ಭಾನುವಾರ, ಜೂನ್ 20, 2021
29 °C
ಮಾಹಿತಿ ಹಕ್ಕು ಅಸ್ತ್ರ

ಸರಾಗವಾಗಿ ಬಂದ ವಿದ್ಯುತ್ ಪರಿವರ್ತಕ

ವಿಶೇಷ ವರದಿ/ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿಪಟೂರು: ಬೇಸಿಗೆ ಕಾಲದಲ್ಲಿ ಹಳ್ಳಿಗಳ ವಿದ್ಯುತ್ ಸಮಸ್ಯೆ ಹೇಳತೀರದು. ಅಧಿಕ ಒತ್ತಡದಿಂದ ವಿದ್ಯುತ್ ಪರಿವರ್ತಕ ಹಾಳಾಗುವುದು ಸಾಮಾನ್ಯ. ಮತ್ತೆ ಪರಿವರ್ತಕ ಹಾಕಿಸಿಕೊಳ್ಳಲು ಓಡಾಡುವ ರೈತರ ಪರಿಶ್ರಮ ಅಷ್ಟಿಷ್ಟಲ್ಲ. ದುಡ್ಡು ಖರ್ಚು ಮಾಡದಿದ್ದರೆ ಕೆಲಸ ಆಗಲ್ಲ. ಇಂಥ ಪರಿಸ್ಥಿತಿಯಲ್ಲೂ ಇಲ್ಲೊಬ್ಬರು ಮಾಹಿತಿ ಹಕ್ಕು ಅಸ್ತ್ರ ಬಳಸಿ ತಮ್ಮ ಗ್ರಾಮಕ್ಕೆ ಸರಾಗವಾಗಿ ವಿದ್ಯುತ್ ಪರಿವರ್ತಕ ಪಡೆದಿದ್ದಾರೆ.ವೋಲ್ಟೇಜ್ ಸಮಸ್ಯೆ ತಪ್ಪಿಸಲು, ಸುಟ್ಟು ಹೋದ ಪರಿವರ್ತಕ ಬದಲಿಸಲು ಬೆಸ್ಕಾಂಗೆ ಕೋರಿಕೆ ಸಲ್ಲಿಸಿ ಸುಮ್ಮನಿದ್ದರೆ ಕೆಲಸ ಸುಲಭಕ್ಕೆ ಆಗುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಪರಿವರ್ತಕಕ್ಕೆ ಸಂಪರ್ಕವಿರುವ ಕೊಳವೆಬಾವಿ ಮಾಲೀಕರು ಒಟ್ಟಾಗಿ ಹಣ ಸಂಗ್ರಹಿಸಿ ಬೆಸ್ಕಾಂ ಕಚೇರಿಗೆ ಹೋದರೆ ಮಾತ್ರ ಕೆಲಸ ಆಗುತ್ತದೆ ಎಂಬುದು ಗುಟ್ಟಾಗಿ ಉಳಿದಿಲ್ಲ.ಕನಿಷ್ಠ ₨ 10 ಸಾವಿರ ಖರ್ಚು ಮಾಡದೆ ಪರಿವರ್ತಕ ತರಲಾಗುವುದಿಲ್ಲ ಎಂಬ ರೈತರ ಆರೋಪ ಸುಳ್ಳಲ್ಲ. ಇಷ್ಟಲ್ಲದೆ ಪರಿವರ್ತಕ ಮಂಜೂರಾಗಿದೆ ಎಂಬ ಸುದ್ದಿ ತಿಳಿದು ರೈತರೆ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಿ ಸ್ಥಳಕ್ಕೆ ಪರಿವರ್ತಕ ತರಬೇಕು. ಪರಿವರ್ತಕ ಇಡಲು ಬಂದ ಸಿಬ್ಬಂದಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಕೈಗೊಂದಿಷ್ಟು ಕೊಟ್ಟು ಕಳುಹಿಸಬೇಕು... ಇದೆಲ್ಲಾ ಬಹಿರಂಗವಾಗಿಯೇ ಇದೆ.

ಹೀಗೆ ಮಾಡದಿದ್ದರೆ ಪರಿವರ್ತಕ ಬರುವುದಿಲ್ಲ ಎಂಬ ಭಯ ಅಥವಾ ಅಜ್ಞಾನವೂ ರೈತರಲ್ಲಿದೆ. ಇದ್ಯಾವುದೂ ಬೇಕಿಲ್ಲದೆ ಒಂದು ಅರ್ಜಿಯ ಮೂಲಕ ಪರಿವರ್ತಕ ತರಿಕೊಳ್ಳಬಹುದು ಎಂಬುದನ್ನು ತಾಲ್ಲೂಕಿನ ಮಲ್ಲಿಪಟ್ಟಣ ನಿವಾಸಿ, ಮಾಹಿತಿ ಹಕ್ಕು ಕಾರ್ಯಕರ್ತ ಲೋಕೇಶ್ ತೋರಿಸಿಕೊಟ್ಟಿದ್ದಾರೆ. ಇದು ಎಲ್ಲ ರೈತರಿಗೆ ಮಾದರಿಯಾಗಿದೆ. ದುಡ್ಡಿಗೆ ಹಾತೊರೆಯುವ ಬೆಸ್ಕಾಂ ಅಧಿಕಾರಿಗಳಿಗೆ ಎಚ್ಚರಿಕೆ ಗಂಟೆಯೂ ಆಗಿದೆ.ತಮ್ಮ ಗ್ರಾಮದ ವ್ಯಾಪ್ತಿಯಲ್ಲಿ ರೈತರ ಕೊಳವೆಬಾವಿ, ಮನೆಗಳ ಸಂಪರ್ಕದಿಂದ ವಿದ್ಯುತ್ ಪರಿವರ್ತಕದ ಮೇಲೆ ಒತ್ತಡ ಹೆಚ್ಚಾಗಿದೆ. ವೋಲ್ಟೆಜ್ ಕಡಿಮೆ ಬರುತ್ತಿದೆ. ಸ್ಥಳ ಪರಿಶೀಲಿಸಿ ಬೇರೊಂದು ಪರಿವರ್ತಕ ಅಳವಡಿಸಿ ಎಂದು ಮಲ್ಲಿಪಟ್ಟಣ ಲೋಕೇಶ್ ಬೆಸ್ಕಾಂಗೆ ಅರ್ಜಿ ಹಾಕಿದ್ದರು.ಇದಕ್ಕೆ ಬೆಸ್ಕಾಂ ಎಷ್ಟು ದಿನವಾದರೂ ಸ್ಪಂದಿಸಲಿಲ್ಲ. ಮಾಹಿತಿ ಹಕ್ಕು ಕಾರ್ಯಕರ್ತರೂ ಆದ ಲೋಕೇಶ್ ಹಿಂದೆ ಮುಂದೆ ನೋಡದೆ ಅದೇ ಅಸ್ತ್ರವನ್ನೇ ಇದಕ್ಕೆ ಬಳಸಿದರು. ತಮ್ಮ ಅರ್ಜಿ ಸ್ಥಿತಿಗತಿ ಏನಾಯಿತು ಎಂದು ಪ್ರಶ್ನಿಸಿ ಆರ್‌ಟಿಐ ಅರ್ಜಿ ಸಲ್ಲಿಸಿದರು. ಇದಕ್ಕೂ ಬೆಸ್ಕಾಂನಿಂದ ಉತ್ತರ ಬರಲಿಲ್ಲ. ಇದನ್ನು ಪ್ರಶ್ನಿಸಿ ಲೋಕೇಶ್ ಮೇಲ್ಮನವಿ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದರು. ಮೇಲಧಿಕಾರಿಗಳು ಪ್ರತಿವಾದಿ ಬೆಸ್ಕಾಂ ಕಿರಿಯ ಎಂಜಿನಿಯರ್‌, ಅರ್ಜಿದಾರರ ಸಮಕ್ಷಮದಲ್ಲಿ ವಿಚಾರಣೆ ನಡೆಸಿದರು. ಬೆಸ್ಕಾಂ ತಪ್ಪಿರುವುದು ಸಾಬೀತಾಗಿದ್ದರಿಂದ ತಕ್ಷಣ ಅರ್ಜಿಗೆ ಸ್ಪಂದಿಸುವಂತೆ ಸೂಚಿಸಿದರು.ಇದಾದ ಒಂದೆರೆಡು ದಿನದಲ್ಲೇ ಬೆಸ್ಕಾಂ ಎಂಜಿನಿಯರ್ ಬಂದು ಸ್ಥಳ ಪರಿಶೀಲಿಸಿ ಇನ್ನೊಂದು ಪರಿವರ್ತಕ ಅಳವಡಿಸಬೇಕಾದ ಅಗತ್ಯ ಮನಗಂಡು ಇಲಾಖೆಗೆ ವರದಿ ಮತ್ತು ಅಂದಾಜು ಪಟ್ಟಿ ಸಲ್ಲಿಸಿದರು. ಕೆಲ ದಿನಗಳಲ್ಲೇ ಮಲ್ಲಿಪಟ್ಟಣ ಗ್ರಾಮಕ್ಕೆ ಮತ್ತೊಂದು ಪರಿವರ್ತಕ ಬಂತು. ಅಧಿಕಾರಿಗಳನ್ನು ಯಾರೂ ಎಡತಾಕದೆ, ದುಡ್ಡೂ ಖರ್ಚು ಮಾಡದೆ, ಟ್ರ್ಯಾಕ್ಟರ್, ಜನರನ್ನು ಒಯ್ಯದೆ ಪರಿವರ್ತಕ ಬಂದಿದ್ದಕ್ಕೆ ರೈತರಲ್ಲಿ ಸಹಜ ಆಶ್ಚರ್ಯ ಮೂಡಿತು.ಒಂದು ಪರಿವರ್ತಕ ಅಳವಡಿಸಲು ಕಾಮಗಾರಿ ಕೂಲಿಯೆಂದು ಸರ್ಕಾರ ₨ 5 ಸಾವಿರ ಖರ್ಚು ಮಾಡುತ್ತದೆ. ಸಾಗಣೆ ವೆಚ್ಚ, ತಂತಿ ಮತ್ತಿತರರ ಸಾಮಗ್ರಿಗಳ ವೆಚ್ಚವನ್ನೂ ಭರಿಸುತ್ತದೆ. ಆಶ್ಚರ್ಯವೆಂದರೆ ಲೋಕೇಶ್ ಪಡೆದಿರುವ ಮಾಹಿತಿ ಪ್ರಕಾರ ತಿಪಟೂರು ತಾಲ್ಲೂಕಿನ ಪರಿವರ್ತಕಗಳ ನಿರ್ವಹಣೆಗೆಂದು ಸರ್ಕಾರ ಖರ್ಚು ಮಾಡುವ ವಾರ್ಷಿಕ ಹಣ ಒಟ್ಟು ಎರಡು ಕೋಟಿ ರೂ. ! ಹೀಗಿದ್ದರೂ ಪರಿವರ್ತಕದ ಹೆಸರಲ್ಲಿ ತಾಂಡವವಾಡುತ್ತಿರುವ ಲಂಚ, ರೈತರನ್ನು ಗೋಳಾಡಿಸುವ ಪರಿಸ್ಥಿತಿ ಮಾತ್ರ ದೂರವಾಗಿಲ್ಲ. ಇದಕ್ಕೆ ಮದ್ದು ಸುಲಭದಲ್ಲೇ ಇದೆ ಎಂಬುದನ್ನು ಲೋಕೇಶ್ ತೋರಿಸಿದ್ದಾರೆ.

ಮಾಹಿತಿ ಬಯಸುವವರು 9740114314 ಸಂಪರ್ಕಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.