ಸರ್ಕಾರಕ್ಕೆ ಸೆಡ್ಡು ಹೊಡೆದ ಲೋಕಸತ್ತಾ ಪಕ್ಷ

7

ಸರ್ಕಾರಕ್ಕೆ ಸೆಡ್ಡು ಹೊಡೆದ ಲೋಕಸತ್ತಾ ಪಕ್ಷ

Published:
Updated:

ರಾಯಚೂರು: ಆಂಧ್ರಪ್ರದೇಶ ಸರ್ಕಾರವು ಹೊರ ರಾಜ್ಯಕ್ಕೆ ಅಕ್ಕಿ ಸಾಗಾಣಿಕೆ ಮತ್ತು ಮಾರಾಟಕ್ಕೆ ನಿರ್ಬಂಧ ವಿಧಿಸಿರುವುದನ್ನು ವಿರೋಧಿಸಿ ಆಂಧ್ರಪ್ರದೇಶದ ಲೋಕಸತ್ತಾ ಪಕ್ಷದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ಅವರ ನೇತೃತ್ವದಲ್ಲಿ ಸ್ವತಂತ್ರ ರೈತ ಸಂಘಗಳ ಒಕ್ಕೂಟಗಳ ಸಹಯೋಗದಲ್ಲಿ ಆರಂಭಗೊಂಡ ರೈತ ಪಾದಯಾತ್ರೆ ಭಾನುವಾರ ರಾಯಚೂರು ತಾಲ್ಲೂಕಿನ ಗಡಿ ಗ್ರಾಮ ಗಿಲ್ಲೇಸುಗೂರಿಗೆ ಭೇಟಿ ನೀಡಿತು.ಅಲ್ಲಿ ತಾವು ಆಂಧ್ರಪ್ರದೇಶದಿಂದ ತಂದಿದ್ದ ಅಕ್ಕಿ ಮಾರಾಟ ಮಾಡುವ ಮೂಲಕ ಆಂಧ್ರ ಪ್ರದೇಶ ಸರ್ಕಾರ ಹೇರಿದ್ದ ಅಕ್ಕಿ ಸಾಗಾಣಿಕೆ ನಿರ್ಬಂಧವನ್ನು ಉಲ್ಲಂಘನೆ ಮಾಡಿ ಅಲ್ಲಿನ ಸರ್ಕಾರದ ಧೋರಣೆ ಖಂಡಿಸಿತು.

ಶನಿವಾರ ಆಂಧ್ರಪ್ರದೇಶದ ಎಮ್ಮಿಗನೂರಿನಿಂದ ಆರಂಭಗೊಂಡಿದ್ದ ರೈತಪಾದಯಾತ್ರೆ ಭಾನುವಾರ ಮಧ್ಯಾಹ್ನ ರಾಯಚೂರು ತಾಲ್ಲೂಕಿನಲ್ಲಿ ತುಂಗಭದ್ರಾ ನದಿ ದಾಟುವ ಮೂಲಕ ಕರ್ನಾಟಕಕ್ಕೆ ಆಗಮಿಸಿತು.

 

ಡಾ.ಜಯಪ್ರಕಾಶ ನಾರಾಯಣ ಅವರ ನೇತೃತ್ವದಲ್ಲಿ ಆಂಧ್ರಪ್ರದೇಶದ ವಿವಿಧ ಭಾಗಗಳ ರೈತರು, ಸ್ವತಂತ್ರ ರೈತ ಸಂಘಗಳ ಒಕ್ಕೂಟದ ಪದಾಧಿಕಾರಿಗಳು ಆಗಮಿಸಿದ್ದರು.ರೈತರ ಏಳ್ಗೆಗೆ ಪಾದಯಾತ್ರೆ: ಆಂಧ್ರಪ್ರದೇಶದಿಂದ ತಾವು ತಂದ ಅಕ್ಕಿಯನ್ನು ಗಿಲ್ಲೇಸುಗೂರು ಗ್ರಾಮದಲ್ಲಿ ಮಾರಾಟ ಮಾಡುವ ಮೂಲಕ ಆಂಧ್ರಪ್ರದೇಶ ಸರ್ಕಾರ ವಿಧಿಸಿದ್ದ ರೈತ ವಿರೋಧಿ ನೀತಿಯಾದ ಅಕ್ಕಿ ಸಾಗಾಣಿಕೆ ನಿರ್ಬಂಧವನ್ನು ಉಲ್ಲಂಘಿಸಲಾಗಿದೆ. ಅಸಂಘಟಿತ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿಸುವ ಹುನ್ನಾರ ವಿರೋಧಿಸಿ ನಡೆಸಿದ ಈ ಪಾದಯಾತ್ರೆ ಆಂಧ್ರಪ್ರದೇಶ ಸರ್ಕಾರಕ್ಕೆ ಎಚ್ಚರಿಕೆ.

 

ಕೂಡಲೇ ತನ್ನ ನಿರ್ಧಾರ ವಾಪಸ್ ಪಡೆಯಬೇಕು ಎಂದು ಗಿಲ್ಲೇಸುಗೂರ ಜನತೆಯನ್ನುದ್ದೇಶಿಸಿ ಮಾತನಾಡಿದ ಲೋಕಸತ್ತಾ ಪಕ್ಷದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ಅವರು ಆಂಧ್ರಪ್ರದೇಶ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ದೇಶದ ಯಾವುದೇ ಭಾಗದಲ್ಲಿರಲಿ ರೈತರ ಸಮಸ್ಯೆ ಒಂದೇ. ನೆರೆಯ ಆಂಧ್ರಪ್ರದೇಶದ ರೈತರ ಸಮಸ್ಯೆಗೆ ಸ್ಪಂದಿಸಿ ಪಾದಯಾತ್ರೆಗೆ ಬೆಂಬಲಿಸಿರುವುದು ಕರ್ನಾಟಕದ ರೈತ ಸಮುದಾಯ ರೈತರ ಬಗ್ಗೆ ಹೊಂದಿರುವ ಕಳಕಳಿ ತೋರಿಸುತ್ತದೆ. ಆಂಧ್ರಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರಕ್ಕೆ ಅಲ್ಲಿನ ರೈತರ ಸಮಸ್ಯೆ ಅರ್ಥವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕರ್ನಾಟಕದ ಲೋಕಸತ್ತಾ ಪಕ್ಷದ ರಾಜ್ಯಾಧ್ಯಕ್ಷೆ ರಾಮಲಕ್ಷ್ಮೀ.ಕೆ, ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ದೀಪಕ್, ಕಾರ್ಯಕರ್ತ ಯೋಗಯ್ಯ, ಡಾ.ಮೀನಾಕ್ಷಿ, ದಾವಣಗೆರೆ ಜಿಲ್ಲೆಯ ಪ್ರತಿನಿಧಿ ಶಾಂತಲಾ ದಾಂಬಳೆ ಉಪಸ್ಥಿತರಿದ್ದರು. ರಾಯಚೂರು ಜಿಲ್ಲೆಯ ಮಧು ನಿಪ್ಪುಪಾಡಿ ಅವರು ಪಾದಯಾತ್ರೆ ಸ್ವಾಗತಿಸಿದರು. ಕಾರ್ಮಿಕ ಹಿರಿಯ ಮುಖಂಡ ಹಾಗೂ ಜನಸಂಗ್ರಾಮ ಪರಿಷತ್‌ನ ಪ್ರಧಾನ ಸಂಚಾಲಕರಾದ ರಾಘವೇಂದ್ರ ಕುಷ್ಟಗಿ ಬೆಂಬಲ ವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಮಚಂದ್ರರೆಡ್ಡಿ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry