ಸರ್ಕಸ್‌ನೊಳಗೊಂದು ಕವಿತೆ!

7

ಸರ್ಕಸ್‌ನೊಳಗೊಂದು ಕವಿತೆ!

Published:
Updated:

ನಟ ರವಿಚಂದ್ರನ್ ಏನು ಮಾಡಿದರೂ ಹೊಸತಾಗಿರುತ್ತದೆ ಎನ್ನುವುದು ಹಳೆಯ ಮಾತು. ಅದಕ್ಕೆ ನಿರ್ದೇಶಕಿ ಕವಿತಾ ಲಂಕೇಶ್ ಅವರ ಸೃಜನಶೀಲತೆ ಸೇರಿದರೆ ಮತ್ತೊಂದು ನವೀನತೆ ಸೃಷ್ಟಿಯಾಗುತ್ತದೆ ಎನ್ನುವುದು ಹೊಸ ಮಾತು.

 

`ಕ್ರೇಜಿಲೋಕ~ ಧ್ವನಿ ಸುರಳಿ ಬಿಡುಗಡೆ ಸಮಾರಂಭ ಕೂಡ ಈ ಮಾತಿಗೆ ಹೊರತಲ್ಲ. ಕಾರ್ಯಕ್ರಮ ನಡೆದಿದ್ದು ಅರಮನೆ ಮೈದಾನದಲ್ಲಿ ಬೀಡು ಬಿಟ್ಟಿರುವ `ಜೆಮಿನಿ ಸರ್ಕಸ್~ನ ಬೃಹತ್ ಡೇರೆಯ ಒಳಗೆ. ಚಿತ್ರದ ಧ್ವನಿಮುದ್ರಿಕೆ ಬಿಡುಗಡೆ ಮಾಡಿದ್ದು ಗಜರಾಜ ಅರ್ಥಾತ್ ತರಬೇತಿ ಪಡೆದ ಆನೆ!



`ಐದು ಹಾಡುಗಳ ಜತೆಗೆ ಹದಿನೈದು ತುಣುಕು ಹಾಡುಗಳು ಚಿತ್ರದಲ್ಲಿವೆ~ ಎಂದರು ಚಿತ್ರಕ್ಕೆ `ಆಕ್ಷನ್- ಕಟ್~ ಹೇಳುತ್ತಿರುವ ಕವಿತಾ. ಕಾಲೇಜು ಹುಡುಗರು ಮೆಚ್ಚುವ ಹಾಡುಗಳು ಮಾತ್ರವಲ್ಲದೇ ಹಿರಿಯರು ಇಷ್ಟ ಪಡುವ ಹಾಡು ಕೂಡ ಚಿತ್ರದಲ್ಲಿದೆ. ಪಶು ಪಕ್ಷಿ ಸೇರಿದಂತೆ ಬೇರೆ ಬೇರೆ ಧ್ವನಿಸಂಯೋಜಿಸಿ ಕೂಡ ಹಾಡು ಹೆಣೆಯಲಾಗಿದೆ. 20 ಸೆಕೆಂಡಿನಷ್ಟು ಅವಧಿಯ ಪುಟ್ಟ ಹಾಡುಗಳನ್ನು ಭಾವನೆಗಳಿಗೆ ಹಿನ್ನೆಲೆಯಾಗಿ ಬಳಸಿಕೊಳ್ಳಲಾಗಿದೆ.



`ಕಬಾಬ್ ಮೆ ಹಡ್ಡಿ~ ಹಾಡು ಹೆಚ್ಚು ಜನರಿಗೆ ಇಷ್ಟವಾಗಬಲ್ಲದು ಎನ್ನುವುದು ಅವರ ತರ್ಕ.

ಲಹರಿ ರೆಕಾರ್ಡಿಂಗ್ ಕಂಪೆನಿಯ ವೇಲು `ಜೀನಾ ಯಹಾ ಮರ್‌ನಾ ಯಹಾ~ ಎನ್ನುತ್ತ ಮಾತು ಆರಂಭಿಸಿದರು. ಅವರು ಹೇಳಿದ್ದು `ಮೇರಾ ನಾಮ್ ಜೋಕರ್~ ಹಿಂದಿ ಚಿತ್ರದ ಪ್ರಸಿದ್ಧ ಹಾಡಿನ ಸಾಲೊಂದನ್ನು. ಸರ್ಕಸ್‌ನಲ್ಲಿ ಸಿಡಿ ಬಿಡುಗಡೆ ಮಾಡಿದ್ದು ಆ ಸಿನಿಮಾ ನೆನಪಾಗಲು ಕಾರಣವಂತೆ. ಸಿನಿಮಾ ಕೂಡ ಸರ್ಕಸ್ ಎಂಬುದು ಅವರ ಅನುಭವದ ನುಡಿ.



ನಿರ್ಮಾಣ ಸಂಸ್ಥೆ ಕಾನ್ಫಿಡೆನ್ಸ್ ಗ್ರೂಪ್‌ನ ಸುಮನಾ ಅವರು, `ಚಿತ್ರಕ್ಕೆ ಆರು ಕೋಟಿ ಖರ್ಚಾಗಿದೆ~ ಎಂಬ ಗುಟ್ಟು ಹೊರಹಾಕಿದರು. ಮಲೆಯಾಳಿ ಭಾಷೆಯಲ್ಲಿ ನಿರ್ಮಿಸುತ್ತಿರುವ ಇದೇ ಸಂಸ್ಥೆಯ ಚಿತ್ರಕ್ಕೆ 33 ಕೋಟಿ ಖರ್ಚಾಗುತ್ತಿದೆಯಂತೆ.



ಸಂಗೀತ ನೀಡಿರುವ ಮಣಿಕಾಂತ್ ಕದ್ರಿ ಅವರ ಪ್ರಕಾರ ಇದೊಂದು ಟೀಮ್‌ವರ್ಕ್. ಹಾಡುಗಳು ಕೇಳುಗರ ಮುಂದಿವೆ ಅವರು ಏನು ಹೇಳುತ್ತಾರೋ ಎಂಬ ತವಕ ಅವರೊಳಗಿತ್ತು. ಚಿತ್ರದಲ್ಲಿ ರವಿಚಂದ್ರನ್‌ಗೆ ಡೈಸಿ ಬೋಪಣ್ಣ ಜೋಡಿಯಾಗಿದ್ದರೆ ಸೂರ್ಯ ಜತೆ ಹರ್ಷಿಕಾ ಪೂಣಚ್ಚ ನಟಿಸುತ್ತಿದ್ದಾರೆ. `ಇದು ಎರಡು ತಲೆಮಾರಿನ ಕತೆ. ಮಣಿಕಾಂತ್ ಉತ್ತಮ ಹಾಡುಗಳನ್ನು ನೀಡಿದ್ದಾರೆ. ಎಲ್ಲಾ ಹಾಡುಗಳೂ ಒಂದಕ್ಕಿಂತ ಒಂದು ಚೆನ್ನಾಗಿವೆ. ಚಿತ್ರದಲ್ಲಿ, ಹೊಸಲುಕ್‌ನಲ್ಲಿ ನನ್ನನ್ನು ನೋಡಬಹುದು~ ಎಂದರು ಹರ್ಷಿಕಾ.



ಕವಿತಾ ಬರೆದಿರುವ `ಡೋಂಟ್‌ವರಿ ಬೀ ಹ್ಯಾಪಿ~ ಹಾಡನ್ನು ಸೂರ್ಯ ಬಹುವಾಗಿ ಮೆಚ್ಚಿಕೊಂಡರು. ಆ ಹಾಡನ್ನು ಕೇಳಿದವರು ಕುಣಿಯದೇ ಇರುವುದಿಲ್ಲ ಎಂದು ಹೇಳಿದರು. ಕಾರ್ಯಕಾರಿ ನಿರ್ಮಾಪಕ ಎನ್. ರವಿಕುಮಾರ್, ನಿರ್ಮಾಣ ಸಂಸ್ಥೆಯ ಸುಂದರ್, ಚಿತ್ರೋದ್ಯಮಿಗಳಾದ ಮಹೇಶ್ ಕೊಠಾರಿ, ಬಾಷಾ ಮತ್ತಿತರರು ಸಮಾರಂಭಕ್ಕೆ ಸಾಕ್ಷಿಯಾದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry