ಸರ್ಕಾರದಲ್ಲಿ ಉಕ್ಕಿದ ಭ್ರಷ್ಟಾಚಾರದ ಗಂಗೋತ್ರಿ: ಉಗ್ರಪ್ಪ

7

ಸರ್ಕಾರದಲ್ಲಿ ಉಕ್ಕಿದ ಭ್ರಷ್ಟಾಚಾರದ ಗಂಗೋತ್ರಿ: ಉಗ್ರಪ್ಪ

Published:
Updated:

ಅಥಣಿ: `ಆಂತರಿಕ ಬಿಕ್ಕಟ್ಟು,  ಸದಸ್ಯರ ಎಡವಟ್ಟು ಮತ್ತು ಆರ್ಥಿಕ ಮುಗ್ಗಟ್ಟಿನಿಂದ ಜರ್ಜರಿತವಾಗಿರುವ ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರದ ಗಂಗೋತ್ರಿ ಉಕ್ಕಿ ಹರಿಯುತ್ತಿದೆ~ ಎಂದು ವಿಧಾನ ಪರಿಷತ್ ಮಾಜಿ ವಿರೋಧ ಪಕ್ಷದ ನಾಯಕ ವಿ.ಎಸ್. ಉಗ್ರಪ್ಪ ಅಭಿಪ್ರಾಯಪಟ್ಟರು.ತಾಲ್ಲೂಕಿನ ಶಿರೂರ ಗ್ರಾಮದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ರಾಜ್ಯದಲ್ಲಿ ಎಸ್.ಎಮ್. ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ, ಜಾರಿಗೆ ತಂದ ಅನೇಕ ಜನಪರ ಕಾರ್ಯಕ್ರಮಗಳನ್ನೇ ತನ್ನ ಯೋಜನೆಗಳೆಂಬಂತೆ ಬಿಂಬಿಸುವುದರಲ್ಲಿ ಬಿಜೆಪಿ ಸರ್ಕಾರ ಕಾಲಹರಣ ಮಾಡುತ್ತಿದೆ~ ಎಂದರು.`ಯಾರೋ ಹೆತ್ತ ಕೂಸನ್ನು ಅಪ್ಪಿ ಮುದ್ದಾಡುವ ಪ್ರವೃತ್ತಿಯನ್ನು ರೂಢಿಸಿಕೊಂಡಿರುವ ಬಿಜೆಪಿ ಸರ್ಕಾರ ನೀರಾವರಿ ವಿಷಯದಲ್ಲಿಯೂ ಕೂಡ ತಪ್ಪು ಅಂಕಿ ಅಂಶಗಳನ್ನು ಜನತೆಯ ಮುಂದೆ ಇಡುತ್ತ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ. ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ತನ್ನ ನಾಲ್ಕು ವರ್ಷಗಳ ಅವಧಿಯಲ್ಲಿ ಶೇ 39 ರಷ್ಟು ಪ್ರದೇಶವನ್ನು ನೀರಾವರಿ ವ್ಯಾಪ್ತಿಗೆ ಒಳಪಡಿಸಿದ್ದರೆ, ಬಿಜೆಪಿ ಸರ್ಕಾರ ಮಾತ್ರ ಕಳೆದ ಮೂರು ವರ್ಷಗಳಲ್ಲಿ ಕೇವಲ ಶೇ13 ರಷ್ಟು ಪ್ರಗತಿ ಸಾಧಿಸುವಲ್ಲಿ ಯಶಸ್ವಿಯಾಗಿದೆ~ ಎಂದರು.`ಲೋಕಾಯುಕ್ತರು ವರದಿಯಲ್ಲಿ ನೀಡಿರುವ ಪ್ರಕಾರ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 16085 ಕೋಟಿ ರೂ. ಮೊತ್ತದ ಅದಿರು ಲೂಟಿಯಾಗಿದೆ. 2257 ಕೋಟಿ ರೂ. ವಿದೇಶಿ ವಿನಿಮಯ ನಷ್ಟವಾಗಿದೆ. ಬೊಕ್ಕಸಕ್ಕೆ 1856 ಕೋಟಿ ರೂ. ರಾಜಸ್ವದಿಂದ ವಂಚಿಸಲಾಗಿದೆ.  ರಾಜ್ಯ ಸರ್ಕಾರ ಈ ಕ್ರಮವನ್ನು ದುರ್ಬಲಗೊಳಿಸುವ ಯತ್ನವಾಗಿ ಲೋಕಾಯುಕ್ತ ಸಂಸ್ಥೆಯನ್ನು ಅಸ್ಥಿರಗೊಳಿಸುವ ವ್ಯವಸ್ಥಿತ ಸಂಚು ನಡೆಸಿದೆ~ ಎಂದು ದೂರಿದರು.ಕೇಂದ್ರದಲ್ಲಿ ಲೋಕಪಾಲ ವ್ಯವಸ್ಥೆ ಜಾರಿಗೆ ತರಲು ಆಗ್ರಹಿಸಿ ಅಣ್ಣಾ ಹಜಾರೆ ನಡೆಸಿರುವ ಹೋರಾಟಕ್ಕೆ ಬೆಂಬಲ ನೀಡುತ್ತಿರುವ ಬಿಜೆಪಿಗೆ ನಿಜವಾಗಿಯೂ ನೈತಿಕತೆ ಎನ್ನುವುದು ಇದ್ದರೆ ಅದು ರಾಜ್ಯದಲ್ಲಿ ಲೋಕಾಯುಕ್ತ ವ್ಯವಸ್ಥೆಯನ್ನು ಬಲ ಪಡಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡಲಿ ಎಂದು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry