ಸರ್ಕಾರಕ್ಕೆ ಗುಂಟೆ ಜಮೀನೂ ನೀಡಲಾಗದು:ರೈತ ಸಂಘ ಸ್ವಯಂ ಪಡೆ ರಚನೆಗೆ ನಿರ್ಧಾರ

ಬುಧವಾರ, ಜೂಲೈ 24, 2019
24 °C

ಸರ್ಕಾರಕ್ಕೆ ಗುಂಟೆ ಜಮೀನೂ ನೀಡಲಾಗದು:ರೈತ ಸಂಘ ಸ್ವಯಂ ಪಡೆ ರಚನೆಗೆ ನಿರ್ಧಾರ

Published:
Updated:

ಚಿಕ್ಕಮಗಳೂರು: ರಾಜ್ಯದಲ್ಲಿ ಒಂದು ಗುಂಟೆ ಭೂಮಿಯನ್ನೂ ಸರ್ಕಾರಕ್ಕೆ ಬಿಟ್ಟು ಕೊಡದಿರಲು ರೈತ ಸಂಘ ನಿರ್ಣಯ ಕೈಗೊಳ್ಳಲಿದೆ. ಇದಕ್ಕೆ ಎದುರಾಗುವ ಸವಾಲು ಎದುರಿಸಲು ಕಾರ್ಯಕರ್ತರ ಪಡೆ ರಚಿಸಲಾಗುವುದು ಎಂದು ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ತಿಳಿಸಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೈಸರ್ಗಿಕ ಸಂಪತ್ತನ್ನು ಕಾಪಾಡಲು ಹಾಗೂ ಭೂಮಿಯನ್ನು ಸರ್ಕಾರಕ್ಕೆ ಬಿಟ್ಟುಕೊಡದಂತೆ ರೈತರಲ್ಲಿ ಮನವರಿಕೆ ಮಾಡಿಕೊಡಲು ರೈತ ಸಂಘ ಸ್ವಯಂ ಪಡೆ ರಚಿಸಲಿದೆ ಎಂದು ತಿಳಿಸಿದರು.ಇದೇ 21ರಂದು ಧಾರವಾಡ ಕಡಪ ಮೈದಾನ ದಲ್ಲಿ ರೈತರ ರಾಜ್ಯಮಟ್ಟದ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ರೈತ ಸಂಘದ ಹೋರಾಟಗಳ ಆವಲೋಕನ ನಡೆಯಲಿದೆ ಎಂದು ಹೇಳಿದರು.

ಸರ್ಕಾರಕ್ಕೆ ಭೂಮಿ ಮಾರಾಟ ಮಾಡಲು ರೈತರು ಹತಾಶಭಾವನೆ ತಾಳುವ ಪರಿಸ್ಥಿತಿಯನ್ನು ನಿರ್ಮಿಸಿ ಕಾರ್ಪೊರೇಟ್ ವಲ ಯಕ್ಕೆ  ಸರ್ಕಾರ ರತ್ನಗಂಬಳಿ  ಹಾಸಲು ಮುಂದಾಗುತ್ತಿದೆ. ಸಾಗುವಳಿ ಮಾಡುತ್ತಿರುವ ಭೂಮಿಯನ್ನು ಸ್ವಯಂ ರಕ್ಷಣೆಗೆ ರೈತರೇ ಮುಂದಾಗಬೇಕಾಗಿದೆ ಎಂದು ತಿಳಿಸಿದರು.ರಾಜ್ಯದಲ್ಲಿ ನಡೆಯುತ್ತಿರುವ ಬಂಡವಾಳಶಾಹಿಗಳ ರಾಜ ಕಾರಣ ಹಿಮ್ಮೆಟ್ಟಿಸಲು ಜನಪರ ರಾಜಕಾರಣ ನೀತಿ ಘೋಷಿಸಲು  ರೈತಸಂಘ ಮುಂದಾಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಂಡವಾಳಶಾಹಿಗಳ ಏಜೆಂ ಟರಂತೆ ಕೆಲಸ ನಿರ್ವಹಿಸುತ್ತಿವೆ ಎಂದು ಟೀಕಿಸಿದರು.ಕಳೆದ ವರ್ಷ ರಾಜ್ಯದ 123 ತಾಲ್ಲೂಕುಗಳು ಬರಪರಿಸ್ಥಿತಿ ಎದುರಿಸಿವೆ. ಈಗ ಮಳೆಬಾರದೆ ಮತ್ತಷ್ಟು ಜಿಲ್ಲೆಗಳು ಬರಗಾಲ ಪರಿಸ್ಥಿತಿ ನೋಡುವಂತಾಗಿದೆ. ಕಳೆದ 22ರಂದು ಮುಖ್ಯಮಂತ್ರಿ ರೈತರೊಂದಿಗೆ ನಡೆಸಿದ ಮಾತುಕತೆ ವೇಳೆ ರೈತರ ಬೆಳೆ ಸಾಲ ಮನ್ನಾ ಮಾಡಬೇಕು. ಬಿತ್ತನೆ ಬೀಜ ಉಚಿತವಾಗಿ ವಿತರಿಸಬೇಕು. ರಸಗೊಬ್ಬರ ಬೆಲೆ ಕಡಿಮೆ ಮಾಡಬೇಕೆಂದು ಒತ್ತಾಯಿಸಿದ್ದರೂ ಸರ್ಕಾರ ತಲೆಕೆಡಿಸಿಕೊಂಡಿಲ್ಲ ಎಂದು ಕಿಡಿಕಾರಿದರು.ಬಿಜೆಪಿ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದಾಗಿನಿಂದ ಮುಖ್ಯಮಂತ್ರಿ ಬದಲಾಯಿಸಿ ಮತ್ತೆ ಬೇರೆಯವರನ್ನು ಕೂರಿಸುವ ಕೆಲಸದಲ್ಲಿ ಕಾಲಕಳೆಯಿತು. ಜನರ ಸಮಸ್ಯೆಗೆ ಸ್ಪಂದಿಸಲು ವಿಫಲವಾಗಿರುವುದರಿಂದ ಸರ್ಕಾರವನ್ನು ವಜಾಗೊಳಿಸಲು ರಾಜ್ಯಪಾಲರು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.ಮೂಲ ರೈತ ಸಂಘ ಒಡೆದಿಲ್ಲ. ಕೆಲವರು ವೈಯಕ್ತಿಕ ಹಿತಾಸಕ್ತಿಗೆ ಮಠದಲ್ಲಿ ಸಭೆ ನಡೆಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮೂಲರೈತ ಸಂಘದ ಕಾರ್ಯಕರ್ತರು ಸಂಘದಲ್ಲೆ ಇದ್ದು ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.ರಾಜ್ಯದ ಪಶ್ಚಿಮಘಟ್ಟ ವಿಶ್ವಪಾರಂಪರಿಕ ಪಟ್ಟಿಗೆ ಸೇರಿರುವ ಬಗ್ಗೆ ಎಲ್ಲೊ ಕುಳಿತು ತೀರ್ಮಾನ ಕೈಗೊಳ್ಳುವ ಬದಲು ಸಾರ್ವಜನಿಕ ಚರ್ಚೆ ಆಗುವುದು ಒಳ್ಳೆಯದು ಎಂದು ಸಲಹೆ ನೀಡಿದರು.ರಾಜ್ಯ ಕಾರ್ಯದರ್ಶಿ ಎಂ.ಮಂಜುನಾಥ, ವಿಭಾಗೀಯ ಉಪಾಧ್ಯಕ್ಷ  ಲಕ್ಷ್ಮಿ ನಾರಾಯಣ, ರಾಮಸ್ವಾಮಿ,ರಾಮಣ್ಣ, ಜಿಲ್ಲಾ ಅಧ್ಯಕ್ಷ ವಿನಾಯಕ ಮಾಳೂರು ದಿಣ್ಣೆ, ಗೌರವಾಧ್ಯಕ್ಷ ಕೆ.ಕೆ.ಕೃಷ್ಣೇಗೌಡ, ಪ್ರಧಾನ ಕಾರ್ಯದರ್ಶಿ ಗುರುಶಾಂತಪ್ಪ, ತಾಲ್ಲೂಕು ಅಧ್ಯಕ್ಷ ಮಂಜುನಾಥ, ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಶಶಿಧರ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry