ಸರಿಸಾಟಿಯಾಗಿ ನಿಲ್ಲುವ ತಾಕತ್ತು

ಮಂಗಳವಾರ, ಜೂಲೈ 16, 2019
28 °C

ಸರಿಸಾಟಿಯಾಗಿ ನಿಲ್ಲುವ ತಾಕತ್ತು

Published:
Updated:

ಲಾಂಗ್‌ಜಂಪ್ ಪಿಟ್‌ನಲ್ಲಿ ದಾಖಲೆಯೆಡೆಗೆ ಜಿಗಿದ ಶಂಶೀರ್, ಹೈಜಂಪ್‌ನಲ್ಲಿ ಹೊಸ ಎತ್ತರ ಕಂಡುಕೊಂಡ ಚೇತನ್, 1,500 ಮೀ. ಓಟದಲ್ಲಿ ಕೂಟ ದಾಖಲೆಯೊಂದಿಗೆ ಸ್ವರ್ಣ ಜಯಿಸಿದ ಶ್ರದ್ಧಾರಾಣಿ...ರಾಜ್ಯದ ಭರವಸೆಯ ಅಥ್ಲೀಟ್‌ಗಳ ಸಾಮರ್ಥ್ಯ ತೋರಿಸಲು ವೇದಿಕೆಯೊದಗಿಸಿದ 24ನೇ ರಾಜ್ಯ ಜೂನಿಯರ್ ಮತ್ತು ಸೀನಿಯರ್ ಅಥ್ಲೆಟಿಕ್ ಕೂಟದಲ್ಲಿ ಮಿಂಚು ಹರಿಸಿದ ಸ್ಪರ್ಧಿಗಳ ಪಟ್ಟಿ ಹೀಗೆ ಬೆಳೆಯುತ್ತದೆ. ಮುಂದೊಂದು ದಿನ ರಾಷ್ಟ್ರಮಟ್ಟದಲ್ಲಿ ಮಿಂಚಬೇಕೆಂಬ ಕನಸು ಕಂಡಿರುವ ಕಿರಿಯ ಅಥ್ಲೀಟ್‌ಗಳು ಈ ಕೂಟವನ್ನು ಸವಾಲಾಗಿ ಸ್ವೀಕರಿಸಿದ್ದರು. ಅವರು ನೀಡಿದ ಪ್ರದರ್ಶನವೇ ಇದಕ್ಕೆ ಸಾಕ್ಷಿ.ಈ ಚಾಂಪಿಯನ್‌ಷಿಪ್‌ನಲ್ಲೂ ಎಂದಿನಂತೆ ಕೆಲವೊಂದು ಕೂಟ ದಾಖಲೆಗಳು ನಿರ್ಮಾಣವಾದವು. ರಾಜ್ಯದ ಅಥ್ಲೆಟಿಕ್ಸ್ `ನಿಂತ ನೀರಿನಂತೆ ಇಲ್ಲ~ ಎಂಬುದನ್ನು ಇದು ಸೂಚಿಸುತ್ತದೆ. ಆದರೆ ಅಥ್ಲೀಟ್‌ಗಳ ಕೊರತೆಯಿಂದಾಗಿ ಒಂದೆರಡು ಸ್ಪರ್ಧೆಗಳನ್ನು ರದ್ದುಗೊಳಿಸಿದ್ದು ಮಾತ್ರ ಬೇಸರದ ಸಂಗತಿ.ಇದು ಭರವಸೆಯ ಬೆಳಕಿನ ನಡುವೆ `ಕಪ್ಪು ಚುಕ್ಕೆ~ಯಾಗಿ ಕಂಡಿತು. 10 ವಿಭಾಗಗಳಲ್ಲಿ ಆರರಲ್ಲೂ ಸಮಗ್ರ ಪ್ರಶಸ್ತಿ ಜಯಿಸಿದ ಮೂಡುಬಿದಿರೆಯ ಆಳ್ವಾಸ್ ತಂಡ ರಾಜ್ಯದ ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ತನಗೆ ಸರಿಸಾಟಿಯಾಗಿ ನಿಲ್ಲುವ ತಾಕತ್ತು ಯಾರಿಗೂ ಇಲ್ಲ ಎಂಬುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿತು. ಹೆಚ್ಚಿನ ಸ್ಪರ್ಧೆಗಳಲ್ಲಿ ಆಳ್ವಾಸ್ ತಂಡದ ಅಥ್ಲೀಟ್‌ಗಳಿಗೆ ತಕ್ಕ ಪೈಪೋಟಿಯೇ ಎದುರಾಗಲಿಲ್ಲ. `ಕಿರಿಯ ಹಾಗೂ ಹಿರಿಯ ಸ್ಪರ್ಧಿಗಳು ಒಳಗೊಂಡಂತೆ ನಮ್ಮಲ್ಲಿ 450ಕ್ಕೂ ಅಧಿಕ ಕ್ರೀಡಾಳುಗಳಿದ್ದಾರೆ. ಎಲ್ಲರಿಗೂ ಸೂಕ್ತ ತರಬೇತಿ ನೀಡಲಾಗುತ್ತಿದೆ. ರಾಜ್ಯದ ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಸದಾ ಮುಂಚೂಣಿಯಲ್ಲಿರುವುದು ನಮ್ಮ ಗುರಿ~ ಎಂಬುದು ಆಳ್ವಾಸ್‌ನ ಕೋಚ್‌ಗಳಲ್ಲಿ ಒಬ್ಬರಾದ ತಿಲಕ್ ಶೆಟ್ಟಿ ಅವರ ನುಡಿ.ಜುಲೈ 9 ರಿಂದ 11 ರವರೆಗೆ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ 15 ಕ್ಕೂ ಹೆಚ್ಚು ಕೂಟ ದಾಖಲೆಗಳು ನಿರ್ಮಾಣಗೊಂಡವು. ಆದರೂ ಅಥ್ಲೀಟ್‌ಗಳ ಒಟ್ಟಾರೆ ಪ್ರದರ್ಶನ ಮಟ್ಟ ನೋಡಿದರೆ ಅಲ್ಪ ನಿರಾಸೆಯಾಗುತ್ತದೆ.`ಕೂಟದಲ್ಲಿ ಕೆಲವೊಂದು ದಾಖಲೆಗಳು ನಿರ್ಮಾಣಗೊಂಡವು. ಆದರೆ ರಾಜ್ಯದ ಅಥ್ಲೆಟಿಕ್ಸ್‌ನ ಗುಣಮಟ್ಟದಲ್ಲಿ ಚೇತರಿಕೆ ಕಾಣಿಸಿಕೊಂಡಿಲ್ಲ. ಇನ್ನಷ್ಟು ಉತ್ತಮ ಪ್ರದರ್ಶನ ನಿರೀಕ್ಷಿಸಿದ್ದೆ~ ಎಂದು ಹಿರಿಯ ಕೋಚ್ ವಿ.ಆರ್. ಬೀಡು ಪ್ರತಿಕ್ರಿಯಿಸಿದ್ದಾರೆ.`1990ರಲ್ಲಿ ಕರ್ನಾಟಕ ಅಥ್ಲೆಟಿಕ್ ತಂಡ ದಕ್ಷಿಣ ವಲಯದಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿತ್ತು. ಆದರೆ ಬರಬರುತ್ತಾ ತಂಡದ ಪ್ರದರ್ಶನ ಕುಸಿತದ ಹಾದಿ ಹಿಡಿಯಿತು. ದಕ್ಷಿಣ ವಲಯದಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಸಾಕಷ್ಟು ಪ್ರತಿಭೆಗಳಿದ್ದಾರೆ. ಅವರಿಗೆ ಸೂಕ್ತ ಮಾರ್ಗದರ್ಶನ ಲಭಿಸಿದರೆ ಕರ್ನಾಟಕ ಮತ್ತೆ ಅಗ್ರಸ್ಥಾನಕ್ಕೇರಲು ಸಾಧ್ಯ. ಆ ನಿಟ್ಟಿನಲ್ಲಿ ಪ್ರಯತ್ನ ನಡೆಯಬೇಕು~ ಎಂದಿದ್ದಾರೆ.`ದಕ್ಷಿಣ ವಲಯ ಮಾತ್ರವಲ್ಲ, ದೇಶದ ಅಥ್ಲೆಟಿಕ್ಸ್‌ನಲ್ಲಿ ಈಗ ಕೇರಳದ ಪ್ರಾಬಲ್ಯವಿದೆ. ಪ್ರತಿಭೆಗಳನ್ನು ಬೆಳಕಿಗೆ ತರುವಲ್ಲಿ ಆ ರಾಜ್ಯ ಯಶಸ್ವಿಯಾಗಿದೆ. ಕರ್ನಾಟಕದಲ್ಲಿರುವ ಅಥ್ಲೆಟಿಕ್ ಕ್ಲಬ್ ಹಾಗೂ ಸಂಸ್ಥೆಗಳು ಪ್ರಯತ್ನಪಟ್ಟರೆ ಕೇರಳವನ್ನು ಹಿಂದಿಕ್ಕಲು ನಮಗೂ ಸಾಧ್ಯ~ ಎಂಬುದು ಅವರ ವಿಶ್ವಾಸದ ಮಾತುಗಳು.ದಾಖಲೆ ಮೂಡಿಬಂದರೆ ಸಾಲದು: `ಒಂದು ಅಥ್ಲೆಟಿಕ್ ಕೂಟದ ಯಶಸ್ಸನ್ನು ಅಲ್ಲಿ ಮೂಡಿಬಂದ ದಾಖಲೆಗಳ ಆಧಾರದಲ್ಲಿ ಅಳೆಯುವುದು ಸರಿಯಲ್ಲ. ಮೂರು ದಿನಗಳಲ್ಲಿ 15ಕ್ಕೂ ಅಧಿಕ ಕೂಟ ದಾಖಲೆಗಳು ನಿರ್ಮಾಣಗೊಂಡಿವೆ ನಿಜ. ಆದರೆ ಒಟ್ಟಾರೆ ಪ್ರದರ್ಶನ ಹೇಗಿತ್ತು ಎಂಬುದನ್ನು ಅವಲೋಕನ ಮಾಡುವುದು ಅಗತ್ಯ~ ಎಂಬ ಅಭಿಪ್ರಾಯವನ್ನು ಮಾಜಿ ಅಥ್ಲೀಟ್ ಉದಯ್ ಕೆ ಪ್ರಭು ವ್ಯಕ್ತಪಡಿಸಿದ್ದಾರೆ.`15 ಅಥವಾ 16 ದಾಖಲೆಗಳು ನಿರ್ಮಾಣವಾದವು ಎಂದು ಸಂತಸಪಟ್ಟು ಸುಮ್ಮನಾಗುವ ಬದಲು, 20 ಕೂಟ ದಾಖಲೆಗಳು ಏಕೆ ಮೂಡಿಬರಲಿಲ್ಲ ಎಂಬ ಪ್ರಶ್ನೆಯನ್ನು ನಮ್ಮಲ್ಲೇ ನಾವು ಕೇಳಿಕೊಳ್ಳಬೇಕು.ಈಗ ಲಭಿಸುತ್ತಿರುವ ಸೌಲಭ್ಯಗಳನ್ನು ನೋಡಿದರೆ ಅಥ್ಲೀಟ್‌ಗಳು ಇದಕ್ಕಿಂತಲೂ ಉತ್ತಮ ಪ್ರದರ್ಶನ ತೋರಬೇಕಿತ್ತು~ ಎಂಬುದು ಅವರ ಹೇಳಿಕೆ.

ಕಂಠೀರವ ಕ್ರೀಡಾಂಗಣದಲ್ಲೇ ಜು. 13 ರಿಂದ 15ರ ವರೆಗೆ ನಡೆದ ರಾಷ್ಟ್ರೀಯ ಯೂತ್ ಚಾಂಪಿಯನ್‌ಷಿಪ್‌ಗೆ `ಆಯ್ಕೆ ಟ್ರಯಲ್ಸ್~ ರೂಪದಲ್ಲಿ ಈ ಕೂಟ ನಡೆದಿತ್ತು.ಈ ಕಾರಣ ಕೆಲವು ಅಥ್ಲೀಟ್‌ಗಳು ಕೊನೆಯ ಕ್ಷಣದ ತಯಾರಿಯೊಂದಿಗೆ ಆಗಮಿಸಿದ್ದು ಸ್ಪಷ್ಟ. ಕೂಟಕ್ಕೆ ಎರಡು ವಾರಗಳಿವೆ ಎನ್ನುವಾಗ ತರಾತುರಿಯಲ್ಲಿ ಅಭ್ಯಾಸ ನಡೆಸಿ ಸ್ಪರ್ಧೆಗಿಳಿದಿದ್ದರು. `ಈ ರೀತಿಯ ತಯಾರಿಯಿಂದ ಯಾವುದೇ ಪ್ರಯೋಜನವಿಲ್ಲ~ ಎಂಬುದು ಏಷ್ಯನ್ ಕ್ರೀಡಾಕೂಟದ ಬೆಳ್ಳಿ ಪದಕ ವಿಜೇತ ಉದಯ್ ಪ್ರಭು ಅನಿಸಿಕೆ.`ರಾಜ್ಯ ಜೂನಿಯರ್ ಮತ್ತು ಸೀನಿಯರ್ ಅಥ್ಲೆಟಿಕ್ ಕೂಟ ಕೊನೆಗೊಂಡ ಎರಡು ದಿನಗಳಲ್ಲೇ ಯೂತ್ ಚಾಂಪಿಯನ್‌ಷಿಪ್ ನಡೆಯಿತು. ಆದ್ದರಿಂದ ಯೂತ್ ಚಾಂಪಿಯನ್‌ಷಿಪ್‌ಗೆ ರಾಜ್ಯ ತಂಡದಲ್ಲಿ ಸ್ಥಾನ ಪಡೆದ ಅಥ್ಲೀಟ್‌ಗಳಿಗೆ ಸಾಕಷ್ಟು ವಿಶ್ರಾಂತಿ ಪಡೆಯುವ ಅವಕಾಶ ಇರಲಿಲ್ಲ. ಇಂತಹ ಪರಿಸ್ಥಿತಿ ಬದಲಾಗಬೇಕು. ಒಂದು ಕೂಟದ ಬಗ್ಗೆ ಅಥ್ಲೀಟ್‌ಗಳಿಗೆ ಎರಡು ಅಥವಾ ಮೂರು ತಿಂಗಳ ಮುಂಚೆಯೇ ಮಾಹಿತಿ ನೀಡಬೇಕು.ಹಾಗಾದಲ್ಲಿ ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿ ಸಿದ್ಧತೆ ನಡೆಸಲು ಸಾಧ್ಯವಾಗುತ್ತದೆ. ಇದರಿಂದ ಪ್ರದರ್ಶನಮಟ್ಟದಲ್ಲಿ ಸುಧಾರಣ ಕಾಣಬಹುದು~ ಎಂದು ನುಡಿದಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಸ್ಥೆ ಕೂಟವನ್ನು ಅಚ್ಚಕಟ್ಟಾಗಿ ನಡೆಸಿ ಎಲ್ಲರಿಗೂ ಮಾದರಿಯಾಗಿದೆ.1500 ಕ್ಕೂ ಅಧಿಕ ಸಂಖ್ಯೆಯ ಅಥ್ಲೀಟ್‌ಗಳಿಗೆ ಊಟ, ವಸತಿ ಹಾಗೂ ಇನ್ನಿತರ ವ್ಯವಸ್ಥೆಯಲ್ಲಿ ಯಾವುದೇ ಕೊರತೆಯಾಗದಂತೆ ಸಂಘಟಕರು ನೋಡಿಕೊಂಡರು. ಇದರ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ ಪೋಷಕ ವಿ. ಉಮೇಶ್ ಪಾತ್ರ ಪ್ರಮುಖವಾಗಿತ್ತು.ಅಧ್ಯಕ್ಷ ಎ. ಮುನಿಸಂಜೀವಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಎಚ್.ಎನ್. ಆನಂದ್ ಕುಮಾರ್ ಒಳಗೊಂಡಂತೆ ಸಂಸ್ಥೆಯ ಎಲ್ಲ ಪದಾಧಿಕಾರಿಗಳಿಗೆ ಇದರ ಶ್ರೇಯ ಸಲ್ಲಬೇಕು.

`ಈ ಕೂಟ ಅತ್ಯಂತ ವ್ಯವಸ್ಥಿತವಾಗಿ ನಡೆಯಿತು. ಇದಕ್ಕಾಗಿ ಸಂಘಟಕರಿಗೆ ಶಹಬ್ಬಾಸ್ ಹೇಳಬೇಕು~ ಎಂಬುದು ಬೀಡು ಅವರ ಹೇಳಿಕೆ. ಯಶಸ್ವಿಯಾಗಿ ಆಯೋಜಿತಗೊಂಡ ಕೂಟದಲ್ಲಿ ಅಥ್ಲೀಟ್‌ಗಳು ಇನ್ನಷ್ಟು ಯಶಸ್ಸು ಸಾಧಿಸಿದ್ದರೆ ಚೆನ್ನಾಗಿತ್ತು ಎಂಬ ಅಭಿಪ್ರಾಯ ಹಲವರದ್ದು. 

                 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry