ಸೋಮವಾರ, ಮೇ 23, 2022
21 °C

ಸರ್ಕಾರಕ್ಕೆ ಹೈಕೋರ್ಟ್ ಆದೇಶ ವರ್ಷಾಂತ್ಯದಲ್ಲಿ ಶಾಲೆಗಳಿಗೆ ಸೌಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿನ ಹಲವಾರು ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಇಲ್ಲದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್, ಬರುವ ಡಿ.31ರ ಒಳಗೆ ಈ ಸೌಲಭ್ಯ ಒದಗಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.ಈ ಕುರಿತು ಸಂಬಂಧಪಟ್ಟವರ ಜೊತೆ ಚರ್ಚಿಸಿ ಮುಂದಿನ ಸೋಮವಾರ ಕೋರ್ಟ್‌ಗೆ ಮಾಹಿತಿ ನೀಡುವಂತೆ ಸರ್ಕಾರದ ಪರ ವಕೀಲರಿಗೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಹಾಗೂ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ಆದೇಶಿಸಿದೆ.ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಸರ್ಕಾರಕ್ಕೆ ಆದೇಶಿಸಲು ಕೋರಿ ವಕೀಲ ಎ.ವಿ.ಅಮರನಾಥನ್ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸುತ್ತಿದ್ದಾರೆ.ಸಂವಿಧಾನದ ಪ್ರಕಾರ 6ರಿಂದ 14 ವರ್ಷದ ವಯೋಮಾನದವರಿಗೆ ಉಚಿತ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯ.ಈ ಯೋಜನೆಯನ್ನು ಸರ್ಕಾರ ಜಾರಿ ಮಾಡಿದೆ. ಆದರೆ ಶಾಲೆಗಳ ಸ್ಥಿತಿ ಮಾತ್ರ ಶೋಚನೀಯವಾಗಿದೆ ಎನ್ನುವುದು ಅರ್ಜಿದಾರರ ದೂರು.ಇದನ್ನು ಪೀಠ ಗಂಭೀರವಾಗಿ ಪರಿಗಣಿಸಿತು. ‘ಎರಡು ತಿಂಗಳ ಒಳಗೆ ಕೊನೆಯ ಪಕ್ಷ ಕುಡಿಯುವ ನೀರಿನ ಸೌಕರ್ಯವನ್ನಾದರೂ ಒದಗಿಸುವಂತೆ ಕ್ರಮ ತೆಗೆದುಕೊಂಡರೆ ಒಳಿತು. ಈ ಬಗ್ಗೆ ಸೋಮವಾರ ಮಾಹಿತಿ ನೀಡಿ’ ಎಂದು ಹೇಳಿ ವಿಚಾರಣೆಯನ್ನು ಮುಂದೂಡಿದರು.11,013 ಕಿರಿಯ ಪ್ರಾಥಮಿಕ ಹಾಗೂ 5,119 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಬಾಲಕಿಯರಿಗೆ ಶೌಚಾಲಯ ಇಲ್ಲ, 4,048 ಹಾಗೂ 1,371 ಶಾಲೆಗಳಲ್ಲಿ (ಕ್ರಮವಾಗಿ) ಕುಡಿಯುವ ನೀರಿನ ಸೌಕರ್ಯವಿಲ್ಲ ಎಂಬ ಮಾಹಿತಿಯನ್ನು ವಕೀಲರು ಕೋರ್ಟ್‌ಗೆ ನೀಡಿದ್ದಾರೆ.


 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.