ಸರ್ಕಾರದ ಆದೇಶಕ್ಕೆ ಕೆಎಟಿ ತಡೆ

7

ಸರ್ಕಾರದ ಆದೇಶಕ್ಕೆ ಕೆಎಟಿ ತಡೆ

Published:
Updated:

ಬೆಂಗಳೂರು: ಮೀನುಗಾರಿಕಾ ಇಲಾಖೆಯ ನಿರ್ದೇಶಕ ಸ್ಥಾನದಿಂದ ವೀರಪ್ಪ ಗೌಡ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಬುಧವಾರ ತಡೆ ನೀಡಿದೆ.ಅದೇ ರೀತಿ, ನಿಯಮ ಉಲ್ಲಂಘಿಸಿ ಇಲಾಖೆಯಲ್ಲಿ `ವಿಶೇಷ ಅಧಿಕಾರಿ~ ಎಂಬ ಹುದ್ದೆ ಸೃಷ್ಟಿ ಮಾಡಿ ಸರ್ಕಾರ ಹೊರಡಿಸಿರುವ ಸುತ್ತೋಲೆಗೂ ಕೆಎಟಿ ಅಧ್ಯಕ್ಷ ನ್ಯಾ. ಎ.ಸಿ.ಕಬ್ಬಿಣ ಹಾಗೂ ಆಡಳಿತಾತ್ಮಕ ಸದಸ್ಯ ಅಭಿಜಿತ್‌ದಾಸ್ ಗುಪ್ತ ಅವರನ್ನು ಒಳಗೊಂಡ ವಿಭಾಗೀಯ ಪೀಠ ತಡೆ ನೀಡಿದೆ.ವಿಜ್ಞಾನ ಮತ್ತು ತಾಂತ್ರಿಕ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎನ್.ಆರ್.ರಾಮಕೃಷ್ಣ ಅವರನ್ನು ಈ ಸ್ಥಾನಕ್ಕೆ ನಿಯೋಜನೆಗೊಳಿಸಲು, `ವಿಶೇಷ ಅಧಿಕಾರಿ~ ಎಂಬ ಹುದ್ದೆ ಸೃಷ್ಟಿ ಮಾಡಿ ಆ ಹುದ್ದೆಗೆ ತಮ್ಮನ್ನು ವರ್ಗಾವಣೆ ಮಾಡಲಾಗಿದೆ ಎಂದು ದೂರಿ ಗೌಡ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸಿತು.`2002ರಿಂದ ನಾನು ನಿರ್ದೇಶಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಜನವರಿಯಲ್ಲಿ ನನ್ನನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು. ನನ್ನ ಜಾಗಕ್ಕೆ ರಾಮಕೃಷ್ಣ ಅವರನ್ನು ವರ್ಗಾವಣೆಗೊಳಿಸಲಾಗಿತ್ತು. ಆದರೆ ಇದು ನಿಯಮಬಾಹಿರ ಎಂಬ ಕಾರಣದಿಂದ ಆದೇಶವನ್ನು ಸರ್ಕಾರ ಹಿಂದಕ್ಕೆ ಪಡೆದುಕೊಂಡಿತ್ತು. ಆದರೆ ಈಗ ಹೊಸ ಹುದ್ದೆ ಸೃಷ್ಟಿ ಮಾಡಿ ನನ್ನನ್ನು ವರ್ಗಾವಣೆ ಮಾಡಲಾಗಿದೆ~ ಎಂದು ಗೌಡ ಅವರು ದೂರಿದ್ದರು.`ಈ ರೀತಿ ಹೊಸ ಹುದ್ದೆ ಸೃಷ್ಟಿ ಮಾಡುವ ಮುನ್ನ ಇಲಾಖೆಯಿಂದ ಯಾವುದೇ ಶಿಫಾರಸು ಹೋಗಿಲ್ಲ. ಆದರೆ ನಿಯಮದ ಪ್ರಕಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಇಲಾಖೆ ಶಿಫಾರಸು ಮಾಡಬೇಕು. ಆದರೆ ಸರ್ಕಾರ ನಿಯಮ ಮೀರಿ ವರ್ತಿಸಿದೆ~ ಎಂದು ಅರ್ಜಿದಾರರ ಪರ ವಕೀಲ ಪವನ್ ಭಜಂತ್ರಿ ಅವರು ವಾದಿಸಿದರು. ಈ ವಾದವನ್ನು ಮಾನ್ಯ ಮಾಡಿದ ಪೀಠ, ವರ್ಗಾವಣೆಗೆ ಮೂರು ತಿಂಗಳ ತಡೆ ನೀಡಿ ಆದೇಶಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry