ಸರ್ಕಾರದಿಂದ ಟ್ರಾನ್ಸ್‌ಫಾರ್ಮರ್

7

ಸರ್ಕಾರದಿಂದ ಟ್ರಾನ್ಸ್‌ಫಾರ್ಮರ್

Published:
Updated:

ಮಾಲೂರು: ರೈತರಿಗೆ ಅನುಕೂಲ ಕಲ್ಪಿಸಲು ಸರ್ಕಾರದಿಂದ ತ್ವರಿತ ಗತಿಯಲ್ಲಿ ಟ್ರಾನ್ಸ್‌ಫಾರ್ಮರ್ ನೀಡಲಾಗುವುದು ಎಂದು ಬೆಸ್ಕಾಂ ಕಚೇರಿಯಲ್ಲಿ ಬೆಂಗಳೂರು ಗ್ರಾಮೀಣ ವಲಯ ಮುಖ್ಯ ಅಭಿಯಂತರ ಬಿ.ಕೆ. ಉದಯಕುಮಾರ್ ತಿಳಿಸಿದರು.ಪಟ್ಟಣದ ಬೆಸ್ಕಾಂ ಕಚೇರಿಯಲ್ಲಿ ಗುರುವಾರ ಅವರು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಸಲು ಬೆಸ್ಕಾಂ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ರೈತರು ಹೆಚ್ಚುವರಿ ಸಾಮರ್ಥ್ಯವುಳ್ಳ ಪಂಪ್‌ಸೆಟ್ ಬಳಸುವುದರಿಂದ ಟ್ರಾನ್ಸ್‌ಫಾರ್ಮರ್‌ಗಳ ಮೇಲೆ ಹೆಚ್ಚಿನ ಲೋಡ್ ಬಿದ್ದು ಹಾಳಾಗುತ್ತದೆ. ರೈತರು ಟಿ.ಸಿ. ಪಡೆಯಲು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಟ್ರಾನ್ಸ್ ಫಾರ್ಮರ್ ದುರಸ್ತಿಯಾದ 72 ಗಂಟೆ ಒಳಗಾಗಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.ಪಂಪ್‌ಸೆಟ್‌ಗಳಿಗೆ ಅಕ್ರಮವಾಗಿ ವಿದ್ಯುತ್ ಬಳಕೆ ಮಾಡಿಕೊಳ್ಳುತ್ತಿರುವ ರೈತರು ಮಾರ್ಚ್ 31ರ ಒಳಗೆ ಹಣ ಪಾವತಿಸಿ ಸಕ್ರಮ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದರು. ವಿದ್ಯುತ್ ಸಮಸ್ಯೆ ನಿವಾರಿಸಲು ಬೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದರೆ ಸಾರ್ವಜನಿಕರು ಕೇಂದ್ರ ಕಚೇರಿಯ 080-22873333ಗೆ ಕರೆ ಮಾಡಿ ದೂರು ಸಲ್ಲಿಸಬಹುದು ಎಂದರು.ಇದಕ್ಕೂ ಮುನ್ನ ಪಟ್ಟಣದ ಬೆಸ್ಕಾಂ ಕಚೇರಿ ಆವರಣದಲ್ಲಿ ಶಾಸಕ ಎಸ್. ಎನ್.ಕೃಷ್ಣಯ್ಯಶೆಟ್ಟಿ ಮಾತನಾಡಿ, ರಾಜ್ಯದಲ್ಲೆ ಮೊದಲ ಬಾರಿಗೆ ನಿರಂತರ ಜ್ಯೋತಿ ಕಾರ್ಯಕ್ರಮವನ್ನು ತಾಲ್ಲೂಕಿನಲ್ಲಿ ಕಾರ್ಯರೂಪಕ್ಕೆ ತರಲಾಗಿದೆ. ಟೇಕಲ್, ಮಾಸ್ತಿ ಮತ್ತು ಲಕ್ಕೂರು ಹೋಬಳಿಗಳಲ್ಲಿ 24 ಗಂಟೆಗಳ ಕಾಲ ನಿರಂತರ ವಿದ್ಯುತ್ ವ್ಯವಸ್ಥೆಯನ್ನು ಮೊದಲನೇ ಹಂತದಲ್ಲಿ ಕಲ್ಪಿಸಲಾಗಿದೆ. ಉಳಿದ 70ಕ್ಕೂ ಹೆಚ್ಚು ಗ್ರಾಮಗಳಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಮಾರ್ಚ್‌ನಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.ಬೆಸ್ಕಾಂನ ಬೆಂಗಳೂರು ಗ್ರಾಮೀಣ ವಲಯ ಮುಖ್ಯ ಎಂಜಿನಿಯರ್ ಬಿ.ಕೆ.ಉದಯ್‌ಕುಮಾರ್, ಜಿ.ಪಂ. ಅಧ್ಯಕ್ಷೆ ಮಂಜುಳಾ ವೆಂಕಟೇಶ್, ಸದಸ್ಯರಾದ ರಾಮಸ್ವಾಮಿರೆಡ್ಡಿ, ಯಲ್ಲಮ್ಮ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಕೃಷ್ಣಾರೆಡ್ಡಿ, ತಾ.ಪಂ.ಅಧ್ಯಕ್ಷ ಆರ್.ಆನಂದ್, ಉಪಾಧ್ಯಕ್ಷೆ ಪಾರ್ವತಮ್ಮ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್. ವಿ.ಲೋಕೇಶ್, ಸದಸ್ಯ ಪುಟ್ಟಸ್ವಾಮಿ, ಪುರಸಭಾ ಅಧ್ಯಕ್ಷೆ ಗುಲಾಬ್‌ಜಾನ್, ಉಪಾಧ್ಯಕ್ಷ ಎ.ರಾಜಪ್ಪ, ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ಆಂಜಿನಪ್ಪ, ಮುಖಂಡ ತಬಲ ನಾರಾಯಣಪ್ಪ, ಬೆಸ್ಕಾಂ ಕೋಲಾರ ವಿಭಾಗದ ಅಧೀಕ್ಷಕ ಎಂಜಿನಿಯರ್‌ವೈರಮುಡಿ, ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್ ವಿಜಯ್‌ಕುಮಾರ್, ಬೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ವಾಸುದೇವ್, ಹಿರಿಯ ಎಂಜಿನಿಯರ್ ಗಣೇಶ್, ಮುಖಂಡ ಅಶ್ವಥರೆಡ್ಡಿ, ಹನುಮಂತರೆಡ್ಡಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry