ಸರ್ಕಾರಕ್ಕೆ ಸೇನೆಯ ನಿಲುವು ಸಲ್ಲಿಕೆ

7

ಸರ್ಕಾರಕ್ಕೆ ಸೇನೆಯ ನಿಲುವು ಸಲ್ಲಿಕೆ

Published:
Updated:

ನವದೆಹಲಿ (ಪಿಟಿಐ): ಜಮ್ಮು ಮತ್ತು ಕಾಶ್ಮೀರದ ಕೆಲವು ಪ್ರದೇಶಗಳಿಂದ ಸೇನಾಪಡೆಗಳ ವಿಶೇಷ ರಕ್ಷಣಾ ಕಾಯ್ದೆ (ಆಫ್‌ಸ್ಪಾ)ಯನ್ನು ಹಿಂತೆಗೆದುಕೊಳ್ಳಬೇಕು ಎಂಬ ಬೇಡಿಕೆಗಳ ನಡುವೆ ಗುರುವಾರ ಇಲ್ಲಿ ಪ್ರತಿಕ್ರಿಯಿಸಿದ ಭೂಸೇನಾ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್, ಈ ವಿಷಯದಲ್ಲಿ ಸೇನೆಯ ಅಭಿಪ್ರಾಯವನ್ನು ಸರ್ಕಾರಕ್ಕೆ ತಿಳಿಸಲಾಗಿದೆ. ಆದರೆ ಈ ಕಾಯ್ದೆ ಗೃಹ ಸಚಿವಾಲಯದ ಪರಿಶೀಲನೆಯಲ್ಲಿದೆ ಎಂಬ ವದಂತಿಗಳಿಗೆ ಉತ್ತರಿಸಲು ನಿರಾಕರಿಸಿದರು.ಈಗಾಗಲೇ ಈ ಕಾಯ್ದೆ ಗೃಹ ಸಚಿವಾಲಯದ ಪರಿಮಿತಿಯಲ್ಲಿದ್ದು, ಇದರಿಂದಾಗಿ ಸೇನೆಯ ನಿಲುವನ್ನು ಅದಕ್ಕೆ ತಿಳಿಸಲಾಗಿದೆ. ಈ ಕುರಿತು ಇನ್ನೇನು ಹೇಳಲು ಬಯಸುವುದಿಲ್ಲ ಎಂದು ಅವರು ಭೂಸೇನಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಸುದ್ದಿಗಾರರಿಗೆ ತಿಳಿಸಿದರು.ಶ್ರೀನಗರದಲ್ಲಿ ಮಂಗಳವಾರ ನಡೆದ ಗ್ರೆನೆಡ್ ಸ್ಫೋಟದಲ್ಲಿ ಸೇನೆಯ ಕೈವಾಡವಿದೆ ಎಂಬ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಎಆ.ಮುಸ್ತಾಫಾ ಕಮಾಲ್ ಹೇಳಿಕೆಗೆ ಪ್ರತಿಕ್ರಿಯಿಸುವ ಅಗತವಿಲ್ಲ ಎಂದು ಅಲ್ಲಗಳೆದರು.

ಶ್ರೀನಗರ, ಬಾದ್ಗಾಮ್, ಸಾಂಬಾ, ಜಮ್ಮು ಮುಂತಾದ ಪ್ರದೇಶಗಳಿಂದ ಈ ಕಾಯ್ದೆ ಹಿಂತೆಗೆದುಕೊಳ್ಳುವುದರಿಂದ ಸೇನೆಯನ್ನು ನಿರ್ಲಕ್ಷಿಸಿದಂತೆ ಆಗುವುದಿಲ್ಲ ಎಂಬ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿಕೆಗೆ ಉತ್ತರಿಸಿ, ರಾಜ್ಯದಲ್ಲಿ ಸೇನೆ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.ರಾಜಕೀಯ ಲಾಭಕ್ಕೆ ಒಮರ್ ಪ್ರಯತ್ನ- ಸೈಫುದ್ದೀನ್

ಶ್ರೀನಗರ (ಪಿಟಿಐ):
ಜಮ್ಮು ಮತ್ತು ಕಾಶ್ಮೀರದ ಕೆಲವು ಪ್ರದೇಶಗಳಿಂದ ಸೇನಾಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು ಹಿಂತೆಗೆದುಕೊಳ್ಳಲು ರಾಜ್ಯದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಒತ್ತಾಯಿಸುವ ಮುನ್ನ ಸೇನೆ ಸೇರಿದಂತೆ ಸಂಬಂಧಿಸಿದ ಎಲ್ಲ ಪಕ್ಷಗಳೊಂದಿಗೆ ಸಮಾಲೋಚಿಸಬೇಕಿತ್ತು ಎಂದು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಮತ್ತು ಮಾಜಿ ಕೇಂದ್ರ ಸಚಿವ ಸೈಫುದ್ದೀನ್ ಸೋಜ್ ಪ್ರಶ್ನಿಸಿದ್ದಾರೆ.`ಒಮರ್ ಯಾರನ್ನೂ ಗಣನೆಗೆ ತೆಗೆದುಕೊಳ್ಳದೆ ಕೇವಲ ತಾವೊಬ್ಬರೇ ಈ ಕಾಯ್ದೆಯ ವಾಪಸ್ಸಾತಿಗೆ ಆಗ್ರಹಿಸುವ ಮೂಲಕ ರಾಜಕೀಯ ಲಾಭ ಪಡೆಯಲು ಹೊರಟಿದ್ದಾರೆ. ತಮ್ಮ ಜವಾಬ್ದಾರಿ ಏನೆಂದು ತಿಳಿದಿದ್ದರೂ ಸಹ ಯಾರೊಂದಿಗೂ ಸಮಾಲೋಚಿಸಲು ಯತ್ನಿಸಿಲ್ಲ~ ಎಂದು ಅವರು ಟೀಕಿಸಿದ್ದಾರೆ.`ಸೇನೆ, ಗೃಹ ಮತ್ತು ರಕ್ಷಣಾ ಸಚಿವಾಲಯಗಳು ಹಾಗೂ ಮಿತ್ರ ಪಕ್ಷವಾದ ಕಾಂಗ್ರೆಸ್ ಅಭಿಪ್ರಾಯಗಳನ್ನು ಪಡೆದು ಮುಖ್ಯಮಂತ್ರಿ ಮಾತನಾಡಬೇಕಿತ್ತು~ ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಈ ಮಧ್ಯೆ, ಒಮರ್ ಸರ್ಕಾರದಲ್ಲಿ ಸಚಿವರಾಗಿರುವ ಕಾಂಗ್ರೆಸ್ ನಾಯಕ ತಾಜ್ ಮೊಹಿಯುದ್ದೀನ್ ಅವರು, `ಸೇನೆ, ಗುಪ್ತಚರ ಸಂಸ್ಥೆಗಳು ಹಾಗೂ ರಾಜ್ಯದ ಪೊಲೀಸರು ಜಂಟಿಯಾಗಿ ಚರ್ಚಿಸಿ ನಿರ್ಧಾರ ಕೈಗೊಂಡ ಬಳಿಕವೇ ಈ ಕಾಯ್ದೆಯ ವಾಪಸ್ಸಾತಿಗೆ ಮುಂದಾಗಬೇಕು~ ಎಂದು ಸೂಚಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry