ಸರ್ಕಾರದಿಂದಲೇ ನೆಮ್ಮದಿ ಕೇಂದ್ರ ನಿರ್ವಹಣೆ

ಸೋಮವಾರ, ಜೂಲೈ 22, 2019
27 °C

ಸರ್ಕಾರದಿಂದಲೇ ನೆಮ್ಮದಿ ಕೇಂದ್ರ ನಿರ್ವಹಣೆ

Published:
Updated:

ದಾವಣಗೆರೆ: `ನೆಮ್ಮದಿ ಕೇಂದ್ರ~ಗಳಿಗೆ ಹೊಸ ರೂಪ ನೀಡಲು ಸರ್ಕಾರ ಉದ್ದೇಶಿಸಿದ್ದು, ಕಂದಾಯ ಇಲಾಖೆ ವತಿಯಿಂದಲೇ ನಿರ್ವಹಣೆ ಮಾಡಲು ಯೋಜಿಸಲಾಗಿದೆ. ಈ ಸುಧಾರಿತ ವ್ಯವಸ್ಥೆ ಸೆಪ್ಟೆಂಬರ್‌ನಿಂದ ಜಾರಿಗೆ ಬರಲಿದೆ.ಸದ್ಯಕ್ಕೆ `ನೆಮ್ಮದಿ ಕೇಂದ್ರ~ಗಳನ್ನು ಖಾಸಗಿ ಕಂಪನಿಗಳು ನಿರ್ವಹಿಸುತ್ತಿವೆ. ನಿತ್ಯ ಪ್ರತಿ ಕೇಂದ್ರದಲ್ಲಿ ನೂರಾರು ಮಂದಿ ವಿವಿಧ ಪ್ರಮಾಣಪತ್ರಗಳನ್ನು ಕೋರಿ ಅರ್ಜಿ ಸಲ್ಲಿಸುತ್ತಾರೆ. ಸಿಬ್ಬಂದಿ ಸೇರಿದಂತೆ ಅಗತ್ಯ ಮೂಲಸೌಕರ್ಯಗ: ಕೊರತೆ ಸಾಕಷ್ಟಿದೆ. ಹೀಗಾಗಿ  ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ ಕಂಡುಬರುತ್ತಿದ್ದು, ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಶಾಲಾ-ಕಾಲೇಜು ಪ್ರವೇಶಾತಿ ಸಂದರ್ಭಗಳಲ್ಲಿ ಜಾತಿ, ಆದಾಯ ಪ್ರಮಾಣಪತ್ರಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಇದನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ಪ್ರಸ್ತುತ ವ್ಯವಸ್ಥೆಯಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಸರ್ಕಾರ ನೆಮ್ಮದಿ ಕೇಂದ್ರಗಳ ಸಮಗ್ರ ನಿರ್ವಹಣೆಯ ಜವಾಬ್ದಾರಿಯನ್ನು ತಹಶೀಲ್ದಾರ್‌ಗೆ ನೀಡಿ ಆದೇಶ ಹೊರಡಿಸಿದೆ.`ಸೆಪ್ಟೆಂಬರ್‌ನಿಂದ ಎಲ್ಲಾ ನೆಮ್ಮದಿ ಕೇಂದ್ರಗಳನ್ನು ಕಂದಾಯ ಇಲಾಖೆಯ ವತಿಯಿಂದ ತಹಶೀಲ್ದಾರರ ಅಡಿಯಲ್ಲಿ ಕಾರ್ಯ ನಿರ್ವಹಿಸಲು ಸರ್ಕಾರ ಈಗಾಗಲೇ ಆದೇಶಿಸಿದೆ. ಖಾಸಗಿ ಕಂಪೆನಿಗಳು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ ಎಂಬ ದೂರು ಸಾರ್ವಜನಿಕರಿಂದ ವ್ಯಾಪಕವಾಗಿ ಕೇಳಿಬಂದಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ನೆಮ್ಮದಿ ಕೇಂದ್ರಗಳಿಗೆ ಇಲಾಖೆ ವತಿಯಿಂದಲೇ, ಶಾಶ್ವತ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುವುದು. ಕಂಪ್ಯೂಟರ್ ಜ್ಞಾನ ಹೊಂದಿರುವ ಗ್ರಾಮ ಲೆಕ್ಕಾಧಿಕಾರಿ (ವಿಎ)ಗಳನ್ನು ಇಲ್ಲಿಗೆ ನೇಮಿಸಲಾಗುವುದು. ಈ ಪ್ರಕ್ರಿಯೆ ಮುಗಿಯುವುದಕ್ಕೆ ಸ್ವಲ್ಪ ಸಮಯಬೇಕು. ಅಲ್ಲಿವರೆಗೆ, ಹೊರಗುತ್ತಿಗೆಗೆ ನೀಡುವಂತೆ ಸರ್ಕಾರ ತಿಳಿಸಿದೆ ಎಂದು ದಾವಣಗೆರೆ ತಾಲ್ಲೂಕು ತಹಶೀಲ್ದಾರ್ ಡಾ.ಬಿ.ಆರ್. ಹರೀಶ್ ಅವರು `ಪ್ರಜಾವಾಣಿ~ಗೆ ಮಾಹಿತಿ ನೀಡಿದರು.`ಖಾಸಗಿ ಕಂಪೆನಿಗಳೂ ಸಿಬ್ಬಂದಿ ಕೊರತೆ ಎದುರಿಸುತ್ತಿವೆ. ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಹೊಸ ವ್ಯವಸ್ಥೆಯಿಂದ ಸಾರ್ವಜನಿಕರಿಗೆ ಈ ತೊಂದರೆ ಇರುವುದಿಲ್ಲ. ಸೆಪ್ಟೆಂಬರ್‌ನಿಂದ 30ಕ್ಕೂ ಹೆಚ್ಚು ವಿವಿಧ ಪ್ರಮಾಣಪತ್ರಗಳನ್ನು ಉಪ ತಹಶೀಲ್ದಾರರು ಹೋಬಳಿಮಟ್ಟದಲ್ಲಿಯೇ ನೀಡುತ್ತಾರೆ. ತಹಶೀಲ್ದಾರರಿಗೆ ಜಾತಿ ಪ್ರಮಾಣಪತ್ರ ಮಾತ್ರ ಬರುತ್ತದೆ. ಇದರಿಂದ ಪ್ರಮಾಣಪತ್ರಗಳಿಗಾಗಿ ಜನರು ತಾಲ್ಲೂಕು ಅಥವಾ ಜಿಲ್ಲಾ ಕೇಂದ್ರಕ್ಕೆ ಅಲೆಯುವುದು ತಪ್ಪಲಿದೆ. ನಾಡಕಚೇರಿಗಳಲ್ಲಿಯೇ ಈ ಸೌಲಭ್ಯ ಕಲ್ಪಿಸಲಾಗುವುದು. ಸುಧಾರಿತ ಕಂಪ್ಯೂಟರ್‌ಗಳು, ಯುಪಿಎಸ್, ಪ್ರಿಂಟರ್ ಒದಗಿಸಲಾಗುವುದು. ಸಿಬ್ಬಂದಿ ನೇಮಿಸಲು ಕ್ರಮ ಕೈಗೊಳ್ಳುವಂತೆ ಸರ್ಕಾರ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ, ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ~ ಎಂದು ತಿಳಿಸಿದರು.ಸದ್ಯಕ್ಕೆ ನಗರದಲ್ಲಿ 4 ಹಾಗೂ ಜಿಲ್ಲೆಯಲ್ಲಿ ಹೋಬಳಿ ಕೇಂದ್ರಗಳಲ್ಲಿ 24 `ನೆಮ್ಮದಿ ಕೇಂದ್ರ~ಗಳಿವೆ. ಇಲಾಖೆಯಿಂದಲೇ ನಿರ್ವಹಿಸುವುದರಿಂದ ಹೆಚ್ಚಿನ ಹೊಣೆಗಾರಿಕೆ ಇರುತ್ತದೆ. ನೆಪಗಳನ್ನು ಹೇಳುವಂತಿಲ್ಲ. ತಾಂತ್ರಿಕ ಅಥವಾ ಸಿಬ್ಬಂದಿ ಕೊರತೆ ಉಂಟಾದರೆ ಪರ್ಯಾಯ ತಕ್ಷಣ ವ್ಯವಸ್ಥೆ ಮಾಡಬಹುದು.ಪ್ರಮಾಣಪತ್ರ ನೀಡಿಕೆಯಲ್ಲಿ ವಿಳಂಬ ಆಗದಂತೆ ನೋಡಿಕೊಳ್ಳಲಾಗುವುದು. ಪಹಣಿ ನೀಡುವ ರೀತಿಯಲ್ಲಿಯೇ ಯಾವುದೇ ಗೊಂದಲವಿಲ್ಲದೆ, ವಿವಿಧ ಪ್ರಮಾಣಪತ್ರಗಳು ದೊರೆಯಲಿವೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry