ಸರ್ಕಾರದಿಂದ ಯೋಜನೆ ಸ್ಥಗಿತ: ಆಕ್ರೋಶ

7

ಸರ್ಕಾರದಿಂದ ಯೋಜನೆ ಸ್ಥಗಿತ: ಆಕ್ರೋಶ

Published:
Updated:

ಯಾದಗಿರಿ: ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಮಂಜೂರಾತಿ ನೀಡಿರುವ ಯೋಜನೆಗಳು ಸ್ಥಗಿತಗೊಂಡಿದ್ದು, ರಾಜ್ಯದ ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ. ವಿವಿಧ ಯೋಜನೆಗಳ ಅಡಿ ಅಗತ್ಯ ಅನುದಾನ ಬಿಡುಗಡೆ ಮಾಡಿ, ಯೋಜನೆ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕೆಜೆಪಿ ಮುಖಂಡರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.ಶಾಸ್ತ್ರಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಸಿದ ಪದಾಧಿಕಾರಿಗಳು, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಭಾಗ್ಯಲಕ್ಷ್ಮಿ ಯೋಜನೆಯಡಿ 2011 ರ ಸೆಪ್ಟೆಂಬರ್‌ನಿಂದ 57,780 ಫಲಾನುಭವಿಗಳಿಗೆ ಬಾಂಡ್ ವಿತರಣೆಯಾಗಿಲ್ಲ. ವಿವಿಧ ಮಾಸಾಶನಗಳಾದ ಸಂಧ್ಯಾ ಸುರಕ್ಷಾ, ಅಂಗವಿಕಲರ ವೇತನ, ವಿಧವಾ ವೇತನ ಯೋಜನೆಯಡಿ 2012 ರ ಮಾರ್ಚ್‌ನಿಂದ ಸುಮಾರು 10 ಲಕ್ಷ ಫಲಾನುಭವಿಗಳಿಗೆ ಮಾಸಾಶನ ನೀಡಿಲ್ಲ ಎಂದು ಆರೋಪಿಸಿದರು.ಮುಂಗಡ ಪತ್ರದಲ್ಲಿ ಘೋಷಿಸಿದ ಶೂನ್ಯ ಬಡ್ಡಿದರದಲ್ಲಿ ರೈತರಿಗೆ ಸಾಲ ವಿತರಣೆ ಮಾಡಿಲ್ಲ. ಇದಕ್ಕಾಗಿ ರೂ.267 ಕೋಟಿ ಅಗತ್ಯವಿದ್ದು, ಬಿಡುಗಡೆ ಮಾಡಿಲ್ಲ. ಸ್ವಸಹಾಯ ಸಂಘಗಳಿಗೆ ರಿಯಾಯಿತಿ ದರದ ಸಾಲವನ್ನು ಡಿಸಿಸಿ ಬ್ಯಾಂಕ್‌ಗಳ ಮೂಲಕ ವಿತರಣೆ ಮಾಡಿಲ್ಲ.ಪ್ರತಿ ಲೀಟರ್ ಹಾಲಿಗೆ ರೂ. 2 ಪ್ರೋತ್ಸಾಹ ಧನ ನೀಡುವ ಹಣವನ್ನು ಅಕ್ಟೋಬರ್‌ನಿಂದ ಇಲ್ಲಿಯವರೆಗೆ ನೀಡಿಲ್ಲ. ಇದರಿಂದ ಬಡ ರೈತರು, ಕೃಷಿ ಕೂಲಿಕಾರರು ತೊಂದರೆ ಅನುಭವಿಸುತ್ತಿದ್ದಾರೆ.ಈ ಎಲ್ಲ ಯೋಜನೆಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡದೇ ಇರುವುದರಿಂದ ಲಕ್ಷಾಂತರ ಜನರು ತೊಂದರೆಗೆ ಒಳಗಾಗಿದ್ದಾರೆ. ರಾಜ್ಯ ಸರ್ಕಾರದ ಆಡಳಿತ ಯಂತ್ರ ಸಂಪೂರ್ಣ ನಿಷ್ಕ್ರೀಯವಾಗಿದ್ದು, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸದೇ ಇರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯ ಸರ್ಕಾರ ಈ ಎಲ್ಲ ಯೋಜನೆಗಳಿಗೆ ಅಗತ್ಯ ಅನುದಾನವನ್ನು ತಕ್ಷಣ ಬಿಡುಗಡೆ ಮಾಡುವ ಮೂಲಕ ಯೋಜನೆಗಳನ್ನು ಆರಂಭಿಸಬೇಕು. ಒಂದು ವಾರದಲ್ಲಿ ಸರ್ಕಾರ ಅನುದಾನ ಬಿಡುಗಡೆ ಮಾಡದೇ ಇದ್ದಲ್ಲಿ, ಪಕ್ಷದ ವತಿಯಿಂದ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.ಕೆಜೆಪಿ ಮುಖಂಡರಾದ ಡಾ.ವೀರಬಸವಂತರಡ್ಡಿ ಮುದ್ನಾಳ, ವೆಂಕಟರಡ್ಡಿ ಮುದ್ನಾಳ, ಡಾ.ಶರಣಭೂಪಾಲರಡ್ಡಿ ಮುದ್ನಾಳ, ನಾಗರತ್ನಾ ಕುಪ್ಪಿ, ಖಂಡಪ್ಪ ದಾಸನ್, ರಾಮರಡ್ಡಿಗೌಡ ಕ್ಯಾಸಪನಳ್ಳಿ, ಶರಣಗೌಡ ಬಾಡಿಯಾಲ, ಅಯ್ಯಣ್ಣ ಹುಂಡೆಕಾರ, ಸುರೇಶ ಬಸವಂತಪೂರ, ಪರ್ವತಪ್ಪ ನಾಯಕ, ಮೋಹನ ಬಾಬು, ಮಾರುತಿ ಕಲಾಲ, ಶಿವು ದೊಡ್ಡಮನಿ, ಗುಂಡಪ್ಪ ಕಲಬುರ್ಗಿ, ರುದ್ರಗೌಡ ಪಾಟೀಲ, ಮಲ್ಲನಗೌಡ ಪಾಟೀಲ ಹತ್ತಿಕುಣಿ, ಸೇರಿದಂತೆ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry