ಶುಕ್ರವಾರ, ಜೂನ್ 25, 2021
29 °C
ಶೋಧನಾ ಸಮಿತಿ ನೇತೃತ್ವಕ್ಕೆ ನಿವೃತ್ತ ನ್ಯಾಯಮೂರ್ತಿ ಥಾಮಸ್‌ ನಕಾರ

ಸರ್ಕಾರಕ್ಕೆ ಮುಖಭಂಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಲೋಕಪಾಲ ಸದಸ್ಯರ ನೇಮಕಕ್ಕೆ ಯುಪಿಎ ಸರ್ಕಾರ ನಿಗದಿಪ­ಡಿಸಿರುವ ಅರ್ಹತೆ ಮತ್ತು ಮಾನದಂಡ­ಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿರುವ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಟಿ. ಥಾಮಸ್‌, ಶೋಧನಾ ಸಮಿತಿಯ ಅಧ್ಯಕ್ಷತೆ ವಹಿಸಿಕೊಳ್ಳಲು ನಿರಾಕರಿಸಿದ್ದಾರೆ.ಲೋಕಪಾಲ ವ್ಯವಸ್ಥೆಯ ಅಧ್ಯಕ್ಷ ಮತ್ತು ಸದಸ್ಯ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರನ್ನು ಸೀಮಿತಗೊಳಿಸಲು, ತನಗೆ ಬೇಕಾದವರನ್ನೇ ಆ ಹುದ್ದೆಗಳಿಗೆ ತರಲು ಕೇಂದ್ರ ಸರ್ಕಾರ ಆಲೋಚಿ­ಸುತ್ತಿದೆ ಎಂಬ ಆರೋಪಕ್ಕೆ ನ್ಯಾ. ಥಾಮಸ್‌ ಅವರ ನಿರ್ಧಾರ ಪುಷ್ಟಿ ನೀಡಿದೆ. ಅವರ ನಕಾರ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದೆ.ಆಯ್ಕೆಗೆ ರೂಪಿಸಿರುವ ವಿಧಾನವೇ ಸರಿಯಲ್ಲ  ಎಂದು ಆಕ್ಷೇಪ ವ್ಯಕ್ತಪಡಿಸಿ ಶೋಧನಾ ಸಮಿತಿಯ ಸದಸ್ಯರಾಗಲು ಕಳೆದ ಗುರುವಾರ ಹಿರಿಯ ವಕೀಲ ಫಾಲಿ ನಾರಿಮನ್‌ ನಿರಾಕರಿಸಿದ್ದರು.ಅಪ್ರಯೋಜಕ ಕೆಲಸ: ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ನೀಡುವ ಹೆಸರುಗಳಿಂದ ಪಟ್ಟಿಯೊಂದನ್ನು ಆಯ್ಕೆ ಮಾಡಿ ಕೊಡು­­ವುದಕ್ಕಾಗಿ ತಮ್ಮ ಹುಟ್ಟೂರು ಕೇರಳದ ಕೊಟ್ಟಾಯಂನಿಂದ ದೆ­ಹಲಿಗೆ ಪ್ರಯಾಣಿಸುವುದು ಅಂತಹ ಉಪ­ಯುಕ್ತ ಕೆಲಸವೇನೂ ಅಲ್ಲ ಎಂದು ಪ್ರಧಾನಿ ಸಚಿವಾಲಯದ ರಾಜ್ಯ ಸಚಿವ ವಿ. ನಾರಾಯಣಸ್ವಾಮಿ ಅವರಿಗೆ ಬರೆದಿ­ರುವ ಪತ್ರದಲ್ಲಿ  ಥಾಮಸ್‌ ಹೇಳಿದ್ದಾರೆ.ಶೋಧ ಸಮಿತಿಯ ಅಧ್ಯಕ್ಷ ಸ್ಥಾನ ವಹಿ­ಸಿಕೊಳ್ಳಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ. ಆದರೆ ಮೊದಲು ಅವರು ಈ ಸ್ಥಾನ­ ಒಪ್ಪಿ­ಕೊಂಡಿ­ದ್ದರು ಎಂದು ವರದಿಯಾಗಿತ್ತು.ಮಾನದಂಡಕ್ಕೆ ಅತೃಪ್ತಿ: ಶೋಧನಾ ಸಮಿತಿಯ ಮಾನದಂಡಗಳ ವಿವರ­ವನ್ನು ಸರ್ಕಾರದಿಂದ ಪಡೆದುಕೊಂಡ ನಂತರ ಹುದ್ದೆ ಒಪ್ಪಿಕೊಳ್ಳದಿ­ರುವ ನಿರ್ಧಾರಕ್ಕೆ ಥಾಮಸ್‌ ಬಂದಿದ್ದಾರೆ.‘ಪ್ರಸ್ತುತ ಆಯ್ಕೆ ಪ್ರಕ್ರಿಯೆಯಲ್ಲಿ ಅತ್ಯಂತ ದಕ್ಷ, ಸ್ವತಂತ್ರ ಮತ್ತು ಧೀರ ವ್ಯಕ್ತಿಗಳು ಆಯ್ಕೆ ಆಗದೇ ಇರಬಹುದು’  ಎಂಬ ಕಳವಳವನ್ನು ನಾರಿಮನ್‌ ಅವರು ವ್ಯಕ್ತಪಡಿಸಿದ್ದರು. ಅದರಿಂದಾಗಿ ಶೋಧನಾ ಸಮಿತಿಯ ವ್ಯಾಪ್ತಿ ಕುಗ್ಗಿಸಲಾಗಿದೆಯೇ ಎಂಬುದನ್ನು ತಿಳಿ­ದು­­­ಕೊಳ್ಳಲು ಥಾಮಸ್‌ ಬಯಸಿದ್ದರು.ಶೋಧನಾ ಸಮಿತಿಯು ಸಲ್ಲಿಸುವ ಪಟ್ಟಿಯಿಂದ ಲೋಕಪಾಲ ಸದಸ್ಯರನ್ನು ಆಯ್ಕೆ ಮಾಡುವ ಹೊಣೆ ಪ್ರಧಾನಿ ನೇತೃತ್ವದ ಆಯ್ಕೆ ಸಮಿತಿಯದ್ದಾಗಿದೆ. ಆದರೆ ಶೋಧನಾ ಸಮಿತಿಯು ಕಳುಹಿಸಿದ ಪಟ್ಟಿಯಿಂದಲೇ ಸದಸ್ಯರನ್ನು ಆಯ್ಕೆ ಮಾಡುವುದು ಆಯ್ಕೆ ಸಮಿತಿಗೆ ಕಡ್ಡಾಯವೇನೂ ಅಲ್ಲ ಎಂಬುದಕ್ಕೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಲೋಕಪಾಲ ಸದಸ್ಯರಾಗಿ ಯಾರನ್ನು ನೇಮಕ ಮಾಡಬಹುದು ಎಂಬುದನ್ನು ಆಯ್ಕೆ ಸಮಿತಿಯೇ ನಿರ್ಧರಿಸ­ಬಹುದಾ­ಗಿ­­ರುವಾಗ ಶೋಧನಾ ಸಮಿತಿಯ ಅಗತ್ಯ­ ಏನು ಎಂದು ಪ್ರಶ್ನಿಸಿದ್ದಾರೆ.‘ಲೋಕಪಾಲ ಸದಸ್ಯರಾಗಲು ಬಯಸಿ ಅರ್ಜಿ ಸಲ್ಲಿಸುವವರಿಗೆ ನಿಗದಿ ಮಾಡಲಾಗಿರುವ ಅರ್ಹತೆಗಳೇ ವ್ಯಾಪಕ ಟೀಕೆಗೆ ಒಳಗಾಗಿದೆ. ಅರ್ಹ ವ್ಯಕ್ತಿಗಳು ಸದಸ್ಯತ್ವದ ಪರಿಗಣನೆಗೆ ಬಾರದೇ ಇರುವಂತೆ ಇದು ನೋಡಿಕೊಳ್ಳುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ಲೋಕಪಾಲ ಸದಸ್ಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಸುಪ್ರೀಂ ಕೋರ್ಟ್‌ನ ಇಬ್ಬರು ನಿವೃತ್ತ ನ್ಯಾಯಮೂರ್ತಿಗಳಿಗೆ ಸರ್ಕಾರ ಬರೆದಿರುವ ಪತ್ರದ ಬಗ್ಗೆ ಆ ನ್ಯಾಯ­ಮೂರ್ತಿಗಳೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.ಏನಿದು ಶೋಧನಾ ಸಮಿತಿ

ಭ್ರಷ್ಟಾಚಾರ ನಿಗ್ರಹಕ್ಕಾಗಿ ಬಹು ಸದಸ್ಯರುಳ್ಳ ಲೋಕಪಾಲ ವ್ಯವಸ್ಥೆ ಜಾರಿಗೆ ಯುಪಿಎ ಸರ್ಕಾರ ಕಾಯ್ದೆ ರೂಪಿ­ಸಿದೆ. ಇದರ ಪ್ರಕಾರ, ಲೋಕ­ಪಾಲ ಸಂಸ್ಥೆಯ ಮುಖ್ಯಸ್ಥರು ಮತ್ತು  ಸದಸ್ಯರನ್ನು ಪ್ರಧಾನಿ ಅಧ್ಯಕ್ಷತೆಯ ಸಮಿತಿ ಆಯ್ಕೆ ಮಾಡುತ್ತದೆ.

ಲೋಕಪಾಲ ಹುದ್ದೆಗಳಿಗೆ ಅರ್ಹರ ಹೆಸರುಗಳನ್ನು ಸೂಚಿಸಿ ಪ್ರಧಾನಿ ಅಧ್ಯಕ್ಷತೆಯ ಸಮಿತಿಗೆ ಶಿಫಾರಸು ಮಾಡುವುದಕ್ಕಾಗಿ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಶೋಧನಾ ಸಮಿತಿ ರಚಿಸಬೇಕಾ­ಗುತ್ತದೆ.ಸ್ವಾತಂತ್ರ್ಯ ಇಲ್ಲ...

ಕೇಂದ್ರ ಸರ್ಕಾರ ನೀಡಿದ ಹೆಸರು ಗಳಿಂದ ಕೆಲವರನ್ನು ಆಯ್ಕೆ ಮಾಡಿ ಕಳುಹಿಸುವುದಷ್ಟೇ ಶೋಧನಾ ಸಮಿತಿಯ ಕೆಲಸ. ಅತ್ಯಂತ ಅರ್ಹ ವ್ಯಕ್ತಿಗಳನ್ನು ಗುರುತಿಸಿ  ಪಟ್ಟಿಗೆ ಸೇರಿಸುವ ಸ್ವಾತಂತ್ರ್ಯ ಸಮಿತಿಗೆ ಇಲ್ಲ ಎಂಬುದು ಸರ್ಕಾರ ಒದಗಿಸಿದ ಮಾನದಂಡಗಳಿಂದ ತಿಳಿಯಿತು. ಹೀಗಿದ್ದರೆ ಏನು ಪ್ರಯೋಜನ?

ನಿವೃತ್ತ ನ್ಯಾಯಮೂರ್ತಿ ಥಾಮಸ್‌ಹುನ್ನಾರ ಬಯಲು

ಇದು ನಿಜಕ್ಕೂ ಸರ್ಕಾರಕ್ಕೆ ಮುಖ­ಭಂಗ. ಲೋಕಪಾಲರ ಮುಂದೆ ಯುಪಿಎ ಸರ್ಕಾರದ ಹಗರಣಗಳೇ ಬರಲಿವೆ. ಅದರಿಂದ ಬಚಾವಾಗಲು ತಮಗೆ ಬೇಕಾದವರನ್ನೇ ಲೋಕ­ಪಾಲ ಹುದ್ದೆಗೆ ಭರ್ತಿ ಮಾಡುವ ಯುಪಿಎ ಸರ್ಕಾರದ ಹುನ್ನಾರ ಬಯಲಾಗಿದೆ.

ಪ್ರಕಾಶ್‌ ಜಾವಡೇಕರ್‌, ಬಿಜೆಪಿ ನಾಯಕ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.