ಸರಸ್ವತಿ ಕೊಲೆ ಪ್ರಕರಣ; ಸಂಶಯದ 2 ಮುಖ

7

ಸರಸ್ವತಿ ಕೊಲೆ ಪ್ರಕರಣ; ಸಂಶಯದ 2 ಮುಖ

Published:
Updated:

3ನೇ ವ್ಯಕ್ತಿ ಕೈವಾಡ-ಸ್ಥಳೀಯರ ವಾದ; ಇಲ್ಲ-ಪೊಲೀಸ್ ಪ್ರತಿಪಾದನೆ

ಮಂಗಳೂರು: ಗಂಡ ಕೆಲಸಕ್ಕಿದ್ದ ಮನೆ ಮಾಲೀಕರು ನೀಡಿದ್ದ ಜಾಗದಲ್ಲಿ ಕಟ್ಟಿಕೊಂಡಿದ್ದ ಪುಟ್ಟ ಮನೆ ಉಳಿಸಿಕೊಳ್ಳಲು ಉಂಟಾದ ಜಗಳದಿಂದ ಕೊನೆಗೆ ಮನೆಯವರಿಂದಲೇ ಕೊಲೆಯಾದ ವಿಟ್ಲ ಅಪ್ಪರೆಪಾದೆಯ ಸರಸ್ವತಿ ಪ್ರಕರಣ ದಿನೇ ದಿನೇ ನಿಗೂಢವಾಗುತ್ತಿದೆ.ಕೊಲೆ ಹಿಂದೆ ಸರಸ್ವತಿಯ ಅತ್ತೆ ಹಾಗೂ ಗಂಡನ ಹೊರತಾಗಿ ಮೂರನೇ ವ್ಯಕ್ತಿಯ ಪಾತ್ರವಿದೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ವಿಟ್ಲದಲ್ಲಿ ಸೋಮವಾರ ಮಹಿಳಾ ಸಂಘಟನೆಗಳು ಬೀದಿಗಿಳಿದಿರುವುದು ಸ್ಥಳೀಯ ಪೊಲೀಸರ ನಿದ್ದೆಗೆಡಿಸಿದೆ.ಕಲ್ಲಡ್ಕ-ಕಾಸರಗೋಡು ಮುಖ್ಯರಸ್ತೆಯಲ್ಲಿ ಸಾಗಿದರೆ ವಿಟ್ಲ ಪೇಟೆಯಿಂದ 2 ಕಿ.ಮೀ. ದೂರದ ಅಪ್ಪರೆಪಾದೆ ಸರಸ್ವತಿ ಮನೆಗೆ ಮಂಗಳವಾರ ‘ಪ್ರಜಾವಾಣಿ’ ಭೇಟಿ ನೀಡಿದಾಗ ಮನೆ ಬಾಗಿಲಲ್ಲಿಯೇ ನೆಲದಲ್ಲಿ ಚೆಲ್ಲಿ ಒಣಗಿಹೋಗಿದ್ದ ರಕ್ತದ ಕಲೆಗಳು 4 ದಿನಗಳ ಹಿಂದೆಯಷ್ಟೇ ನಡೆದಿದ್ದ ಬರ್ಬರ ಕೊಲೆಗೆ ಸಾಕ್ಷಿ ಹೇಳುತ್ತಿದ್ದವು.ಕೊಲೆ ನಂತರ ಪತಿ ಹಾಗೂ ಅತ್ತೆ ಜೈಲು ಸೇರಿದ್ದರೆ, ಸರಸ್ವತಿಯ ಮಗು ರೋಹಿತಾಕ್ಷನನ್ನು ಕಲ್ಲಡ್ಕದ ಅಜ್ಜನ ಮನೆಗೆ ಕರೆದೊಯ್ಯಲಾಗಿದೆ. ಮನೆಯಲ್ಲಿದ್ದ ಪರಿಕರಗಳನ್ನು 2 ದಿನಗಳ ಹಿಂದೆ ಸಂಬಂಧಿಯೊಬ್ಬರು ಕೊಂಡೊಯ್ದಿದ್ದಾರೆ. ಸದ್ಯ ಮನೆಗೆ ಬೀಗ ಹಾಕಲಾಗಿದೆ.5 ಸೆಂಟ್ಸ್ ಜಾಗ ಕಾರಣ?: ಕುರುಚಲು ಗುಡ್ಡದಿಂದಾವೃತವಾದ 5 ಸೆಂಟ್ಸ್‌ಗೂ ಕಡಿಮೆ ಜಾಗದಲ್ಲಿ ಮನೆ ಕಟ್ಟಿಕೊಂಡಿರುವ ರವೀಶ್ ನಾಯ್ಕ, ಅಲ್ಲಿಯೇ ತಾಯಿ ಪಾರ್ವತಿ ಹಾಗೂ ಪತ್ನಿ-ಮಗುವಿನೊಂದಿಗೆ ವಾಸವಾಗಿದ್ದ. ಈ ಹಿಂದೆ ವಿಟ್ಲ ಪೇಟೆ ಉದ್ಯಮಿಯೊಬ್ಬರ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅವರು ಈ ನಿವೇ ಶನ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.ವಿಶೇಷವೆಂದರೆ ಈಗಲೂ ಈ ಜಾಗ ರತ್ನಾವತಿ ಎಂಬವರ ಹೆಸರಿನಲ್ಲಿದೆ. ಸರಸ್ವತಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಕುಕ್ಕುಡದ ಶಾರದಾಂಬ ಸ್ವ-ಸಹಾಯ ಸಂಘದ ಸಂಯೋಜಕಿಯಾಗಿದ್ದರೆ, ಆಟೋ ಓಡಿಸುತ್ತಿದ್ದ ರವೀಶ ಇತ್ತೀಚೆಗೆ ಅದನ್ನು ಮಾರಿ ಬೇರೆಡೆ ಕೆಲಸಕ್ಕೆ ಸೇರಿದ್ದ. ಮನೆಯಿಂದ ಫರ್ಲಾಂಗು ದೂರದಲ್ಲಿ ಕಲ್ಲಿನ ಕ್ವಾರಿ ಇದ್ದು, ಅದರ ಮಾಲೀಕನಿಗೆ ಮನೆ ಇರುವ ಜಾಗ ಮಾರಾಟ ಮಾಡಿ ಬೇರೆಡೆ ತೆರಳಲು ರವೀಶ ಹಾಗೂ ತಾಯಿ ಪಾರ್ವತಿ ಮುಂದಾಗಿದ್ದರು. ಆಸರೆಗಿದ್ದ ಮನೆಯನ್ನೇ ಮಾರಲು ಪತಿ-ಅತ್ತೆ ಮುಂದಾದಾಗ ವಿರೋಧಿಸಿದ್ದೇ ಸರಸ್ವತಿ ಕೊಲೆಗೆ ಕಾರಣ. ಕ್ವಾರಿ ಮಾಲೀಕ ಅಬ್ದುಲ್ ಕುಂಞ ಇದಕ್ಕೆ ಪ್ರೇರಣೆ ನೀಡಿದ್ದಾರೆ ಎಂದು ಸರಸ್ವತಿಯ ತಂದೆ ಪೂವಪ್ಪ ನಾಯ್ಕ ಆರೋಪಿಸಿದ್ದರು.ಜೀವ ಬೆದರಿಕೆ ಇತ್ತು: ಮನೆ ಮಾರಾಟ ವಿಚಾರದಲ್ಲಿ ಸರಸ್ವತಿಗೆ ಮೊದಲೇ ಮನೆಯವರಿಂದ ಜೀವ ಬೆದರಿಕೆ ಇತ್ತು ಎನ್ನುವ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಆಕೆಯ ಒಡನಾಡಿ ಸುಜಾತಾ ಈ ಬಗ್ಗೆ ದೂರು ನೀಡಿದರೂ ಪೊಲೀಸರು ಗಂಭೀರವಾಗಿ ಪರಿಗಣಿಸಲೇ ಇಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಸರಸ್ವತಿ, ಜೀವ ಬೆದರಿಕೆ ಇರುವ ಬಗ್ಗೆ ಸ್ಥಳೀಯ ತಾಲ್ಲೂಕು ಪಂಚಾಯಿತಿ ಸದಸ್ಯೆ ಉಷಾ ಅವರೊಂದಿಗೆ ತೆರಳಿ ಪೊಲೀಸರಿಗೆ ದೂರು ನೀಡಿದ್ದರು. ಆಗಲೇ ಗಂಭೀರವಾಗಿ ಪರಿಗಣಿಸಿದ್ದರೆ ಸರಸ್ವತಿ ಜೀವ ಉಳಿಯುತ್ತಿತ್ತು ಎನ್ನುತ್ತಾ ಕಣ್ಣೀರಾದರು ಸುಜಾತಾ.‘ಕೊಲೆಯಲ್ಲಿ ಕ್ವಾರಿ ಮಾಲೀಕನ ಪಾತ್ರದ ಬಗ್ಗೆ ನನಗೇನೂ ತಿಳಿದಿಲ್ಲ’ ಎನ್ನುವ ರವೀಶನ ಮನೆ ಸಮೀಪವೇ ವಾಸವಿರುವ ಅಂಚೆ ಇಲಾಖೆ ನಿವೃತ್ತ ಉದ್ಯೋಗಿ ಎ.ಎ.ನಾಯ್ಕ, ರವೀಶನ ಮನೆಯವರು ಅಕ್ಕಪಕ್ಕದವರ ಜತೆ ಅಷ್ಟು ಬೆರೆಯುತ್ತಲೂ ಇರಲಿಲ್ಲ ಎನ್ನುತ್ತಾರೆ. ಮನೆ ಮಾರುವುದಾದರೆ ತಾವೇ ನ್ಯಾಯಯುತ ಬೆಲೆ ನೀಡಿ ಖರೀದಿಸುವುದಾಗಿ ರವೀಶನಿಗೆ ಮೊದಲು ಜಾಗ ನೀಡಿದ್ದವರು ಹೇಳಿದ್ದರು. ಅದೊಂದು ಸಾಮಾನ್ಯ ಜಗಳ ಎಂದುಕೊಂಡಿದ್ದೆವು ಎನ್ನುತ್ತಾರೆ.ಗ್ರಾಮಸಭೆಯಲ್ಲಿ ನಿರ್ಣಯ: ಸ್ತ್ರೀಶಕ್ತಿ ಪ್ರದರ್ಶನ ಒತ್ತಡದ ಪರಿಣಾಮ ಸರಸ್ವತಿ ಸಾವಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ವಿಟ್ಲ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮಾನಾಥ ವಿಟ್ಲ ಪ್ರಜಾವಾಣಿಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry