ಸರ್ಕಾರದ ಅನುದಾನಕ್ಕಾಗಿ ಕಸಾಪದಲ್ಲಿ ಹಗ್ಗಜಗ್ಗಾಟ

7

ಸರ್ಕಾರದ ಅನುದಾನಕ್ಕಾಗಿ ಕಸಾಪದಲ್ಲಿ ಹಗ್ಗಜಗ್ಗಾಟ

Published:
Updated:
ಸರ್ಕಾರದ ಅನುದಾನಕ್ಕಾಗಿ ಕಸಾಪದಲ್ಲಿ ಹಗ್ಗಜಗ್ಗಾಟ

ವಿಜಾಪುರ: ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ನೀಡುವ ಹಣವನ್ನು ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಅಥವಾ ಸಮ್ಮೇಳನದ ಸ್ವಾಗತ ಸಮಿತಿ ಪೈಕಿ ಯಾರಿಗೆ ನೇರವಾಗಿ ಬಿಡುಗಡೆ ಮಾಡಬೇಕು ಎಂಬ ಜಿಜ್ಞಾಸೆಯಿಂದ ಅನುದಾನ ಕೈಸೇರುವಲ್ಲಿ ವಿಳಂಬವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.`ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿಯೇ ಸರ್ಕಾರ ಬಜೆಟ್‌ನಲ್ಲಿ ಒಂದು ಕೋಟಿ ರೂಪಾಯಿ ಮೀಸಲಿಟ್ಟಿದೆ. ಅದು ಆ ಉದ್ದೇಶಕ್ಕಷ್ಟೇ ಬಳಕೆಯಾಗಬೇಕು ಎಂಬುದು ಸರ್ಕಾರದ ನಿಲುವು. ಆದರೆ, ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿಯವರು ಅನುದಾನವನ್ನು ತಮಗೇ ಬಿಡುಗಡೆ ಮಾಡುವಂತೆ ಪತ್ರ ಬರೆದಿದ್ದಾರೆ' ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಯೊಬ್ಬರು ಹೇಳುತ್ತಾರೆ.`ಈ ಒಂದು ಕೋಟಿ ರೂಪಾಯಿ ಅನುದಾನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಅಂದಾಜು ರೂ. 50 ಲಕ್ಷ ಇಟ್ಟುಕೊಂಡು ಉಳಿದ ರೂ. 50 ಲಕ್ಷ ವನ್ನು ನಮಗೆ ಕೊಡಲಿದ್ದಾರೆ. ತಮ್ಮಲ್ಲಿ ಇಟ್ಟುಕೊಳ್ಳಲಿರುವ ಹಣವನ್ನೂ ಸಮ್ಮೇಳನದ ಉದ್ದೇಶಕ್ಕೆ ವಿನಿಯೋಗಿಸುತ್ತಾರೆ' ಎನ್ನುತ್ತಾರೆ ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಯಂಡಿಗೇರಿ.`ಸಮ್ಮೇಳನಕ್ಕಾಗಿ ಸರ್ಕಾರ ನೀಡುವ ಅನುದಾನದಲ್ಲಿ ಸ್ವಲ್ಪ ಭಾಗವನ್ನು ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಇಟ್ಟುಕೊಳ್ಳುತ್ತದೆ. ಈ ರೀತಿ ಮಾಡುವುದರಿಂದ ಸರ್ಕಾರ ನೀಡುವ ಸಂಪೂರ್ಣ ಅನುದಾನ ಸಮ್ಮೇಳನಕ್ಕೆ ಬಳಕೆಯಾಗುವುದಿಲ್ಲ. ಅದಕ್ಕಾಗಿ ನೇರವಾಗಿ ಸಮ್ಮೇಳನ ನಡೆಯುವ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಹಿಂದೆ ಸಮ್ಮೇಳನ ನಡೆದ ಜಿಲ್ಲೆಗಳು  ಕೋರಿದ್ದವು' ಎನ್ನುತ್ತಾರೆ ಸ್ಥಳೀಯ ಕೆಲ ಪ್ರತಿನಿಧಿಗಳು.ಲೆಕ್ಕ ಕೊಡಬೇಕಲ್ಲ?: `ಸಮ್ಮೇಳನ ಖರ್ಚು-ವೆಚ್ಚದ ಲೆಕ್ಕ ನೀಡಬೇಕಿರುವ ಹೊಣೆಗಾರಿಕೆ ನಮ್ಮ ಮೇಲಿದೆ. ಈ ಕಾರಣಕ್ಕಾಗಿಯೇ ನಮ್ಮ ಮೂಲಕ ಹಣ ಬಿಡುಗಡೆ ಮಾಡಿ ಎಂದು ಕೋರಿದ್ದೇವೆ. ಇದು ಸಂಪ್ರದಾಯ. ಆದರೆ, ಯಜಮಾನಿಕೆ ಅಲ್ಲ' ಎನ್ನುತ್ತಾರೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ.ದೂರವಾಣಿ ಮೂಲಕ `ಪ್ರಜಾವಾಣಿ'ಗೆ ಪ್ರತಿಕ್ರಿಯೆ ನೀಡಿದ ಅವರು, `ಸಮ್ಮೇಳನದ ಸ್ವಾಗತ ಸಮಿತಿಗೇ ನೇರವಾಗಿ ಹಣ ಬಿಡುಗಡೆ ಮಾಡಬೇಕು ಎಂಬ ಬೇಡಿಕೆ ಇತ್ತೀಚಿನ ವರ್ಷಗಳಲ್ಲಿ ಬರುತ್ತಿದೆ. ಸಮ್ಮೇಳನ ಮುಗಿದ ತಕ್ಷಣ ಸ್ವಾಗತ ಸಮಿತಿ ವಿಸರ್ಜನೆಯಾಗುತ್ತದೆ. ಸರ್ಕಾರ ತಾನು ನೀಡಿದ ಅನುದಾನಕ್ಕೆ ಲೆಕ್ಕ ಕೊಡದ ಹೊರತು ಮುಂದಿನ ಸಮ್ಮೇಳನಕ್ಕೆ ಅನುದಾನ ಕೊಡುವುದಿಲ್ಲ. ನಮಗೆ ಹಣ ನೀಡದಿದ್ದರೆ ನಾವು ಹೇಗೆ ಅವರಿಗೆ ಲೆಕ್ಕ ಕೊಡುವುದು? ಸಮ್ಮೇಳನದ ಲೆಕ್ಕಪತ್ರವೂ ಪಾರದರ್ಶಕವಾಗಿರಬೇಕು ಮತ್ತು ಮುಂದಿನ ಸಮ್ಮೇಳನಕ್ಕೂ ಅನುದಾನ ಸಿಗಬೇಕು ಎಂಬ ಸದುದ್ದೇಶವೇ ಈ ಸಂಪ್ರದಾಯಕ್ಕೆ ಕಾರಣ. ಸಮ್ಮೇಳನಕ್ಕೆ ಸರ್ಕಾರ ನೀಡುವ ಎಲ್ಲ ನೆರವೂ ಕೇಂದ್ರ ಸಮಿತಿಯ ಮೂಲಕವೇ ಬಿಡುಗಡೆಯಾಗಬೇಕು' ಎಂದು ಪ್ರತಿಪಾದಿಸಿದರು.`ಗೋಷ್ಠಿಗಳಿಗೆ ಆಹ್ವಾನಿಸುವ ವಿಷಯ ತಜ್ಞರು, ವಿಶೇಷ ಆಹ್ವಾನಿತರು, ಕಸಾಪ ಜಿಲ್ಲಾ ಮತ್ತು ತಾಲ್ಲೂಕು ಪದಾಧಿಕಾರಿಗಳಿಗೆ ಪ್ರಯಾಣ ಭತ್ಯೆ ನೀಡುತ್ತೇವೆ. 25 ಕೃತಿಗಳು, ಸಮ್ಮೇಳನದ ಅಧ್ಯಕ್ಷರ ಭಾಷಣದ ಪ್ರತಿ ಹಾಗೂ ಆಹ್ವಾನ ಪತ್ರಿಕೆಗಳನ್ನೂ ನಾವೇ ಮುದ್ರಿಸುತ್ತೇವೆ. ಸಮ್ಮೇಳನ ಸಂಬಂಧಿ ಈ ಕೆಲಸ ಕಾರ್ಯಗಳಿಗೆ ಬೇಕಿರುವ ಹಣವನ್ನಷ್ಟೇ ಇಟ್ಟುಕೊಂಡು ಉಳಿದದ್ದನ್ನು ಸಮ್ಮೇಳನದ ಸ್ವಾಗತ ಸಮಿತಿ ಖಾತೆಗೆ ವರ್ಗಾಯಿಸುತ್ತೇವೆ. ಇದರಲ್ಲಿ ನಾವು ಒಂದು ರೂಪಾಯಿಯನ್ನೂ ಇಟ್ಟುಕೊಳ್ಳುವುದಿಲ್ಲ. ಜತೆಗೆ ಒಂದು ರೂಪಾಯಿಯನ್ನೂ  ಪೋಲು ಮಾಡುವುದಿಲ್ಲ' ಎಂದರು.ನನಗೂ ಪ್ರತಿಷ್ಠೆ: `ಸರ್ಕಾರ ಒಂದು ಕೋಟಿ ರೂಪಾಯಿ ಬಿಡುಗಡೆಗೆ ಆದೇಶ ಹೊರಡಿಸಿದೆ. ಹೆಚ್ಚುವರಿ ಅನುದಾನ ಪಡೆಯುವುದು ಸ್ವಾಗತ ಸಮಿತಿಯ ಜವಾಬ್ದಾರಿ. ನನ್ನ ಅವಧಿಯ ಮೊದಲ ಸಮ್ಮೇಳನ ಆಗಿರುವುದರಿಂದ ನನಗೂ ಪ್ರತಿಷ್ಠೆಯ ವಿಷಯ. ಆಡಂಬರದ ಬದಲು ಸರಳವಾಗಿ ಸಮ್ಮೇಳನ ಆಚರಿಸಬೇಕು. ಕನಿಷ್ಠ ರೂ. 30 ಲಕ್ಷ ಉಳಿಸಿ ಕನ್ನಡ ಭವನ ನಿರ್ಮಿಸಿಕೊಳ್ಳಬೇಕು ಎಂದು ಸ್ವಾಗತ ಸಮಿತಿಗೆ ಸಲಹೆ ನೀಡಿದ್ದೇನೆ. ಮುಂದಿನ ವಾರ ವಿಜಾಪುರಕ್ಕೆ ಬಂದು ಸಭೆ ನಡೆಸುತ್ತೇನೆ' ಎಂದರು ಹಾಲಂಬಿ.ಮುಂಗಡ ಹಣ: `ಸಮ್ಮೇಳನದ ಸಿದ್ಧತೆಗೆ ಕಸಾಪ ಕೇಂದ್ರ ಸಮಿತಿಯಿಂದ ರೂ. 5 ಲಕ್ಷ ಮುಂಗಡ ನೀಡಿದ್ದೇವೆ. ಆ ಹಣವನ್ನು ಜಿಲ್ಲಾ ಸಮಿತಿಯವರು ಬಳಸಿಕೊಳ್ಳಬಹುದು' ಎಂದು ಪುಂಡಲೀಕ ಹಾಲಂಬಿ ಹೇಳಿದರು.`ಸಮ್ಮೇಳನದ ಖರ್ಚು-ವೆಚ್ಚವನ್ನು ಜಿಲ್ಲಾಧಿಕಾರಿ ಅವರನ್ನು ಒಳಗೊಂಡ ಜಂಟಿ ಖಾತೆಯಿಂದ ಭರಿಸಬೇಕಿದೆ. ಹೀಗಾಗಿ ಕೇಂದ್ರ ಸಮಿತಿಯು ಜಿಲ್ಲಾ ಘಟಕಕ್ಕೆ ನೀಡಿರುವ ಈ ಹಣವನ್ನು ಬಳಸದೆ ಹಾಗೆ ಇಟ್ಟುಕೊಂಡಿದ್ದೇವೆ' ಎಂದು ಯಂಡಿಗೇರಿ ಹೇಳಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry