ಶನಿವಾರ, ಮೇ 15, 2021
26 °C

ಸರ್ಕಾರಕ್ಕೆ ಆಗಾಗ ಆಘಾತ ನೀಡಬೇಕು; ಅಣ್ಣಾ ಹಜಾರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಳೆಗಣಸಿದ್ಧಿ (ಪಿಟಿಐ): `ಸತ್ಯಾಗ್ರಹದ ಮೂಲಕ ಸರ್ಕಾರಕ್ಕೆ ಪದೇ ಪದೇ ಆಘಾತ ನೀಡಬೇಕು. ಆಗ ಮಾತ್ರ ಭ್ರಷ್ಟಾಚಾರ ಮುಕ್ತ ಭಾರತ ಸಾಧ್ಯ~ ಎಂದು ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಶುಕ್ರವಾರ ಅಭಿಪ್ರಾಯಪಟ್ಟಿದ್ದಾರೆ.ತಾವು ಉಪವಾಸ ಸತ್ಯಾಗ್ರಹ ಆರಂಭಿಸುವುದಕ್ಕಿಂತ ಮುನ್ನವೇ ತಮ್ಮನ್ನು ಬಂಧಿಸಿದ್ದಕ್ಕೆ ಯುಪಿಎ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, `ಈ ಸರ್ಕಾರದಲ್ಲಿ ವಂಚಕರ ದಂಡೇ ಇದೆ. ನನಗೆ ಅವರು ಉಪವಾಸ ಸತ್ಯಾಗ್ರಹಕ್ಕೆ ಅವಕಾಶ ಮಾಡಿಕೊಡಲಿಲ್ಲ. ಬದಲಿಗೆ ದೆಹಲಿಯ ಎಲ್ಲ ಮೈದಾನಗಳಲ್ಲೂ ನಿಷೇಧಾಜ್ಞೆ ಹೇರಿದ್ದರು. ಗೃಹ ಸಚಿವ ಪಿ.ಚಿದಂಬರಂ ಕಿರುಕುಳ ನೀಡುವ ವ್ಯಕ್ತಿ~ ಎಂದು ವ್ಯಂಗ್ಯವಾಡಿದರು.ತಮ್ಮ ಪ್ರತಿಭಟನೆಯು ಸರ್ಕಾರವು ಜನರ ಆಶಯಕ್ಕೆ ಮಣಿಯುವಂತೆ ಮಾಡಿತು ಎಂದ ಅವರು, ` ಸರ್ಕಾರಕ್ಕೆ ಆಗಾಗ ಇಂಥ ಪೆಟ್ಟು ನೀಡುತ್ತಿರಬೇಕು. ಆಗ ಮಾತ್ರವೇ ಭ್ರಷ್ಟಾಚಾರ ನಿಗ್ರಹ ಸಾಧ್ಯವಾಗುತ್ತದೆ~ ಎಂದು ತಮ್ಮ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಹೇಳಿದರು.`ಎರಡನೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಅವಕಾಶ ಮಾಡಿಕೊಡಬೇಡಿ~ ಎಂದು ಯುವಕರನ್ನುದ್ದೇಶಿಸಿ ಹೇಳಿದ ಹಜಾರೆ, ` ಬ್ರಿಟಿಷರಿಂದ ಸ್ವಾತಂತ್ರ್ಯ ಬಂದು 64 ವರ್ಷಗಳು ಕಳೆದರೂ ದೇಶದಲ್ಲಿ ಏನೂ ಬದಲಾವಣೆ ಆಗಿಲ್ಲ. ಈಗ ಬಿಳಿಯರ ಜಾಗದಲ್ಲಿ ಕರಿಯರು ಇದ್ದಾರೆ. ಲೂಟಿ, ಭ್ರಷ್ಟಾಚಾರ, ಭಯೋತ್ಪಾದನೆ ಮೇಲುಗೈ ಸಾಧಿಸಿವೆ. ಹೀಗಿರುವಾಗ ನಾವು ಸಾಧಿಸಿದ್ದಾದರೂ ಏನು?~ ಎಂದು ಪ್ರಶ್ನಿಸಿದರು.ಕೇಜ್ರಿವಾಲ್‌ಗೆ ಆದಾಯ ತೆರಿಗೆ ಇಲಾಖೆ ನೋಟಿಸ್

ನವದೆಹಲಿ (ಐಎಎನ್‌ಎಸ್):
2006ರವರೆಗೆ ಸರ್ಕಾರಿ ನೌಕರರಾಗಿದ್ದ ಅವಧಿಯಲ್ಲಿನ 9 ಲಕ್ಷ ರೂಪಾಯಿ ಬಾಕಿ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ಅಣ್ಣಾ ಹಜಾರೆ ತಂಡದ ಸದಸ್ಯ ಅರವಿಂದ್ ಕೇಜ್ರಿವಾಲ್ ಅವರಿಗೆ ನೋಟಿಸ್ ಜಾರಿ ಮಾಡಿದೆ.ಇದನ್ನು ಖಂಡಿಸಿರುವ ಅಣ್ಣಾ ತಂಡ, ರಾಜಕೀಯ ನಾಯಕರ ಆದೇಶಕ್ಕೆ ಮಣಿದು ಅಧಿಕಾರಿಗಳು ಇಂತಹ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಟೀಕಿಸಿದೆ.`ನಾನು ಯಾವುದೇ ಸೇವಾ ನಿಯಮ ಉಲ್ಲಂಘಿಸಿಲ್ಲ. ಇಲಾಖೆಯ ಹೇಳಿಕೆ ನಿರಾಧಾರವಾದುದು~ ಎಂದು ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದಾರೆ.`2006ರಲ್ಲಿ ಹುದ್ದೆಗೆ ರಾಜೀನಾಮೆ ನೀಡಿದ್ದ ಸಂದರ್ಭದಲ್ಲಿ ಭವಿಷ್ಯ ನಿಧಿಯಿಂದ ಬಾಕಿ ಹಣವನ್ನು ಮುರಿದುಕೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಆದರೆ ಸರ್ಕಾರ ಹೀಗೆ ಮಾಡಿಲ್ಲ.ಬದಲಿಗೆ ನಾಲ್ಕು ವರ್ಷಗಳ ಬಳಿಕ ನೋಟಿಸ್ ನೀಡಿದೆ. ಭ್ರಷ್ಟಾಚಾರದ ವಿರುದ್ಧ ಎತ್ತಿರುವ ದನಿಯನ್ನು ಅಡಗಿಸಲು ಸರ್ಕಾರ ಇಂಥ ಕುತಂತ್ರ ಮಾಡಿದೆ~ ಎಂದು ಅವರು ಸುದ್ದಿಗಾರರ ಬಳಿ ದೂರಿದ್ದಾರೆ.ಕೇಜ್ರಿವಾಲ್ ಅವರ ಬಾಕಿ ತೆರಿಗೆ ಪಾವತಿ ವಿಷಯದಲ್ಲಿ ಸರ್ಕಾರ ನಿಯಮಗಳ ಪ್ರಕಾರ ನಡೆದುಕೊಳ್ಳಲಿದೆ ಎಂದು ಸಿಬ್ಬಂದಿ ಮತ್ತು ತರಬೇತಿ ರಾಜ್ಯ ಸಚಿವ ವಿ.ನಾರಾಯಣ ಸ್ವಾಮಿ ಹೇಳಿದ್ದಾರೆ.`ನನ್ನ ವಿರುದ್ಧ ಪಿತೂರಿ~

ನವದೆಹಲಿ (ಪಿಟಿಐ): 
ಅಣ್ಣಾ ತಂಡದ ಕೆಲವರು ತಮ್ಮ ವಿರುದ್ಧ ಪಿತೂರಿ ಮಾಡಿದ್ದಾರೆ ಎಂದು ಸ್ವಾಮಿ ಅಗ್ನಿವೇಶ್ ಆರೋಪಿಸಿದ್ದಾರೆ.`ಮೂರು ದಿನಗಳ ಮೊದಲೇ ತಮ್ಮ ಬಳಿ ವಿವಾದಾತ್ಮಕ ಸಿ.ಡಿ ಇದ್ದರೂ, ಅವರು ಆ. 28ರಂದು ಅದನ್ನು ಹಂಚಿದ್ದು ಯಾಕೆ? ಇದು ವಿಚಿತ್ರವಾಗಿದೆ. ಅಣ್ಣಾ ಅವರ ಉಪವಾಸ ಸತ್ಯಾಗ್ರಹ ಅಂತ್ಯವಾಗುತ್ತಿದಂತೆಯೇ ಅವರು ಸಿ.ಡಿ ಬಿಡುಗಡೆ ಮಾಡಿದ್ದಾರೆ~ ಎಂದು ಅಗ್ನಿವೇಶ್ ದೂರಿದ್ದಾರೆ.

 

`ನಾನು ಅವರನ್ನು ಬೆಂಬಲಿಸಿದ್ದೆ. ಆದರೆ ಅವರು ನನ್ನ ಬೆನ್ನಿಗೆ ಚೂರಿ ಹಾಕಿದರು. ನಾನು ತಪ್ಪು ಮಾಡಿಲ್ಲ.  ನಾನು ಎಲ್ಲಿ ತಪ್ಪು ಮಾಡಿದ್ದು ಎಂದು ತೋರಿಸಿದಲ್ಲಿ ಕೂಡಲೇ ಅಣ್ಣಾ ಅವರ ಕ್ಷಮೆ ಯಾಚಿಸುತ್ತೇನೆ. ಅವರ ಬಗ್ಗೆ ನನಗೆ ಅಪಾರ ಗೌರವ ಇದೆ~ ಎಂದು ಅಗ್ನಿವೇಶ್‌ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.