ಬುಧವಾರ, ಮೇ 25, 2022
29 °C

ಸರ್ಕಾರಕ್ಕೆ ಸುಳ್ಳು ವರದಿ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರ್ಕಾರಕ್ಕೆ ಸುಳ್ಳು ವರದಿ: ಆರೋಪ

ಹೊಳೆನರಸೀಪುರ: ಇಲ್ಲಿನ ಸೂರನ ಹಳ್ಳಿ ಸಮೀಪದ ರೈತರ ಜಮೀನಿನಲ್ಲಿ ಚತುಷ್ಪಥ ಹೆದ್ದಾರಿ ನಿರ್ಮಾಣ ಬೇಡ ಎಂಬ ಲೋಕಾಯುಕ್ತರು ಸರ್ಕಾರಕ್ಕೆ ನೀಡಿದ ವರದಿಯನ್ನು ಪುರಸಭೆಯ ನಿರ್ಲಕ್ಷ್ಯ ಮಾಡಿ ಮತ್ತೆ ಆ ಜಾಗದಲ್ಲೇ ರಸ್ತೆ ನಿರ್ಮಾಣಕ್ಕೆ ನಿರ್ಣಯ ಕೈಗೊಂಡಿದೆ ಎಂದು ವಕೀಲ ಮೋಹನ್ ದೂರಿದ್ದಾರೆ.ಈ ಸಂಬಂಧ ಶುಕ್ರವಾರ ರೈತ ಸಂಘದ ಸಮ್ಮುಖದಲ್ಲಿ ಅವರು ಪತ್ರಿಕಾಗೋಷ್ಠಿ ನಡೆಸಿದರು. ಬೇರೆ ಕಡೆ ರೈತರ ಜಮೀನಿಗೆ ಹೆಚ್ಚು ಬೆಲೆ ಕೊಡಿಸಲು ಹೋರಾಟ ನಡೆಸುತ್ತಾರೆ. ಆದರೆ ನಾವು ಕಳೆದ 14 ವರ್ಷಗಳಿಂದ ನಮ್ಮ ಜಮೀನಿಗೆ ಸೂಕ್ತ ಬೆಲೆ ಕೊಡಿಸಿ ಎಂದು ಒತ್ತಾಯಿಸುದ್ದೇವೆ. ಇಲ್ಲಿ ಒಂದು ಕುಂಟೆ ಜಮೀನು 70ರಿಂದ 90 ಸಾವಿರಕ್ಕೆ ಖರೀದಿಸು ತ್ತಿದ್ದಾರೆ. ಫಲವತ್ತಾದ ನೀರಾವರಿ ಜಮೀನು ಕುಂಟೆಗೆ 1600 ರೂಪಾಯಿ ನಿಗದಿ ಪಡಿಸಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.ಸೂರನಹಳ್ಳಿ ಸಮೀಪ ಪಟ್ಟಣದ ಅಭಿವೃದ್ಧಿ ಸಲುವಾಗಿ ಪುರಸಭೆ 87 ಎಕರೆ 23 ಕುಂಟೆ ಜಮೀನನ್ನು ವಶಪಡಿಸಿಕೊಂಡಿದ್ದೇವೆ ಎಂದು ಪುರಸಭೆ ಅಧಿಕಾರಿಗಳು ಸರ್ಕಾರಕ್ಕೆ ವರದಿ ನೀಡಿ ದ್ದಾರೆ. ಇಲ್ಲಿ ನೂರಾರು ಮನೆಗಳನ್ನು ಕಟ್ಟಿದ್ದೇವೆ ಎಂದು ವಿವರ ನೀಡಿದ್ದಾರೆ. ಆದರೆ ಇಲ್ಲಿ ತಮ್ಮ ಮನೆ ಬಿಟ್ಟು ಬೇರೆ ಮನೆ ಇಲ್ಲ ಎಂದು ರೈತರು ದಾಖಲೆಗಳನ್ನು ಪ್ರದರ್ಶಿಸಿದರು.ರೈತ ಸಂಘದ ಗೋಪಾಲ ಕೃಷ್ಣ ಮಾತನಾಡಿ, ಈ ಜಮೀನನ್ನು 1996ರಲ್ಲಿ ವಶಪಡಿಕೊಳ್ಳಲು ನೋಟಿಫಿಕೇಷನ್ ಮಾಡಲಾಗಿತ್ತು. ನಂತರ ಈ ಜಮೀನು ಬೇಡ ಎಂದು 1999ರಲ್ಲಿ ಪುರಸಭೆ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಇದನ್ನು 2000ದಲ್ಲಿ ಡಿನೋಟಿಫಿಕೇಷನ್ ಮಾಡಿತ್ತು. ಆದರೂ ಪುರಸಭೆಯ ಅಧಿಕಾರಿಗಳನ್ನು ಬಳಸಿಕೊಂಡು ಸರ್ಕರಕ್ಕೆ ತಪ್ಪು ಮಾಹಿತಿ ಮತ್ತು ಸುಳ್ಳುವರದಿ ನೀಡಿ ರೈತರ ಬದುಕು ಹಾಳುಮಾಡಿದ್ದಾರೆ. ಯಾವುದೇ ಕಾರಣಕ್ಕೆ ನಮ್ಮ ರೈತರ ಜಮೀನು ವಶಪಡಿಸಿಕೊಳ್ಳಲು ಬಿಡುವುದಿಲ್ಲ. ಇಲ್ಲಿ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ನ್ಯಾಯಾಲಯದಲ್ಲಿ ಹೋರಾಟ ಮುಂದುವರೆ ಸುತ್ತೇವೆ ಎಂದು ನುಡಿದರು.ಪುರಸಭೆ ಅಧಿಕಾರಿಗಳು 1997ರಲ್ಲಿ 87.22 ಎಕರೆ ಜಮೀನು ವಶಪಡಿಸಿಕೊಂಡಿದ್ದಾಗಿ ಹೇಳುತ್ತಾರೆ. ಆದರೆ ನಮ್ಮಲ್ಲಿ ಕೆಲವರು ಇವರು ಹೇಳುವ ಜಮೀನಿನ ವ್ಯಾಪ್ತಿಯಲ್ಲಿ 1992ರಲ್ಲೇ ಸುಮಾರು 10 ಎಕರೆ ಜಮೀನನ್ನು ನಿವೇಶನಗಳನ್ನಾಗಿ ಪರಿವರ್ತಿಸಿ ಖಾತೆ ಮಾಡಿಸಿಕೊಂಡಿದ್ದಾರೆ. ಅಲ್ಲದೇ ಪುರಸಭೆಗೆ ಕಂದಾಯ ಕಟ್ಟುತ್ತಿದ್ದೇವೆ ಎಂದು ಮುಖಂಡ ಹೊನ್ನಶೆಟ್ಟಪ್ಪ ದಾಖಲೆ ಪ್ರದರ್ಶಿಸಿದರು.ಪುರಸಭೆ ಸರ್ಕಾರಕ್ಕೆ ಸುಳ್ಳು ವರದಿ ನೀಡಿ ತಪ್ಪು ಮಾಡಿದೆ. ತಪ್ಪು ಮಾಡಿದ ಅಧಿಕಾರಿಗಳು ತೊಂದರೆ ಅನುಭವಿಸುತ್ತಾರೆ ಎಂದು ವಕೀಲ ಮೋಹನ್ ಹೇಳಿದರು.  ರೈತ ಸಂಘದ ಗೋಪಾಲಕೃಷ್ಣ, ಗಂಟೆ ನರಸಿಂಹಯ್ಯ, ಪಟೇಲ್ ಜವರೇಗೌಡರು, ನಂಜುಂಡೇಗೌಡ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.