ಭಾನುವಾರ, ಜನವರಿ 26, 2020
18 °C

ಸರ್ಕಾರಕ್ಕೆ ‘ಅಸ್ಪೃಶ್ಯ’ರಾದ ಅಂಗವಿಕಲ ಕ್ರೀಡಾಪಟುಗಳು!

ಪ್ರಜಾವಾಣಿ ವಾರ್ತೆ/ವಿನಾಯಕ ಭಟ್‌ Updated:

ಅಕ್ಷರ ಗಾತ್ರ : | |

ಬೆಳಗಾವಿ: ಅಂತರರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿ ಹಲವು ಚಿನ್ನದ ಪದಕಗಳನ್ನು ಗೆದ್ದುಕೊಂಡು ಕರ್ನಾಟಕಕ್ಕೆ ಕೀರ್ತಿ ತಂದು ಕೊಡುತ್ತಿರುವ ಅಂಗವಿಕಲ ಕ್ರೀಡಾಪಟುಗಳನ್ನು ಸರ್ಕಾರ ‘ಅಸ್ಪೃಶ್ಯ’ರಂತೆ ಕಾಣುತ್ತಿದೆ. ಇನ್ನಷ್ಟು ಸಾಧಿಸಲು ಅಗತ್ಯ ನೆರವು ನೀಡಿ, ತಮ್ಮ ‘ಕೈ ಹಿಡಿದು ಮುನ್ನಡೆಸುತ್ತಿಲ್ಲ’ ಎಂಬ ಕೊರಗು ಅಂಗವೈಕಲ್ಯ ಮೆಟ್ಟಿನಿಂತ ಕ್ರೀಡಾಪಟುಗಳನ್ನು ಕಾಡುತ್ತಿದೆ.ಅಂಗವಿಕಲ ಮಕ್ಕಳಲ್ಲಿ ಇರುವ ಅಭೂತಪೂರ್ವ ಪ್ರತಿಭೆಯನ್ನು ಹೊರ ಹಾಕಲು ತರಬೇತಿ ನೀಡಲು ಅಗತ್ಯವಾಗಿದೆ. ಆದರೆ, ನಮ್ಮಲ್ಲಿ ಮೂಲಸೌಲಭ್ಯದ ಕೊರತೆ ಇದೆ. ಇವರಿಗಾಗಿ ಪ್ರತ್ಯೇಕ ತರಬೇತಿ ಉಪಕರಣಗಳು ಇರುವುದಿಲ್ಲ. ಸಾಮಾನ್ಯ ಜನರೊಂದಿಗೆ ತರಬೇತಿ ಪಡೆದುಕೊಳ್ಳಬೇಕಾಗುತ್ತಿದೆ. ಗಾಲಿ ಚಕ್ರ, ರ್‍ಯಾಂಪ್‌ ಸೌಲಭ್ಯವೂ ಇರುವುದಿಲ್ಲ. ಕುಳಿತುಕೊಳ್ಳಲು ವಿಶೇಷ ಆಸನದ ವ್ಯವಸ್ಥೆಯೂ ಇಲ್ಲ. ಹಲವೆಡೆ ಕಮೋಡ್‌ ಇಲ್ಲದೇ ಇರುವುದರಿಂದ ಶೌಚಕ್ಕೆ ಕುಳಿತುಕೊಳ್ಳಲು ತೊಂದರೆ ಅನುಭವಿಸಬೇಕಾಗುತ್ತಿದೆ.ಬೆಳಗಾವಿಯ ಅಂಗವಿಕಲ ಈಜುಪಟುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ 41 ಪದಕ ಹಾಗೂ ರಾಷ್ಟ್ರ ಮಟ್ಟದಲ್ಲಿ 150ಕ್ಕೂ ಹೆಚ್ಚು ಪದಕಗಳನ್ನು ಗೆದ್ದುಕೊಂಡಿದ್ದಾರೆ. ರಾಜೇಶ ಶಿಂಧೆ, ರಾಘವೇಂದ್ರ ಅಣ್ವೇಕರ, ಮೊಯಿನ್‌ ಜುನ್ನೇದಿ ಅವರು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕಗಳನ್ನು ಗೆದ್ದುಕೊಂಡು ರಾಜ್ಯದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಆದರೆ, ರಾಜ್ಯ ಸರ್ಕಾರ ಮಾತ್ರ ಇವರತ್ತ ತಿರುಗಿಯೂ ನೋಡುತ್ತಿಲ್ಲ!‘ಕಳೆದ ತಿಂಗಳು ಬೆಳಗಾವಿಗೆ ಆಗಮಿಸಿದ್ದ ವಸತಿ ಸಚಿವ ಅಂಬರೀಷ್‌ ಅವರು, ಮೊಯಿನ್‌ ಜುನ್ನೇದಿಗೆ ಸರ್ಕಾರದಿಂದ ಉಚಿತವಾಗಿ ಒಂದು ಫ್ಲ್ಯಾಟ್‌ ಕೊಡಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಈ ಬಗ್ಗೆ ಅಧಿಕಾರಿಗಳಿಂದ ಯಾವುದೇ ರೀತಿಯ ಸಕಾರಾತ್ಮಕ ಪ್ರತಿಕ್ರಿಯೆ ಲಭಿಸುತ್ತಿಲ್ಲ. ಅಲೆದು– ಅಲೆದು ನಾವೇ ಸುಮ್ಮನಾಗಬೇಕು’ ಎಂದು ಮೊಯಿನ್‌ ತಂದೆ ಮುಸ್ತಾಕ್‌ಅಹ್ಮದ್‌ ವಿಷಾದಿಸುತ್ತಾರೆ.ಧನಸಹಾಯ ನೀಡಲಿ

‘ಹರಿಯಾಣ ಸರ್ಕಾರವು ರಾಷ್ಟ್ರ ಮಟ್ಟದಲ್ಲಿ ಚಿನ್ನ ಗಳಿಸಿದ ಕ್ರೀಡಾಪಟುಗಳಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸುತ್ತಿದೆ. ಆದರೆ, ಕರ್ನಾಟಕ ಸರ್ಕಾರ ಮಾತ್ರ ಅಂಗವಿಕಲ ಕ್ರೀಡಾಪಟುಗಳಿಗೆ ಧನಸಹಾಯ ಮಾಡುತ್ತಿಲ್ಲ. ಬೆಂಗಳೂರಿನಲ್ಲಿ ಹದಿನೈದು ದಿನಗಳ ಹಿಂದೆ ನಡೆದ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಬೆಳಗಾವಿಯ ಅಂಗವಿಕಲ ಈಜುಪಟುಗಳು 14 ಪದಕಗಳನ್ನು ಗೆದ್ದುಕೊಂಡು ಬಂದರು. ಆದರೆ, ಅವರ ಸಾಧನೆಯನ್ನು ಸರ್ಕಾರ ಗುರುತಿಸಿಲ್ಲ. ಇಂದು ತರಬೇತಿಗೆ ಬಹಳ ಹಣ ಬೇಕಾಗುತ್ತಿದೆ. ಕ್ರೀಡಾಪಟುಗಳು ಈಜುಗೊಳಕ್ಕೆ ಆಟೊದಲ್ಲಿ ಬಂದು ವಾಪಸ್ಸಾಗಲು ಒಂದು ದಿನಕ್ಕೆ ₨ 200 ವೆಚ್ಚವಾಗುತ್ತಿದೆ. ಹೀಗಾಗಿ ಸಾಧಕ ಕ್ರೀಡಾಪಟುಗಳ ತರಬೇತಿ ವೆಚ್ಚವನ್ನು ಸರ್ಕಾರ ಭರಿಸಲು ಮುಂದಾಗಬೇಕು’ ಎನ್ನುತ್ತಾರೆ ಬೆಳಗಾವಿ ಸ್ವಿಮ್ಮರ್ಸ್‌ ಕ್ಲಬ್‌ ಹಾಗೂ ಅಕ್ವೇರಿಯಸ್‌ ಸ್ವಿಮ್‌ ಕ್ಲಬ್‌ನ ತರಬೇತುದಾರ ಉಮೇಶ ಕಲಘಟಗಿ.‘ಇವರಿಗೆ ಪ್ರತ್ಯೇಕ ಈಜುಗೊಳ ನಿರ್ಮಿಸಿಕೊಡಲು ಸಾಧ್ಯವಾಗದೇ ಇದ್ದರೆ, ಅಲ್ಲಿ ಕನಿಷ್ಠ ಪಕ್ಷ ಗಾಲಿ ಕುರ್ಚಿ ಹಾಗೂ ಲಿಫ್ಟ್‌ ಸೌಲಭ್ಯ, ನೀರಿನೊಳಗೆ ಹೋಗಿ ಕ್ರೀಡಾಪಟುಗಳನ್ನು ಬಿಟ್ಟು ಬರುವ ‘ರಿವಾಲ್ವಿಂಗ್‌ ಲಿಫ್ಟ್‌ ಚೇರ್‌’ ಸೌಲಭ್ಯವನ್ನಾದರೂ ಕಲ್ಪಿಸಿಕೊಡಬೇಕು’ ಎಂದು ಅವರು ಒತ್ತಾಯಿಸುತ್ತಾರೆ.‘ಕಳೆದ ಹನ್ನೆರಡು ವರ್ಷಗಳಿಂದ ಪ್ರತಿ ಫೆಬ್ರುವರಿಯಲ್ಲಿ ‘ಪವಿತ್ರ ತಿಂಗಳು’ ಕಾರ್ಯಕ್ರಮದಡಿ 200 ಅಂಗವಿಕಲ ಮಕ್ಕಳಿಗೆ ಈಜು ತರಬೇತಿಯನ್ನು ಉಚಿತವಾಗಿ ನೀಡುತ್ತಿದ್ದೇವೆ. 21 ದಿನಗಳ ಕಾಲ ಈಜು ತರಬೇತಿ ಪಡೆದುಕೊಳ್ಳುವ ಅಂಧ, ಕಿವುಡ, ಮೂಕ ಹಾಗೂ  ಕೈ–ಕಾಲು ಇಲ್ಲದ ಮಕ್ಕಳು ಬಳಿಕ ಆತ್ಮವಿಶ್ವಾಸದಿಂದ ಸ್ವತಂತ್ರವಾಗಿ ಈಜುತ್ತಿದ್ದಾರೆ. ಇವರಿಗೆ ಉಚಿತವಾಗಿ ಕಿಟ್‌ಗಳನ್ನು ಕೊಡುತ್ತೇವೆ. ಸರ್ಕಾರ ಮಾತ್ರ ಇಂಥ ಯಾವುದೇ ಕೆಲಸವನ್ನು ಮಾಡುತ್ತಿಲ್ಲ; ನಮಗೂ ನೆರವು ನೀಡುತ್ತಿಲ್ಲ...’ ಎಂದು ಕಲಘಟಗಿ ವಿಷಾದಿಸುತ್ತಾರೆ.

‘2008ರಲ್ಲಿ ಇಂಗ್ಲೆಂಡ್‌ನಿಂದ ಫ್ರಾನ್ಸ್‌ವರೆಗೆ ‘ಇಂಗ್ಲಿಷ್‌ ಚಾನೆಲ್‌’ (ಸಮುದ್ರ) ಅನ್ನು 14 ಗಂಟೆ 46 ನಿಮಿಷದಲ್ಲಿ 38 ಕಿ.ಮೀ. ದೂರವನ್ನು ಕ್ರಮಿಸುವ ಮೂಲಕ ಫ್ರಾನ್ಸ್‌ನಲ್ಲಿ ನಮ್ಮ ರಾಷ್ಟ್ರ ಧ್ವಜ ಹಾರಿಸಿ ಭಾರತದ ಕೀರ್ತಿಯನ್ನು ಹೆಚ್ಚಿಸಿದ್ದೆ. ‘ಇಂಗ್ಲಿಷ್‌ ಚಾನೆಲ್‌’ ಈಜಿದ ಅಂಗವಿಕಲರ ಪೈಕಿ ದಕ್ಷಿಣ ಭಾರತದಲ್ಲಿಯೇ ನಾನು ಮೊದಲಿಗ. ರಾಷ್ಟ್ರ ಮಟ್ಟದ 41 ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದೇನೆ. ರಾಜ್ಯ ಸರ್ಕಾರ ಕಳೆದ ವರ್ಷ ‘ಏಕಲವ್ಯ’ ಪ್ರಶಸ್ತಿ ನೀಡಿದ್ದು ಬಿಟ್ಟರೆ ಮತ್ತೆ ಯಾವುದೇ ಸೌಲಭ್ಯವನ್ನೂ ನೀಡಿಲ್ಲ. ಸರ್ಕಾರಿ ಕೆಲಸಕ್ಕಾಗಿ ಹಲವು ಬಾರಿ ಮನವಿ ಸಲ್ಲಿಸಿದರೂ ನನ್ನ ಸಾಧನೆಗೆ ಮನ್ನಣೆ ನೀಡಿಲ್ಲ. ರೈಲ್ವೆ ಇಲಾಖೆಯಲ್ಲಿ ಅಂಗವಿಕಲ ಕ್ರೀಡಾಪಟುಗಳಿಗಾಗಿ ಪ್ರತ್ಯೇಕ ಮೀಸಲಾತಿಯೂ ಇಲ್ಲ’ ಎಂದು ರಾಜೇಶ ಶಿಂಧೆ ಮನದಾಳದ ನೋವನ್ನು ತೋಡಿಕೊಳ್ಳುತ್ತಾರೆ.‘ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಪಡೆದ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರ ₨ 5 ಲಕ್ಷ ನಗದು ಬಹುಮಾನ ನೀಡಿದೆ. ಆದರೆ, ಅಂಗವಿಕಲ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಗೆದ್ದವರಿಗೆ ಯಾವುದೇ ರೀತಿಯ ಬಹುಮಾನ ನೀಡುತ್ತಿಲ್ಲ. ಹರಿಯಾಣದಲ್ಲಿ ರಾಷ್ಟ್ರ ಮಟ್ಟದಲ್ಲಿ ಚಿನ್ನದ ಪದಕ ಪಡೆದವರಿಗೆ ₨ 1 ಲಕ್ಷದವರೆಗೂ ನಗದು ಬಹುಮಾನ ನೀಡಲಾಗುತ್ತದೆ. ಅಂಗವಿಕಲರ ಕ್ರೀಡಾಕೂಟಕ್ಕೆ ರಾಜ್ಯದ ತಂಡ ಹೋಗುತ್ತಿರುವುದು ಹಾಗೂ ಪದಕ ಗೆದ್ದುಕೊಂಡು ವಾಪಸ್ಸಾಗಿರುವುದು ಸುದ್ದಿ ಆಗುವುದೇ ಇಲ್ಲ. ಅಂಗವಿಕಲ ಕ್ರೀಡಾಪಟುಗಳನ್ನು ಅಸ್ಪೃಶ್ಯರಂತೆ ಕಾಣಲಾಗುತ್ತದೆ... ಹೀಗಾಗಿ ಕರ್ನಾಟಕದ ನನ್ನ ಕೆಲವು ಮಿತ್ರರು ಹರಿಯಾಣ ರಾಜ್ಯವನ್ನು ಕ್ರೀಡಾಕೂಟದಲ್ಲಿ ಪ್ರತಿನಿಧಿಸಲು ಅಲ್ಲಿಗೆ ತೆರಳುತ್ತಿದ್ದಾರೆ. ರಾಜ್ಯ ಸರ್ಕಾರ ಇದೇ ರೀತಿ ಉತ್ಪ್ರೇಕ್ಷೆ ಮಾಡಿದರೆ, ರಾಜ್ಯದಿಂದ ಉತ್ತಮ ಕ್ರೀಡಾಪಟುಗಳು ವಲಸೆ ಹೋಗುವ ಸಂಖ್ಯೆ ಹೆಚ್ಚಬಹುದು...’ ಎಂದು ವಿಷಾದಿಸಿದರು.‘ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕೇವಲ ಸೋಮವಾರ ಹಾಗೂ ಶುಕ್ರವಾರ ಮಾತ್ರ ಅಂಗವಿಕಲ ಪ್ರಮಾಣಪತ್ರ ನೀಡಲಾಗುತ್ತದೆ. ಐದಾರು ಗಂಟೆಗಳ ಕಾಲ ಕಾದು ನಿಂತರೆ ಮಾತ್ರ ಪ್ರಮಾಣಪತ್ರ ಸಿಗುತ್ತಿದೆ. ಇಲ್ಲಿ ಪ್ರತಿ ದಿನವೂ ಪ್ರಮಾಣ ಪತ್ರ ನೀಡಲು ಪ್ರತ್ಯೇಕ ವೈದ್ಯರನ್ನು ನಿಯೋಜಿಸಬೇಕು. ವೈದ್ಯರು ಅಂಗವಿಕಲರಿಗೆ ಈಜುವಂತೆ ಸಲಹೆ ನೀಡುತ್ತಾರೆ. ಆದರೆ, ಇಲ್ಲಿನ ಸಾಮಾನ್ಯ ಈಜುಗೊಳದಲ್ಲಿ ಇತರರೊಂದಿಗೆ ಈಜುವುದು ಕಷ್ಟವಾಗುತ್ತದೆ. ಹೀಗಾಗಿ ಬೆಳಗಾವಿಯಲ್ಲಿ ಅಂಗವಿಕಲರಿಗಾಗಿ ‘ಹೈಪೊಥೆರಪಿ ಈಜುಗೊಳ’ವನ್ನು ನಿರ್ಮಿಸಬೇಕು’ ಎಂದು ಶಿಂಧೆ ಅಭಿಪ್ರಾಯಪಡುತ್ತಾರೆ.‘ನಮ್ಮ ಸಮಸ್ಯೆಗಳನ್ನು ನಿವಾರಿಸುವಂತೆ ಅಧಿಕಾರಿಗಳ ಬಳಿಗೆ ಹೋಗೋಣವೆಂದರೆ ಸರ್ಕಾರಿ ಕಚೇರಿಗಳಲ್ಲಿ ರ್‍ಯಾಂಪ್‌ ಸೌಲಭ್ಯವೇ ಇರುವುದಿಲ್ಲ. ಕಚೇರಿಗಳಿಗೆ ಅಲೆದು ಅಲೆದು ಸುಸ್ತಾಗಿದ್ದೇವೆ. ಅಂಗವಿಕಲರ ಕ್ರೀಡಾಕೂಟಗಳ ಉಸ್ತುವಾರಿ ನೋಡಿಕೊಳ್ಳುವ ಸಲುವಾಗಿಯೇ ಕ್ರೀಡಾ ಇಲಾಖೆಯಲ್ಲಿ ಪ್ರತ್ಯೇಕ ಶಾಖೆಯನ್ನು ತೆರೆಯಬೇಕು. ಇದರ ಅಧಿಕಾರಿಗಳೇ ಕ್ರೀಡಾಪಟುಗಳನ್ನು ಸಂಪರ್ಕಿಸಿ ಅವರ ಸಮಸ್ಯೆ ಪರಿಹರಿಸಲು ಮುಂದಾಗಬೇಕು. ಅಂಗವಿಕಲರಿಗಾಗಿ ಮೀಸಲಿರುವ ಶೇ. 3 ಅನುದಾನ ಕ್ರೀಡಾಪಟುಗಳ ಏಳ್ಗೆಗಾಗಿ ಬಳಸಿಕೊಳ್ಳಬೇಕು’ ಎಂದು ಕ್ರೀಡಾಪಟುಗಳು ಒತ್ತಾಯಿಸುತ್ತಾರೆ.

ಪ್ರತಿಕ್ರಿಯಿಸಿ (+)