ಸರ್ಕಾರದಿಂದ ಇನ್ನಷ್ಟು ಬಿಗಿ ನೈರ್ಮಲ್ಯ ಕ್ರಮ

ಗುರುವಾರ , ಜೂಲೈ 18, 2019
22 °C

ಸರ್ಕಾರದಿಂದ ಇನ್ನಷ್ಟು ಬಿಗಿ ನೈರ್ಮಲ್ಯ ಕ್ರಮ

Published:
Updated:

ಮಂಗಳೂರು: `ನಿಮ್ಮ ಊರಿನ ಯಾವುದೋ ರಸ್ತೆ ಬದಿಯಲ್ಲಿ ಎಲ್ಲಿಂದಲೋ ಬಂದ ಲಾರಿಯೊಂದು ಕಸ ಸುರಿಯುತ್ತಿದೆ ಎಂದಿಟ್ಟುಕೊಳ್ಳಿ. ಅದನ್ನು ನೋಡಿ ನೀವು ಸುಮ್ಮನಾಗದಿರಿ. ಆ ಲಾರಿಯ ನಂಬರ್ ನೆನಪಿಟ್ಟುಕೊಂಡು ಒಂದು ಫೋನ್ ಮಾಡಿ, ಇಷ್ಟು ಮಾಡಿದರೆ ನಿಮಗೆ ಸಾವಿರ ರೂಪಾಯಿ ಬಹುಮಾನ ಖಚಿತ!~ಪರಿಸರ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೆಮಾರ್ ಸೋಮವಾರ ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣ ವೇದಿಕೆಯಿಂದ ನೀಡಿದ ಕರೆ ಇದು! ನೈರ್ಮಲ್ಯ ವಿಚಾರದಲ್ಲಿ ರಾಜ್ಯ ಸರ್ಕಾರ ಇನ್ನಷ್ಟು ಬಿಗಿಯಾದ ಕ್ರಮ ಕೈಗೊಳ್ಳುವ ಸೂಚನೆ ಅವರ ಈ ಮಾತಿನಲ್ಲಿತ್ತು.ರಾಜ್ಯ ನೀರು ಮತ್ತು ನೈರ್ಮಲ್ಯ ಮಿಷನ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆ, ದ.ಕ. ಜಿ.ಪಂ. ವತಿಯಿಂದ ಇಲ್ಲಿ 2009-10ನೇ ಸಾಲಿನ ಕರ್ನಾಟಕ ರಾಜ್ಯ ನೈರ್ಮಲ್ಯ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಅವರು ಮಾತನಾಡಿದರು.`ನಗರದಲ್ಲಿ ಉತ್ಪಾದನೆಯಾಗುವ ಆಸ್ಪತ್ರೆ ತ್ಯಾಜ್ಯಗಳಂತಹ ಅಪಾಯಕಾರಿ ತ್ಯಾಜ್ಯಗಳು, ಕಸಗಳನ್ನು ಗ್ರಾಮೀಣ ಭಾಗದಲ್ಲಿ ತಂದು ಸುರಿಯುವ ಪ್ರಕರಣ ಇಂದು ಹೆಚ್ಚಾಗಿ ನಡೆಯುತ್ತಿವೆ. ಇದಕ್ಕೆ ತಡೆ ಒಡ್ಡುವುದಕ್ಕಾಗಿಯೇ ಸರ್ಕಾರ ತಕ್ಷಣಕ್ಕೆ ಒಂದು ಸುತ್ತೋಲೆ ಹೊರಡಿಸುತ್ತಿದೆ. ಲಾರಿಗಳು ಕಸ ತುಂಬಿ ಗ್ರಾಮೀಣ ಭಾಗದಲ್ಲಿ ರಸ್ತೆ ಬದಿ ಸುರಿದರೆ ಅಂತಹ ಲಾರಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದರ ಜತೆಗೇ ಇತರೆ ಕಠಿಣ ಕ್ರಮಗಳನ್ನೂ ಕೈಗೊಳ್ಳಲಾಗುವುದು. ಜನರು ಉಚಿತವಾಗಿ ಕರೆ ಮಾಡಬಹುದಾದಂತಹ ದೂರವಾಣಿ ಸಂಖ್ಯೆಯನ್ನು ಶೀಘ್ರವೇ ನೀಡಲಾಗುವುದು. ಒಂದೇ ಲಾರಿ ಬಗ್ಗೆ ನಾಲ್ಕಾರು ಮಂದಿ ಕರೆ ಮಾಡಿದರೆ ಅವರಿಗೆಲ್ಲ ಪ್ರಶಸ್ತಿ ನೀಡುವುದು ಸಾಧ್ಯವಿಲ್ಲ. ಮೊದಲು ಕರೆ ಮಾಡಿದವರಿಗೆ ಬಹುಮಾನದ ಹಣ ನಿಶ್ಚಿತ~ ಎಂದು ಸಚಿವರು ಸ್ಪಷ್ಟಪಡಿಸಿದರು.ಈ ಸುತ್ತೋಲೆ ತಕ್ಷಣದ ಕ್ರಮ. ಸರ್ಕಾರ ನೈರ್ಮಲ್ಯ ವಿಚಾರದಲ್ಲಿ ಕಟ್ಟುನಿಟ್ಟಿನ ಅಧಿಸೂಚನೆ ಹೊರಡಿಸಲಿದೆ. ಮುಂದಿನ ವರ್ಷದಿಂದ ಪರಿಸರ ಪ್ರಶಸ್ತಿಗಳನ್ನೂ ನೀಡಿ ನೈರ್ಮಲ್ಯ, ಪರಿಸರ ಸಂರಕ್ಷಣೆಗೆ ವಿಶೇಷ ಒತ್ತು ನೀಡಲಾಗುತ್ತದೆ. ಇನ್ನು ಮುಂದೆ ದಕ್ಷಿಣ ಕನ್ನಡ ಜಿಲ್ಲೆ ನೈರ್ಮಲ್ಯದ ಜತೆಗೇ ಪರಿಸರ ಪ್ರಶಸ್ತಿಗಳನ್ನೂ ಪಡೆದುಕೊಂಡು ರಾಜ್ಯಕ್ಕೆ ಮಾದರಿ ಜಿಲ್ಲೆಯಾಗಬೇಕು ಎಂದು ಅವರು ಉತ್ತೇಜಿಸಿದರು.ವಿಧಾನಸಭೆ ಉಪ ಸಭಾಪತಿ ಎನ್.ಯೋಗೀಶ್ ಭಟ್, ಶಾಸಕರಾದ ಬಿ.ರಮಾನಾಥ ರೈ, ಯು.ಟಿ.ಖಾದರ್ ಮಾತನಾಡಿದರು. ಪಂಚಾಯಿತಿ ರಾಜ್ ವ್ಯವಸ್ಥೆ ಸದೃಢವಾಗಿದ್ದರೆ ಮಾತ್ರ ಗಾಮೀಣ ಅಭಿವೃದ್ಧಿ ಸಾಧ್ಯ. ಹೀಗಾಗಿ ಯಾವುದೇ ಕಾರಣಕ್ಕೂ ಈ ವ್ಯವಸ್ಥೆಗೆ ಹರಿದುಬರುವ ಹಣವನ್ನು ಬೇರೆಡೆಗೆ ವರ್ಗಾಯಿಸಬಾರದು ಎಂದು ರಮಾನಾಥ ರೈ ಕೇಳಿಕೊಂಡರು.ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಅಧ್ಯಕ್ಷೆ ಕೆ.ಟಿ.ಶೈಲಜಾ ಭಟ್ ಜಿಲ್ಲೆಯ ನೈರ್ಮಲ್ಯ ಸಾಧನೆಗಳನ್ನು ಬಿಂಬಿಸುವ ಕಿರುಹೊತ್ತಿಗೆ ಮತ್ತು ಸಿ.ಡಿ ಬಿಡುಗಡೆ ಮಾಡಿದರು.ಜಿ.ಪಂ. ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವರಾಮೇಗೌಡ, ಮುಖ್ಯ ಯೋಜನಾ ಅಧಿಕಾರಿ ಮಹಮ್ಮದ್ ನಜೀರ್, ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಜನಾರ್ದನ ಗೌಡ, ಜಿ.ಪಂ. ಮಾಜಿ ಅಧ್ಯಕ್ಷೆ ಮಮತಾ ಗಟ್ಟಿ, ಜನ ಶಿಕ್ಷಣ ಟ್ರಸ್ಟ್‌ನ ಕೃಷ್ಣ ಮೂಲ್ಯ ಮಾತನಾಡಿದರು.ಜಿ.ಪಂ. ಉಪಾಧ್ಯಕ್ಷೆ ಧನಲಕ್ಷಿ ಜನಾರ್ದನ್, ಇತರೆ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ನಳಿನ್ ಕುಮಾರ್ ರೈ ಮೇನಾಲ, ಈಶ್ವರ ಕಟೀಲ್, ಮಂಗಳೂರು ತಾ.ಪಂ. ಅಧ್ಯಕ್ಷೆ ಭವ್ಯಾ ಪೂಜಾರಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry