ಸರ್ಕಾರಕ್ಕೆ ರೈತರ ಎಚ್ಚರಿಕೆ!

7

ಸರ್ಕಾರಕ್ಕೆ ರೈತರ ಎಚ್ಚರಿಕೆ!

Published:
Updated:

ಹುಮನಾಬಾದ್: ತಾಲ್ಲೂಕಿನಾದ್ಯಂತ ಬೆಳೆಯಲಾದ ವಿವಿಧ ಕೃಷಿ ಉತ್ಪನ್ನಗಳಿಗೆ ಸೂಕ್ತಬೆಲೆ ದೊರಕದ ಕಾರಣ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ವಾರದೊಳಗೆ ಬೆಂಬಲ ಬೆಲೆ ಘೋಷಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ರೈತರು ಎಚ್ಚರಿಸಿದ್ದಾರೆ.ತಾಲ್ಲೂಕಿನಲ್ಲಿ ಹೆಚ್ಚು ಪ್ರತಿಶತ ಭೂಮಿಯಲ್ಲಿ ಬೆಳೆಯಲಾದ ಅಲ್ಲಾ (ಹಸಿ ಶುಂಠಿ), ಉಳ್ಳಾಗಡ್ಡಿ(ಈರುಳ್ಳಿ) ಮತ್ತು ಬೆಳ್ಳುಳ್ಳಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬಿತ್ತನೆ ಇತ್ಯಾದಿಗಾಗಿ ಆಗಿರುವ ಒಟ್ಟು ವೆಚ್ಚದ ಶೇ. 25 ಹಣ ಕೂಡಾ ತಮ್ಮ ಕೈಗೆಟಕುತ್ತಿಲ್ಲ. ಪ್ರತಿ ಎಕರೆ ಅಲ್ಲಾ ಬೇಸಾಯಕ್ಕೆ ರೂ. 40ರಿಂದ 50ಸಾವಿರ ತಗಲುತ್ತದೆ. ಉಳ್ಳಾಗಡ್ಡಿ ಬೇಸಾಯಕ್ಕೆ ರೂ. 25ರಿಂದ 30ಸಾವಿರ, ಬೆಳ್ಳುಳ್ಳಿ ರೂ.50ರಿಂದ 60ಸಾವಿರ ವೆಚ್ಚ ತಗಲುತ್ತದೆ. ಕಳೆದ ಬಾರಿ ಪ್ರತಿ ಕ್ವಿಂಟಲ್ ಹಸಿಶುಂಠಿ ಬೆಲೆ ಮಾರುಕಟ್ಟೆಯಲ್ಲಿ ರೂ. 20ಸಾವಿರಕ್ಕೂ ಮೇಲ್ಪಟ್ಟು ಇದ್ದದ್ದು ಈ ಬಾರಿ ಗರಿಷ್ಟ ರೂ. 11ನೂರಕ್ಕೆ ಕುಸಿದಿದೆ.ಬೆಳ್ಳುಳ್ಳಿ ಕಳೆದ ಬಾರಿ 2ಸಾವಿರ ಇದ್ದದ್ದು ಈ ಬಾರಿ ರೂ. 80ರಿಂದ 200ಕ್ಕೆ ಕುಸಿದಿದೆ. ಇನ್ನೂ (ಈರುಳ್ಳಿ) ಉಳ್ಳಾಗಡ್ಡಿ- ರೂ. 1ನೂರರಿಂದ 4ನೂರಕ್ಕೆ ಕುಸಿದ ಹಿನ್ನೆಲೆಯಲ್ಲಿ ತಾವು ಸಂಕಷ್ಟಕ್ಕೆ ಸಿಲುಕಿದ್ದೇವೆ, ಬೆಲೆ ಇಲ್ಲದ ಕಾರಣ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಅಲ್ಲಾ ಭೂಮಿಯಿಂದ ತೆಗೆಯದೇ ಅಲ್ಲಿ ಹುಗಿದಿದ್ದೇವೆ ಎಂದು ರೈತರು ಗೋಳು ತೋಡಿಕೊಂಡರು.ಕಳೆದ ಬಾರಿ ಅಲ್ಲಾ ಮೊದಲಾದ ಬೆಳೆಗಳನ್ನು ಕೇವಲ 4ನೂರು ಎಕರೆ ಪ್ರದೇಶದಲ್ಲಿ ಮಾತ್ರ ಬೆಳೆದಿದ್ದರು. ಆಗ ಬೆಲೆ ಕೂಡ ಉತ್ತಮವಾಗಿತ್ತು. ಆ ಕಾರಣಕ್ಕಾಗಿ ರೈತ ಸಹಜವಾಗಿಯೇ ಈ ಬಾರಿ ಅದೇ ಬೆಳೆಗಳನ್ನು 4ವರೆ ಸಾವಿರಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಬೆಳೆದಿದ್ದಾರೆ. ಅದರಂತೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಬೆಳೆಗಳನ್ನು ಕೂಡ. ಆದರೇ ಅದನ್ನೇ ಕೊಂಚ ವೈಜ್ಞಾನಿಕ ಮಾದರಿಯಲ್ಲಿ ಬೇಸಾಯಬೇಸಾಯ ಕೈಗೊಂಡಿದ್ದರೆ ಆಗಬಹುದಿದ್ದ ಹಾನಿಯ ಪ್ರಮಾಣವನ್ನು ಕೊಂಚ ಕಡಿಮೆ ಮಾಡಬಹುದಿತ್ತು  ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಹೇಳುತ್ತಾರೆ.ಬೆಂಬಲ ಬೆಲೆ: ರೈತರ ವಾಸ್ತವ ಸ್ಥಿತಿ ಅರಿತು ಸರ್ಕಾರ ಕೂಡಲೇ ಪ್ರತಿ ಕ್ವಿಂಟಲ್ ಉಳ್ಳಾಗಡ್ಡಿ- ರೂ.2ಸಾವಿರ, ಬಳ್ಳೊಳ್ಳಿಗೆ- ರೂ. 5ಸಾವಿರ ಮತ್ತು (ಹಸಿಶುಂಠಿ) ಅಲ್ಲಾ- ರೂ. 5ಸಾವಿರ ಬೆಂಬಲ ಬೆಲೆಯನ್ನು ವಾರದೊಳಗೆ ಘೋಷಿಸಿ, ಖರೀದಿ ಕೇಂದ್ರ ಆರಂಭಿಸಬೇಕು ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಸತೀಶ ನನ್ನೂರೆ, ಪ್ರಮುಖರಾದ ಸಿದ್ದಣ್ಣ ಭೂಶೆಟ್ಟಿ, ಖಾಸೀಂಅಲಿ, ಮೈನೋದ್ದೀನ್ ಲಾಡ್ಜಿ, ಗುರುಲಿಂಗಪ್ಪ ಮೇಲ್ದೊಡ್ಡಿ,ಲಕ್ಷ್ಮಣರಾವ ಕಾಳಗಿ, ಕಲ್ಯಾಣರಾವ ಕುಲಕರ್ಣಿ, ಕರಬಸಪ್ಪ ಹುಡಗಿ ಅಲ್ಲದೇ ಬುಧವಾರ ಮಧ್ಯಾಹ್ನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಬಂದಿದ್ದ ಅನೇಕ ರೈತರು  `ಪ್ರಜಾವಾಣಿ~ ಎದುರು ನೋವು ತೋಡಿಕೊಂಡರು. ಮತ್ತು ವಾರದೊಳಗೆ ಬೆಂಬಲಬೆಲೆ ಘೋಷಿಸದಿದ್ದರೇ ಬೀದಿಗಳಿದು ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ರೈತರು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry