕಲ್ಪಿಸಿದ್ದರು. ಯಾರಾದರೂ ಅಧ್ಯಯನ ಶೀಲತೆ, ಸೌಮ್ಯತೆ ಹಾಗೂ ರಾಜಕೀಯದಲ್ಲಿ ವಿಶೇಷ ವಿಶ್ಲೇಷಣಾತ್ಮಕವಾಗಿ ಮಾತನಾಡುವ ಕಲೆ ಹೊಂದಿದ್ದರೆ ಅದು ಆಚಾರ್ಯರು ಮಾತ್ರವೇ ಎಂದ ಅವರು, ಅವರು ನಡೆದ ಹಾದಿಯಲ್ಲಿ ನಾವೆಲ್ಲರೂ ಸಾಗುವ ಮೂಲಕ ಅವರಿಗೆ ನಮ್ಮ ಕೃತಜ್ಞತೆ ಸಲ್ಲಿಸಬೇಕು ಎಂದರು.ಶಾಸಕ ಕೆ.ಜಿ. ಕುಮಾರಸ್ವಾಮಿ, ನಟರಾಜ್ ವಿ.ಎಸ್. ಆಚಾರ್ಯರ ವ್ಯಕ್ತಿತ್ವ ಹಾಗೂ ರಾಜಕೀಯದಲ್ಲಿ ಅವರ ಸ್ಥಾನ-ಮಾನಗಳ ತಮ್ಮ ಅನುಭವ ಹಂಚಿಕೊಂಡರು.

ಸಭೆಯಲ್ಲಿ ಜಿ.ಪಂ. ಅಧ್ಯಕ್ಷರಾದ ಶುಭಾಕೃಷ್ಣಮೂರ್ತಿ, ರಾಜ್ಯ  ಕ್ರೀಡಾಪ್ರಾಧಿಕಾರದ ಉಪಾಧ್ಯಕ್ಷ ಗಿರೀಶ್ ಪಟೇಲ್, ನಗರಸಭೆ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ, ಸೂಡಾ ಅಧ್ಯಕ್ಷ ದತ್ತಾತ್ರಿ, ಡಿ.ಎಸ್. ಅರುಣ್ ಮತ್ತಿತರರು ಉಪಸ್ಥಿತರಿದ್ದರು. 

ಶ್ರದ್ಧಾಂಜಲಿ ಸಭೆ

ಸೊರಬ:
ವಿ.ಎಸ್. ಆಚಾರ್ಯ ಒಬ್ಬ ನಿಷ್ಠಾವಂತ ಜನಸೇವಕ, ಮೇಧಾವಿ ರಾಜಕಾರಣಿ ಆಗಿದ್ದರು. ಅವರ ನಿಧನದಿಂದ ಬಿಜೆಪಿಗೆ ಅಲ್ಲದೇ ರಾಜ್ಯ ರಾಜಕಾರಣಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ತಾಲ್ಲೂಕು ಬಿಜೆಪಿ ಅಧ್ಯಕ್ಷ ಎಂ.ಆರ್. ಪಾಟೀಲ್ ವಿಷಾದಿಸಿದರು.ಮಂಗಳವಾರ ಹಠಾತ್ ನಿಧನಕ್ಕೆ ತುತ್ತಾದ ಉನ್ನತ ಶಿಕ್ಷಣ ಹಾಗೂ ಮುಜರಾಯಿ ಸಚಿವ ವಿ.ಎಸ್. ಆಚಾರ್ಯ ಅವರಿಗೆ ಪಕ್ಷದ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಮಾಜಿ ಜಿ.ಪಂ. ಉಪಾಧ್ಯಕ್ಷ ಪಾಣಿ ರಾಜಪ್ಪ ಮಾತನಾಡಿ, ಕಾಂಗ್ರೆಸ್ ಪ್ರಭಾವಶಾಲಿ ಆಗಿದ್ದ ಕಾಲದಲ್ಲಿ ಜನಸಂಘವನ್ನು ಪೋಷಿಸಿ, ಉಡುಪಿ ನಗರಸಭೆ ಆಡಳಿತವನ್ನು ತಮ್ಮ ತೆಕ್ಕೆಗೆ ತಂದುಕೊಳ್ಳುವ ಮೂಲಕ ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮವಾಗಿ ಜನಸಂಘವನ್ನು ಅಧಿಕಾರಕ್ಕೆ ತಂದ ಕೀರ್ತಿ ಅವರಿಗೆ ಸ್ಲ್ಲಲುತ್ತದೆ ಎಂದರು.ಜಿ.ಪಂ. ಉಪಾಧ್ಯಕ್ಷ ಎಚ್.ಬಿ. ಗಂಗಾಧರಪ್ಪ, ಸದಸ್ಯ ಗುರುಕುಮಾರ್ ಪಾಟೀಲ್, ಎಪಿಎಂಸಿ ಅಧ್ಯಕ್ಷ ಗಜಾನನರಾವ್, ಉಪಾಧ್ಯಕ್ಷ ರುದ್ರಗೌಡ, ಎಂ.ಕೆ. ಯೋಗೇಶ್, ಈಶ್ವರಪ್ಪ, ಪಕ್ಷದ ಟೌನ್ ಘಟಕಾಧ್ಯಕ್ಷ ಎಲ್. ಗಿರೀಶ್, ರೇವಣಕುಮಾರ್, ಕಾರ್ಯಕರ್ತರು, ಮುಖಂಡರು ಹಾಜರಿದ್ದು, ಅಂತಿಮ ನಮನ ಸಲ್ಲಿಸಿದರು.

ಸಂತಾಪ: ಶಾಸಕ ಎಚ್. ಹಾಲಪ್ಪ ಆಚಾರ್ಯ ನಿಧನಕ್ಕೆ ತೀವ್ರ ಸಂತಾಪ ಮಿಡಿದಿದ್ದು, ಮಂಗಳವಾರ ತಾಲ್ಲೂಕಿನಲ್ಲಿ ನಡೆಯಬೇಕಿದ್ದ ಸಭೆಗಳನ್ನು ರದ್ದುಗೊಳಿಸಿ, ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಉಡುಪಿಗೆ ತೆರಳಿದರು.  ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ. ಪ್ರಭಾಕರ ರಾಯ್ಕರ್ ಸಹ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.ಮಧು ಶೋಕ: ಯುವ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಆಚಾರ್ಯ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದು, ಯಾವುದೇ ಕಪ್ಪುಚುಕ್ಕೆ ಇಲ್ಲದ ಸಜ್ಜನ ರಾಜಕಾರಣಿ ಅವರಾಗಿದ್ದರು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕುಮಾರ್ ಸಂತಾಪ: ಮಾಜಿ ಸಚಿವ ಕುಮಾರ್ ಬಂಗಾರಪ್ಪ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದು, ಧಕ್ಷ ಆಡಳಿತಗಾರರೊಬ್ಬರನ್ನು ರಾಜ್ಯ ಕಳೆದುಕೊಂಡಂತೆ ಆಗಿದ್ದು, ಉತ್ತಮ ರಾಜಕಾರಣದ ಕೊಂಡಿ ಕಳಚಿದಂತೆ ಆಗಿದೆ ಎಂದು ಹೇಳಿಕೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry