ಸರ್ಕಾರದಲ್ಲಿ ಅಗ್ರಜರಾಗಿದ್ದ ಆಚಾರ್ಯ

7

ಸರ್ಕಾರದಲ್ಲಿ ಅಗ್ರಜರಾಗಿದ್ದ ಆಚಾರ್ಯ

Published:
Updated:
ಸರ್ಕಾರದಲ್ಲಿ ಅಗ್ರಜರಾಗಿದ್ದ ಆಚಾರ್ಯ

ಬೆಂಗಳೂರು: ಸರಳ, ಸಜ್ಜನಿಕೆಗೆ ಹೆಸರಾಗಿದ್ದ ಡಾ.ವಿ.ಎಸ್. ಆಚಾರ್ಯ ಅವರು ಬಿಜೆಪಿ ಒಳಗೆ ಮತ್ತು ಹೊರಗೆ ಒಳ್ಳೆಯ ಹೆಸರನ್ನು ಕಾಪಾಡಿಕೊಂಡಿದ್ದರು. 44 ವರ್ಷಗಳ ರಾಜಕೀಯ ಜೀವನದಲ್ಲಿ ಪಕ್ಷ ಮತ್ತು ಸರ್ಕಾರದಲ್ಲಿ ಹಲವಾರು ಹುದ್ದೆಗಳನ್ನು ನಿಭಾಯಿಸಿದ್ದರು.ಜನಸಂಘದ ಮೂಲಕ ರಾಜಕೀಯ ಪ್ರವೇಶಿಸಿದ್ದ ಅವರು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ 19 ತಿಂಗಳ ಕಾಲ ಜೈಲು ವಾಸ ಅನುಭವಿಸಿದ್ದರು. 1983ರಲ್ಲಿ ಪ್ರಥಮ ಬಾರಿಗೆ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಜಯ ಗಳಿಸುವ ಮೂಲಕ ವಿಧಾನಸಭೆ ಪ್ರವೇಶಿಸಿದರು. ಬಿಜೆಪಿಯಿಂದ ಸ್ಪರ್ಧಿಸಿ ಶಾಸಕರಾದ ಪ್ರಥಮ ವ್ಯಕ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಕೆಲ ವರ್ಷ ವೈದ್ಯರಾಗಿಯೂ ಸೇವೆ ಸಲ್ಲಿಸಿದ್ದ ಅವರು ಕ್ರಮೇಣ ರಾಜಕೀಯವಾಗಿಯೇ ಗುರುತಿಸಿಕೊಂಡು ಹಂತ ಹಂತವಾಗಿ ಉನ್ನತ ಸ್ಥಾನಗಳನ್ನು ಅಲಂಕರಿಸಿದರು.ಸುಮಾರು ಆರು ವರ್ಷಗಳ ಅಧಿಕಾರ ಅವಧಿಯಲ್ಲಿ ಏಳು ಖಾತೆಗಳನ್ನು ನಿಭಾಯಿಸಿದ್ದ ಆಚಾರ್ಯ ಅವರು ಮೇಲ್ಮನೆಯಲ್ಲಿ ಸಭಾ ನಾಯಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ವೃತ್ತಿಯಿಂದ ವೈದ್ಯರಾದರೂ ತೆರಿಗೆ ಮತ್ತು ಆರ್ಥಿಕ ವಿಚಾರಗಳ ಬಗ್ಗೆಯೂ ಆಳವಾಗಿ ತಿಳಿದುಕೊಂಡಿದ್ದರು.ಕೇಂದ್ರ ಸರ್ಕಾರ ಆಯೋಜಿಸುವ ಹಣಕಾಸು ಸಚಿವರ ಸಭೆಗಳಲ್ಲಿ ಮುಖ್ಯಮಂತ್ರಿಗಳ ಪರವಾಗಿ ಆಚಾರ್ಯ ಭಾಗವಹಿಸುತ್ತಿದ್ದರು. ವಿರೋಧ ಪಕ್ಷದಲ್ಲಿ ಇದ್ದಾಗ ಸದನದಲ್ಲಿ ಹೆಚ್ಚಾಗಿ ತೆರಿಗೆ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದರು.ಆಡಳಿತಾರೂಢ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ, ಬಣ ರಾಜಕೀಯ ಶುರುವಾದಾಗ ಯಾವುದೇ ಬಣದೊಂದಿಗೆ ಗುರುತಿಸಿಕೊಳ್ಳದೆ ಪಕ್ಷಕ್ಕೆ ನಿಷ್ಠರಾಗಿದ್ದರು. ಕಳೆದ ಆಗಸ್ಟ್ 4ರಂದು ಡಿ.ವಿ.ಸದಾನಂದಗೌಡ ಮುಖ್ಯಮಂತ್ರಿಯಾಗಿ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿ ವಿಧಾನಸೌಧಕ್ಕೆ ಬಂದಾಗ, ಆಚಾರ್ಯ ಅವರು ಸದಾನಂದಗೌಡರಿಗೆ ಪುಷ್ಪಗುಚ್ಛ ನೀಡಿ ವಿಧಾನಸೌಧಕ್ಕೆ ಬರ ಮಾಡಿಕೊಂಡಿದ್ದರು. ಯಡಿಯೂರಪ್ಪ ತಮ್ಮ ಉತ್ತರಾಧಿಕಾರಿ ಸ್ಥಾನಕ್ಕೆ ಆಚಾರ್ಯ ಹೆಸರನ್ನು ಸೂಚಿಸಿದ್ದರು. ಆದರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಆಚಾರ್ಯ ಅವರೇ ಮುಖ್ಯಮಂತ್ರಿಯಾಗಲು ನಿರಾಕರಿಸಿದ್ದರು ಎನ್ನಲಾಗಿದೆ.ಕೈಕೊಟ್ಟ ಆರೋಗ್ಯ: 2010ರ ಅಕ್ಟೋಬರ್‌ನಲ್ಲಿ ಮನೆಯಲ್ಲಿ ಜಾರಿ ಬಿದ್ದು ಕೈಗೆ ಪೆಟ್ಟು ಮಾಡಿಕೊಂಡಾಗ ಎರಡು ತಿಂಗಳಲ್ಲಿ ಅವರ ಆರೋಗ್ಯ ಸುಧಾರಿಸಿತ್ತು. ಆದರೆ ಆಗಸ್ಟ್‌ನಿಂದ ಈಚೆಗೆ ಅವರ ಆರೋಗ್ಯ ಅಷ್ಟೊಂದು ಚೆನ್ನಾಗಿರಲಿಲ್ಲ. ಹೆಚ್ಚು ಕಾಲ ಉಡುಪಿಯಲ್ಲಿ ಇದ್ದೇ ಚಿಕಿತ್ಸೆ ಪಡೆಯುತ್ತಿದ್ದರು. ಸಚಿವ ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಗೆ ಬರುವಾಗ ಒಂದೆರಡು ಬಾರಿ ಅಶಕ್ತರಾಗಿ ಕುಳಿತುಕೊಂಡಿದ್ದರು.

 

ಯಡಿಯೂರಪ್ಪ, ಸದಾನಂದಗೌಡ ಸರ್ಕಾರದಲ್ಲಿ ಆಚಾರ್ಯಗೆ ಹೆಚ್ಚಿನ ಪ್ರಾಮುಖ್ಯ ಸಿಕ್ಕಿತ್ತು. ಪ್ರತಿ ಬಾರಿ ಸಂಪುಟ ಸಭೆ ನಡೆದಾಗಲೂ ಆಚಾರ್ಯರೇ ಸಂಪುಟದ ತೀರ್ಮಾನಗಳನ್ನು ಮಾಧ್ಯಮಗಳಿಗೆ ತಿಳಿಸುತ್ತಿದ್ದರು. ಇವರ ಪರಿಷತ್ ಅವಧಿ 2014ರ ಜೂ.30ಕ್ಕೆ ಪೂರ್ಣಗೊಳ್ಳಲಿತ್ತು.ಶೋಕಾಚರಣೆ: ಮೃತರ ಗೌರವಾರ್ಥ ರಾಜ್ಯದಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಬುಧವಾರದವರೆಗೂ ಸಾರ್ವಜನಿಕ ಕಾರ್ಯಕ್ರಮಗಳು ಇರುವುದಿಲ್ಲ. ಬೆಂಗಳೂರು ನಗರ ಮತ್ತು ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಮಧ್ಯಾಹ್ನ ಸರ್ಕಾರಿ ರಜೆ ಘೋಷಿಸಲಾಗಿತ್ತು. ಸಿಎಂ ಸದಾನಂದಗೌಡ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಚಿವ ಸಂಪುಟ ಸಭೆಯಲ್ಲಿ ಮೃತರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನ ಆಚರಿಸಲಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry