ಸರ್ಕಾರದಿಂದ ಸಂವಿಧಾನ ಉಲ್ಲಂಘನೆ

ಭಾನುವಾರ, ಜೂಲೈ 21, 2019
22 °C

ಸರ್ಕಾರದಿಂದ ಸಂವಿಧಾನ ಉಲ್ಲಂಘನೆ

Published:
Updated:

ಬೆಂಗಳೂರು: `ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಸಂವಿಧಾನದಲ್ಲಿ ಅವಕಾಶ ಇರುವಾಗ ಪ್ರತಿಭಟನಾಕಾರರನ್ನು ತಡೆದಿದ್ದು ಅಚ್ಚರಿ ಉಂಟು ಮಾಡಿದೆ. ಹಿಂಸಾಚಾರ ಸಂಭವಿಸಲಿದೆ ಎಂಬ ಗುಪ್ತಚರ ಮಾಹಿತಿ ಆಧರಿಸಿ ಪೊಲೀಸರು ಕೃತ್ಯ ಎಸಗಲಾಗಿದೆ. ಈ ಮೂಲಕ ಸರ್ಕಾರವೇ ಸಂವಿಧಾನವನ್ನು ಉಲ್ಲಂಘಿಸಿದೆ~ ಎಂದು ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಹೇಳಿದರು.ಬೆಂಗಳೂರು ವಿಶ್ವವಿದ್ಯಾಲಯ ವಾಣಿಜ್ಯ ಮತ್ತು ನಿರ್ವಹಣಾ ಶಿಕ್ಷಕರ ಪರಿಷತ್ತು ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ `21ನೇ ವಾರ್ಷಿಕ ಪದವಿ ಪ್ರದಾನ ಮತ್ತು ಅಭಿನಂದನಾ ಸಮಾರಂಭ~ದಲ್ಲಿ ಅವರು ಮಾತನಾಡಿದರು. `ದೇಶ ಅತ್ಯುತ್ತಮ ಪ್ರಜಾಪ್ರಭುತ್ವ ಹೊಂದಿದೆ. ಆದರೆ  ಸಂವಿಧಾನದ ನಿಯಮ ಇರುವುದೇ ಅದನ್ನು ಉಲ್ಲಂಘಿಸಲು ಎಂದು ರಾಜಕಾರಣಿಗಳು ಭಾವಿಸಿರುವುದು ವಿಪರ್ಯಾಸದ ಸಂಗತಿ. ಜನ ಲೋಕಪಾಲ್ ಮಸೂದೆಯನ್ನು ದುರ್ಬಲಗೊಳಿಸಲು ಎಲ್ಲಾ ರಾಜಕೀಯ ಪಕ್ಷಗಳು ಶ್ರಮಿಸುತ್ತಿವೆ. ರಾಜಕಾರಣಿಗಳ ವಿರುದ್ಧವೇ ಮಸೂದೆ ಮಂಡನೆಯಾಗುತ್ತಿರುವುದು ಇದಕ್ಕೆ ಕಾರಣ~ ಎಂದರು.ಸ್ವಾತಂತ್ರ್ಯ ಹೋರಾಟಗಾರ ಎಚ್. ಎಸ್.ದೊರೆಸ್ವಾಮಿ ಮಾತನಾಡಿ `ಇದುವರೆಗೆ ಎಷ್ಟಾದರೂ ಮೇಯ್ದುಕೊಳ್ಳಿ ಎಂದು ಮತದಾರರು ನಿದ್ರೆಯಲ್ಲಿಯೇ ಇರುತ್ತಿದ್ದರು. ಕುಂಭಕರ್ಣ ನಿದ್ರೆಯಿಂದ ಪ್ರಜೆಗಳನ್ನು ಎಬ್ಬಿಸಿದ್ದಕ್ಕಾಗಿ ಅಣ್ಣಾ ಹಜಾರೆ ಅವರಿಗೆ ಕೃತಜ್ಞತೆ ಸಲ್ಲಿಸಬೇಕು. ಇಂದಲ್ಲಾ ನಾಳೆ ಜನ ಲೋಕಪಾಲ ಮಸೂದೆ ರಚನೆಯಾಗಲಿದೆ ಎಂಬ ವಿಶ್ವಾಸವಿದೆ~ ಎಂದರು.`ಜನ ಪ್ರತಿನಿಧಿಗಳು ರಚಿಸಬೇಕಿದ್ದ ಮಸೂದೆಯನ್ನು ಜನರೇ ರಚಿಸಲು ಮುಂದಾಗಿರುವುದು ಉತ್ತಮ ಬೆಳವಣಿಗೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ಅಧಿಕಾರ ಇರುವುದನ್ನು ಇದು ಸಾಬೀತು ಪಡಿಸಿದೆ. ಚಿಕ್ಕ ತಪ್ಪು ಮಾಡಿದವರನ್ನು ಹಿಡಿದು ದಂಡಿಸುತ್ತೇವೆ. ಹಾಗೆಯೇ ಕೋಟಿಗಟ್ಟಲೆ ನುಂಗುತ್ತಿರುವ ತಿಮಿಂಗಿಲಗಳನ್ನು ಪ್ರಶ್ನೆ ಮಾಡಬೇಕು~ ಎಂದು ಹೇಳಿದರು.ವಿವಿ ಕುಲಪತಿ ಡಾ. ಎನ್. ಪ್ರಭುದೇವ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿವಿಯ ವಿದೇಶಿ ಭಾಷೆಗಳ ಅಧ್ಯಯನ ವಿಭಾಗದ ಅಧ್ಯಕ್ಷ ಡಾ.ಕೆ.ಈರೇಶಿ, ವಾಣಿಜ್ಯ ವಿಭಾಗದ ಅಧ್ಯಕ್ಷ ಡಾ.ಎಂ.ರಾಮಚಂದ್ರ, ಪರಿಷತ್ತಿನ ಅಧ್ಯಕ್ಷ ಡಾ. ಕೆ. ರಾಮಚಂದ್ರ, ಪ್ರಧಾನ ಕಾರ್ಯದರ್ಶಿ ಡಾ.ಬಿ.ಎ. ಕರುಣಾಕರ ರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry